ನಾಳೆ ನಾಮಪತ್ರ ಸಲ್ಲಿಸಲಿರುವ ಈಶ್ವರಪ್ಪ; ನಾಮಪತ್ರ ಸಲ್ಲಿಕೆ ಬಳಿಕ ಬೆಂಬಲ ದ್ವಿಗುಣಗೊಳ್ಳಲಿದೆ-ಈಶ್ವರಪ್ಪ ಮೋದಿ ಇವರಪ್ಪನ ಮನೆಯ ಆಸ್ತಿಯಲ್ಲ; ಯಡಿಯೂರಪ್ಪ ಕುಟುಂಬದವರ ಫೋಟೋ ಹಾಕಿಕೊಂಡು ಪ್ರಚಾರ ಮಾಡಿ ಗೆಲ್ಲಲಿ ನೋಡೋಣ ಎಂದು ಸವಾಲ್ ಎಸೆದ ಈಶ್ವರಪ್ಪ
ನಾಮಪತ್ರ ಸಲ್ಲಿಕೆ ಬಳಿಕ ಬೆಂಬಲ ದ್ವಿಗುಣಗೊಳ್ಳಲಿದೆ-ಈಶ್ವರಪ್ಪ
ಮೋದಿ ಇವರಪ್ಪನ ಮನೆಯ ಆಸ್ತಿಯಲ್ಲ;
ಯಡಿಯೂರಪ್ಪ ಕುಟುಂಬದವರ ಫೋಟೋ ಹಾಕಿಕೊಂಡು ಪ್ರಚಾರ ಮಾಡಿ ಗೆಲ್ಲಲಿ ನೋಡೋಣ ಎಂದು ಸವಾಲ್ ಎಸೆದ ಈಶ್ವರಪ್ಪ
ಶಿವಮೊಗ್ಗ-
ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಿದ್ದು, ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಾಮಪತ್ರ ಸಲ್ಲಿಕೆಯ ಬಳಿಕ ಈ ಬೆಂಬಲ ದ್ವಿಗುಣಗೊಳ್ಳಲಿದೆ ಎಂದು ಸ್ವತಂತ್ರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರವನ್ನೂ ಸುತ್ತಿ ಬಂದಿದ್ದೇನೆ. ಎಲ್ಲ ಕಡೆ ಕಾರ್ಯಕರ್ತರ ಸಂಘಟನೆಯ ಕೆಲಸವಾಗುತ್ತಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಇದುವರೆಗ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಲೇ ಸಾಧ್ಯವಾಗಿಲ್ಲ ಎಂದರು.
ನನ್ನ ಬೆಂಬಲಕ್ಕೆ ಹಿಂದುಳಿದ ವರ್ಗದ ದೊಡ್ಡ ಸಂಖ್ಯೆಯ ಜನರೇ ನಿಂತಿದ್ದಾರೆ. ದಲಿತರು ಜೊತೆಯಾಗಿದ್ದಾರೆ. ಮುಂದುವರೆದ ಜಾತಿ ಎಂದು ಹೇಳುವ ಬ್ರಾಹ್ಮಣರು, ಲಿಂಗಾಯಿತರು ಮತ್ತು ಒಕ್ಕಲಿಗರು ಅವರದೇ ಆದ ಬೇರೆ ಬೇರೆ ಕಾರಣಕ್ಕೆ ನನಗೆ ಬೆಂಬಲ ಸೂಚಿಸಿದ್ದಾರೆ. ಇದು ನನಗೆ ದೊಡ್ಡ ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು.
ಕೆಲ ಕಾರ್ಯಕರ್ತರಲ್ಲಿ ಇನ್ನೂ ಗೊಂದಲವಿದೆ. ಸ್ಪರ್ಧೆಯಿಂದ ಹಿಂದೆ ಸರಿದಾರು ಎಂಬ ಆತಂಕವಿದೆ. ಆದರೆ ನಾನು ಯಾವ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನನ್ನು ನಂಬಿಕೊಂಡು ಲಕ್ಷಾಂತರ ಕಾರ್ಯಕರ್ತರು ಕೈಜೋಡಿಸಿದ್ದು, ಅವರನ್ನು ನಡು ಮಧ್ಯೆ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವು ಶಕ್ತಿಗಳು ವಿನಾಕಾರಣ ಸುದ್ದಿ ಹಬ್ಬಿಸುತ್ತಿದ್ದಾರೆ. ಸೋಲಿನ ಭಯವೇ ಇದಕ್ಕೆ ಕಾರಣ. ಆದರೆ ನನ್ನ ಉದ್ದೇಶದಿಂದ ನಾನು ಹಿಂದೆ ಸರಿಯುವುದಿಲ್ಲ. ನನ್ನ ಕಾರ್ಯಕರ್ತರು ಇಂತಹ ಯಾವುದೇ ಸುದ್ದಿಯನ್ನು ನಂಬಬಾರದು ಎಂದು ಮನವಿ ಮಾಡಿದರು.
ಮಾತುಕತೆ ಮುಗಿದಿದೆ:
ಬಿಜೆಪಿ ವರಿಷ್ಠರ ಜೊತೆ ನನ್ನ ಮಾತುಕತೆ ಮುಗಿದಿದೆ. ಇನ್ನು ಯಾರ ಜೊತೆಗೂ ಮಾತುಕತೆಗೆ ಕೂರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನನ್ನನ್ನು ಇನ್ನೂ ಪಕ್ಷದಿಂದ ಯಾಕೆ ಉಚ್ಚಾಟಿಸಿ ಎಂದು ನನಗೆ ಗೊತ್ತಾಗುತ್ತಿಲ್ಲ. ಉಚ್ಚಾಟಿಸಿದರೆ ಇನ್ನಷ್ಟು ಕಟುವಾಗಿ ಮಾತನಾಡಲು ಸಾಧ್ಯ ಎಂದರು.
ಪಕ್ಷದೊಳಗಿರುವ ಇನ್ನೂ ಅನೇಕ ನಾಯಕರಿಗೆ ತೀವ್ರ ಅಸಮಾಧಾನ ಇದೆ. ಕಾಲ ಕಾಲಕ್ಕೆ ಅದನ್ನು ಹೊರ ಹಾಕಿದ್ದಾರೆ. ನಾನು ಧೈರ್ಯವಾಗಿ ಪಕ್ಷದಿಂದ ಹೊರ ಬಂದು ಪಕ್ಷ ಶುದ್ಧೀಕರಣದ ಹೋರಾಟ ನಡೆಸಿದ್ದೇನೆ. ಅವರುಗಳು ಒಳಗಿದ್ದುಕೊಂಡೇ ಹೋರಾಟ ನಡೆಸುತ್ತಿದ್ದಾರೆ ಎಂದರು.
ನನ್ನ ಜೊತೆ ಕೈಜೋಡಿಸಿರುವ ಸಾವಿರಾರು ಕಾರ್ಯಕರ್ತರ ಮುಖವನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದು. ಆದರೆ ಅವರು ನನ್ನನ್ನು, ನನ್ನ ಉದ್ದೇಶವನ್ನು, ಹಿಂದುತ್ವ ಮತ್ತು ಪಕ್ಷ ಉಳಿಸುವ ನನ್ನ ಬದ್ಧತೆಯನ್ನು ನಂಬಿ ಜೊತೆಯಾಗಿದ್ದಾರೆ ಎಂದು ಹೇಳಿದರು.
ನಾಳೆ ನಾಮಪತ್ರ ಸಲ್ಲಿಕೆ:
ಶುಕ್ರವಾರ ನಾಮಪತ್ರ ಸಲ್ಲಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮುನ್ನ ಬೆಳಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಟಿ ಪಾರ್ಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಗಾಂಧಿ ಬಜಾರ್, ನೆಹರು ರಸ್ತೆಯ ಮೂಲಕ ಶೀನಪ್ಪ ಶೆಟ್ಟಿ[ಗೋಪಿ ವೃತ್ತ] ವೃತ್ತಕ್ಕೆ ಬರಲಾಗುವುದು. ಅಲ್ಲಿ ಸಭೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಪಪತ್ರ ಸಲ್ಲಿಸಲಾಗುವುದು ಎಂದು ವಿವರಿಸಿದರು.
ನಾಮಪತ್ರದ ಸಲ್ಲಿಸುವ ಠೇವಣಿ ಹಣವಾಗಿ ನಗರದ ಮಹಿಳೆಯರು ಮತ್ತು ಮುತ್ತೈದೆಯರು ಸೇರಿ 24 ಸಾವಿರ ರು. ಮತ್ತು ತೀರ್ಥಹಳ್ಳಿಯ ಭೀಮನಕಟ್ಟೆ ಮಠದ ಶ್ರೀಗಳು 1 ಸಾವಿರ ರು. ನೀಡಿದ್ದು, ನನ್ನ ಗೆಲುವಿಗೆ ಈ ನೆಲದ ಶ್ರೇಷ್ಠರಾದ ಸಾಧು ಸಂತರು ಮತ್ತು ತಾಯಂದಿರುವ ಹರಸಿ ಒಟ್ಟು 25 ಸಾವಿರ ರು. ನೀಡಿದ್ದಾರೆ. ಇದು ನನ್ನ ಗೆಲುವಿನ ಸಂಕೇತ ಎಂದರು.
ಪ್ರಚಾರಕ್ಕೆಂದು ಬೇರೆ ಯಾವ ದೊಡ್ಡ ನಾಯಕರೂ ನನಗಿಲ್ಲ. ಇನ್ನು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅಂತಹವರು ಹಲವರಿದ್ದಾರೆ. ನನಗೆ ಸಾಮಾನ್ಯ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು ಎಂದು ಈಶ್ವರಪ್ಪ ಹೇಳಿದರು.
ಮುಸ್ಲಿಂರ ಮತಗಳು ಕೂಡ ಬರಲಿದೆ:
ಹಿಂದೂ ಭಕ್ತನಿಗೆ ರಾಷ್ಟ್ರಭಕ್ತ ಮುಸಲ್ಮಾನರು ಮತ ಖಂಡಿತವಾಗಿಯೂ ಬೀಳುತ್ತದೆ. ನನ್ನನ್ನು ಅರ್ಥ ಮಾಡಿಕೊಂಡ, ನನ್ನಿಂದ ಸಹಾಯ ಪಡೆದ ಮುಸಲ್ಮಾನರು ಖಂಡಿತವಾಗಿಯೂ ನನಗೆ ಮತ ಚಲಾಯಿಸುತ್ತಾರೆ. ಪ್ರತಿ ಚುನಾವಣೆಯಲ್ಲಿಯೂ ಮಸ್ಲಿಂರು ನನಗೆ ಮತ ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ನಾನು ನರೇಂದ್ರ ಮೋದಿ ಪೋಟೋ ಹಾಕ ಬಾರದು ಎಂದು ಹೇಳುವ ಇವರು ಯಡಿಯೂರಪ್ಪ, ರಾಘವೇಂದ್ರ ಮತ್ತು ವಿಜಯೇಂದ್ರರ ಫೋಟೋ ಇಟ್ಟುಕೊಂಡು ಹೋಗಿ ಚುನಾವಣೆಯಲ್ಲಿ ಗೆಲ್ಲಲಿ ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದರು.
ಮೋದಿ ವಿಶ್ವನಾಯಕ. ಅವರ ಫೋಟೋ ಹಾಕಬಾರದು ಎಂದು ಹೇಳಲು ಇವರು ಯಾರು? ಎಂದು ಪ್ರಶ್ನಿಸಿದರು.