ವಿಜಯೇಂದ್ರನಿಗೆ ಹಿರಿಯರು, ಸಂಸ್ಕೃತಿ ಎಂದರೆ ಏನೆಂಬುದೇ ಗೊತ್ತಿಲ್ಲ: ಕೆ.ಎಸ್‌.ಈಶ್ವರಪ್ಪ ಕಿಡಿ   ಯಾರ್ ರೀ  ವಿಜಯೇಂದ್ರ? ಆತ ಪಕ್ಷಕ್ಕಾಗಿ ಏನು ಕೆಲಸ ಮಾಡಿದ್ದಾನೆ…ವಿಜಯೇಂದ್ರ ಎಳಸು…   ನನ್ನದು ರಾಜಕೀಯ ಬಲಿದಾನ  

ವಿಜಯೇಂದ್ರನಿಗೆ ಹಿರಿಯರು, ಸಂಸ್ಕೃತಿ ಎಂದರೆ ಏನೆಂಬುದೇ ಗೊತ್ತಿಲ್ಲ: ಕೆ.ಎಸ್‌.ಈಶ್ವರಪ್ಪ ಕಿಡಿ
ಯಾರ್ ರೀ  ವಿಜಯೇಂದ್ರ? ಆತ ಪಕ್ಷಕ್ಕಾಗಿ ಏನು ಕೆಲಸ ಮಾಡಿದ್ದಾನೆ…ವಿಜಯೇಂದ್ರ ಎಳಸು…
ನನ್ನದು ರಾಜಕೀಯ ಬಲಿದಾನ

ಶಿವಮೊಗ್ಗ-

ಯಡಿಯೂರಪ್ಪನವರು ಹಲವು ಚುನಾವಣೆಗಳಿಂದ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಇಂತಹ ಒಪ್ಪಂದ ಜಾತಿ ರಾಜಕೀಯ, ಹಿಂದುತ್ವವಾದಿಗಳನ್ನು ತುಳಿಯುವುದು ಮೊದಲಾದ ಕೆಲಸಗಳಿಂದ ಪಕ್ಷ 108 ಸ್ಥಾನಗಳಿಂದ 68 ಸ್ಥಾನ ಬರಲು ಕಾರಣವಾಗಿದೆ. ಹೀಗಾಗಿಯೇ ನಾನು ಧೈರ್ಯ ಮಾಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗುವ ಮೂಲಕ ಇಂತಹ ಎಲ್ಲ ಅಪಸವ್ಯಗಳಿಗೆ ಮುಕ್ತಿ ಹಾಡಿ ಪಕ್ಷವನ್ನು ಶುದ್ದೀಕರಣ ಮಾಡುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅವರು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಇದೇ ರೀತಿಯ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಸಾದರ ಲಿಂಗಾಯಿತ ಅಭ್ಯರ್ಥಿ ನಾಗರಾಜಗೌಡ ಮತ್ತು ಹಿಂದುಳಿದ ವರ್ಗದ ಗೋಣಿ ಮಾಲತೇಶ್‌ ಇಬ್ಬರನ್ನೂ ಸೋಲಿಸಿದರು. ಲೋಕಸಭಾ ಚುನಾವಣೆಯಲ್ಲಿ ಜಾತಿ ಕಾರಣಕ್ಕೆ ಭದ್ರಾವತಿಯ ಸಂಗಮೇಶ್ ಜೊತೆ ಹೊಂದಾಣಿಕೆ ಮಾಡಿಕೊಂಡು ತಮಗೆ ಮತ ಹಾಕಿಸಿಕೊಳ್ಳುತ್ತಿದು, ಗುಟ್ಟಾಗಿಯೇನೂ ಉಳಿದಿಲ್ಲ ಎಂದರು.
ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದುರ್ಬಲ ಅಭ್ಯರ್ಥಿ ಹಾಕಿಸಿಕೊಳ್ಳುವ ಮೂಲಕ ಇದೇ ರೀತಿಯ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದು, ತಮ್ಮ ಪುತ್ರನನ್ನು ಹೇಗಾದರೂ ಗೆಲ್ಲಿಸಲು ಒದ್ದಾಡುತ್ತಿದ್ದಾರೆ. ಆದರೆ, ಈ ಬಾರಿ ಅದು ಸಫಲವಾಗುವುದಿಲ್ಲ. ಇಂತಹ ಹೊಂದಾಣಿಕೆಯನ್ನು ಕಾಂಗ್ರೆಸ್‍ನ ಅನೇಕ ನಾಯಕರು ಮತ್ತು ಕಾರ್ಯಕರ್ತರು ಗುರುತಿಸಿದ್ದು, ಇದೇ ಕಾರಣಕ್ಕೆ ಬೇಸರಗೊಂಡು ತಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೆಲವರು ಧೈರ್ಯವಾಗಿ ಜೊತೆಗೆ ಬಂದಿದ್ದರೆ, ಇನ್ನು ಕೆಲವರು ಅನಿವಾರ್ಯವಾಗಿ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.
ನನ್ನ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅದು ಸಾಧ್ಯವಿಲ್ಲ, ಅವರು ಪ್ರತಿಕ್ರಿಯೆ ಕೊಡಲೇಬೇಕು. ಅವರು ಹೊಂದಾಣಿಕೆ ರಾಜಕೀಯ, ಜಾತಿ ರಾಜಕೀಯ ಮಾಡಿಲ್ಲ , ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಲಿ ನೋಡೋಣ ಎಂದು ಸವಾಲು ಎಸೆದ ತಮ್ಮ ಪುತ್ರರಿಗಾಗಿ ಎಂತಹ ಕೆಲಸಕ್ಕೂ ಕೈಹಾಕುತ್ತಿದ್ದಾರೆ . ಪಕ್ಷಕ್ಕೆ ಇಂತಹ ಹೀನ ಸ್ಥಿತಿ ಬರಲು ಬಿಎಸ್‍ವೈ ಕೂಡ ಕಾರಣ ಎಂದು ಟೀಕಿಸಿದರು.
ಬಿಜೆಪಿ ಇತಿಹಾಸದಲ್ಲಿ ಒಳ ಒಪ್ಪಂದ ಎಂಬುದು ಇರಲೇ ಇಲ್ಲ. ಸೋಲು-ಗೆಲುವು ಏನೇ ಇದ್ದರೂ ನೇರಾ ನೇರಾ ಚುನಾವಣೆ ನಡೆಸುತ್ತಿದ್ದೆವು. ಹಿಂದುತ್ವ, ರೈತ ಸಮುದಾಯ, ತುಳಿತಕ್ಕೆ ಒಳಗಾದ ಧಮನಿತರ ಪರವಾಗಿ ಹೋರಾಟ ನಡೆಸಿಕೊಂಡು ಬಂದು ಪಕ್ಷ ಕಟ್ಟಿದೆವು. ಯಡಿಯೂರರಪ್ಪ, ತಾವು, ಅನಂತಕುಮಾರ್ ಸೇರಿದಂತೆ ಹಲವಾರು ಮುಖಂಡರು 40 ವರ್ಷಗಳ ಕಾಲ ತಪಸ್ಸಿನಿಂತೆ ಪಕ್ಷ ಕಟ್ಟಿದ್ದರಿಂದ ಇಂದು ಅಧಿಕಾರಕ್ಕೆ ಏರುವಂತಾಗಿದೆ ಎಂದು ಹೇಳಿದರು.
ಇನ್ನೊಂದೆಡೆ ಅವರ ಪುತ್ರ ರಾಘವೇಂದ್ರ ಅವರು ಈಶ್ವರಪ್ಪನವರ ಮಾತು ತಮಗೆ ಆಶೀರ್ವಾದ ಇದ್ದಂತೆ ಎಂದರೆ ಇನ್ನೋರ್ವ ಪುತ್ರ ವಿಜಯೇಂದ್ರ ಸೊಕ್ಕಿನ ಮಾತನಾಡಿದ್ದಾರೆ. ಆತನಿಗೆ ಹಿರಿಯರು, ಸಂಸ್ಕೃತಿ ಎಂದರೆ ಏನೆಂಬುದೇ ಗೊತ್ತಿಲ್ಲ ಎಂದು ಹರಿಹಾಯ್ದ ಅವರು ವಿಜಯೇಂದ್ರ ಎಳಸು ಎಂದರು.
ಯಾರ್ರೀ ವಿಜಯೇಂದ್ರ? ಆತ ಪಕ್ಷಕ್ಕಾಗಿ ಏನು ಕೆಲಸ ಮಾಡಿದ್ದಾನೆ. ಅವರಪ್ಪ , ನಾನು ಹಾಗೂ ನನ್ನಂತವರು ಬೆವರು ಸುರಿಸಿದ್ದರಿಂದ ಮಾತ್ರ ಅಧಿಕಾರ ಸಿಕ್ಕಿದೆ. ಈತನ ಕೊಡುಗೆ ಪಕ್ಷಕ್ಕೆ ಏನೂ ಇಲ್ಲ . ಆತ ಯಾವ ಹೋರಾಟದಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರಶ್ನಿದಸಿದರು.
ಸತ್ಯ ಹೇಳಿದರೆ ಸಿಟ್ಟು ಬರುತ್ತದೆ. ಇಂದು ಬಿಜೆಪಿ ಅಪ್ಪ-ಮಕ್ಕಳ ಕೈಯಲ್ಲಿ ಇಲ್ವಾ? ಒಳ ಒಪ್ಪಂದ ಮಾಡಿಕೊಂಡಿಲ್ಲ? ಇಂತಹ ಎಲ್ಲ ಪ್ರಶ್ನೆಗಳು ಕೇವಲ ನನ್ನೊಬ್ಬನದೇ ಅಲ್ಲ. ರಾಜ್ಯ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಕೇಳುತ್ತಿದ್ದಾರೆ. ಎಲ್ಲರಿಗೂ ನೋವಾಗಿದೆ. ಆದರೆ ಯಾರೂ ಏನನ್ನೂ ಹೇಳದ ಸ್ಥಿತಿಯಲ್ಲಿದ್ದಾರೆ. ಆದರೆ ನಾನು ಧೈರ್ಯವಾಗಿ ಹೇಳುತ್ತಿದ್ದೇನೆ. ಇನ್ನೊಂದೆಡೆ ವಿಜಯಪುರ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಕೂಡ ಹೇಳುತ್ತಿದ್ದಾರೆ ಎಂದರು.
ನಾನು ಸ್ಪರ್ಧೆಯ ಮೂಲಕ ಪಕ್ಷದ ವರಿಷ್ಟರಿಗೆ ವಿಷಯ ಮನದಷ್ಟು ಮಾಡಿಕೊಡಲು ಯತ್ನಿಸುತ್ತಿದ್ದೇನೆ. ನಾನು ಆರಂಭದಲ್ಲಿ ಈ ಕಾರಣಕ್ಕಾಗಿ ಸ್ಪರ್ಧೆ ಮಾಡಿದೆ. ಆದರೆ ಬಳಿಕ ಜನರಿಂದ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದ್ದು, ಗೆಲ್ಲವು ಎಲ್ಲ ಸಾಧ್ಯತೆಗಳು ತೆರೆದುಕೊಂಡಿವೆ. ಸ್ವತಃ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೇ ಕರೆ ಮಾಡಿ, ಇಲ್ಲವೇ ಖುದ್ದಾಗಿ ಭೇಟಿ ಮಾಡಿ ಬೆಂಬಲದ ಭರವಸೆ ನೀಡುತ್ತಿದ್ದು, ಇನ್ನೊಂದಿಷ್ಟು ಪ್ರಯತ್ನ ಮುಂದುವರೆಸಿ ಶೇ.100ರಷ್ಟು ಗೆಲ್ಲುತ್ತೀರಿ ಎಂದು ಹೇಳುತ್ತಿದ್ದಾರೆ. ಅಂತಹದೇ ವಾತಾವರಣ ಜಿಲ್ಲೆಯಾದ್ಯಂತ ಇದೆ. ಈ ಕ್ಷಣದಲ್ಲಿ ಚುನಾವಣೆ ನಡೆದರೆ ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದರು.
ಚುನಾವಣೆಯ ಬಳಿಕ ಅಪ್ಪ-ಮಕ್ಕಳ ಹಿಡಿತದಿಂದ ಪಕ್ಷ ಮುಕ್ತವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್‌ಗಳಾದ ಸುವರ್ಣ ಶಂಕರ್‌, ಏಳುಮಲೈ ಬಾಬು, ಸದಸ್ಯರಾದ ವಿಶ್ವಾಸ್‌, ಶಂಕರ್‌ಗನ್ನಿ, ಮಹಾಲಿಂಗಶಾಸ್ತ್ರಿ ಸೇರಿದಂತೆ ಹಲವರು ಇದ್ದರು.
————————
ನನ್ನದು ರಾಜಕೀಯ ಬಲಿದಾನ:
ನನ್ನದು ರಾಜಕೀಯ ಬಲಿದಾನ ಎಂದು ಈಶ್ವರಪ್ಪ ಹೇಳಿಕೊಂಡರು.
ಸ್ವಾತಂತ್ರ್ಯ ಗಳಿಸಲು ಲಕ್ಷಾಂತರ ಮಂದಿ ಜೀವ ಸೇರಿ ಎಲ್ಲವನ್ನೂ ಕಳೆದುಕೊಂಡರು. ದೇಶಕ್ಕಾಗಿ ಬಲಿದಾನ ಮಾಡಿದರು. ನಾನು ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾದ ಆರಂಭದ ದಿನಗಳಲ್ಲಿ ಅನೇಕರು ನಿಮ್ಮ ಮಗನ ಭವಿಷ್ಯ ಮತ್ತು ನಿಮ್ಮ ಭವಿಷ್ಯ ಹಾಳಾಗುವುದಿಲ್ಲವೇ ಎಂದು ಕೇಳಿದ್ದರು. ನನ್ನ ಮಗನ ಬಳಿ ಕೇಳಿಯೇ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಮಗನ ರಾಜಕೀಯ ಜೀವನ ಹಾಳಾಗಬಹುದು. ನನಗೆ ನನ್ನ ಭವಿಷ್ಯದ ಬಗ್ಗೆ ಕಾಳಜಿ ಬೇಕಾಗಿಲ್ಲ. ಬಿಜೆಪಿ ಪಕ್ಷ ಶುದ್ದೀಕರಣ ನಡೆಯಬೇಕು. ಇದಕ್ಕಾಗಿ ನಾನು ನನ್ನ ರಾಜಕೀಯ ಜೀವನವನ್ನು ಬಲಿದಾನ ಮಾಡುತ್ತಿದ್ದೇನೆ ಎಂದು ಹೇಳಿದರು.
———————–
ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಈಗ ಬೆಲೆ ಬಂದಿದೆ:
ಬಿಜೆಪಿ ಕಾರ್ಯಕರ್ತರಿಗೆ ಈಗ ಬೆಲೆ ಬಂದಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಕಳೆದ 15 ವರ್ಷಗಳಲ್ಲಿ ರಾಘವೇಂದ್ರ ಯಾವ ಕಾರ್ಯಕರ್ತರನ್ನು ಕೂಡ ಮಾತನಾಡಿಸುತ್ತಿರಲಿಲ್ಲ. ತಮ್ಮ ಹಿಂಬಾಲಕರನ್ನು ಮಾತ್ರ ಇಟ್ಟುಕೊಳ್ಳುತ್ತಿದ್ದರು. ನಾನು ಸ್ಪರ್ಧೆ ಘೋಷಿಸಿದ ಬಳಿಕ ಬಿಜೆಪಿಯ ಸುಮಾರು ಶೇ. 70 ರಷ್ಟು ಕಾರ್ಯಕರ್ತರು ನನ್ನ ಜೊತೆಗೆ ಬಂದಾಗ ಗಾಬರಿಯಿಂದ ಅಂತಹ ಕಾರ್ಯಕರ್ತರ ಮನೆಗೆ ಹೋಗಿ ಆಶ್ವಾಸನೆ ನೀಡುತ್ತಿದ್ದಾರೆ. ಈಗ ಕಾರ್ಯಕರ್ತರ ನೆನಪಾಗುತ್ತಿದೆ. ಅಂತೂ ಕಾರ್ಯಕರ್ತರಿಗೆ ಬೆಲೆ ಬಂದಂತಾಗಿದೆ ಎಂದರು.