ನೈರುತ್ಯ ಪದವೀಧರ ಕ್ಷೇತ್ರ; ಕಾಂಗ್ರೆಸ್ ಬಂಡಾಯ ಸ್ಪರ್ಧೆಗೆ ಸಿದ್ಧವಾದ ಎಸ್.ಪಿ.ದಿನೇಶ್

ನೈರುತ್ಯ ಪದವೀಧರ ಕ್ಷೇತ್ರ; ಕಾಂಗ್ರೆಸ್ ಬಂಡಾಯ ಸ್ಪರ್ಧೆಗೆ ಸಿದ್ಧವಾದ ಎಸ್.ಪಿ.ದಿನೇಶ್

ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಲು ಕಳೆದ ಮೂರು ಅವಧಿಯಿಂದಲೂ ಶ್ರಮಿಸಿದ ನನ್ನ ಪ್ರಯತ್ನ ಈ ಬಾರಿ ಕಾಂಗ್ರೆಸ್ ಪಕ್ಷದ ಕೆಲ ಪ್ರಮುಖರಿಂದ ವಿಫಲವಾಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ನನ್ನನ್ನು ಹೊರತುಪಡಿಸಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡಿದರೆ ಮಾತ್ರ ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಹಾಗೂ ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ತಿಳಿಸಿದರು.

ಅವರಿಂದು ಬೆಳಿಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್ ಪಕ್ಷ ಈಗಲೂ ಘೋಷಿಸಿರುವ ಅಭ್ಯರ್ಥಿಯನ್ನು ಬದಲಿಸಿ,ನನಗೆ ಬದಲಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಟಿಕೆಟ್ ನೀಡಿದರೆ ಮಾತ್ರ ಬದಲಿ ಯೋಚನೆ ಮಾಡುತ್ತೇನೆ. ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ನಾನು ಕಳೆದ ಹತ್ತು ತಿಂಗಳಿನಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ತಯಾರಿ ಮಾಡಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಕ್ತವಾಗಿ ನೀವು ಚುನಾವಣೆಗೆ ತಯಾರಿ ನಡೆಸಿ. ನಿಮಗೆ ಟಿಕೆಟ್ ದೊರಕುತ್ತದೆ ಎಂದಿದ್ದರು. ಕೊನೆ ಹಂತದಲ್ಲಿ ವ್ಯತ್ಯಾಸವಾಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ತಲುಪಿದ್ದರೆ ನನಗೆ ಬೇಸರವಾಗುತ್ತಿಲ್ಲ. ಪಕ್ಷಾಂತರಿಗೆ ಟಿಕೆಟ್ ನೀಡಿರುವುದು ನನಗೆ ಬೇಸರವಾಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ಈಗಲೂ ಚಿಂತಿಸುವ ಹಾಗೂ ನನಗೆ ಬಿ. ಫಾರ್ಮ್ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ವಿನಂತಿಸಿದರು.

ಹಲವು ವರ್ಷಗಳಿಂದ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಠೇವಣಿ ಪಡೆಯದಿದ್ದ ಕಾಂಗ್ರೆಸ್ ಪಕ್ಷಕ್ಕೆ ಠೇವಣಿ ಪಡೆಯುವಂತೆ ಮಾಡಿದ್ದಲ್ಲದೆ, ಹಿಂದಿನ ಸಭಾಪತಿ ಡಿ ಶಂಕರಮೂರ್ತಿ ವಿರುದ್ಧ ಅತಿ ಕಡಿಮೆ ಅಂತರದ ಮತಗಳಿಂದ ಪರಾಭವಗೊಂಡಿದ್ದೆ. ಈ ಕ್ಷೇತ್ರ ವ್ಯಾಪ್ತಿಯ 13ಕ್ಕೂ ಹೆಚ್ಚು ಶಾಸಕರು, ಎಲ್ಲಾ ಜಿಲ್ಲೆಗಳ ಅಧ್ಯಕ್ಷರುಗಳು, ಬ್ಲಾಕ್ ಸಮಿತಿ ಅಧ್ಯಕ್ಷರು ನನಗೆ ಬೆಂಬಲಿಸಿದ್ದರು. ಆದರೆ ಟಿಕೆಟ್ ಕೊಡುವ ವಿಚಾರದಲ್ಲಿ ಮೋಸವಾಗಿದೆ. ನಾನು ಎನ್ ಎಸ್ ಯು ಐ ನಿಂದ ಬೆಳೆದವನು. ಕಾಂಗ್ರೆಸ್ ಪಕ್ಷಕ್ಕೆ ಯಾವತ್ತೂ ವಂಚಿಸಿಲ್ಲ ಎಂದರು.
ಬರುವ ಹದಿನಾರರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷರು ನನಗೆ ಅವಕಾಶ ನೀಡಬೇಕು. ನೈರುತ್ಯ ಪದವೀಧರ ಕ್ಷೇತ್ರದ ಸಾಕಷ್ಟು ಮತದಾರರು ಈಗಲೂ ನನ್ನ ಪರವಾಗಿ ಧ್ವನಿ ಎತ್ತಿದ್ದಾರೆ. ಖಂಡಿತ ನಾನು ಗೆದ್ದು ಬರುತ್ತೇನೆ ಎಂದರು.

ಈ ಬಾರಿಯ ಚುನಾವಣಾ ಪ್ರಯತ್ನದ ಪರವಾಗಿ ನಾನು ಕಳುಹಿಸಿದ್ದ ಸುಮಾರು 20 ಸಾವಿರ ಜನ ನನಗೆ ಬೆಂಬಲ ಸೂಚಿಸಿ ಪತ್ರ ತಲುಪಿಸಿದ್ದಾರೆ. ಶೇಕಡ 99 ರಷ್ಟು ಮತದಾರರು ನನಗೆ ಆದ ಅನ್ಯಾಯದ ಬಗ್ಗೆ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ಪಕ್ಷ ಈ ಬಗ್ಗೆ ನ್ಯಾಯ ಒದಗಿಸಬೇಕು ಎಂದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅಭ್ಯರ್ಥಿ ಮೊನ್ನೆ ಅಷ್ಟೇ ನನ್ನ ಜೊತೆ ಮಾತನಾಡಿ ಬೆಂಬಲಿಸಲು ಕೋರಿದರು. ಟಿಕೇಟ್ ಗೆ ನನ್ನ ಹಿಂದಿನ ಸೋಲು ಕಾರಣವಾಗಿದ್ದರೆ, ಪಕ್ಷದ ನಿಷ್ಠಾವಂತರಾಗಿರುವ ಇನ್ನೊಬ್ಬರಿಗೆ ಕೊಡಿ. ಆಗ ಅವರಿಗೆ ಬೆಂಬಲಿಸುತ್ತೇನೆ ಎಂದು ನೇರವಾಗಿ ಹೇಳಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಹನುಮಂತ ಗೌಡ ಆರ್ ಕಲ್ಮನಿ, ಕಾರ್ಯದರ್ಶಿ ವಿನೋದ್ ಚಂದ್ ಪೀಟರ್, ಜಿಲ್ಲಾಧ್ಯಕ್ಷ ರಮೇಶ್ ಪ್ರಮುಖರಾದ ಸದಾಶಿವ, ಪ್ರೊ. ರುದ್ರೇಶ್, ಈಶ್ವರ್ ಹಾಗೂ ಇತರರಿದ್ದರು

ಅತಿಥಿ ಉಪನ್ಯಾಸಕರುಗಳಾದ ನಮ್ಮ ಬೇಡಿಕೆಗಳು ಈಡೇರಲು ಪುಟ್ಟಣ್ಣಯ್ಯ, ಬಸವರಾಜ್ ಹೊರಟ್ಟಿ, ಅವರಂತೆ ಎಸ್ ಪಿ ದಿನೇಶ್ ಅವರು ಸಹ ಸದಾ ಪ್ರಯತ್ನಿಸಿದ್ದು ಅವರು ನಮ್ಮ ಕಾನೂನು ಸಲಹೆಗಾರರಾಗಿದ್ದಾರೆ. ಅವರ ಜೊತೆ ನಾವಿದ್ದೇವೆ ನಮ್ಮ ಹೋರಾಟಕ್ಕೆ ನ್ಯಾಯ ಒದಗಿಸಿರುವ ಎಸ್ಪಿ ದಿನೇಶ್ ಅವರ ಪ್ರೀತಿಗೆ ಅವರನ್ನು ನಾವು ಬೆಂಬಲಿಸುತ್ತೇವೆ. ಎಲ್ಲಾ ಪದವೀಧರರು ಅವರಿಗೆ ಶುಭ ಹರಸಬೇಕು.
– ಡಾ. ಹನುಮಂತ ಗೌಡ ಕಲ್ಮನಿ,
ರಾಜ್ಯಾಧ್ಯಕ್ಷರು,
ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘ