ಡಾ.ಸರ್ಜಿ, ಭೋಜೇಗೌಡರ ಹೆಗಲೇರಿದ ಒಪಿಎಸ್ ಜಾರಿ/ವಿಶ್ಲೇಷಣೆ: ಡಾ.ಬಾಲಕೃಷ್ಣ ಹೆಗಡೆ, ಶಿವಮೊಗ್ಗ  

ಡಾ.ಸರ್ಜಿ, ಭೋಜೇಗೌಡರ ಹೆಗಲೇರಿದ ಒಪಿಎಸ್ ಜಾರಿ

ವಿಶ್ಲೇಷಣೆ: ಡಾ.ಬಾಲಕೃಷ್ಣ ಹೆಗಡೆ, ಶಿವಮೊಗ್ಗ  


ಅತ್ಯಂತ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ-ಶಿಕ್ಷಕರ ಕ್ಷೇತ್ರದ ಚುನಾವಣೆ-೨೦೨೪ ಮುಗಿದಿದೆ. ಫಲಿತಾಂಶವೂ ಬಂದಾಗಿದೆ. ಚುನಾವಣಾ ಕಣದಲ್ಲಿದ್ದ ರಾಷ್ಟ್ರೀಯ ಪಕ್ಷಗಳು, ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಆ ಪಕ್ಷಗಳಿಂದ ಬಂಡಾಯದ ಬಾವುಟ ಹಾರಿಸಿ ಸ್ವತಂತ್ರವಾಗಿ ಸ್ಪರ್ಧಿಸಿದವರು ಹಾಗೂ ಕೆಲ ಪಕ್ಷೇತರವಾಗಿ ಸ್ಪರ್ಧಿಸಿ ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದು ಈಗ ಮುಗಿದ ಅಧ್ಯಾಯ.
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಿವಮೊಗ್ಗದ ಡಾ.ಧನಂಜಯ ಸರ್ಜಿ, ಬಿಜೆಪಿ ಕಾರ್ಯಕರ್ತರ ಬೆಂಬಲಿತ ಸ್ವಂತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್, ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್, ಕಾಂಗ್ರೆಸ್ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಎಸ್.ಪಿ.ದಿನೇಶ್. ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಹಾಲಿ ಶಾಸಕರಾದ ಎಸ್.ಎಲ್.ಭೋಜೆಗೌಡ ಮತ್ತು ಕೊಡಗಿನ ಡಾ.ಕೆ.ಕೆ.ಮಂಜುನಾಥ ಕುಮಾರ (ಮೇಷ್ಟ್ರು) ಪ್ರಮುಖರಾಗಿದ್ದರು.
ಡಾ.ಸರ್ಜಿ ಅವರು ವೈದ್ಯಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮತ್ತು ಸಾಧನೆ ಮಾಡುತ್ತಿದ್ದಾರೆಂಬ ಸಾರ್ವಜನಿಕ ಮನ್ನಣೆಗೆ ಪಾತ್ರರಾದವರು. ರಾಜಕೀಯಕ್ಕೆ ತೀರಾ ಹೊಸಬರು. ಪದವೀಧರರ, ಶಿಕ್ಷಕರ, ನೌಕರರ ಸಮಸ್ಯೆಗಳ ಬಗ್ಗೆ ಆಗಲೀ, ಅವರ ಯಾವುದೇ ಹೋರಾಟಗಳಲ್ಲಾಗಲೀ ಇಲ್ಲಿಯ ವರೆಗೆ ಅವರು ಭಾಗವಹಿಸಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಸರ್ಜಿ ಅವರದ್ದು ಇದು ಚೊಚ್ಚಲ ಚುನಾವಣೆ. ವಾಮ ಮಾರ್ಗದಿಂದ ಸರ್ಜಿ ಗೆದ್ದಿದ್ದಾರೆ ಎಂಬ ವಿರೋಧಿಗಳ ಆರೋಪವೇನೇ ಇದ್ದರೂ ಪಕ್ಷದ ಸಂಘಟಿತ ಪ್ರಯತ್ನ, ಮಿತ್ರ ಪಕ್ಷವಾದ ಜೆಡಿಎಸ್.ನ ಬೆಂಬಲ ಹೊಂದಿದ್ದ ಇವರನ್ನು ಪದವೀಧರ ಮತದಾರರು ಅತ್ಯಧಿಕ ಮತಗಳಿಂದ ಇವರನ್ನು ಗೆಲ್ಲಿಸಿ ಪರಿಷತ್ ಪ್ರವೇಶಿಸುವಂತೆ ಮಾಡಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯ ಚುನಾವಣೆಯಲ್ಲಿ ಒಪಿಎಸ್ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿ ಬಳಿಕ ಸರ್ಕಾರ ರಚಿಸಿ ಒಂದು ವರ್ಷವಾದರೂ ಅದನ್ನು ಅನುಷ್ಠಾನಕ್ಕೆ ತರದೇ ಇರುವುದರ ವಿರುದ್ಧ  ಡಾ.ಸರ್ಜಿ ಅವರನ್ನು ಗೆಲ್ಲಿಸುವುದರ ಮೂಲಕ ಮತದಾರ ತನ್ನ ಮುನಿಸನ್ನು ಹೊರ ಹಾಕಿದ್ದಾನೆ ಎಂಬುದು ಸಾಬೀದಾದಂತಾಗಿದೆ. ಮತದಾರರ ಸಮಸ್ಯೆಗಳನ್ನರಿತು ಸ್ಪಂದಿಸುವ ಜವಾಬ್ದಾರಿಯನ್ನು ಮತದಾರ ಅತ್ಯಂತ ಚಾಲಾಕಿಯಿಂದ ಸರ್ಜಿ ಹೆಗಲ ಮೇಲೆ ಹೊರಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನು ಎನ್.ಡಿ.ಎ.ಅಭ್ಯರ್ಥಿಯಾಗಿದ್ದ ಭೋಜೇಗೌಡರು ಶಿಕ್ಷಕ ಕ್ಷೇತ್ರದ ಹಾಲಿ ಶಾಸಕರಾಗಿದ್ದು ಈ ಅವಧಿಯಲ್ಲಿ ಒಪಿಎಸ್ ಜಾರಿ, ಅನುದಾನಿತ ಸಂಸ್ಥೆಗಳ ನೌಕರರಿಗೆ ಜ್ಯೋತಿ ಸಂಜಿವೀನಿ,  ಕಾಲ್ಪನಿಕ ವೇತನ ಕಾಯ್ದೆ ರದ್ದತಿ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ಶಿಕ್ಷಕರ ಪ್ರಮುಖ ಸಮಸ್ಯೆಗಳನ್ನು ೨೦೨೪ ಚುನಾವಣೆಗೆಂದೇ ಜೀವಂತವಾಗಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಆ ಕುರಿತು ಗಂಭೀರ ಪ್ರಯತ್ನವನ್ನೇ ಮಾಡಲಿಲ್ಲ ಎಂಬ ಆರೋಪಗಳ ಮಧ್ಯೆಯೇ ಮತದಾರ ಅವರಿಗೆ ಬಹು ಪರಾಕ್ ಹೇಳಿದ್ದಾನೆ. ಇನ್ನಾದರೂ  ಒಪಿಎಸ್ ಜಾರಿಗೆ ಶ್ರಮಿಸುತ್ತಾರೋ ಎಂಬುದನ್ನು ಮತದಾರ ಎದುರು ನೋಡುತ್ತಿದ್ದಾನೆ ಎನ್ನಲಾಗುತ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿ.ಆಪ್ತ ಎನ್ನಲಾದ ಡಾ.ಕೆ.ಕೆ.ಮಂಜುನಾಥ ಅವರು ಭೋಜೇಗೌಡರಿಗೆ ಪ್ರಬಲ ಪ್ರತಿಸ್ಪರ್ಧಿ ಆಗಿದ್ದರು ಎಂಬುದನ್ನು ಫಲಿತಾಂಶ ಸುಳ್ಳಾಗಿಸಿದೆ. ಗೆಲ್ಲುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಕ್ಷೇತ್ರ ಸಂಚಾರವನ್ನೇ ಮಾqಲಿಲ್ಲ. ಅದಕ್ಕಾಗಿ ಅವರು ಸೋಲಬೇಕಾಯಿತು ಎಂಬ ಚರ್ಚೆಗೆ ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ.
ನೌಕರರ ಸಮಸ್ಯೆಗಳ ಹೋರಾಟದಿಂದಲೇ ಹೆಸರು ಪಡೆದ, ಅನುಭವೀ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಆಯನೂರು ಮಂಜುನಾಥ. ನೌಕರರಿಗೆ ಮಾರಕವಾದ ಎನ್.ಎಪಿ.ಎಸ್.ರದ್ದು ಪಡಿಸಿ ಒಪಿಎಸ್.ನ್ನು ಜಾರಿಗೆ ತರುವುದೂ ಸೇರಿದಂತೆ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಅನುದಾನಿತದವರಿಗೆ ಆರೋಗ್ಯ ಸಂಜೀವಿನಿ ವಿಸ್ತರಣೆ ಮೊದಲಾದ ಗಂಭೀರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಲೇ ಬಂದವರು. ಸರ್ಕಾರಿ, ಅನುದಾನಿತ ಸಂಸ್ಥೆಗಳ ಲಕ್ಷಾಂತರ ನೌಕರರ ವಿವಿಧ ಸಮಸ್ಯೆಗಳ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಯಾವುದೇ ಮುಲಾಜಿಲ್ಲದೆ ಹೋರಾಟ ಮಾಡುತ್ತ ಬಂದವರಾಗಿದ್ದರು. ಆಡಳಿತಾರೂಢ ಪಕ್ಷದ ಅಭ್ಯರ್ಥಿ ಎಂಬ ಪ್ಲಸ್ ಪಾಯಂಟ್ ಕೂಡ ಅವರಿಗಿತ್ತು. ಆಯ್ಕೆ ಆಗಿ ಬಂದರೆ ಸಮಸ್ಯೆಗಳ ಇತ್ಯರ್ಥಕ್ಕೆ ಅನುಕೂಲಕರ ಎಂಬ ಭಾವನೆ ಮತದಾರಲಲ್ಲಿತ್ತು. ಆದರೆ ಪದವೀಧರ ಪ್ರಬುದ್ಧ ಮತದಾರ ಅವರ ನೆರವಿಗೆ ಬಾರದಿರುವುದು ಹಲವರ ದಿಘ್ಬ್ರಮೆಗೆ ಕಾರಣವಾಗಿದೆ.
ಉಸ್ತುವಾರಿಯಾಗಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಜಿಲ್ಲೆ ಶಿವಮೊಗ್ಗವಾಗಿದ್ದರೂ ಅವರು ಆಯನೂರು ಅವರ ಮೇಲೆಯೇ ಅತಿಯಾದ ವಿಶ್ವಾಸವನ್ನಿಟ್ಟು ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ತೋರಿದ  ಅವರ ಆಸಕ್ತಿ ಇಲ್ಲಿ ಕಾಣಲಿಲ್ಲ. ಸಚಿರವರು ತಮ್ಮ ಜವಾಬ್ದಾರಿ ನಿಭಾಯಿಸಲಿಲ್ಲ. ಕನಿಷ್ಟ ಪಕ್ಷ ಸಚಿವರು ಕ್ಷೇತ್ರದಲ್ಲಿ ಒಂದು ಸುತ್ತು ಪ್ರವಾಸ ಮಾಡಿದ್ದರೂ ಆಯನೂರು ಗೆಲ್ಲುತ್ತಿದ್ದರೇನೋ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಆದರೆ ತಮ್ಮ ಎದೆಯಲ್ಲಿರುವ ಹೋರಾಟಗಾರ ಚೈತನ್ಯಶೀಲನಾಗಿರುವ ವರೆಗೂ ಹೋರಾಟ ಮುಂದುವರಿಸುತ್ತೇನೆ. ಪದವೀಧರರು ನನ್ನನ್ನು ಸೋಲಿಸಿ, ತಮಗೆ ಯೋಗ್ಯವಾದ ಅಭ್ಯರ್ಥಿಯನ್ನೇ ಆರಿಸಿಕೊಂಡಿದ್ದಾರೆ ಎಂದುಕೊಳ್ಳುತ್ತೇನೆ.  ಅಲ್ಲದೆ ತಮ್ಮ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ ೧೩ ಸಾವಿರ ಮತದಾರರಿಗೆ ಗೌರವ ಕೊಡುವುದಕ್ಕೋಸ್ಕರವಾದರೂ ತಾವು ಆರಂಭಿಸಿರುವ ಒಪಿಎಸ್ ಜಾರಿ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಅನುದಾನಿತದವರಿಗೆ ಆರೋಗ್ಯ ಸಂಜೀವಿನಿ ಕೊಡಿಸುವ ಪ್ರಯತ್ನವನ್ನು ಸರ್ಕಾರದ ಮಟ್ಟದಲ್ಲಿ ಮುಂದುವರಿಸುವುದಾಗಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿರುವುದು ಆಯನೂರು ಅವರ ಹೃದಯವಂತಕೆಗೆ, ಅವರಲ್ಲಿರುವ ಹೋರಾಟದ ಕಿಚ್ಚಿಗೆ ಸಾಕ್ಷಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆ ಆದ ಭೋಜೇಗೌಡರು, ನೌಕರರ ಸಮಸ್ಯೆಗಳ ಅರಿವೇ ಇಲ್ಲದ ಡಾ.ಸರ್ಜಿ ಅವರು ಆರಿಸಿ ಬಂದಿದ್ದು, ನೌಕರರ ಸಂಘಟನೆಗಳ ಜತೆ ಚರ್ಚಿಸಿ, ಸಮಸ್ಯೆಗಳನ್ನು ಅರಿತು, ಪಕ್ಷ ಭೇದ ಮರೆತು, ಶಿಕ್ಷಣ ಸಚಿವರು ಶಿವಮೊಗ್ಗದವರೇ ಆಗಿದ್ದರಿಂದ,  ಸರ್ಕಾರದ ಮಟ್ಟದಲ್ಲಿ ತಕ್ಷಣದಲ್ಲಿ ಒಪಿಎಸ್ ಜಾರಿ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಕಾಲ್ಪನಿಕ ವೇತನ ಕಾಯ್ದೆ ರದ್ದತಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮೊದಲಾದವುಗಳ ಬಗ್ಗೆ ಗಮನ ಹರಿಸುತ್ತಾರೆಂಬ ನಂಬಿಕೆ ಮತದಾರರದ್ದು.