ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಮಾ.9 ರಂದು ಕೊಪ್ಪಳದಲ್ಲಿ; ಅಧ್ಯಕ್ಷ ಕೆ.ವಿ.ಶಿವಕುಮಾರ್

ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಮಾ.9 ರಂದು ಕೊಪ್ಪಳದಲ್ಲಿ; ಅಧ್ಯಕ್ಷ ಕೆ.ವಿ.ಶಿವಕುಮಾರ್

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಮಾ. ೯ರಂದು ಕೊಪ್ಪಳದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶತಮಾನದ ಇತಿಹಾಸವಿದೆ. ಸರ್ಕಾರ ಮತ್ತು ಪತ್ರಕರ್ತರ ನಡುವಿನ ಕೊಂಡಿಯಾಗಿ ಇದು ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸುಮಾರು ೧೦ ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಜ್ಞಾನದ ಉನ್ನತೀಕರಣಕ್ಕೆ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸಂಘ ಕೆಲಸ ಮಾಡುತ್ತ ಬಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದು ವಿಸ್ತಾರಗೊಂಡಿದೆ ಎಂದರು.
ಸಂಘವು ವೃತ್ತಿಪರತೆ ಹಾಗೂ ಬದ್ಧತೆಯನ್ನು ಮೆರೆದ ನಾಡಿನ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿ ಆಕರ್ಷಕ ಸ್ಮರಣಿಕೆಯೊಂದಿಗೆ ೫ ಸಾವಿರ ನಗದು ರೂ. ಪುರಸ್ಕಾರ  ಹೊಂದಿದೆ. ಶಿವಮೊಗ್ಗದ ಹಿರಿಯ ಪತ್ರಕರ್ತರಾಗಿದ್ದ ಮಿಂಚು ಪತ್ರಿಕೆಯ ಮಿಂಚು ಶ್ರೀನಿವಾಸ್, ಎಚ್ಚರಿಕೆ ಪತ್ರಿಕೆಯ ಎಂ. ನಾಗೇಂದ್ರರಾವ್ ಹಾಗೂ ನಾವಿಕ ದಿನಪತ್ರಿಕೆಯ ಹೆಚ್.ಎಸ್. ರಂಗಸ್ವಾಮಿ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿದ್ದು, ಇದರ ಅಡಿಯಲ್ಲಿ ಶಿವಮೊಗ್ಗದ ಮೂವರು ಪತ್ರಕರ್ತರಿಗೆ ಈ ಬಾರಿ ಪ್ರಶಸ್ತಿ ಸಿಕ್ಕಿದೆ ಎಂದರು.
ಮಿಂಚು ಶ್ರೀನಿವಾಸ್ ಪ್ರಶಸ್ತಿಯು ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಚಂದ್ರಶೇಖರ ಶೃಂಗೇರಿ ಅವರಿಗೆ, ಹೆಚ್.ಎಸ್. ರಂಗಸ್ವಾಮಿ ಪ್ರಶಸ್ತಿ ಹಿರಿಯ ಪತ್ರಕರ್ತ ಗಿರೀಶ್ ಉಮ್ರಾಯ್ ಅವರಿಗೆ, ಗಿರಿಜಮ್ಮ ರುದ್ರಮ್ಮ ತಾಳಿಕೋಟಿ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರಾದ ಕವಿತಾ ಅವರು ಭಾಜನರಾಗಿದ್ದಾರೆ. ಈ ಮೂವರಿಗೂ ಕೊಪ್ಪಳದಲ್ಲಿ ನಡೆಯುವ ಸರ್ವ ಸದಸ್ಯರ ಸಭೆಯ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಹಾಗೆಯೇ ಮುಂದಿನ ದಿನಗಳಲ್ಲಿ ಈಗಾಗಲೇ ಇವರ ಜೊತೆಗೆ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ರವಿ ಬಿದನೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಆರುಂಡಿ ಶ್ರೀನಿವಾಸಮೂರ್ತಿ, ವಾರ್ತಾ ಇಲಾಖೆಯಿಂದ ನೀಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಜಿ.ಟಿ. ಸತೀಶ್ ಅವರನ್ನು ಜಿಲ್ಲಾ ಶಾಖೆ ಅಭಿನಂದಿಸುತ್ತದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಟೆಲೆಕ್ಸ್ ರವಿಕುಮಾರ್ ಮಾತನಾಡಿ, ಪತ್ರಕರ್ತರ ಸಂಘವು ಸದಸ್ಯರ ಹಿತ ಕಾಪಾಡುವ ನಿಟ್ಟಿನತ್ತ ಕೆಲಸ ಮಾಡುತ್ತಿದೆ. ಮುಂಬರಲಿರುವ ರಾಜ್ಯ ಬಜೆಟ್ ನಲ್ಲಿ ಪತ್ರಕರ್ತರಿಗೆ ಒಳ್ಳೆಯ ಸುದ್ದಿಯ ನಿರೀಕ್ಷೆ ಇದೆ. ಅಸಂಘಟಿತ ವ್ಯಾಪ್ತಿಯಿಂದ ಸಂಘಟಿತ ವ್ಯಾಪ್ತಿಗೆ ಬರಲು ಸಂಘ ಕೆಲಸ ಮಾಡುತ್ತಿದೆ. ಕ್ಷೇಮಾಭಿವೃದ್ಧಿಗೆ ಸಂಘ ಹೆಚ್ಚು ಒತ್ತು ಕೊಡುತ್ತಿದೆ. ಈಗಾಗಲೇ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಅನುಮತಿ ನೀಡಿದೆ. ಹಾಗೇಯೇ ಪತ್ರಕರ್ತರ ಆರೋಗ್ಯಕ್ಕಾಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಸೌಲಭ್ಯ ನೀಡುವಲ್ಲಿ ಸಂಘ ಪ್ರಯತ್ನ ಪಡುತ್ತದೆ ಎಂದರು.
ಸದಸ್ಯತ್ವ ನೋಂದಣಿ:
ಪತ್ರಕರ್ತರ ಸಂಘವು ಸಂಘದ ಸದಸ್ಯತ್ವ ಹಾಗೂ ನವೀಕರಣಕ್ಕೆ ಚಾಲನೆ ನೀಡಲಾಗಿದ್ದು, ನಿಯಮಗಳಿಗೆ ಒಳಪಟ್ಟು ಸದಸ್ಯತ್ವ ನೀಡಲಾಗುವುದು. ಸದಸ್ಯತ್ವ ಪಡೆಯಲು ಮಾ. ೭ ಕೊನೆಯ ದಿನವಾಗಿದೆ. ಸಂಘದ ಕಚೇರಿಯಲ್ಲಿ ಅರ್ಜಿ ಪಡೆದು ಸೂಕ್ತ ದಾಖಲೆಯೊಂದಿಗೆ ಪತ್ರಕರ್ತರು ಅರ್ಜಿ ಸಲ್ಲಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಿ.ಟಿ. ಅರುಣ್, ಹಾಲಸ್ವಾಮಿ, ರಂಜಿತ್, ಹುಚ್ರಾಯಪ್ಪ, ಕೆ.ಆರ್. ಸೋಮನಾಥ್, ನಾಗೇಶ್ ನಾಯ್ಕ್, ಗಾರಾ ಶ್ರೀನಿವಾಸ್ ಮೊದಲಾದವರಿದ್ದರು.