Telex ravi kumar’s Why iam dalit?

Why I am dalit?

ವಿಧಾನಸಭೆಯಲ್ಲಿಂದು ಬಿಜೆಪಿಗರು ಬಳಸಿದ “ದಲಿತ” ಪದವನ್ನು ವಿರೋಧಿಸಿ ಸಚಿವ ಪಿ ನರೇಂದ್ರಸ್ವಾಮಿ ಭಾವುಕರಾಗಿ ಮಾತಾಡಿದರು.

ಬಿಜೆಪಿಯ ವಿಪಕ್ಷ ನಾಯಕ ಅಶೋಕ್ ಇನ್ನು ಮುಂದೆ “ದಲಿತ” ಪದ ಬಳಸುವುದಿಲ್ಲ ಎಂಬ ಭರವಸೆಯನ್ನು ನೀಡಿ ನರೇಂದ್ರಸ್ವಾಮಿ ಅವರನ್ನು ಸಮಾಧಾನಿಸಿದರು.!

ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು
ಅಂಬೇಡ್ಕರ್ ಅವರು ಕೂಡ ದಲಿತ ಪದ ಬಳಕೆಯನ್ನು ವಿರೋಧಿಸಿದ್ದರು ಎಂಬ ರೆಪೆರೆನ್ಸ್ ನ್ನು ಕೊಟ್ಟರು. ಒಟ್ಟಾರೆ ದಲಿತರನ್ನು “,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ” ಗಳು ಎಂದೆ ಕರೆಯಬೇಕು. ಸರ್ಕಾರ ಕೂಡ ಅಧಿಕೃತ ವಾಗಿ ಹೀಗೆ ಬಳಸುತ್ತಿದೆ ಎನ್ನುವುದು ಇವತ್ತಿನ ಚರ್ಚೆಯ ಮುಖ್ಯಭಾಗವಾಗಿ ಕಂಡಿತು.

ಈ ಹಿನ್ನೆಲೆ ನೋಡುವಾಗ ತುಳಿತಕ್ಕೊಳಗಾದ ಜನಸಮುದಾಯವನ್ನು ದಲಿತರು ಯಾ ಪರಿಶಿಷ್ಟ ಜಾತಿ- ವರ್ಗಗಳು ಈ ಯಾವ ಹೆಸರಿನಿಂದ ಕರೆಯಬೇಕು ಎಂಬ ಜಿಜ್ಞಾಸೆಯೊಂದು ಬಲಪಡೆದುಕೊಂಡಿದೆ.

ದಲಿತರು ಎಂಬುದರ ಮೂಲ ಉತ್ಪತ್ತಿ ಮರಾಠಿ ಭಾಷೆಯದ್ದಾಗಿದೆ. “ದಲ್” ಎಂದರೆ ತುಳಿತಕ್ಕೊಳಗಾದವರು ಎಂಬರ್ಥದಲ್ಲಿದ್ದು ತುಳಿತಕ್ಕೊಳಗಾದವರನ್ನು “,ದಲಿತರು” ಎಂದು ಗುರುತಿಸಲಾಯಿತು.

ಗ್ರೀಕ್ ಭಾಷೆಯ ಪ್ರಕಾರ ದಲಿತ ಎಂದರೆ “ಚದುರಿದ” ಎಂಬರ್ಥವಿದೆ. ಜಾತಿಶ್ರೇಣಿಕೃತ ವ್ಯವಸ್ಥೆಗೆ ಸಿಕ್ಕು ನಲುಗಿ ಹೋದ ಜನಸಮುದಾಯ ಸಂಘಟಿತರಾಗದೆ ಇರುವುದು ಕೂಡ “ಚದುರಿದ” ಅರ್ಥಕ್ಕೆ ಸಾಮೀಪ್ಯ ಹೊಂದಿದೆ.

“ದಲಿತ” ಪದ ಶೋಷಿತ ಸಮುದಾಯದ ಸಂಘಟನೆಗೆ ಭಾವನಾತ್ಮಕ ಸೆಳೆತವನ್ನು ಹೊಂದಿದ್ದರೆ
ಎಲ್ಲಾ ರಾಜಕೀಯಪಕ್ಷಗಳ ಬಂಡವಾಳವಾಗಿಯೂ ಜೀವಂತವಾಗಿರುವುದು ದೌರ್ಭಾಗ್ಯ.

ದಲಿತರ ಮನೆಯಲ್ಲಿ ಸಹ ಭೋಜನ,ದಲಿತರ ಕೇರಿಗೆ ಪುರಪ್ರವೇಶ, ದಲಿತರ ಮನೆಯಲ್ಲಿ ಪಾದಪೂಜೆ…
ಇತ್ಯಾದಿ ರೂಪಗಳಲ್ಲಿ ಅಡಗಿರುವುದು ಅಂತಿಮವಾಗಿ ಓಟ್ ಬ್ಯಾಂಕ್ ರಾಜಕಾರಣ ಮತ್ತು ಮತೀಯವಾದಕ್ಕೆ ಬಲಿಯಾಗಿಸುವ ಸಂಚು ಮಾತ್ರವೆ.

ದಲಿತ ಅನ್ನೋದು ಎಲ್ಲಾ ಬಗೆಯಿಂದಲೂ ಶೋಷಣೆಗೊಳಗಾದ ಜನಸಮುದಾಯದ ಅಸ್ಮಿತೆ ಎನ್ನುವ ವಾದವನ್ನು ಹೊಂದಿದ್ದರೂ ದಲಿತ ಅನ್ನೋದು “ಜಾತಿವಾದ/ ವಾದಿಗಳನ್ನು” ಧೈರ್ಯದಿಂದ ಎದುರುಗೊಳ್ಳುವ ಸಂವೇದನೆ ಕೂಡ ಆಗಬಲ್ಲದು.

ಮೇಲ್ಜಾತಿ,ಬಲಾಢ್ಯ ಜಾತಿಗಳೆಂದು ಕರೆದುಕೊಳ್ಳುವ ಜಾತಿಗ್ರಸ್ತರು ತಮ್ಮ ಹೆಸರಿನ‌ ಜೊತೆ ಜಾತಿ ಸೂಚಕ ಪದಗಳನ್ನು ಜೋಡಿಸಿಕೊಳ್ಳುವುದು ಸಾಮಾಜಿಕ ಘನತೆಯಂತಾಗಿದ್ದರೆ, ಶೋಷಿತ( ದಲಿತ) ಜಾತಿಗಳ ಜನ ತಮ್ಮ ಹೆಸರಿನ‌ ಜೊತೆ ಜಾತಿಸೂಚಕ ಪದ ಹಾಕಿಕೊಳ್ಳುವುದು ಈ ಹೊತ್ತಿನವರೆಗೂ ಅಳುಕಿನ ಮಾತೇ ಆಗಿದೆ.

ಶತ ಶತಮಾನಗಳಿಂದ ಶೋಷಣೆ,ಅವಮಾನವನ್ನೆ ಅನುಭವಿಸುತ್ತಾ ಬಂದಿರುವ ಜನಸಮುದಾಯ ಆಧುನಿಕ ಈ ಕಾಲಘಟ್ಟದಲ್ಲೂ ಜಾತೀಯೇತೆಯ ಕ್ರೌರ್ಯದಿಂದ ಮುಕ್ತಗೊಂಡಿಲ್ಲ. ಜಾತಿಯೇತೆಯ ಸ್ವರೂಪ ಬದಲಾಗಿದೆ ಅಷ್ಟೆ.

ಅಷ್ಟಕ್ಕೂ ಶೋಷಿತ ಸಮುದಾಯವನ್ನು “ದಲಿತರು” – ” ಪರಿಶಿಷ್ಟ ಜಾತಿ- ವರ್ಗಗಳು” ಅಥವಾ ಇನ್ನಾವುದೆ ಹೆಸರಿನಿಂದ ಕರೆದರೂ ಈ ಬಹುಜನರ‌ ಪಾಲಿಗೆ ಯಾವ ವ್ಯತ್ಯಾಸ ವು ಘಟಿಸುವುದಿಲ್ಲ.

ಮೇಲು-ಕೀಳು, ಶ್ರೇಷ್ಠ- ಕನಿಷ್ಠ ಅನ್ನೋದು ಒಂದು
ಮಾನಸಿಕ ರಣರೋಗ .ಅದು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೆ ಇದೆ.

– N.Ravikumar Telex