ಆಗಸ್ಟ್ 23ಕ್ಕೆ ದೆಹಲಿಗೆ ಸಿದ್ದರಾಮಯ್ಯ;ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ!ಆ.19 ಕ್ಕೆ ಹೈಕೋರ್ಟಿಗೆ ರಿಟ್ ಅರ್ಜಿ
ಆಗಸ್ಟ್ 23ಕ್ಕೆ ದೆಹಲಿಗೆ ಸಿದ್ದರಾಮಯ್ಯ;
ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ!
ಆ.19 ಕ್ಕೆ ಹೈಕೋರ್ಟಿಗೆ ರಿಟ್ ಅರ್ಜಿ
ಮುಡಾ ಸೈಟ್ ಹಗರಣ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟಕ್ಕೆ ಸಿಎಂ ಮುಂದಾಗಿದ್ದಾರೆ. ಇನ್ನು ಇದೇ ಆಗಸ್ಟ್ 23ರಂದು ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಒಂದೆಡೆ ವಿಪಕ್ಷಗಳು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿ ರಾಜ್ಯಪಾಲರ ಆದೇಶದ ವಿರುದ್ಧ ಕಾನೂನು ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ನಾಳೆ(ಆಗಸ್ಟ್ 19) ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಿದ್ದಾರೆ. ಇದರ ಮಧ್ಯ ಸಿದ್ದರಾಮಯ್ಯ ಅವರು ಆಗಸ್ಟ್ 23ರಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದು ಭಾರೀ ಸಂಚಲನ ಮೂಡಿಸಿದೆ.
ಹೌದು…ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರು ಆಗಸ್ಟ್ 23ರಂದು ದೆಹಲಿಗೆ ತೆರಳಲಿದ್ದು, ಪ್ರಾಸಿಕ್ಯೂಷನ್ ವಿಚಾರದ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಹಿರಿಯ ವಕೀಲರ ಭೇಟಿಗೆ ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ರಾಜ್ಯಪಾಲರ ನಡೆ ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ದೆಹಲಿಗೆ ತೆರಳುವ ಒಂದು ದಿನ ಮುನ್ನ ಅಂದರೆ ಆಗಸ್ಟ್ 22ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಭೆಯಲ್ಲಿ ಕೆಲ ರಾಜ್ಯ ರಾಜಕಾರಣದ ಬೆಳವಣಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಎಲ್ಲಾ ಶಾಸಕರು ತಮ್ಮ ಬೆಂಬಲಕ್ಕಿರುವಂತೆ ಮನವಿ ಮಾಡಲಿದ್ದಾರೆ. ರಾಜ್ಯಪಾಲರ ಆದೇಶದಕ್ಕೆ ತಡೆ ನೀಡುವಂತೆ ಹೈಕೋರ್ಟ್ ನಾಳೆ ಅರ್ಜಿ ಸಲ್ಲಿಸಲಿದ್ದಾರೆ. ಒಂದು ವೇಳೆ ಹೈಕೋರ್ಟ್ ನಿರಾಕರಿಸಿದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ. ಇದರ ನಡುವೆ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದಾರೆ.