ಕಾವೇರಿ-2.0 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಸಂಯೋಜನೆಅಕ್ಟೋಬರ್ 7 ರಿಂದ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿ; ಜಿಲ್ಲಾಧಿಕಾರಿ ಗುರುದತ್ ಹೆಗಡೆ

ಕಾವೇರಿ-2.0 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಸಂಯೋಜನೆ

ಅಕ್ಟೋಬರ್ 7 ರಿಂದ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿ; ಜಿಲ್ಲಾಧಿಕಾರಿ ಗುರುದತ್ ಹೆಗಡೆ

ಶಿವಮೊಗ್ಗ

2024ರ ಅಕ್ಟೋಬರ್ 7 ರಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ತಂತ್ರಾಂಶದಿಂದಲೇ ಇ-ಖಾತಾ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಗರಾಭಿವೃದ್ಧಿ ಇಲಾಖೆಯ ಶಿವಮೊಗ್ಗ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ದಿ:23/09/2024ರ ಸರ್ಕಾರದ ಆದೇಶದಂತೆ ಜಾರಿಯಾಗಿರುತ್ತದೆ.

ನಗರ ಪ್ರದೇಶಗಳಲ್ಲಿ ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶವನ್ನು ರೂಪಿಸಿದ್ದು, ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2.0 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದಂತೆ 2020 ರಿಂದ ನೋಂದಣಿ ಮಾಡುತ್ತಿರುವುದು ಯಶಸ್ವಿಯಾಗಿರುತ್ತದೆ.

ಇ-ಖಾತಾ ಸಂಯೋಜನೆಯಿಂದ ಸಾರ್ವಜನಿಕರು ಸ್ವತ್ತುಗಳ ನೋಂದಣಿ ವೇಳೆ ಮೋಸ ಹೋಗುವುದನ್ನು ತಡೆಯಬಹುದು. ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯ. ನೈಜ ಮಾಲೀಕರಿಗೆ ವಂಜಿಸಿ ಬೇರೆಯವರಿಂದ ಸ್ವತ್ತುಗಳ ನೋಂದಣಿಯನ್ನು ತಪ್ಪಿಸಬಹುದು. ಸ್ವತ್ತುಗಳ ಖರೀದಿದಾರರಿಗೆ ಸ್ವತ್ತಿನ ನೈಜ ಮಾಲೀಕರನ್ನು ಗುರುತಿಸಲು ಸುಲಭ ಸಾಧ್ಯ. ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ ಕಾನೂನು ತೊಂದರೆಗಳನ್ನು ತಪ್ಪಿಸಬಹುದಾಗಿದ್ದು, ಸಾರ್ವಜನಿಕರು ಇ-ಆಸ್ತಿ ಸಂಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.