ಆರ್.ಟಿ.ವಿಠ್ಠಲಮೂರ್ತಿ ಬರೆದಿದ್ದು; ಸಿದ್ಧು ಇಳಿಯಲ್ಲ,ಇಳಿದ್ರೆ ಸರ್ಕಾರ ಉಳಿಯಲ್ಲ

ಸಿದ್ಧು ಇಳಿಯಲ್ಲ,ಇಳಿದ್ರೆ
ಸರ್ಕಾರ ಉಳಿಯಲ್ಲಾ

ಕಳೆದ ಬುಧವಾರ ಸಂಜೆಯವರೆಗೂ ನಿರಾಳವಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಆಪ್ತರಿಗೆ ಇದ್ದಕ್ಕಿದ್ದಂತೆ ದಿಲ್ಲಿಯಿಂದ ಫೋನ್ ಕರೆಗಳು ಶುರುವಾಗಿವೆ.ಯಾವುದೇ ಕ್ಷಣದಲ್ಲಿ ರಾಜ್ಯಪಾಲರು ಸಿಎಂ ವಿರುದ್ದ ವಿಚಾರಣೆಗೆ ಅನುಮತಿ ನೀಡಬಹುದು ಎಂಬುದು ಈ ಕರೆಗಳ ಸಾರ.
ಅಂದ ಹಾಗೆ ಟಿ.ಜೆ.ಅಬ್ರಹಾಂ ಅವರ ದೂರಿನ ಹಿನ್ನೆಲೆಯಲ್ಲಿ ಜುಲೈ 27 ರಂದು ಮುಖ್ಯಮಂತ್ರಿಗಳಿಗೆ ಷೋಕಾಸ್ ನೋಟೀಸ್ ನೀಡಿದ ರಾಜ್ಯಪಾಲರು ತದ ನಂತರ ಕೂಲ್ ಆಗಿದ್ದರು.ಒಂದು ವೇಳೆ ವಿಚಾರಣೆಗೆ ಅನುಮತಿ ಕೊಟ್ಟರೆ ಎದುರಾಗುವ ಪರಿಸ್ಥಿತಿ ಹೇಗಿರಬಹುದು?ಎಂಬ ಜಿಜ್ಞಾಸೆಯಲ್ಲಿ ಮುಳುಗಿದ್ದರು.
ಈ ಮಧ್ಯೆ ದಿಲ್ಲಿಯಿಂದಲೂ ರಾಜ್ಯಪಾಲರ ಮೇಲೆ ಒತ್ತಡ ಹೇರಿಕೆಯಾಗುತ್ತಿಲ್ಲ.ಹೀಗಾಗಿ ರಾಜ್ಯಪಾಲರು ಬೀಸಿದ ಕುಣಿಕೆ ದುರ್ಬಲವಾಗುತ್ತಿದೆ ಅಂತ ಸಿದ್ದರಾಮಯ್ಯ ಆಪ್ತರು ಭಾವಿಸಿದ್ದರು.
ಆದರೆ ಬುಧವಾರ ಸಂಜೆಯ ವೇಳೆಗೆ ದಿಲ್ಲಿಯಿಂದ ಬರತೊಡಗಿದ ಮೆಸೇಜುಗಳು ಸಿದ್ಧರಾಮಯ್ಯ ಆಪ್ತರ ಕಿವಿಗೆ ಕಾದ ಸೀಸದಂತೆ ಸುರಿದಿವೆ.
ಇನ್ ಫ್ಯಾಕ್ಟ್,ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರ ವಿರುದ್ದ ವಿಚಾರಣೆಗೆ ಅನುಮತಿ ಕೊಡಬೇಕೋ ಬೇಡವೋ ಎಂಬ ವಿಷಯದಲ್ಲಿ ರಾಜ್ಯಪಾಲರು ಎಚ್ಚರಿಕೆಯ ನಡೆ ಇಡಲು ಬಯಸಿದ್ದೇನೋ ನಿಜ.ಆದರೆ ಈ ಪ್ರಕರಣದಲ್ಲಿ ಸಿದ್ಧರಾಮಯ್ಯ ವಿರುದ್ದ ತನಿಖೆ ನಡೆಯಲೇಬೇಕು ಅಂತ ರಾಜ್ಯದ ನಾಯಕರೊಬ್ಬರು ಕೇಂದ್ರದ ಗೃಹ ಸಚಿವ ಅಮಿತ್ ಷಾ ಮೇಲೆ ಒತ್ತಡ ಹೇರುತ್ತಿದ್ದಾರೆ.ತಮಗಿರುವ ಮಾಹಿತಿಯ ಪ್ರಕಾರ,ಈ ನಾಯಕರ ಒತ್ತಡ ಮಿತಿ ಮೀರಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದುರ್ಬಲವಾಗಬೇಕು ಎಂದರೆ ಸಿದ್ಧರಾಮಯ್ಯ‌ ಇಳಿಯಬೇಕು.ಅವರು ಇಳಿದು, ಬೇರೆಯವರು ಪಟ್ಟಕ್ಕೆ ಬಂದರೆ ಇಳಿಸುವುದು ಸುಲಭ.
ಒಂದು ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹೈಕೋರ್ಟ್ ಇಲ್ಲವೇ ಸುಪ್ರೀ ಕೋರ್ಟ್ ತಡೆ ನೀಡಿದರೂ ಪರವಾಗಿಲ್ಲ.ಆದರೆ ಅಷ್ಟರಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಅಸ್ಥಿರತೆ ಶುರುವಾಗುತ್ತದೆ ಅಂತ ರಾಜ್ಯದ ಈ ನಾಯಕರು ಅಮಿತ್ ಷಾ ಅವರಿಗೆ ಹೇಳಿದ್ದಾರೆ.
ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಅಮಿತ್ ಷಾ ಅವರು:ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ನರು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ.ಆ ಬಗ್ಗೆ ನ್ಯಾಯಾಲಯ ಏನು ಹೇಳುತ್ತದೋ ಕಾದು ನೋಡೋಣ ಎಂದಿದ್ದಾರೆ.ಆದರೆ ಅದನ್ನೊಪ್ಪದ ರಾಜ್ಯದ ನಾಯಕರು,ಇಲ್ಲ,ಇಲ್ಲ,ತಕ್ಷಣವೇ ಸಿಎಂ ವಿರುದ್ದ ವಿಚಾರಣೆಗೆ ಅನುಮತಿ ಕೊಡಲೇಬೇಕು ಎಂದಿದ್ದಾರೆ.ತಮಗೆ ತಲುಪಿರುವ ಈ ವರ್ತಮಾನಗಳನ್ನು ನಂಬುವುದೇ ಆದರೆ ಯಾವುದೇ ಕ್ಷಣದಲ್ಲಿ ಸಿಎಂ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಲಿದ್ದಾರೆ ಎಂದು ದಿಲ್ಲಿಯ ಮೂಲಗಳು ಸಿದ್ದರಾಮಯ್ಯ ಆಪ್ತರಿಗೆ ವಿವರಿಸಿವೆ.ಮತ್ತು ಇಂತಹ ಸಂದೇಶ ಬಂದ ಮೂರೇ ದಿನಗಳಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಕಿದ ಬಾಂಬು ಸಿದ್ದು ಅಂಗಳದಲ್ಲಿ ಸ್ಪೋಟಿಸಿದೆ.

ಸಿದ್ಧು ಖುರ್ಚಿ
ಈಗಲೂ ಸೇಫ್
———————-
ಅಂದ ಹಾಗೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ.ಅದೇ ರೀತಿ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರೆ ಅದು ತಡೆಯಾಜ್ಞೆ ನೀಡಬಹುದು ಇಲ್ಲವೇ ರದ್ದು ಮಾಡಬಹುದು ಎಂಬ ವಿಶ್ವಾಸವೂ ಸಿದ್ದರಾಮಯ್ಯ ಕ್ಯಾಂಪಿನಲ್ಲಿದೆ.
ಒಂದು ವೇಳೆ ಅದರ ವಿಶ್ವಾಸ ನಿಜವಾದರೆ ಸಿದ್ದರಾಮಯ್ಯ ಸಮಸ್ಯೆಯಿಂದ ಹೊರಬಂದರು ಎಂದೇ ಅರ್ಥ.
ಒಂದು ವೇಳೆ ಮೇಲು ಹಂತದ ನ್ಯಾಯಾಲಯಗಳಲ್ಲಿ ಸಿದ್ದರಾಮಯ್ಯ ಅವರ ವಾದಕ್ಕೆ ಪುರಸ್ಕಾರ ಸಿಗದೆ ಹೋದರೆ ಸಂಬಂಧಿಸಿದ ಸಂಸ್ಥೆಗಳು ತನಿಖೆ ನಡೆಸಿ ವರದಿ ಸಲ್ಲಿಸುವುದು ಅನಿವಾರ್ಯವಾಗುತ್ತದೆ.ಅದರೆ ಅದು ಕೂಡಾ ಸಾಕಷ್ಟು ಕಾಲಾವಕಾಶ ಬೇಡುತ್ತದೆ.
ಈ ಹಿಂದೆ ಯಡಿಯೂರಪ್ಪ ಪ್ರಕರಣದಲ್ಲಿ ತನಿಖೆ ನಡೆದು ಆರೋಪ ಪಟ್ಟಿ ಸಲ್ಲಿಸಲು ಸುಮಾರು ಹತ್ತು ತಿಂಗಳಾಗಿತ್ತು.ಮತ್ತು ಅಂತಹ ಆರೋಪ ಪಟ್ಟಿ ಸಲ್ಲಿಕೆಯಾಗಿ ಯಡಿಯೂರಪ್ಪ ಅವರ ಬಂಧನವಾಗುವ ಹೊತ್ತಿಗಾಗಲೇ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿದಿದ್ದರು.ಅರ್ಥಾತ್,ಇವತ್ತು ಸಿದ್ದರಾಮಯ್ಯ ಅವರ ವಿರುದ್ದ ವಿಚಾರಣೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದರೂ ತಕ್ಷಣವೇ ಅದು ಸಿದ್ದರಾಮಯ್ಯ ಅವರಿಗೆ‌ ಉರುಳಾಗುವ ಸಾಧ್ಯತೆ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸನ್ನಿವೇಶವನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವ ಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲ.
ಯಾಕೆಂದರೆ ಇವತ್ತು ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕರ್ನಾಟಕ ಮಾತ್ರವಲ್ಲ,ದಕ್ಷಿಣ ಭಾರತದ ನೆಲೆಯಲ್ಲಿ ಕೈ ದುರ್ಬಲವಾಗುತ್ತದೆ ಎಂಬುದು ಹೈಕಮಾಂಡ್ ಗೆ ಗೊತ್ತು.ಹೀಗಾಗಿ ಅದು ಶತಾಯಗತಾಯ ಸಿದ್ದರಾಮಯ್ಯ ಅವರ ರಕ್ಷಣೆಗೆ ನಿಲ್ಲುತ್ತದೆ.
ಹೀಗೆ ಎಲ್ಲ ಕಡೆಯಿಂದ ಸಿದ್ದರಾಮಯ್ಯ ಅವರ ಸುತ್ತ ರಕ್ಷಣಾ ವಲಯ ನಿರ್ಮಾಣವಾಗುತ್ತಿರುವುದರಿಂದ,ಅವರ ಖುರ್ಚಿಗೆ ತಕ್ಷಣ ಆಪತ್ತು ಬರುವ ಸಾಧ್ಯತೆ ಇಲ್ಲ.

ಆತ್ಮಹತ್ಯಾ ದಳ
ಮೇಲೆದ್ದು ನಿಲ್ಲಲಿದೆ
——————-
ಇನ್ನು ಸಿದ್ದು ಎಪಿಸೋಡು ಶುರುವಾದ ನಂತರ ಕಾಂಗ್ರೆಸ್ಸಿನ ಕೆಲ ನಾಯಕರಲ್ಲಿ ಸಿಎಂ ಹುದ್ದೆಯ ಕನಸು ಬಿದ್ದಿರುವುದೇನೋ ನಿಜ.
ಆದರೆ ಇಂತಹ ಕನಸಿಗೆ ಪುಷ್ಟಿ ನೀಡುವ ಸ್ಥಿತಿಯಲ್ಲಿ ವರಿಷ್ಟರಿಲ್ಲ.ಕಾರಣ?ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ತಲೆ ಎತ್ತಿರುವ ಆತ್ಮಹತ್ಯಾದಳ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ತಲೆ ಎತ್ತಿರುವ ಈ ಆತ್ಮಹತ್ಯಾ ದಳ ಎಂತಹ ವಿಕೋಪಕ್ಕೂ ಹೋಗಬಹುದು ಎಂಬುದು ಹೈಕಮಾಂಡ್ ವರಿಷ್ಟರ ಆತಂಕ.
ಅಧಿಕಾರ ಹಂಚಿಕೆಯ ವಿಷಯ ಚರ್ಚೆಯಾಗುತ್ತಿದ್ದಾಗ ತಲೆ ಎತ್ತಿದ ಈ ಪಡೆಯದು ಒನ್ ಲೈನ್ ಅಜೆಂಡಾ.ಅದೆಂದರೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯಬಾರದು ಎಂಬುದು.
ಒಂದು ವೇಳೆ ಸಿದ್ದರಾಮಯ್ಯ ಕೆಳಗಿಳಿಯುವ ಸನ್ನಿವೇಶ ಬಂದರೆ ಸಿಎಂ ಪಟ್ಟ ತಾವು ಹೇಳಿದವರಿಗೆ ಸಿಗಬೇಕು.ಒಂದು ವೇಳೆ ಒಪ್ಪಂದದ ಹೆಸರಿನಲ್ಲೋ,ಮತ್ತೊಂದು ಹೆಸರಿನಲ್ಲೋ ತಮಗಾಗದವರಿಗೆ ಸಿಎಂ ಪಟ್ಟ ಕಟ್ಟಲು ಮುಂದಾದರೆ ಕೈ ತೊರೆಯಲೂ ಸಿದ್ದ ಎಂಬುದು ಈ ಪಡೆಯ ಪರೋಕ್ಷ ಸಂದೇಶ.
ಮೂಲಗಳ ಪ್ರಕಾರ, ಮಹಾರಾಷ್ಟ್ರದ ಫಡ್ನವೀಸ್,ಗೋವಾದ ಮುಖ್ಯಮಂತ್ರಿ ಸಾವಂತ್ ಈ ಪಡೆಯ ಲಿಂಕಿನಲ್ಲಿದ್ದಾರೆ.
ಒಂದು ವೇಳೆ ಸಿದ್ದರಾಮಯ್ಯ ಕೆಳಗಿಳಿದು,ತಾವು ಬಯಸಿದವರಿಗೆ ಸಿಎಂ ಹುದ್ದೆ ದೊರೆಯದಿದ್ದರೆ ಪಕ್ಷ ತೊರೆಯಲು ಈ ಪಡೆ ಸಿದ್ದವಾಗಿದೆ.
ಒಂದು ವೇಳೆ ಹಾಗೇನಾದರೂ ಆದರೆ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ ಬಿಜೆಪಿ ಮಿತ್ರಕೂಟ ಮೇಲೆದ್ದು ನಿಲ್ಲಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬುದು ವರಿಷ್ಟರ ಆತಂಕ.
ಹಾಗಾಗಬಾರದು ಎಂದರೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯಬಾರದು ಎಂಬ ತೀರ್ಮಾನಕ್ಕೆ ಬಂದಿರುವ ವರಿಷ್ಟರು, ಗವರ್ನರ್ ಎಪಿಸೋಡು ಶುರುವಾದ ನಂತರ ಸಿದ್ಧು ಜತೆ ಬಲವಾಗಿ ನಿಂತಿದ್ದಾರೆ.

ಕುರುಬರ ಸೈನ್ಯ
ಕೆರಳಿದರೆ?
——————
ಈ ಮಧ್ಯೆ ಸಿದ್ದರಾಮಯ್ಯ ವಿಷಯದಲ್ಲಿ ವರಿಷ್ಟರು
ತುಂಬ ಎಚ್ಚರದಿಂದ ನಡೆದುಕೊಳ್ಳುತ್ತಿರುವುದಕ್ಕೆ ಮತ್ತೊಂದು ಕಾರಣವಿದೆ.ಅದೆಂದರೆ ಡೆಡ್ಲಿ ಕುರುಬ ಸೈನ್ಯ.
ಇವತ್ತು ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ಬೆನ್ನಲ್ಲಿ ಪರ್ಯಾಯ ನಾಯಕತ್ವದ ಹುಡುಕಾಟ ಆರಂಭವಾದರೆ ರಾಜ್ಯದ ಕುರುಬ ಸೈನ್ಯ ಸಿಡಿದೇಳುತ್ತದೆ.
ಈ ಹಿಂದೆ 1990 ರಲ್ಲಿ ಮುಖ್ಯಮಂತ್ರಿ ವೀರೇಂದ್ರಪಾಟೀಲರನ್ನು ಕೆಳಗಿಳಿಸಿದಾಗ ಲಿಂಗಾಯತರು ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದ್ದರು.
ಅವತ್ತು ಕಾಂಗ್ರೆಸ್ ವಿರುದ್ದ ಮುನಿಸಿಕೊಂಡು ಹೊರಹೋದ ಲಿಂಗಾಯತರು ಇವತ್ತಿಗೂ ಕಾಂಗ್ರೆಸ್ ವಿಷಯದಲ್ಲಿ ಅಸಹನೆ ಇಟ್ಟುಕೊಂಡಿದ್ದಾರೆ.
ಇಂತಹ ಸ್ಥಿತಿಯಲ್ಲಿ ಅಹಿಂದ ವರ್ಗಗಳ ಹಿರಿಯಣ್ಣನಂತಿರುವ ಕುರುಬ ಸೈನ್ಯ ತಿರುಗಿ ಬಿದ್ದರೆ ಕರ್ನಾಟಕದ ನೆಲೆ ಉಳಿಸಿಕೊಳ್ಳುವುದು ಕಷ್ಟ.
ಹೀಗಾಗಿ ಈ ಎಪಿಸೋಡಿನ ಪ್ರತಿ ಹೆಜ್ಜೆಯಲ್ಲೂ ಸಿದ್ದು ಜತೆ ನಿಲ್ಲಬೇಕು.ಅವರ ಪಟ್ಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂಬುದು ವರಿಷ್ಟರ ಲೆಕ್ಕಾಚಾರ.
ಇವತ್ತು ಬಲಿಷ್ಟ ವರ್ಗಗಳು ಬಿಜೆಪಿ ಮಿತ್ರಕೂಟದ ಆಸರೆಯಾಗಿ ನಿಲ್ಲುತ್ತಿರುವ ಕಾಲದಲ್ಲಿ ಕುರುಬ ಸಮುದಾಯದ ಸಿಟ್ಟಿಗೆ ಕಾರಣವಾಗುವುದು ಎಂದರೆ ಅಹಿಂದ ಮತ ಬ್ಯಾಂಕ್ ಛಿದ್ರಗೊಳ್ಳಲು ದಾರಿ ಮಾಡಿಕೊಟ್ಟಂತೆ ಎಂಬುದು ವರಿಷ್ಟರ ಯೋಚನೆ

ಸಿದ್ದು ಇಳಿದ್ರೆ
ಸರ್ಕಾರ ಉಳಿಯಲ್ಲ
——————-
ಇವತ್ತು ಕಾಂಗ್ರೆಸ್ ಪಾಳಯದಲ್ಲಿ ಎದ್ದು ಕಾಣುತ್ತಿರುವ ಅಂಶವೆಂದರೆ ಸಿದ್ದು ಇಳಿದರೆ ಸರ್ಕಾರ ಉಳಿಯುವುದಿಲ್ಲ ಎಂಬುದು.
ಹೀಗಾಗಿ ಸಿಎಂ ಹುದ್ದೆಯ ಕನಸು ಕಾಣುತ್ತಿರುವವರು ಸೇರಿದಂತೆ ಕೈ ಪಾಳಯದ ಎಲ್ಲರೂ ಒಗ್ಗೂಡಿ ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳುವುದು ಅನಿವಾರ್ಯ.
ಇವತ್ತು ಸಿದ್ದರಾಮಯ್ಯ ಅವರನ್ನು ಮೂಡಾ ಪ್ರಕರಣದ ಬಲೆಗೆ ಸಿಲುಕಿಸಿ ಇಳಿಸಲು ಸಾಧ್ಯವಾದರೆ ನಾಳೆ ಯಾರೇ ಬಂದು ಕುಳಿತರೂ ಅವರನ್ನು ದುರ್ಬಲಗೊಳಿಸುವುದು ಕಷ್ಟವಲ್ಲ.
ಹೀಗಾಗಿ ಇವತ್ತಿನ ಸಂಕಟದಿಂದ ಪಾರಾಗಲು ಕೈ ಪಾಳಯ ಒಂದಾಗಿ ಹೋರಾಡಲೇಬೇಕು.
ಅಂದ ಹಾಗೆ ಈ ಹಿಂದೆ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಯಾಗಿದ್ದರಲ್ಲ?ಆ ಕಾಲದಲ್ಲಿ ಪಟೇಲರನ್ನಿಳಿಸಲು ಹಲವು ಬಾರಿ ಪ್ರಯತ್ನಿಸಲಾಯಿತು.ಆ ಸಂದರ್ಭದಲ್ಲಿ ಪಟೇಲರ ವಿರುದ್ದದ ಬಂಡಾಯಗಳಿಗೆ ಮೂಲವಾಗಿದ್ದವರೇ ಮಾಜಿ ಪ್ರಧಾನಿ ದೇವೇಗೌಡರು.ಇಂಟರೆಸ್ಟಿಂಗ್ ಸಂಗತಿ ಎಂದರೆ ಇದೇ ಸಿದ್ದರಾಮಯ್ಯ ಅವತ್ತು ದೇವೇಗೌಡರ ಬಣದ ನಂಬರ್ ಒನ್ ಲೀಡರು.
ಬಹುಶ: ಕರ್ನಾಟಕದ ರಾಜಕಾರಣದಲ್ಲಿ ಪಟೇಲರನ್ನು ಇಳಿಸಲು ನಡೆದಷ್ಟು ಪ್ರಯತ್ನಗಳು ಬೇರೆ ಮುಖ್ಯಮಂತ್ರಿಗಳ ಮೇಲೆ ನಡೆದಿಲ್ಲ.
ಆದರೆ ಸ್ವಪಕ್ಷೀಯರ ಇಂತಹ ಬಂಡಾಯ ಪರಂಪರೆಯ ಮಧ್ಯೆಯೂ ಪಟೇಲರು ಜಗ್ಗದೆ ಉಳಿದರು.
ಅವತ್ತು ಪಟೇಲರು ಎದುರಿಸಿದ ಪರಿಸ್ಥಿತಿಗೂ,ಇವತ್ತು ಸಿದ್ದರಾಮಯ್ಯ ಎದುರಿಸುತ್ತಿರುವ ಸ್ಥಿತಿಗೂ ಹೋಲಿಕೆ ಇಲ್ಲ ನಿಜ.ಆದರೆ ಅವತ್ತು ದೇವೇಗೌಡರ ಬಣ ನಡೆಸಿದ ಬಂಡಾಯಗಳನ್ನು ಪಟೇಲರ ಜತೆಗಿದ್ದ ಮಂತ್ರಿಗಳು,ಶಾಸಕರು ಒಗ್ಗೂಡಿ ವಿಫಲಗೊಳಿಸಿದ್ದರು.ಕಾರಣ?ಅವರಿಗೆ ದೇವೇಗೌಡರ ಯಾಜಮಾನ್ಯಕ್ಕಿಂತ ಪಟೇಲರ ಫ್ಲೆಕ್ಸಿಬಲಿಟಿ ಬೇಕಾಗಿತ್ತು.ಮತ್ತು ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿತ್ತು.
ಇವತ್ತು ರಾಜಭವನದ‌ ಮೂಲಕ ಸಿದ್ದು ವಿರುದ್ದ ದಾಳ ಉರುಳುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ಸಿನ ಬಹುತೇಕ ಶಾಸಕರಿಗೆ ಸಿದ್ದು ಬಚಾವಾಗುವುದು ಅನಿವಾರ್ಯ ಅನ್ನಿಸಿಬಿಟ್ಟಿದೆ.ಯಾಕೆಂದರೆ ಸರ್ಕಾರ ಉಳಿದರೆ ತಾನೇ ಮುಂದಿನ ಕತೆ?ಹೀಗಾಗಿ ಇಷ್ಟವೋ ಕಷ್ಟವೋ ರಾಜ್ಯ ಕಾಂಗ್ರೆಸ್ಸಿಗರಿಗೀಗ ಸಿದ್ದು ಉಳಿಯಬೇಕಾಗಿದೆ.ಮತ್ತು ಅದಕ್ಕಾಗಿ ಒಮ್ಮನಸ್ಸಿನಿಂದ ಹೋರಾಡಬೇಕಿದೆ.

ಲಾಸ್ಟ್ ಸಿಪ್
—————–
ಅಂದ ಹಾಗೆ ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ದ ರಾಜಭವನದ ದಾಳ ಉರುಳಿರುವುದು ಬಿಜೆಪಿಯ ಹಲ ನಾಯಕರಿಗೆ ಇಷ್ಟವಾಗಿಲ್ಲ.
ಮೂಲಗಳ ಪ್ರಕಾರ,ಸಿದ್ದರಾಮಯ್ಯ ಅವರು ಮೂಡಾ ಪ್ರಕರಣದ ಬದಲು ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣಕ್ಕೆ ಸಿಲುಕಿ ವಿಚಾರಣೆ ಎದುರಿಸುವಂತಾಗಬೇಕಿತ್ತು.ಯಾಕೆಂದರೆ ಈ ಹಗರಣದಡಿ ಸಿದ್ದರಾಮಯ್ಯ ವಿಚಾರಣೆ ಎದುರಿಸುವ ಸ್ಥಿತಿ ತಲುಪಿದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದಲಿತ ವಿರೋಧಿ ಅಂತ ರಾಷ್ಟ್ರ ಮಟ್ಟದಲ್ಲಿ ಬಿಂಬಿಸಬಹುದಿತ್ತು.
ಆದರೆ ಮೂಡಾ ಪ್ರಕರಣದ ಆಳ ಬಗೆಯುತ್ತಾ ಹೋದರೆ ಇಂತಹ ಲಾಭ ಸಿಗುವುದಿಲ್ಲ.ಬದಲಿಗೆ ಕಾಂಗ್ರೆಸ್ ಪಕ್ಷವೇ ತಿರುಗಿ ಬಿದ್ದು ಬಿಜೆಪಿಯನ್ನು ಅಹಿಂದ ವಿರೋಧಿ ಎಂದು ಬಿಂಬಿಸಲು ದಾರಿ ಮಾಡಿಕೊಟ್ಟಂತಾಗಿದೆ ಎಂಬುದು ಬಿಜೆಪಿಯ ಹಲ ನಾಯಕರ ಅಭಿಪ್ರಾಯ.

ಆರ್.ಟಿ.ವಿಠ್ಠಲಮೂರ್ತಿ