ಸಂಗೀತಾ ರವಿರಾಜ್ ಅಂಕಣ; ಕೊಪ್ಪರಿಕೆಯಿಂದ ಜನಿಸಿದ  ಚೆಂಬು

ಪ್ರಕೃತಿಯ ಕೈಗೂಸಿನಂತಿರುವ  ಚೆಂಬು ಗ್ರಾಮ ಒಂದು ಸುಂದರವಾದ ಪ್ರದೇಶ . ನದಿ ಮತ್ತು ಕಾಡು ಇವೆರಡರರೊಂದಿಗೆ ಸಮಾಗಮಗೊಂಡ ಊರು . ಭೌಗೋಳಿಕವಾಗಿ ಪಶ್ಚಿಮ ಘಟ್ಟ ಸಾಲಿನ ಬ್ರಹ್ಮಗಿರಿಯ ಪಶ್ಚಿಮಾಭಿಮುಖವಾಗಿ ಚಾಚಿರುವ ಇಳಿಜಾರು ತಪ್ಪಲಲ್ಲಿ ಚೆಂಬು ಗ್ರಾಮ ಇದೆ. ವಿಶೇಷವೆಂದರೆ ಇದು ಗಡಿಭಾಗ. ಕೊಡಗು ಮತ್ತು ದಕ್ಷಿಣ ಕನ್ನಡದ  ಗಡಿಭಾಗದಲ್ಲಿ ಇರುವಂತಹ ಒಂದು ವಿಶಿಷ್ಟವಾದ ಊರು. ಚೆಂಬು ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು  ಐದು ಸ್ಥಳಗಳು ಒಳಗೊಳ್ಳುತ್ತವೆ. ಮೇಲ್ಚೆಂಬು,  ಕುದುರೆಪಾಯ, ಊರುಬೈಲು, ಆನೆಹಳ್ಳ ( ಆನ್ಯಾಳ ) ಮತ್ತು ದಬ್ಬಡ್ಕ . ಈ ಐದು ಪ್ರದೇಶಗಳು ಸೇರಿ ಆದ ಊರು ಚೆಂಬು ಗ್ರಾಮ. ಇದರಿಂದಾಗಿ ಚೆಂಬು ಗ್ರಾಮಕ್ಕೆ ಚೆಂಬೈದೂರು ಎಂಬ ಹೆಸರು ಬಂದಿದೆ ಎನ್ನುವುದು ಪ್ರತೀತಿ. ಈ ಐದು ಹಳ್ಳಿ ಪ್ರದೇಶಗಳು ಸೌಕರ್ಯಗಳ  ವಿಚಾರದಲ್ಲಿ ಸ್ವಲ್ಪ ಹಿಂದುಳಿದ್ದಿದ್ದರು, ಸಾಂಸ್ಕೃತಿಕವಾಗಿ ಅಪಾರ ಶ್ರೀಮಂತಿಕೆಯಿಂದ ಕೂಡಿದೆ. ಚೆಂಬು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಆಚಾರ ವಿಚಾರಗಳಿಗೆ , ಪದ್ಧತಿ ಸಂಪ್ರದಾಯಗಳಿಗೆ ಊರಿನ ಹಿರಿಯರು  ಹೆಚ್ಚಿನ ಮಹತ್ವ ಕೊಟ್ಟು ಗ್ರಾಮೀಣ ಭಾಗದ ಸೊಗಡನ್ನು ಕಾಪಾಡಿಕೊಂಡು  ಬಂದಿದ್ದಾರೆ.
ಪ್ರತಿ ಊರುಗಳಿಗು ಒಂದು ಚರಿತ್ರೆ ಇರುತ್ತದೆ. ಆದರೆ ಅದು ಲಿಖಿತ ರೂಪದಲ್ಲಿ ಇರುವುದಿಲ್ಲ. ಬದಲಾಗಿ ಬಾಯಿ ಮಾತಿನಲ್ಲಿ ತಲೆ ತಲಾಂತರದಿಂದ ಹರಿದು ಬಂದಿರುತ್ತದೆ. ಇದರಿಂದ ಊರಿನ ಚರಿತ್ರೆ , ಇತಿಹಾಸ ಕಟ್ಟುವುದು ಕಷ್ಟ. ಆದರೂ ಊರ ಜನ ತಮ್ಮ ಊರಿನ ಇತಿಹಾಸ ಅಂತ ಹೇಳಿಕೊಳ್ಳುವ ಐತಿಹ್ಯ ಮತ್ತು  ಪುರಾಣಗಳಲ್ಲಿ ಅಡಗಿರುವ ಸತ್ಯವನ್ನು ಮರುಕಟ್ಟುವುದರಿಂದ ನಮ್ಮ ಊರಿನ ಇತಿಹಾಸವನ್ನು ಮರು ಸೃಷ್ಟಿಸಲು ಸಾಧ್ಯ ಇದೆ. ಚೆಂಬು ಗ್ರಾಮದಲ್ಲೂ ಸ್ಥಳ ಪುರಾಣಗಳು, ಸ್ಥಳ ಐತಿಹ್ಯಗಳು ತುಂಬಾ ಇದೆ. ಐದೂರು ಚೆಂಬು ಗ್ರಾಮದ ಒಳಗೆ ಅಲ್ಲಲ್ಲಿರುವ ಪ್ರದೇಶಗಳಾದ
ಹಳೆಚೆಂಬು, ಕೂಡಡ್ಕ, ಮಾಗ್ದಾರ, ಚೆಂಡಡ್ಕ , ಹಲಸಿನಡ್ಕ , ಕಾಳಪ್ಪಕಜೆ, ಕಟ್ಟಪಾರೆ, ಚಟ್ಟೆಕಲ್ಲು, ಕಾಂತಬೈಲು, ಮಂಜಿಕಲ್ಲು, ಮಂಞಡ್ಕ,  ತಾಮ್ರಕಟ್ಟೆ, ಕಜೆ, ಮರ್ಧಾಳ, ರೆಂಕಿಲ್ ಮೊಟ್ಟೆ, ಮಂಗಳಪಾರೆ, ಮಾಪ್ಲೆಕಜೆ, ಉಂಬಳೆ, ಕಟ್ಟಪಳ್ಳಿ , ಮಾರ್ಪಡ್ಕ ,
ಮುದಡ್ಕ , ಪರ್ದಾಯಗದ್ದೆ, ಬಾಲಂಬಿ,  ಚೌಕಿ, ಹನೇರಿ,  ಕಲೇರಿ, ಪಟ್ಟಿ ಹೀಗೆ ಇನ್ನೂ ಇತ್ಯಾದಿ ನಮ್ಮೂರಿನ ಈ ಸ್ಥಳಗಳಿಗೆ ಸಂಬಂದಿಸಿದ ಮೌಖಿಕ ಕಥನಗಳು ವಿಶಿಷ್ಟವಾಗಿದೆ. ಇಂತಹ ವಿಶಿಷ್ಟತೆಗಳು ಅಕ್ಷರ ಪರಂಪರೆಯಲ್ಲಿ ಇಲ್ಲದೆ ಇದ್ದರೂ ,ಗ್ರಾಮದ ಜನಪದರ ಮೌಖಿಕತೆಯಲ್ಲಿ ಇದ್ದೆ ಇರುತ್ತದೆ . ಅವು ಆ ಊರಿನ ಆರಾಧನೆಗಳಿಗೆ , ಸಂಪ್ರದಾಯಗಳಿಗೆ , ದೈವಾರಾಧನೆ ಪರಂಪರೆಯೊಂದಿಗೆ ತಳುಕು ಹಾಕಿರುತ್ತದೆ.
ಚೆಂಬು ಗ್ರಾಮ ವ್ಯಾಪ್ತಿ :
ಚೆಂಬು ಒಟ್ಟು 12201.45 ಎಕರೆ ವಿಸ್ತೀರ್ಣ ಹೊಂದಿದೆ.  ಚೆಂಬು ಗ್ರಾಮ ಪಂಚಾಯತ್ ಪ್ರಕಾರ 3,968 (2011 ರ ಜನಗಣತಿ ಪ್ರಕಾರ) ಜನ ಸಂಖ್ಯೆ ಹೊಂದಿದೆ.  ಕಲ್ಲುಗುಂಡಿಯಿಂದ ಹೊರಟರೆ ಹದಿನೈದು ಕಿಲೋ ಮೀಟರ್ ದೂರದ ಕಟ್ಟಪಳ್ಳಿ ಚೆಂಬು ಗ್ರಾಮದ ಕೊನೆಯ ಭಾಗ. ಅಲ್ಲಿಂದ ಆಚೆ ಭಾಗಮಂಡಲದ ತಾವೂರು ಸಿಗುತ್ತದೆ . ದಕ್ಷಿಣ ದಿಕ್ಕಿಗೆ ಬಂದರೆ ಮರ್ಧಾಳ ಎಂಬ ಜಾಗ ಚೆಂಬು ಗ್ರಾಮದ ಗಡಿಭಾಗ. ಅಲ್ಲಿಂದ ಆಚೆ ತೊಡಿಕಾನ ಗ್ರಾಮದ ಪೆತ್ತಾಜೆ  ಸಿಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಕುದುರೆಪಾಯದ ಪಟ್ಟಿ ಎಂಬ ಸ್ಥಳವು ಇದೆ.ಅಲ್ಲಿಂದ ಆಚೆ  ಹೋದರೆ ಪೆರಾಜೆ ಗ್ರಾಮ ಸಿಗುತ್ತದೆ. ಇವು ಚೆಂಬು ಗ್ರಾಮದ ದಕ್ಷಿಣದ ಸರಹದ್ದು. ಬಾಲಂಬಿಯಿಂದ ಪೂರ್ವಕ್ಕೆ ಊರುಬೈಲು ಹೋಗುವಾಗ ಚೌಕಿಯಿಂದ ಆಚೆ, ಹನೇರಿ ಎನ್ನುವ ಸ್ಥಳ ಚೆಂಬುವಿನ ಸರಹದ್ದು. ಅದರಿಂದ ಆಚೆ ಇರುವಂಥದ್ದು ಸಂಪಾಜೆ ಗ್ರಾಮ. ಪಶ್ಚಿಮ ದಿಕ್ಕಿನಲ್ಲಿ ಕಾಡುಪಂಜ ಕೊನೆಯ ಸ್ಥಳ. ಅಲ್ಲಿಂದ ಆಚೆಗೆ ಸುಳ್ಯ ತಾಲ್ಲೂಕಿನ ತೊಡಿಕಾನ ಗ್ರಾಮ ಸಿಗುತ್ತದೆ.
ಚೆಂಬು ಗ್ರಾಮದಲ್ಲಿ  ಒಂದು ಸರಕಾರಿ ಪ್ರೌಢಶಾಲೆ ಇದೆ. ಊರುಬೈಲು , ಮೇಲ್ಚೆಂಬು, ಕುದುರೆಪಾಯ, ದಬ್ಬಡ್ಕಗಳಲ್ಲಿ ಆಗಿ ಒಟ್ಟು ನಾಲ್ಕು ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಅಲ್ಲದೆ ಕಟ್ಟಪಳ್ಳಿ ಮತ್ತು ಕುದುರೆಪಾಯದಲ್ಲಿ ಆಶ್ರಮ ಶಾಲೆಗಳು ಇದೆ. ಬಾಲಂಬಿ, ಕೂಡಡ್ಕ, ಹಳೆ ಚೆಂಬು, ದೇವಾಲಯ, ಪನೇಡ್ಕ ,ಆನೆಹಳ್ಳ, ದಬ್ಬಡ್ಕ, ಊರುಬೈಲು , ಮಾರ್ಪಡ್ಕ ಊರುಬೈಲು ,
ಚಟ್ಟೆಕಲ್ಲು , ಕಟ್ಟಪಳ್ಳಿಗಳಲ್ಲಿ ಒಟ್ಟಾಗಿ ಹತ್ತು ಅಂಗನವಾಡಿ ಕೇಂದ್ರಗಳು ಇದೆ.
1934 ರಿಂದ ಸುಮಾರು 1837 ರ ವರೆಗೆ ಸುಳ್ಯದಲ್ಲಿ ಬ್ರಿಟಿಷರ ವಿರುದ್ಧ ರೈತರ ಜನತಾ ಬಂಡಾಯ ಆಗುವಾಗ ಚೆಂಬು , ಪೆರಾಜೆ ಮತ್ತು ಸಂಪಾಜೆಯ ಭಾರಿ ಜನರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಎಂಬುದಾಗಿ ದಾಖಲೆಗಳು ಹೇಳುತ್ತವೆ . ಈ ಹೋರಾಟದ ಪರಿಣಾಮ ಇಲ್ಲಿನ ಜನರು ತಮ್ಮ ಜಮ್ಮದ ಹಕ್ಕು ಕಳೆದುಕೊಂಡರು. ಸುಳ್ಯವನ್ನು   ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿ, ಜೊತೆಗೆ ಸಂಪಾಜೆಯ ಪೂರ್ವಭಾಗ , ಪೆರಾಜೆ, ಚೆಂಬುಗಳನ್ನು ಮದರಾಸು ಪ್ರಾಂತ್ಯಕ್ಕೆ ಸೇರಿಸಿ ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ತೆಗೆದುಕೊಂಡರು. ಆಗ ಇಲ್ಲಿನವರು ಸುಳ್ಯವನ್ನು ಸೇರಿಕೊಂಡ ಹಾಗೆ ಚೆಂಬು, ಪೆರಾಜೆ, ಸಂಪಾಜೆ ಗ್ರಾಮಗಳಿಂದ ತೆಂಗಿನ ಕಾಯಿ, ಕದಿರು, ಹಿಂಗಾರ, ಬಾಳೆ ಇತ್ಯಾದಿಗಳನ್ನು ಆ ಕಾಲದಲ್ಲಿ
ಭಾಗಮಂಡಲದ ತಲಕಾವೇರಿ ದೇವಸ್ಥಾನದ ಧಾರ್ಮಿಕ ವಿಧಿ ವಿಧಾನಗಳಿಗೆ ಕಳುಹಿಸುವ ಕ್ರಮ ಇತ್ತು.  ಚೆಂಬು ಗ್ರಾಮದಿಂದ ಕೊಡಗಿನ
ಭಾಗಮಂಡಲಕ್ಕೆ ಕೇವಲ 22 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಿತ್ತು. ಹಾಗಾಗಿ ಸಾಂಸ್ಕೃತಿಕ ವಾಗಿ, ಸಾಮಾಜಿಕವಾಗಿ  ಕೊಡಗಿನೊಂದಿಗೆ ಸಂಬಂಧ ಇದ್ದುದರಿಂದ ನಮ್ಮನ್ನು ಕೊಡಗಿಗೆ ಉಳಿಸಿಕೊಳ್ಳಿ ಎಂದು ಇಲ್ಲಿನವರು ಬ್ರಿಟಿಷರಿಗೆ ಮನವಿ ಸಲ್ಲಿಸಿದರು. ಇದರ ಪರಿಣಾಮ ಸುಳ್ಯ ಹೊರತುಪಡಿಸಿ ಈ ಎರಡು  ಚೆಂಬು, ಪೆರಾಜೆ ಗ್ರಾಮಗಳು ಜೊತೆಗೆ ಸಂಪಾಜೆಯು ಕೊಡಗಿನ ವ್ಯಾಪ್ತಿಗೆ ಸೇರಿದೆ ಅಂತ ಇತಿಹಾಸದ ಹೇಳಿಕೆ ಇದೆ. ಸಂಪಾಜೆಯ ನಂತರ  ಸಂಪೂರ್ಣ ಕೊಡಗು ಜಿಲ್ಲೆಯಾದರು ಚೆಂಬು ಮತ್ತು ಪೆರಾಜೆ  ಈ  ಕಾರಣದಿಂದ ಕೊಡಗಿಗೆ ಸೇರಿದೆ.
ಗ್ರಾಮವಾಸಿ ಸಮುದಾಯಗಳು:
ಚೆಂಬು ಗ್ರಾಮದ ವ್ಯಾಪ್ತಿಯಲ್ಲಿ ಅರೆಭಾಷೆ ಗೌಡ ಸಮುದಾಯದವರು ಬಹುಸಂಖ್ಯಾತರಾಗಿ ವಾಸಿಸುತ್ತಾರೆ. ಗೌಡರು ಹಾಸನದ ಐಗೂರು ಪ್ರಾಂತ್ಯದಿಂದ ವಲಸೆ ಬಂದು ಮತ್ತೆ ಸುಬ್ರಮಣ್ಯ , ಸುಳ್ಯ, ಪರಿಸರದಿಂದ ಕೊಡಗಿನವರೆಗೆ ವಲಸೆ ಹೋದವರು ಎಂಬುದಾಗಿ ಅಧ್ಯಯನದಿಂದ ತಿಳಿದು ಬರುತ್ತದೆ. ಅಧಿಕ ಸಂಖ್ಯೆಯ ಅರೆಭಾಷೆ ಗೌಡರ ನಂತರ ಕುದುರೆಪಾಯದಲ್ಲಿ ನಾಯ್ಕರು ಎಂದು ಕರೆಯಲ್ಪಡುವ ಮರಾಠಿಗರು ಮತ್ತು ದಬ್ಬಡ್ಕದ ಕಟ್ಟಪಳ್ಳಿಯಲ್ಲಿ  ಮಲೆವಾಸಿ ಮಲೆಕುಡಿಯರು ವಾಸಿಸುತ್ತಿದ್ದಾರೆ.  ದೈವದ ವೇಷಧಾರಿ ಮೂಲದ ನಲಿಕೆ ಜನಾಂಗ ಅಥವಾ ಅಜಲರು, ಪೂಜಾರಿಗಳು ಅಥವಾ ಬಿಲ್ಲವ ಜನಾಂಗ ಚೆಂಬೈದೂರು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ತುಂಬಾ ಕಡಿಮೆ ಸಂಖ್ಯೆಯಲ್ಲಿ ವೈದಿಕ ಬ್ರಾಹ್ಮಣರು, ವಲಸಿಗ ತಮಿಳರು, ಬೆಳ್ಚಪಾಡರು (ತೀಯರು) , ಗಾಣಿಗರು, ಮಣಿಯಾಣಿ, ವಿಶ್ವಕರ್ಮರು( ಆಚಾರಿಗಳು) ನಾಯರ್ ( ನಂಬಿಯಾರ್) , ಬಂಟರು, ಮೇರರು ಮತ್ತು ಅನ್ಯ ಮತೀಯ ಕ್ರಿಶ್ಚಿಯನ್ ಮತ್ತು ಮುಸ್ಲೀಂ ಒಂದೆರಡು ಕುಟುಂಬಗಳು ಇವೆ.  ಪ್ರತಿ  ಸಮುದಾಯದವರು ಊರಿನ ಸಾಂಸ್ಕೃತಿಕತೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ಚೆಂಬು ಸ್ಥಳ ನಾಮದ ಹಿನ್ನಲೆ:
ಚೆಂಬೈದೂರು ಗ್ರಾಮದ ಎಲ್ಲಾ ಹೆಸರುಗಳ  ಸ್ಥಳದ ಹಿನ್ನೆಲೆಯನ್ನು ಹುಡುಕುತ್ತ ಹೊರಟಾಗ ಪೌರಾಣಿಕ,  ಪ್ರಾಕೃತಿಕ, ಇತಿಹಾಸ, ಭೌಗೋಳಿಕದ ಎಲ್ಲ  ಸಂಗತಿಗಳು ಮಿಳಿತ ಆಗಿರುವುದು ಕಂಡು ಬರುತ್ತದೆ. ಇಲ್ಲಿ ನಾನು ಮುಖ್ಯವಾಗಿ ಚೆಂಬು ಎಂಬ ನಮ್ಮ ಗ್ರಾಮದ ಹೆಸರಿನ ಸ್ಥಳನಾಮದ ಬಗ್ಗೆ ಮಾತ್ರ ಹೇಳುತ್ತೇನೆ. ಚೆಂಬು ಎನ್ನುವುದು ತುಂಬಾ ಪವಿತ್ರವಾದ ವಸ್ತು. ತಾಮ್ರ ಅಥವಾ ಇನ್ಯಾವುದೋ ಲೋಹದಿಂದ ಮಾಡಿದ ಗುಂಡನೆಯ ಪಾತ್ರೆ.  ಮನೆಗೆ ಅತಿಥಿಗಳು ಬಂದಾಗ ಚೆಂಬು ನೀರು ನೀಡಿ ಸತ್ಕರಿಸುವುದು ಅವರಿಗೆ ನೀಡುವ ಗೌರವ. ಮನೆಯ ಶುಭ ಕಾರ್ಯಕ್ರಮದಲ್ಲಿ ಮನೆ ಯಜಮಾನ ಚೆಂಬು ನೀರು ಹಿಡಿದು ಊಟ ಕರೆಯುವ  ಕ್ರಮ ಮಾಡಬೇಕು. ಹೀಗೆ ಈ ಅಮೂಲ್ಯ ವಸ್ತುವಿನ ಬೇಡಿಕೆ ಇನ್ನೂ ಇದೆ.  ಚೆಂಬು ಊರಿಗೆ ಯಾವುದೆ ಮನೆಗು ಅತಿಥಿಗಳು ಬಂದರು ತಾಮ್ರದ ಚೆಂಬಲ್ಲಿ ನೀರು ನೀಡುವ ಕ್ರಮ ಹಿಂದಿನ ಕಾಲದಲ್ಲಿ ಚಾಲ್ತಿಯಲ್ಲಿತ್ತು.  ಆ ಒಂದು ಕಾರಣಕ್ಕೂ ಚೆಂಬು ಎಂಬ ಹೆಸರು ಊರಿಗೆ ಬಂತು ಎನ್ನುವ ಕಥೆಯು ಇದೆ.
ಚೈಂಬೈದೂರಿನ  ಧರ್ಮದೈವ
‘ರುದ್ರಚಾಮುಂಡಿ ‘  ರಾಕ್ಷಸರ ಉಪಟಳ ಹೆಚ್ಚಾದಾಗ ಉಳ್ಳಾಕುಲು  ದೈವಗಳನ್ನು ತಲಕಾವೇರಿಯಿಂದ ಇಲ್ಲಿಗೆ ಕರೆಸಿಕೊಳ್ಳುತ್ತದೆ.  ಹಾಗೆ ಉಳ್ಳಾಕುಲು  ಊರಿಗೆ ಬರುವಾಗ ಪನೇಡ್ಕ ಕಟ್ಟೆಯಲ್ಲಿ
ರುದ್ರಚಾಮುಂಡಿ ,ಬೆಳ್ಳಿ ಚೆಂಬುವಿನಲ್ಲಿ ಹಾಲು ನೀಡಿ ಸ್ವಾಗತಿಸಿ ಸತ್ಕರಿಸುತ್ತಾಳೆ. ಬೆಳ್ಳಿ ಚೆಂಬಲ್ಲಿ  ಹಾಲು ಕೊಟ್ಟು  ಸತ್ಕರಿಸಿದ ಕಾರಣ ಚೆಂಬು ಹೆಸರು ಬಂದಿದೆ  ಎಂಬ ವಿಚಾರವು ಇಲ್ಲಿನ ಜನರ ಒಂದು ನಂಬಿಕೆಯಲ್ಲಿದೆ.
ಚೆಂಬೈದೂರಿನ ಡಬ್ಬಡ್ಕ ಪರಿಸರದಲ್ಲಿ ಬಹಳ ಪ್ರಾಚೀನವಾದ ಒಂದು ಬೃಹತ್ತಾದ, ಅಪರೂಪದ ಐತಿಹಾಸಿಕ  ಕೊಪ್ಪರಿಗೆ ಬಾವಿ ಕಂಡು ಬಂದಿದೆ. ಆ ಕೊಪ್ಪರಿಗೆ  ಬಾವಿ ನೋಡಲು ಚೆಂಬುವನ್ನು ಹೋಲುವ   ಬೃಹತ್ ಕೊಡಪಾನದ  ಆಕಾರದಲ್ಲಿದೆ. ಬ್ರಿಟಿಷರ ಕಾಲದಲ್ಲಿ ಇದು ನಿರ್ಮಾಣವಾಗಿದೆ ಎಂಬುದಾಗಿ ಹೇಳುತ್ತಾರೆ. ಇದರ ವಿಶೇಷತೆ ಎಂದರೆ ಇದಕ್ಕೆ  ಬಲು ದೊಡ್ಡದಾದ ಮುಚ್ಚಳ ಇದೆ. ಈಗ ಅದರ ಮುಚ್ಚಳವನ್ನು ಹಾಕದೆ ಪಕ್ಕಕ್ಕಿಟ್ಟು ನಶಿಸಿ ಹೋಗಿದೆ. ಆ ತೆರೆದ ಕೊಪ್ಪರಿಗೆ ಈಗಲೂ ಇದ್ದು ಮಳೆಗಾಲದಲ್ಲಿ ಅದರ ತುಂಬಾ ನೀರು ತುಂಬಿಕೊಳ್ಳುತ್ತದೆ. ಈ ಕೊಪ್ಪರಿಗೆಯ ಆಕಾರ ಚೆಂಬುವಿನ ಹಾಗೆ ಇರುವುದರಿಂದ ಚೆಂಬು ಹೆಸರು ಬಂದಿದೆ ಎನ್ನುವ ಹೇಳಿಕೆಯು ಇದೆ. ಚೆಂಬೈದೂರಿನಲ್ಲಿ ಹಿಂದಿನ ಕಾಲದಲ್ಲಿ ಬೇರೆ ಸ್ಥಳದಲ್ಲಿಯೂ ಬ್ರಿಟಿಷರ ಕೊಪ್ಪರಿಗೆಗಳು ಸಿಗುತ್ತಿತ್ತು ಎನ್ನುವ ವಿಚಾರವನ್ನು ಹಿಂದಿನವರು ಹೇಳುತ್ತಾರೆ.
ಇನ್ನೊಂದು ಮುಖ್ಯವಾದ ಹೇಳಿಕೆಯ ಪ್ರಕಾರ ಪುರಾತನ ಕಾಲದಿಂದಲೂ ಇಲ್ಲಿ  ಉಳ್ಳಾಕುಲು ಮಾಡಸ್ಥಾನ ಇದೆ. ಹಿಂದೆ ಇದರ ಛಾವಣಿಗೆ ತಾಮ್ರ  (ಚೆಂಬು)ದ ತಗಡಿನ ಹೊದಿಕೆ ಮಾತ್ರ ಹಾಕಿದ್ದರು. ಆದರಿಂದ ಈ ಪ್ರದೇಶಕ್ಕೆ ಚೆಂಬು ಎಂಬುದಾಗಿ ಕರೆದರು ಎನ್ನುವ ವಿಚಾರವು ಇದೆ.
ಬ್ರಿಟಿಷರ ಕಾಲದಲ್ಲಿ ಚೆಂಬುವಿನ ಹಲವಾರು ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದರಂತೆ. ಆಗ ಅವರೆಲ್ಲ ಪೂಜಿಸುತ್ತಿದ್ದ ದೈವದ ಮೊಗ, ಕತ್ತಿ, ಆಯುಧಗಳನ್ನು ಎಸೆದರು. ಸ್ವಲ್ಪ ಕಾಲದ ನಂತರ ಹಿಂದು ಧರ್ಮ ಉತ್ತಮವೆಂದು ತಿರುಗಿ ಅವರ ಧರ್ಮಕ್ಕೆ ಬಂದರು. ಹಾಗೆ ಬಂದ ಮೇಲೆ ಪೂಜಿಸುತ್ತಿದ್ದ ವಸ್ತುಗಳನ್ನು ಮತ್ತೆ ಹುಡುಕಲು ಪ್ರಾರಂಭಿಸಿದರು. ಆಗ ಕೇರಳದ ಮಲಯಾಳ ಮಾತಾಡುವರು ಇಲ್ಲಿ ಕೆಲಸ ಮಾಡಲೆಂದು ಬಂದವರು ಅಪಾರ ಸಂಖ್ಯೆಯಲ್ಲಿದ್ದರು. ಅವರೊಂದಿಗೆ ಹೇಳಿ ಹುಡುಕಿಸುವಾಗ ಚೆಂಬು ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಕೆಸುವಿನ ಗಿಡಗಳು ಇದ್ದವು. ಅವರು ಒಂದೇ ಸಮನೆ ಕೆಸುವಿನ ಗಿಡಗಳನ್ನು ಕಿತ್ತು ಕಿತ್ತು ಬಿಸುಟು ಹುಡುಕುವಾಗ ಚೊಂಬು ಅನ್ನುವ ಪದವನ್ನು ಪ್ರತಿದಿನ ಬಳಸುತ್ತಿದ್ದರು. ಕೆಸುವಿನ ಗಿಡಕ್ಕೆ ಮಲಯಾಳ ಭಾಷೆಯಲ್ಲಿ ಚೊಂಬು ಎಂದು ಹೇಳುತ್ತಾರೆ. ಹಾಗೆ ಭಾರಿ ಪ್ರಮಾಣದಲ್ಲಿ ಚೊಂಬು ಅಂದರೆ ಕೆಸು ಇದ್ದ ಊರು ಚೆಂಬು ಆಗಿದೆ ಎನ್ನುವುದು ಇನ್ನೊಂದು ಕತೆ.
ನಮ್ಮೂರು ಚೆಂಬು ಗ್ರಾಮದ ನಕ್ಷೆ ಚೆಂಬುವಿನ ಆಕಾರವನ್ನು ಹೋಲುತ್ತದೆ.  ಮದ್ಯದಲ್ಲಿ ಕೋಪಟ್ಟಿಯಿಂದ  ಹಳ್ಳ ಹರಿದು ಹೋಗುವ ಚಿತ್ರ ನಕ್ಷೆಯಲ್ಲಿದೆ. ಹಾಗಾಗಿ ಇದು ನೀರಿರುವ ಚೆಂಬು. ಆದರಿಂದ ಚೆಂಬು ಎನ್ನುವ ಹೆಸರು ಬಂದಿದೆ ಎನ್ನುವ ಪ್ರತೀತಿಯು ಇದೆ.
ನಮ್ಮ ಚೆಂಬು ಗ್ರಾಮದ ಉಂಬಳೆ ಎಂಬ ಪ್ರದೇಶದಲ್ಲಿ  ಸುಬ್ರಮಣ್ಯ ದೇವಸ್ಥಾನ ಇತ್ತು ಎಂಬುದು ಐತಿಹ್ಯ. ಇದು ಉಳ್ಳಾಕುಲು ನೆಲೆಸುವ ಮುಂದಿನ ಕಥೆ. ಈ ಸುಬ್ರಮಣ್ಯ ದೇವಸ್ಥಾನ ಶಿಥಿಲಗೊಂಡು  ನೆಲಸಮ ಆದಮೇಲೆ ಈ ಜಾಗದಲ್ಲಿ ಅತಿಯಾದ ನಾಗನ ಸಂಚಾರ ಪ್ರಾರಂಭವಾಗಿದೆ.  ಜನರು ವಾಸ ಮಾಡಲು ಹೆದರುತ್ತಿದ್ದರು.  ಸುಬ್ರಮಣ್ಯ ದೇವಸ್ಥಾನ ಇದ್ದ ಪ್ರದೇಶನವನ್ನು ಸೇರಿಸಿ ಸುಮಾರು ಮೂರು ಕಿಲೋ ಮೀಟರ್ ವರೆಗೆ ಈಗಲೂ ನಾಗನ ಬನ ಎಂದು ಆ ಸ್ಥಳವನ್ನು ಕರೆಯುತ್ತಾರೆ. ಸುಬ್ರಮಣ್ಯ ದೇವಸ್ಥಾನ ನೆಲಸಮ ಆದ ಜಾಗದಲ್ಲಿ ಒಂದು ವಿಶಿಷ್ಟವಾದ ಚೆಂಬು ಸಿಕ್ಕಿದೆ.  ಆ ಚೆಂಬು ತುಂಬಾ ವರ್ಷದಿಂದ ಇತ್ತೀಚೆಗೆ ನಶಿಸಿ ಹೋಗುವವರೆಗೂ   ಚಾಂಬಾಡು ಕಿನುಮಣಿ ದೈವಸ್ಥಾನದಲ್ಲಿ ಇದ್ದುದನ್ನು ಎಲ್ಲರು ಹೇಳುತ್ತಾರೆ.  ಆ  ಚೆಂಬು ಸಿಕ್ಕಿದ ನಂತರ ಚೆಂಬು ಹೆಸರು ಬಂದಿದೆ ಎನ್ನುವ ಪ್ರತೀತಿಯೂ ಇದೆ.
ಇನ್ನು ಕೆಲವು ಮೌಖಿಕ ಹೇಳಿಕೆ ಪ್ರಕಾರ , ಚೆಂಬು ಊರಿಗೆ ಜಂಬು ಮರದಿಂದಾಗಿ ಈ ಹೆಸರು ಬಂದಿದೆ ಎನ್ನುತ್ತದೆ ಐತಿಹ್ಯ .
( ಪೂವಪ್ಪ ಕಣಿ ಯೂರು, 2007: 83, ಆಧಾರ) ” ನಾಮ ಪದ  ‘ ಚೆಂಬು’ ಎನ್ನುವುದು ಲೋಹದ ಕುಂಭ ಎನ್ನುವ ಅರ್ಥವನ್ನು ನೀಡುತ್ತದೆ.  ಸುಳ್ಯ ಪ್ರದೇಶದಲ್ಲಿ ಬೃಹತ್  ಶಿಲಾಯುಗದ ( ಮೆಗಾಲಿಥಿಕ್)  ಅವಶೇಷಗಳು ಕಂಡುಬರುತ್ತವೆ. ಸುಳ್ಯ ತಾಲ್ಲೂಕಿನಕ ಕನಕಮಜಲು , ಉಬ್ಬರಡ್ಕ, ಮಿತ್ತೂರು, ಮೇನಾಳ , ತೊಡಿಕಾನ, ಮಾಯಿಮಲೆ, ಚೆಂಬು ಮತ್ತು ಮಂಡೆಕೋಲು ಪ್ರದೇಶಗಳಲ್ಲಿ ಬೃಹತ್ ಬಾಂಜಾರು ಗುಹೆಗಳಿವೆ. ಇವು ಶಿಲಾಯುಗದ ಮಾನವ ಶಿಲೆಗಳಿಂದ, ಮುರಕಲ್ಲುಗಳಿಂದ ಕೂಡಿದ ಸ್ಥಳಗಳನ್ನು ಮಡಿಕೆ(ಕುಂಭ)ಯಾಕಾರದಲ್ಲಿ ಕೊರೆದು ಮಾಡಿದ್ದಾಗಿದೆ. ಇವುಗಳ ಬಾಯಿಯನ್ನು ಮುಚ್ಚುವಂತಹ ರಚನೆಗಳಿರುತ್ತವೆ. ಮೇಲ್ನೋಟಕ್ಕೆ ಇವು ನೋಡಲು ಚೆಂಬು ಅಥವಾ ಕುಂಭದ ಬಾಯಿಯನ್ನು ಹೋಲುತ್ತದೆ. ಒಳಗೆ ಆಳವಾಗಿ ಇಳಿದಂತೆ ವಿಸ್ತರಿಸಿಕೊಂಡಿರುತ್ತದೆ. ಚೆಂಬು ಎನ್ನುವ ಈ ಹೆಸರು ಪ್ರಾಚೀನ ಗುಹಾರಚನೆಯ ಹಿನ್ನಲೆಯಲ್ಲಿ ಬಂದಿದೆ. ಈ ಬಗೆಯ ಕುರುಹುಗಳ ಅಧ್ಯಯನಗಳು ಇವುಗಳ ರಚನೆ ಕ್ರಿಸ್ತಾರಂಭಕ್ಕಿಂತ ಮೊದಲಿನವುಗಳೆಂಬುದನ್ನು ತಿಳಿಸುತ್ತದೆ. ಪ್ರಾಚೀನ ಮಾನವನ ಬದುಕಿನ ನೆಲೆ – ಹಿನ್ನೆಲೆಯಿಂದ ಕೂಡಿದವುಗಳಾಗಿವೆ ಅಥವಾ ಪ್ರಾಚೀನ ಪರಂಪರೆಯ ಗತಿಶೀಲತೆಯ ಕೊಂಡಿಗಳೊಂದಿಗೆ ಜೋಡಿಸಿಕೊಂಡಿವೆ. ”
ಈ ಹಿನ್ನಲೆಯಲ್ಲಿ  ಚೆಂಬೈದೂರಲ್ಲಿ ಕೊಪ್ಪರಿಗೆ ಬಾವಿ ಎನ್ನುವ ಐತಿಹಾಸಿಕ ಬಾವಿ ಇದೆ. ಇದರ ಪ್ರಕಾರ ಚೆಂಬು ಸ್ಥಳನಾಮ ಗಮನೀಯವಾಗುತ್ತದೆ ಮತ್ತು ವಿದ್ವಾಂಸರ ಅಭಿಪ್ರಾಯಗಳ ಪ್ರಕಾರ ಚೆಂಬೈದೂರಿನ ಇತಿಹಾಸ ಬಹಳ ಪ್ರಾಚೀನತೆಯ ಕಡೆಗೆ ಮುಖಮಾಡಿದೆ.
ದೈವಾರಾಧನೆ :
ದೈವಾರಾಧನೆಗು ಮತ್ತು ಚೆಂಬು ಗ್ರಾಮಕ್ಕೆ ಬಿಡದ ನಂಟು. ದೈವಾರಾಧನೆ ಇಲ್ಲದೆ ಬದುಕಿಲ್ಲ ಎಂಬಂತೆ ಊರಿನವರು ನಂಬಿಕೊಂಡು,  ಪಾಲಿಸಿಕೊಂಡು ತಲೆತಲಾಂತರದಿಂದ ಬರುತ್ತಿದ್ದಾರೆ.  ಚೆಂಬುವಿನಲ್ಲಿ ದೈವಾರಾಧನೆ ಶುರುವಾದ ಇತಿಹಾಸ ಹುಡುಕಿಕೊಂಡು ಹೋದರೆ ಸುಮಾರು 600 ವರ್ಷದಷ್ಟು ಹಿಂದಕ್ಕೆ ಇತಿಹಾಸ ಹೋಗುತ್ತದೆ. ಇಲ್ಲಿ ಕರ್ಣರಸು ( ಕರ್ಣಂಬಾಹು) ಎಂಬ ಬಲ್ಲಾಳರ ರಾಜ ರಾಜ್ಯಭಾರ ಮಾಡುತ್ತಿದ್ದರು.  ನಿರ್ಧಿಷ್ಟ ಆಳ್ವಿಕೆ ಕಾಲದ ಮಾಹಿತಿ ಇಲ್ಲದಿದ್ದರೂ ಚೆಂಬು ಪ್ರದೇಶವನ್ನು  ಬಲ್ಲಾಳರು ಆಳುತ್ತಿದ್ದ ವಿಚಾರ ಸತ್ಯ. ಊರಿನ ಆನೆಹಳ್ಳದ ಪುರಾತನ ಗದ್ದೆಗೋರಿ  ಆಚರಣೆಯು ಬಲ್ಲಾಳರ ಕಾಲದಿಂದಲೇ ಆರಂಭವಾಗಿದೆ. ಇಲ್ಲಿ ನೆಲೆಸಿರುವ ಅರೆಭಾಷಿಕ ಗೌಡ ಸಮುದಾಯದವರಿಗು  ಇದೇ ಕಾಲಘಟ್ಟದ ಇತಿಹಾಸ ಇದೆ. ಇಲ್ಲಿ  ಜೈನರ ಕೊನೆ ಸಂತತಿ ಅಕ್ಕು ( ಸೋಮು ) ಬಲ್ಲಾಳ್ತಿಯ ಆಡಳಿತದ ಇತಿಹಾಸ ಇದೆ. ಇವರ  ಆಡಳಿತದ ನಂತರ ಬಲ್ಲಾಳರ ಬೀಡು ಅಂದರೆ ನಾಲ್ಕು ಸೂತ್ರದ ಮನೆ ಆಡಳಿತದ ಸ್ಥಾನದ  ಸಂಕೇತ ಆಗಿ ಹೊಸೂರು ಕುಟುಂಬಕ್ಕೆ ಸಿಕ್ಕಿದೆ ಅನ್ನುವುದನ್ನು ಇತಿಹಾಸ ಹೇಳುತ್ತದೆ.  ಟಿಪ್ಪು ಸುಲ್ತಾನ್ ನ ಆಡಳಿತ ಕೂಡ ಚೆಂಬುವಿನಲ್ಲಿ ಇದ್ದುದಕ್ಕೆ ಕಥೆಗಳ ಆಧಾರ ಇದೆ.
ಬೀಡುವನ್ನು ಹೊಂದಿಕೊಂಡು  ಬಲ್ಲಾಳರ ಆಳ್ವಿಕೆ ಇದ್ದಲ್ಲಿ ಮಾತ್ರ ಮಾಡದ  ಉಳ್ಳಾಕುಲುವಿನ ಆರಾಧನೆ ಇರುತ್ತದೆ.  ಉಳ್ಳಾಕುಲು ಆರಾಧನೆಗಳ ಎಲ್ಲಾ ಸಂರಚನೆಗಳು ಇದನ್ನೇ ಹೇಳುತ್ತದೆ. ಇದಕ್ಕೆ ಹೊಂದುವಂತೆ ನಮ್ಮೂರಲ್ಲಿ ಬಲ್ಲಾಳರೆ ಮಾಡ ಕಟ್ಟಿದ ಉಳ್ಳಾಕುಲು ನೆಲೆ ಇದೆ.
ಗ್ರಾಮ ದೈವಗಳಾಗಿ  ಉಳ್ಳಾಕುಲು  ಚೆಂಬೈದೂರಿನ ಪ್ರಧಾನ ದೈವಗಳು. ಪೂಮಾಣಿ ಮತ್ತು ಕಿನ್ನಿಮಾಣಿ ಇಬ್ಬರು ದೈವಗಳು ಸೇರಿ ಒಟ್ಟಿಗೆ ಆಗುವ ಉಳ್ಳಾಕುಲು  ದೈವವನ್ನು ಸಂಪೂರ್ಣ ಚೆಂಬು ಗ್ರಾಮದವರು ನಿಷ್ಠೆಯಿಂದ ಆರಾಧಿಸುತ್ತಾರೆ. ಇದರಲ್ಲಿ ಫೂಮಾಣಿ ಅಂದರೆ ದೊಡ್ಡ ಮಾಣಿ ( ಹಿರಿಯವ) ಕಿನ್ನಿ ಮಾಣಿ ಅಂದರೆ ಚಿಕ್ಕ ಮಾಣಿ ( ಕಿರಿಯ) ಎಂಬುದು ಇದರ ಅರ್ಥ. ಬ್ರಾಹ್ಮಣ ವಟುಗಳಿಗೆ ಮಾಣಿ ಅಂತ ಹೇಳುವುದರಿಂದ ಇವು ಬ್ರಾಹ್ಮಣ ದೈವಗಳು  ಎಂದು ಎಲ್ಲರು ಅಂದುಕೊಂಡತಹ ವಿಚಾರ ಎಷ್ಟರ ಮಟ್ಟಿಗೆ ನಿಜ ಎಂಬುದು ಚರಿತ್ರೆಯಲ್ಲಿ ಸಂಶೋಧಕರ ದೃಷ್ಟಿಕೋನದಿಂದ ದಾಖಲಾಗಿದೆ.   ಕಿನ್ನಿಮಾಣಿ -ಪೂಮಾಣಿ ಸಹೋದರರು ರಾಮ _ ಲಕ್ಷ್ಮಣರು ಎನ್ನುವ ಪ್ರತೀತಿಯೂ ಇದೆ.  ಈ ಎಲ್ಲ ಪ್ರತೀತಿಗಳ ನಡುವೆಯೂ ಉಳ್ಳಾಕುಲು ಸೇರಿದಂತೆ ಸಾವಿರದೊಂದು ದೈವಗಳು ಸಮುದ್ರದ ನಡುವಿನಿಂದ ಶಿವನ ಅನುಗ್ರಹದಲ್ಲಿ ಮಥಿಸಿ ಉದಯಿಸಿದವರು ಎನ್ನುವುದು ಪಾಡ್ದನವೊಂದರಲ್ಲಿ ಹೇಳಿಕೆ ಇದೆ.
ಉಳ್ಳಾಕುಲು ದೈವ ಚೆಂಬೈದೂರಿಗೆ ಬಂದ ಕಥನ:
ಉಳ್ಳಾಕುಲು  ಎಂದರೆ  ಉಳ್ಳವರು , ಸಮರ್ಥರು ಎನ್ನುವ ಅರ್ಥವನ್ನು ಕೊಡುತ್ತದೆ. ಆದ್ದರಿಂದಲೇ ಈ ಅವಳಿ  ಶ್ರೀಮಂತ ಅರಸು ದೈವಗಳನ್ನು  ಉಳ್ಳಾಕುಲು ಎಂದೆ ಕರೆಯುತ್ತಾರೆ. ಅತ್ಯಂತ ಶ್ರೀಮಂತ ಉಳ್ಳಾಕುಲು ದೈವಗಳಾದ  ಕಿನ್ನಿಮಾಣಿ  ಮತ್ತು ಪೂಮಾಣಿಯ ಹೆತ್ತವರು ಬ್ರಾಹ್ಮಣ ಅರಸರಾದ ಜೋಗಂತ ಮಾಪೆರ್ ಮತ್ತು ತಾಯಿ ಗಿಂಡಂತ್ಯ ಗಿಳಿರಾಮೆತ್ತಿ ಎಂದು ಪಾಡ್ದನದಲ್ಲಿ ಉಲ್ಲೇಖಗೊಂಡಿವೆ. ಉಳ್ಳಾಕುಲು  ಅವಳಿ ದೈವಗಳ ತಂಗಿ ಪೂಲಂಕಮ್ಮ ದೈಯ್ಯರು / ಉಲ್ಲಾಳ್ತಿ.   ತುಂಬಾ ವರ್ಷ ಮಕ್ಕಳಾಗದ ಈ ದಂಪತಿಗೆ ಈಶ್ವರನ ಅನುಗ್ರಹದಿಂದ  , ಈಶ್ವರನ ತಪಸ್ಸು ಮಾಡಿದ ನಂತರವೇ ಉಳ್ಳಾಕುಲುವೆಂಬ  ಅವಳಿ ಗಂಡು ಮತ್ತು ಹೆಣ್ಣು ಮಗುವಿನ ಜನನವಾಯಿತು.  ಈ ಅವಳಿ ಮಕ್ಕಳು ಮತ್ತವರ ತಂಗಿ ಕಲಿಕೆಯಲ್ಲಿ ತುಂಬಾ ಬುದ್ಧಿವಂತರು. ಗುರುಮಠದಲ್ಲಿ ಹನ್ನೆರಡು ವರ್ಷದಲ್ಲಿ ಕಲಿಯುವಂತಹ  ಶಸ್ತ್ರಾಸ್ತ್ರ ವಿದ್ಯಾಭ್ಯಾಸದ ಸಹಿತ ಎಲ್ಲ ವಿಧ್ಯೆಯನ್ನು ಹನ್ನೆರಡು ತಿಂಗಳಲ್ಲಿ ಕಲಿತ ಪರಿಣಿತ ವೀರ ಶಿಷ್ಯರಾಗಿದ್ದರು. ಬಾಣ ಪ್ರಯೋಗಿಸುವ ವಿಧ್ಯೆಯಲ್ಲಿ ಅಪ್ರತಿಮ ವೀರರಾಗಿದ್ದರು. ಕಿನ್ನಿಮಾಣಿ – ಪೂಮಾಣಿ ಇಬ್ಬರು ಗುರುಮಠದಿಂದ ವಿಧ್ಯಾಭ್ಯಾಸ ಮುಗಿಸಿ ಬರುವಾಗ ಅವರ ಕೂದಲು , ಗಡ್ಡ , ಉಗುರುಗಳೆಲ್ಲ ಬಲು ಉದ್ದಕ್ಕೆ ಬೆಳೆದಿದ್ದವು. ಅದನ್ನು ಕ್ಷೌರಿಕನನ್ನು ಕರೆಸಿ ಎಲ್ಲ ಸ್ವಚ್ಛ ಮಾಡಿದ ನಂತರ ಅವರಿಗೆ ಶುದ್ಧ ಆಗಲು ಸಾವಿರದೊಂದು ಕೊಡಪಾನ ಬಿಸಿನೀರು ಮತ್ತು ಸಾವಿರದೊಂದು ಕೊಡಪಾನ ತಣ್ಣೀರು ಮೀಯಿಸಿ ಅವರನ್ನು ಶುದ್ಧ ಮಾಡಲಾಯಿತು. ಇವೆಲ್ಲವು ವಿವರಗಳು ನಮಗೆ ಪಾಡ್ದನದಿಂದ ತಿಳಿಯುತ್ತದೆ. ಉಳ್ಳಾಕುಲು  ಸಂಧಿಯ ಪಾಡ್ದನದ ಪ್ರಕಾರ ಈ ಇಬ್ಬರು ಕಾರಣಿಕ ಪುರುಷರು ಕಂಚಿ ದೇಶದಿಂದ ತುಳುನಾಡು ನೋಡಲು , ಧರ್ಮ ರಕ್ಷಣೆ ಮಾಡಲು ಪ್ರಯಾಣ ಮಾಡಿ ,ಬಂಗಾಡಿ ಘಟ್ಟದಿಂದ ಸುಬ್ರಮಣ್ಯದ ಕುಮಾರ ಪರ್ವತಕ್ಕೆ ಬಂದಿದ್ದಾರೆ. ಕುಮಾರಪರ್ವತ ತಲಪುವಾಗ ತಮ್ಮ ಕಿನ್ನಿಮಾಣಿ ಅಣ್ಣನ ಬಳಿ, ನಿನ್ನ ಸಿರಿ ಮುಡಿಯನ್ನು ಪಕ್ಕಕ್ಕೆ ಮಾಡು, ನಾನು ಬಾಣ ಪ್ರಯೋಗ ಮಾಡುತ್ತೇನೆ ಎಂದು ಹೇಳುತ್ತಾನೆ.  ಕುಮಾರ ಪರ್ವತದಿಂದ ಮಾಡಿದ ಈ ಬಾಣ ಪ್ರಯೋಗದಿಂದ ಸುಬ್ರಹ್ಮಣ್ಯದ ಕೊಡಿ ಮರ ತುಂಡಾಗುತ್ತದೆ. ಧ್ವಜ ತುಂಡಾದ ಕೂಡಲೇ ಸುಬ್ರಮಣ್ಯ ದೇವರು ಸಿಟ್ಟುಗೊಂಡು , ತುಂಡು ಮಾಡಿದವರ ಪತ್ತೆ ಮಾಡಿ ಅವರೊಂದಿಗೆ ಕಾದಾಡಿ ತುಂಡು  ಮಾಡಿದ ಕಾರಣ ಕೇಳುತ್ತಾನೆ. ಆಗ ಉಳ್ಳಾಕುಲು ಸಹೋದರರು ನಾವು ದೈವಿ ಪುರುಷರು ಅಂತ ಹೇಳುತ್ತಾರೆ. ಅದನ್ನು ಪರೀಕ್ಷಿಸಲು ಸುಬ್ರಮಣ್ಯ ದೇವರು ಕಿನ್ನಿಮಾಣಿ – ಪೂಮಾಣಿಗಳಿಗೆ ಏಳು ಹಗಲು ಏಳು ರಾತ್ರಿ ರಾಮಾಯಣ ಪಾರಾಯಣ ಮಾಡಿ ಮುಗಿಸಬೇಕೆಂದು ಸವಾಲು ಹಾಕುತ್ತಾನೆ. ಕಿನ್ನಿಮಾಣಿ ಪೂಮಾಣಿ ಪರೀಕ್ಷೆಯಲ್ಲಿ ಗೆಲ್ಲುವ ಹಂತ ಬಂದಾಗ ಸುಬ್ರಮಣ್ಯ ದೇವಾಲಯದ ಧನ ,ಧಾನ್ಯ , ಉಗ್ರಾಣ ಕರಗಿಕೊಂಡು ಬಂತು. ಆಗ ಸುಬ್ರಮಣ್ಯಸ್ವಾಮಿಗೆ  ಇವರು ದೈವಶಕ್ತಿ ಇರುವಂತವರು ಎಂಬ ನಂಬಿಕೆ ಬಂದು ನಿಮಗೇನು ವರ ಬೇಕು ಕೇಳಿ ಎಂದು ಹೇಳುತ್ತಾರೆ. ನಮಗೆ ತುಳುನಾಡಿನಲ್ಲಿ ಸಾವಿರದೊಂದು ಮಾಡದ ಮನೆ, ನೂರ ಒಂದು ಬಂಡಿಯನ್ನು ಕೊಟ್ಟು , ಎರಡು ದಿನದ ನೇಮ ಮತ್ತು ಧರ್ಮ ನಡಾವಳಿ ನಡೆಸುವಂತೆ ಅನುಗ್ರಹಿಸೇಕೆಂದು ಎಂದು ಕೇಳಿಕೊಳ್ಳುತ್ತಾರೆ. ಕಡಿದ ಕೊಡಿಮರವನ್ನು ಹೊತ್ತುಕೊಂಡು ತಾವು ನಿಂತಲ್ಲಿ ಅದನ್ನು ಊರಿ ನೇಮ ಪಡೆದುಕೊಳ್ಳುತ್ತಾರೆ. ಹೀಗೆ ಉಳ್ಳಾಕುಲು , ಕೊಡಿ ಮರ ಕಡಿದ ನಂತರ ಸುಬ್ರಮಣ್ಯ ಜಾತ್ರೆ ಆಗುವಾಗ ದ್ವಜಾರೋಹಣ ಇರುವುದಿಲ್ಲ.
ಚೆಂಬು ಗ್ರಾಮದಲ್ಲಿ ರಾಕ್ಷಸರ ಉಪಟಳ ತುಂಬಾ ಜಾಸ್ತಿ ಆದಾಗ, ಇಲ್ಲಿನ ಗ್ರಾಮ ದೈವ ಆಗಿದ್ದ ರುದ್ರ ಚಾಮುಂಡಿಗೆ ಧರ್ಮ ರಕ್ಷಣೆ ಮಾಡಿ ತನ್ನ ನಂಬಿದ ಜನರನ್ನು ಕಾಪಾಡಲು ಕಷ್ಟವಾಗಿತ್ತು. ಆಗ ಭಾಗಮಂಡಲದ ಭಗಂಡೇಶ್ವರನಲ್ಲಿ ನೆಲೆಸಿದ್ದ ಉಳ್ಳಾಕುಲು ದೈವಗಳನ್ನು ಇಲ್ಲಿಗೆ ಧರ್ಮ ರಕ್ಷಣೆಗೆ ಬರುವಂತೆ ಬರುವಂತೆ ರುದ್ರಾಂಡಿ ಕರೆಸಿಕೊಳ್ಳುತ್ತದೆ. ಕಾವೇರಿ ಮಾತೆಯ ಅಪ್ಪಣೆ ಪಡೆದು ಭಗಂಡೇಶ್ವರ ಸನ್ನಿಧಿಯಿಂದ ಬೆಳ್ಳಿಯ ಕುದುರೆಯಲ್ಲಿ ಪೂಮಾಣಿ _ಕಿನ್ನಿಮಾಣಿ  ಚೆಂಬೈದೂರಿಗೆ ಕಾಲಿಟ್ಟು ದುಷ್ಟರನ್ನು ನಿಗ್ರಹ ಮಾಡುತ್ತಾರೆ.  ಮೂಲ ದೈವ ರುದ್ರಾಂಡಿ ತನ್ನ ಕಿರುಚಾವಡಿಯಲ್ಲಿ ಉಳ್ಳಾಕುಲು ದೈವಗಳಿಗೆ  ಸ್ಥಾನ ಕೊಡುತ್ತದೆ. ಇಲ್ಲಿ ಪ್ರಧಾನ ದೈವ ಪುರುಷ , ಉಳ್ಳಾಕುಲು ದೈವಗಳಿಗೆ ಪ್ರಧಾನಿ ದೈವವಾಗಿ ನೆಲೆಯಾಗುತ್ತದೆ. ಪೂಮಾಣಿ ಮತ್ತು ಕಿನ್ನಿಮಾಣಿ ಭಾಗಮಂಡಲದಿಂದ ಹೊರಟು ಬರುವಾಗ ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಂಡ ಸ್ಥಳವಾದ ಸೂರ್ತಲೆ ಕಟ್ಟೆ , ಕುದ್ಪಾಜೆ ಕಟ್ಟೆ, ತೋರಿಮಲೆ, ಉಂಬಳೆ ಕಟ್ಟೆ, ಮಂಜಿಕಲ್ಲು ಕಟ್ಟೆ, ಪೊಳ್ಮಾರು ಕಟ್ಟೆ  ಕುಂಞಡ್ಕ ಕಟ್ಟೆ ಮತ್ತು ಪನೇಡ್ಕ ಕಟ್ಟೆಗಳು ಪ್ರಸಿದ್ಧಿ ಪಡೆದಿದೆ. ಈಗಲೂ ಪ್ರತಿ ವರ್ಷ ಜಾತ್ರೆಗೆ  ಭಾಗಮಂಡಲದಿಂದ ಭಂಡಾರ ಹೋಗಿ ತರುವಾಗ ಈ ಕಟ್ಟೆಗಳಲ್ಲಿ ಕುಳಿತು  ವಿಶ್ರಾಂತಿ ತೆಗೆದುಕೊಂಡು , ಮನೆಯವರು ಕೊಡುವ ಆತಿಥ್ಯವನ್ನು ಸ್ವೀಕರಿಸಿ ಬರುತ್ತಾರೆ. ಪೊಳ್ಮಾರು ಕಟ್ಟೆಯಲ್ಲಿ ವಿಶೇಷವಾಗಿ ವಾರಕ್ಕೆ ಮುಂದೆ ಗೊನೆ ಕಡಿದು ತಂಬಿಲ ಮಾಡಿ ಕಳಿಸುತ್ತಾರೆ. ಕಿರುಚಾವಡಿಗೆ ಸನಿಹ ಇರುವ ಪನೇಡ್ಕ ಕಟ್ಟೆಗೆ ,ಉಳ್ಳಾಕುಲು  ಕುದುರೆಯಲ್ಲಿ ಊರಿಗೆ ಬಂದ ವಿಚಾರ ತಿಳಿದು ಬೆಳ್ಳಿ ಚೆಂಬುವಿನಲ್ಲಿ ಹಾಲು ನೀಡಿ ರುದ್ರಚಾಮುಂಡಿ ಸತ್ಕರಿಸಿದ ಕಟ್ಟೆ ಎನ್ನುವ ಮಹತ್ವ ಇದೆ. ಉಳ್ಳಾಕುಲು ವಾಹನ ಜೋಡು ಕುದುರೆ ಅಥವಾ ಒಂದು ಕುದುರೆ ಎನ್ನುವ ಸಂಕೇತವು ಇದೆ. ಅರಸು ದೈವಗಳ ವರ್ಗಕ್ಕೆ ಸೇರುವ ಮಾಡದ ಉಳ್ಳಾಕುಲುವಿಗೆ ಪರವ ಜನಾಂಗದವರು ಮಾತ್ರ ಮುಡಿಕಟ್ಟುವುದು ಪೂರ್ವದಿಂದ ಬಂದ ಪರಂಪರೆ.  ಈ ಅವಳಿ ದೈವಗಳ ಲೌಕಿಕ ಮತ್ತು ಅಲೌಕಿಕ ಜೀವನದ ಘಟನೆಗಳಿಗೆ ಚೆಂಬು ಗ್ರಾಮದಲ್ಲಿ ಹಲವಾರು ಕಥೆಗಳು ತೆರೆದುಕೊಂಡಿವೆ.
ಚೆಂಬೈದೂರಲ್ಲಿ ಪೂಮಾಣಿ ಕಿನುಮಣಿ ಉಳ್ಳಾಕುಳು ದೈವಸ್ಥಾನ,  ಚಾಂಬಾಡು ಕಿರುಚಾವಡಿ  ಮತ್ತು ಉಪ್ಪಂಗಳ ಮಾಡ ಎಂಬೆರಡು  ಕಡೆ ಇದೆ.
ದರ್ಮದೈವ , ಉಳ್ಳಾಕುಲುವನ್ನು ಇಲ್ಲಿಗೆ ಕರೆಯಿಸಿಕೊಂಡಾಗ ಅವು ಚೆಂಬುಗೆ ತಲುಪಿದ ರಾತ್ರಿ ವಿಶ್ರಾಂತಿ ಮಾಡಿದ ಜಾಗ ಮುಂದೆ ಚಾಂಬಾಡು  ಕಿರುಚಾವಡಿ ಆಗಿದೆ. ಐದೂರು  ಚೆಂಬು ಗ್ರಾಮಕ್ಕೆ ಹೀಗೆ ಬಂದ ಉಳ್ಳಾಕುಲು  ತಮ್ಮ  ವಾಹನ ಕುದುರೆಗಳನ್ನು ಚಾಂಬಾಡು ಕಿರುಚಾವಡಿ  ಹತ್ತಿರವೇ ಕಟ್ಟುತ್ತಾರೆ. ಆಗ ಅಶ್ವಗಳನ್ನು ಕಟ್ಟಿದ ಜಾಗವೇ ಅಶ್ವಾಲಯ ಎಂದು ಕರೆಯಿಸಿಕೊಂಡು ಈಗ ಉಡಿಪನ (ಉಡಪನ) ಚಾವಡಿ ಎಂದು ಕರೆಯುತ್ತಾರೆ. ಈ ಉಡಿಪನ ಚಾವಡಿ ಈಗ ಅಚ್ಚುಕಟ್ಟಾಗಿ ನಿರ್ಮಾಣಗೊಂಡು ಅಲ್ಲಿ ಚಿಕ್ಕದಾದ ಬೆಳ್ಳಿ ಕುದುರೆ  ಮತ್ತು ಇತ್ತೀಚೆಗೆ 2010 ರಲ್ಲಿ ಕಾಷ್ಠದಲ್ಲಿ ಅರಳಿದ ಅತಿ ಎತ್ತರದ ಕುದುರೆ ಬಂಡಿ ಸ್ಥಾಪನೆ ಆಗಿದೆ. ಈ ಎರಡು ಕಡೆಯಲ್ಲೂ ವಾರ್ಷಿಕ ಎರಡು ಜಾತ್ರೆಗಳು ನಡೆಯುವ ಪದ್ಧತಿ , ಅರಸರ ಕಾಲದಿಂದಲೂ ಊರವರೆಲ್ಲ ಸೇರಿ ಮುಂದುವರೆಸಿಕೊಂಡು ಬಂದಿದ್ದಾರೆ.  ಚಾಂಬಾಡು ಕಿರುಚಾವಡಿ ಜಾಳ್ತೆ ನೇಮೋತ್ಸವ ಡಿಸೆಂಬರ್ ತಿಂಗಳ ಹತ್ತಕ್ಕೆ ನಡೆದರೆ , ಪಗ್ಗು ನೇಮೋತ್ಸವ ಮೇ ತಿಂಗಳ ಐದನೇ ತಾರೀಖಿಗೆ ಪ್ರತಿ ವರ್ಷ ನಡೆಯುತ್ತದೆ. ಜಾತ್ರೆಯ ಕಾರ್ಯಕ್ರಮ ಗೊನೆ ಮುಹೂರ್ತದಿಂದ ಪ್ರಾರಂಭ ಆಗಿ ,  ವಾಲಸಿರಿ ,  ಭಂಡಾರ ಪ್ರಕ್ರಿಯೆ, ನೇಮ ನಡಾವಳಿ , ದೊಂಪದ ಬಲಿ  ಆಗಿ ಕೋಳಿ ಅಂಕದವರೆಗೆ ಇರುತ್ತದೆ.  ರಾಜರ ಕಾಲದಿಂದಲೇ ಹಕ್ಕುದಾರಿಕೆ ಕೊಟ್ಟಂತೆ ಕಟ್ಟುಪಾಡುಗಳಿಗೆ  ಒಳಪಟ್ಟು ಆಡಳಿತದ ಹೆಸರಲ್ಲಿ ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿದ್ದಾರೆ.  ರಾಜರ ಕಾಲದಲ್ಲಿ ಇದ್ದ ಕೆಲವೇ ಕೆಲವು ಕುಟುಂಬಗಳಿಗೆ ಹಾಗೂ ಚಾವಡಿಯ ಪರಿಸರಕ್ಕೆ ಹೊಂದಿಕೊಂಡ ಕುಟುಂಬಗಳಿಗೆ  ಅಧಿಕಾರ ರವಾನೆ ಮಾಡಿ ಉಂಬಳಿ ಜಾಗ, ಗದ್ದೆಗಳನ್ನು ಕೊಟ್ಟದ್ದಕ್ಕೆ ಪುರಾವೆಗಳು ಸಿಗುತ್ತವೆ.
ಚೆಂಬುನವರ ದೃಷ್ಟಿಯಲ್ಲಿ ದೈವಗಳು ದುಷ್ಟರನ್ನು ಶಿಕ್ಷಿಸಿ, ಶಿಷ್ಠರನ್ನು ರಕ್ಷಿಸುತ್ತದೆ. ಕಾಲ ಕಾಲಕ್ಕೆ ಮಳೆ ಕೊಟ್ಟು ಜನರು ದುಡಿಯುವದಕ್ಕೆ ತಕ್ಕ ಪ್ರತಿಫಲ ನೀಡುತ್ತದೆ.  ಜನರ ಆರೋಗ್ಯವನ್ನು ಕಾಪಾಡುತ್ತದೆ. ಹೆತ್ತವರಂತೆ ಜನರನ್ನು ಸಲಹುತ್ತದೆ. ನ್ಯಾಯವನ್ನು ಎತ್ತಿ ಹಿಡಿದು ಅನ್ಯಾಯ ಮಾಡಿದವರನ್ನು  ಶಿಕ್ಷಿಸುತ್ತದೆ. ಹೀಗೆ ಭೂತಗಳ ಮೇಲೆ ಇಟ್ಟಿರುವ ನಂಬಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ  ನಂಬಿಕೆಯ ಹಿಂದೆ ಭಯ ಇರುವುದು ಸಹ ಕಂಡು ಬರುತ್ತದೆ. ಹೀಗೆ ಚೆಂಬು  ಗ್ರಾಮದ ವ್ಯವಸ್ಥೆಯ ಒಂದು ಭಾಗ ಆಗಿ ದೈವಾರಾಧನೆ ಬೆಳೆದುಕೊಂಡು ಬಂದಿದೆ . ಇನ್ನು ಹಲವಾರು  ಗ್ರಾಮ ದೈವಗಳು ಮತ್ತು ಕುಟುಂಬ ದೈವಗಳು ಚೆಂಬೈದೂರಲ್ಲಿ ಆರಾಧನೆಗೆ ಒಳಪಟ್ಟಿದೆ.
ಚೆಂಬೈದೂರಿನ ವಾರ್ಷಿಕಾವಾರ್ತನದ  ಆಚರಣೆಗಳು ಮತ್ತು ಕುಣಿತಗಳು:
ಪ್ರಧಾನವಾಗಿ ಚೆಂಬು ಗ್ರಾಮದ ವಾರ್ಷಿಕಾವಾರ್ತನದ ಆಚರಣೆ ಮತ್ತು ಕುಣಿತಗಳಿಗೆ ಇರುವ ಮೂಲವೆಂದರೆ ಆದು ಭೂಮಿಯೇ ಆಗಿದೆ. ಅಂದರೆ ಮಣ್ಣು, ಮಣ್ಣಿನಲ್ಲಿ ಮಾಡುವ ಕೃಷಿ. ಕೃಷಿಯಿಂದ ಹೊರತಾಗಿ ಜಗತ್ತಿನ ಯಾವ ಸಂಸ್ಕೃತಿಯು ಇರಲಾರದು.  ವಾರ್ಷಿಕಾವಾರ್ತನದಲ್ಲಿ ಮೊದಲ ಮಹತ್ವದ ಆಚರಣೆ ಆಗಿ ಕೆಡ್ಡಸ ಹಬ್ಬ ಆಗಿರುತ್ತದೆ.  ಕೆಡ್ಡಸವನ್ನು ಚೆಂಬು ಗ್ರಾಮದ ಹೆಚ್ಚಿನೆಲ್ಲ ಸಮುದಾಯದವರು ಆಚರಿಸುತ್ತಾರೆ. ಈ ಆಚರಣೆ ಕೊಡಿ – ನಡು- ಕಡೆ ಎಂದು ಮೂರು ದಿನಗಳಲ್ಲಿ ನಮ್ಮೂರಲ್ಲಿ ಆಚರಿಸುತ್ತಾರೆ.
ಚೆಂಬು ಗ್ರಾಮದೆಲ್ಲೆಡೆ  ಸಂಪೂರ್ಣ ಕೃಷಿಕರೆ ಇರುವುದರಿಂದ ಮತ್ತು ಇಲ್ಲಿ ಹಲವಾರು ಮನೆಗಳಲ್ಲಿ ಗದ್ದೆ ಬೇಸಾಯ ಇರುವುದರಿಂದ ‘ಬಿಸು ಕಣಿ’ ಹಬ್ಬದ ಪರಂಪರೆ  ಇಂದಿಗು ಇದೆ. ಇಲ್ಲಿ ಕೃಷಿಕರಿಗೆ ಹೊಸ ಪರ್ವ ಬಿಸುವಿನಿಂದ ಪ್ರಾರಂಭವಾಗುತ್ತದೆ.
ಕದಿರನ್ನು ಮನೆ ತುಂಬಿಸಿ ಹೊಸಕ್ಕಿ ಊಟ ಮಾಡುವ  ‘ಹೊಸ್ತು’ ಹಬ್ಬವನ್ನು ಚೆಂಬು ಗ್ರಾಮದವರು ಆಚರಿಸುತ್ತಾರೆ. ಗದ್ದೆ ಬೇಸಾಯ ನಿಲ್ಲಿಸಿದವರು ಈ ಆಚರಣೆಯನ್ನು ಚೌತಿ ಅಥವ ಕಾವೇರಿ ಸಂಕ್ರಮಣದಂದು ಮಾಡುತ್ತಾರೆ.
ಗದ್ದೆ ಗೋರಿ ಸಂಪ್ರದಾಯ ಚೆಂಬು ಗ್ರಾಮದ ಆನೆಹಳ್ಳದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತದೆ.  ಈ ಗದ್ದೆಗೊರಿ ಸಂಪ್ರದಾಯ ದೈವದ ಉಂಬಳಿ ಗದ್ದೆಯಲ್ಲಿ ಮಾತ್ರ ನಡೆಯುವಂತದ್ದು . ಆನೆಹಳ್ಳದ ಈ ಗದ್ದೆ ಬಲ್ಲಾಳರ ಕಾಲದ ಉಳ್ಳಾಕುಲು ‌ ದೈವಗಳ ಉಂಬಳಿ ಗದ್ದೆ ಆಗಿದೆ. ಬಾಲಂಬಿ ಕುಟುಂಬದವರು ಈ ಗದ್ದೆಯನ್ನು ಪಡೆದುಕೊಂಡ ಮೇಲೆ ಇವರು ಈ ಐತಿಹಾಸಿಕ ಗದ್ದೆಗೋರಿಯನ್ನು ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ.  ಗದ್ದೆ ಬೇಸಾಯವನ್ನು ಹೊಂದಿಕೊಂಡು ಬಾಳೆ ನೆಡುವ, ಪೂಕರೆ ಹಾಕುವ ಸಂಪ್ರದಾಯಗಳು ಇವೆ.  ಗದ್ದೆ ಗೋರಿಯ ಪ್ರಮುಖ ಆಕರ್ಷಣೆ ಆಗಿ ಕೆಸರು ಗದ್ದೆ ಓಟ ಇರುತ್ತದೆ.  ಇದೇ ದಿನ ಉಳ್ಳಾಕುಲು  ಜಾತ್ರೆಯ ದಿನ ನಿಗಧಿ  ಮಾಡಿ ಊರಿಗೆ ಹೇಳುವ ಪದ್ಧತಿ ಈಗಲೂ ಇದೆ.  ಕಿನುಮಣಿ ಉಳ್ಳಾಕುಲು ದೈವ ಜಾತ್ರೆಯ ವಾಲಸಿರಿ ಕೂಡ  ಗದ್ದೆಗೋರಿ ನಡಿವಲ್ಲಿ ಇರುವ ಭೂತ ಚಾವಡಿಗೆ ಬಂದು ಹೊರಡುವುದು ಪೂರ್ವ ಪದ್ಧತಿ.  ಗದ್ದೆ ಗೋರಿ ದಿನ ಭತ್ತ ಬಿತ್ತುವ ಕಾರ್ಯವನ್ನು ಗದ್ದೆಯಲ್ಲಿ ಮಾಡುತ್ತಾರೆ.  ಮುಂದೆ ಗದ್ದೆ ಫಸಲು ಬರುವರೆಗೆ ಯಾರು ಗದ್ದೆಗೆ ಇಳಿಯಬಾರದು ಎನ್ನುವ ನಂಬಿಕೆಯಿದೆ.  ಇಂತಹ ವಿಶಿಷ್ಟತೆ ಇರುವ ಗದ್ದೆಗೋರಿ ಸಂಪ್ರದಾಯ ಚೆಂಬುವನವರು ಈಗಲೂ ಆಚರಿಸುತ್ತಿದ್ದಾರೆ.
ಇನ್ನುಳಿದಂತೆ ಹಿಂದಿನ ಕಾಲದಂತೆ ದೀಪಾವಳಿ, ಚೌತಿ, ಆಟಿ ಅಮಾವಾಸ್ಯೆ, ಮತ್ತು ಕಾವೇರಿ ಸಂಕ್ರಮಣವನ್ನು ಆಚರಿಸುತ್ತಾರೆ.
ವಾರ್ಷಿಕಾವಾರ್ತನದ ಕುಣಿತಗಳಲ್ಲಿ ಬಹು ಮುಖ್ಯವಾಗಿ ನಮ್ಮ ಚೆಂಬು ಗ್ರಾಮದಲ್ಲಿ ಸಿದ್ಧ ವೇಷ, ಗೊoಧೋಳು ಕುಣಿತ ಮತ್ತು ಆಟಿ ಕಳಂಜದ ಕುಣಿತ ಈ ಮೂರನ್ನು ಹೆಸರಿಸಬಹುದು.
ಇಡೀ ಜನಪದ ವಿಶ್ವಕ್ಕೆ ಸಿದ್ಧವೇಶ  ಕುಣಿತ ಗೌಡ ಜನಾಂಗದ ಅನನ್ಯ ಕೊಡುಗೆ . ಇದರಲ್ಲಿ ಗೌಡರ ಮತ ಸಂಗತಿ ಅಡಕ ಆಗಿರುವುದನ್ನು ವಿದ್ವಾಂಸರು ಕಂಡು ಕೊಂಡಿದ್ದಾರೆ. ಚೆಂಬು ಐದೂರಿನ ದಬ್ಬಡ್ಕದಲ್ಲಿ ಊರಿನ ಗೌಡ ಸಮುದಾಯದವರು, ಸುಗ್ಗಿ ಹುಣ್ಣಿಮೆಯ ಮೂರು ದಿನಗಳಲ್ಲಿ ಒಟ್ಟು ಸೇರಿ ರಾತ್ರಿ ಹೊತ್ತು ಮನೆ ಮನೆಗೆ ಹೋಗಿ  ಇದನ್ನು ನಡೆಸಿಕೊಡುತ್ತಾರೆ. ಇದರಲ್ಲಿ ಮುಖ್ಯವಾಗಿ  ಸನ್ಯಾಸಿ  ವೇಷ ಮತ್ತು ಪೂಜೆ ಭಟ್ಟರ ವೇಷ ಹಾಕುತ್ತಾರೆ. ಇವರೊಂದಿಗೆ ಸಿದ್ಧವೇಷ ಕುಣಿವ ಪುರುಷರು ಬಿಳಿ ಅಂಗಿ, ಕಚ್ಚೆ, ಮುಂಡಾಸು ಇತ್ಯಾದಿ ಹಾಕಿದ ಏಳರಿಂದ ಒಂಬತ್ತು ಜನರ ತಂಡ ಇರುತ್ತದೆ.
ಗೌಡರು ಮಾತ್ರ ವೇಷ ಹಾಕಿದರು ಸಹ,  ಇವರು ಎಲ್ಲ ವರ್ಗದ ಜನರ ಮನೆಗಳಿಗೆ ಹೋಗುತ್ತಾರೆ. ಸಿದ್ಧವೇಶದ ಜನಪದ ಹಾಡು ತುಂಬಾ ಸೊಗಸಾಗಿದೆ.  ಈ ಸಿದ್ಧವೇಷದ  ಕುರಿತು ಮೊದಲು ಅಧ್ಯಯನ ಮಾಡಿದವರು ಡಾ. ಪುರುಷೋತ್ತಮ ಬಿಳಿಮಲೆಯವರು. ಇದೆ ಸಿದ್ಧವೇಷ ಬೆಳ್ತಂಗಡಿಯ ತುಳು ಪರಿಸರದಲ್ಲಿ ‘ ಪುರುಸರೆ ಕಟ್ಟುನೆ’  ಹೆಸರಲ್ಲಿ ನಡೆಯುತ್ತದೆ. ಇವೆರಡರ ತುಲನಾತ್ಮಕ ಅಧ್ಯಯನವನ್ನು ಡಾ. ಪೂವಪ್ಪ ಕಣಿಯೂರು ಮಾಡಿದ್ದಾರೆ. ಚೆಂಬೈದೂರಲ್ಲಿ ಇತ್ತೀಚೆಗೆ ಸಿದ್ಧ ವೇಷ ಕುಣಿತ ಹೋಗುವುದು ಕಡಿಮೆಯಾಗಿದ್ದರು , ಇಲ್ಲಿಯವರ ಅಂತರಂಗದಲ್ಲಿ ಗೌಡರ ಮತ ಮೂಲದ ಚರಿತ್ರೆ ಇದೆ. ಇದು ಜನಪದ ರಂಗ ಭೂಮಿಗೆ ಗೌಡರ ವಿಶಿಷ್ಟ ಕೊಡುಗೆಯಾಗಿ ಈ ಸಮುದಾಯದ ಅನನ್ಯ ಹೆಗ್ಗುರುತು.
ಗೊಂಧೋಳು  ಆರಾಧನೆ  ಮೂಲದ ಈ  ಕುಣಿತವನ್ನು ಮರಾಠಿ ನಾಯ್ಕ ಜನಾಂಗದವರು ಆಚರಣೆ ಮಾಡುತ್ತಾರೆ. ಅಂಬಾ ಭವಾನಿ ಆರಾಧನೆ ಪರಂಪರೆಯ ಮಹಾರಾಷ್ಟ್ರ ಮೂಲದ ಇವರಿಗೆ ಮಹಮ್ಮಾಯಿ ಕುಲದೇವರು.  ಮಾಹಮ್ಮಾಯಿಯ ಆರಾಧನೆಯನ್ನು ಇವರು ಗೊಂಧೋಳು ರೂಪದಲ್ಲಿ ನಡೆಸುತ್ತಾರೆ. ಪ್ರಾಚೀನ ಕಾಲದಿಂದ ನಡೆದು ಬಂದ ಹಾಗೆ  ಈ ಕುಣಿತ ಪ್ರಧಾನ ಆರಾಧನೆಯನ್ನು ಇಂದಿನವರೆಗೂ ಇದನ್ನು ಆಚರಿಸುವ ಜನಾಂಗದವರು ,ಚೆಂಬುವಿನಲ್ಲಿ ಉಳಿಸಿಕೊಂಡು ಬಂದಿದ್ದಾರೆ.
– ಸಂಗೀತಾ ರವಿರಾಜ್