*ರಂಗಾಯಣದಿಂದ 3 ದಿನಗಳ ‘ನಾಟಕ ಅವಲೋಕನ ಕಾರ್ಯಾಗಾರ’*
ಹೊಸ ತಲೆಮಾರಿನ ಯುವಕರು ನಾಟಕ ಪ್ರದರ್ಶನಗಳನ್ನು ಆಸ್ವಾದಿಸಿ, ಆ ಪ್ರದರ್ಶನಗಳ ಬಗ್ಗೆ ವಿಶ್ಲೇಷಿಸಿ, ಅದರ ಒಳನೋಟಗಳನ್ನು ಅಕ್ಷರ ರೂಪದಲ್ಲಿ, ವೀಡಿಯೋ ರೂಪದಲ್ಲಿ ವಿಶ್ಲೇಷಿಸುವ ದಿಸೆಯಲ್ಲಿ ಕಾಲೇಜುಗಳಲ್ಲಿ ಓದುತ್ತಿರುವ ಸೃಜನಶೀಲ ಬರಹಗಾರರನ್ನು ಗುರುತಿಸಿ ಅವರಿಗೆ ನಾಟಕ ವಿಶ್ಲೇಷಣೆ ತಿಳಿಸಿಕೊಡಲು ರಂಗಾಯಣವು ‘ನಾಟಕ ಅವಲೋಕನ ಕಾರ್ಯಾಗಾರ’ ಹಮ್ಮಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಡಿ ಸಾಗರ ತಿಳಿಸಿದರು.
ನಾಟಕ ಅವಲೋಕನ ಕಾರ್ಯಾಗಾರ ಕುರಿತು ಮಾಹಿತಿ ನೀಡಲು ರಂಗಾಯಣದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಹೊಸ ಪ್ರೇಕ್ಷಕರು ರಂಗಭೂಮಿಯೆಡೆಗೆ ಬರುವುದೇ ವಿರಳವಾಗಿರುವ ಈ ಸಂದರ್ಭದಲ್ಲಿ ನಾಟಕ ಪ್ರದರ್ಶನಗಳನ್ನು ಹೊಸ ತಲೆಮಾರಿಗೆ, ಹೊಸ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದರು.
ಯುವಕರ ಬರವಣಿಗೆಗಳಿಗೆ ಇನ್ನೂ ಹೆಚ್ಚು ಬಲ ಕೊಡುವುದೇ ಈ ಕಾರ್ಯಾಗಾರದ ಉದ್ದೇಶ. ಆ ಕಾರಣದಿಂದಾಗಿ ಅಕ್ಟೋಬರ್ 24, 25 ಮತ್ತು 26 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿವಮೊಗ್ಗದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ನಾಟಕ ಅವಲೋಕನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಕರ್ನಾಟಕದ ರಂಗಭೂಮಿಯಲ್ಲಿ ನುರಿತ ರಂಗಕರ್ಮಿಗಳು, ರಂಗ ವಿಮರ್ಶಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು ನಾಟಕ ಓದು, ನಾಟಕ ನೋಡುವ ಕ್ರಮ, ರಂಗನೋಟ, ನಾಟ್ಯಧರ್ಮಿ, ರಂಗ ಅವಲೋಕನ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
ಕಾರ್ಯಾಗಾರವನ್ನು ಅ.24 ರ ಬೆಳಿಗ್ಗೆ 10 ಗಂಟೆಗೆ ಹಿರಿಯ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ ವಹಿಸುವರು. ಅತಿಥಿಗಳಾಗಿ ರಂಗಕರ್ಮಿಗಳು ಹಾಗೂ ಕಲಾವಿದರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೊಟ್ರಪ್ಪ ಹಿರೇಮಾಗಡಿ ಆಗಮಿಸುವರು.
ಅ.26 ರಂದು ಸಂಜೆ 5.30 ಕ್ಕೆ ಸಮಾರೋಪ ಸಮಾರಂಭವಿದ್ದು ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಸಮಾರೋಪ ನುಡಿಗಳನ್ನಾಡಲಿದ್ದು ಅಧ್ಯಕ್ಷತೆಯನ್ನು ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ ವಹಿಸುವರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮಗಳಲ್ಲಿ ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ, ನಾಟಕ ಅವಲೋಕನ ಕಾರ್ಯಾಗಾರದ ನಿರ್ದೇಶಕರು ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ.ಮೇಟಿ ಮಲ್ಲಿಕಾರ್ಜುನ, ಕಾರ್ಯಾಗಾರದ ಸಂಚಾಲಕರು ಹಾಗೂ ಸಹ್ಯಾದ್ರಿ ಕಲಾ ತಂಡದ ಮುಖ್ಯಸ್ಥರಾದ ಡಾ.ಲವ ಜಿ ಆರ್ ಪಾಲ್ಗೊಳ್ಳುವರು.
ವಿಚಾರ ಮಂಡನೆ ಮತ್ತು ಸಂವಾದ : ದಿ: 24-10-2024 ರಂದು ಬೆಳಿಗ್ಗೆ 11 ರಿಂದ ‘ನಾಟಕದ ಪ್ರವೇಶ ಮತ್ತು ಸಂವಿಧಾನ’ ವಿಚಾರ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ರಂಗನಿರ್ದೇಶಕ, ನಾಟಕಗಾರರಾದ ನಟರಾಜ್ ಹೊನ್ನವಳ್ಳಿ ಪಾಲ್ಗೊಳ್ಳುವರು. 12.30 ರಿಂದ 1 ಗಂಟೆವರೆಗೆ ಶಿಬಿರಾರ್ಥಿಗಳೊಂದಿಗೆ ಸಂವಾದ. ಮಧ್ಯಾಹ್ನ 2 ರಿಂದ 3.30 ರವರೆಗೆ ‘ರಂಗ ಪಠ್ಯಗಳ ವಿಶ್ಲೇಷಣೆ ಹಾಗೂ ವಿಸ್ತರಣೆ’ ಕುರಿತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾಹಕ ಕಾಲೇಜಿನ ಪ್ರೊ.ಟಿ.ಅವಿನಾಶ್ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸುವರು. ಮಧ್ಯಾಹ್ನ 3.45 ರಿಂದ ಸಂಜೆ 6 ಗಂಟೆವರೆಗೆ ಗುಣಮುಖ ನಾಟಕ ಪ್ರದರ್ಶನ ಮತ್ತು ಸಂವಾದವನ್ನು ಪ್ರೊ.ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು.
ದಿ: 25-10-2024 ರಂದು ಬೆಳಿಗ್ಗೆ 10 ರಿಂದ 10.30 ಗುಣಮುಖ ನಾಟಕದ ಕುರಿತು ಮಾತುಕತೆ. 10.40 ರಿಂದ 12.15ರವರೆಗೆ ಬರಹಗಾರ್ತಿ ಹಾಗೂ ಪತ್ರಕರ್ತರಾದ ಪ್ರೀತಿ ನಾಗರಾಜ್‌ರಿಂದ ನಾಟಕ ವಿಶ್ಲೇಷಣೆ ಹಾಗೂ ವಿಮರ್ಶಾತ್ಮಕ ನೋಟ, ಮಧ್ಯಾಹ್ನ 2 ರಿಂದ 3.30 ರವರೆಗೆ ಹಿರಿಯ ರಂಗಕರ್ಮಿ ಹಾಗೂ ರಂಗಾಯನ ಶಿವಮೊಗ್ಗದ ಮಾಜಿ ನಿರ್ದೇಶಕ ಇಕ್ಬಾಲ್‌ರಿಂದ ನಾಟಕದ ಕಟ್ಟುವಿಕೆಯಲ್ಲಿ ನಿರ್ದೇಶಕ ಹಾಗೂ ನೇಪಥ್ಯ ಕುರಿತು ವಿಷಯ ಮಂಡನೆ. 3.45 ರಿಂದ ಸಂಜೆ 6 ಗಂಟೆವರೆಗೆ ಅಗ್ನಿ ಮತ್ತು ಮಳೆ ನಾಟಕ ಪ್ರದರ್ಶನ ಕುರಿತು ಸಂವಾದ ಇರಲಿದೆ.
ದಿ: 26-10-2024 ಬೆಳಿಗ್ಗೆ 10.45 ರಿಂದ ಮಧ್ಯಾಹ್ನ 12.15 ರವರೆಗೆ ನಾಟಕದ ವಿಶ್ಲೇಷಣೆಯಲ್ಲಿ ಬಹು ಮಾಧ್ಯಮಕಗಳ ಬಳಕೆ ಕುರಿತು ಬೆಂಗಳೂರಿನ ವರ್ಡ್ವೈಸ್ ಲಾಂಗ್ವೇಜ್ ಲ್ಯಾಬ್ಸ್ನ ಸಿಇಓ ಅವಿನಾಶ್ ಹೆಗ್ಗೋಡು ವಿಚಾರ ಮಂಡನೆ. ಮಧ್ಯಾಹ್ನ 2 ರಿಂದ 3.30 ರವರೆಗೆ ನಾಟಕದ ವಿಷಯ ವಸ್ತುವಿನ ಗ್ರಹಿಕೆ ಕುರಿತು ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ವೆಂಕಟರಮಣ ವಿಚಾರ ಮಂಡಿಸುವರು. ಈ ಎಲ್ಲ ಕಾರ್ಯಕ್ರಮಗಳನ್ನು ಪ್ರೊ.ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಟಕ ಅವಲೋಕನ ಕಾರ್ಯಾಗಾರ ಕುರಿತಾದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಪತ್ರಿಕಾಗೋಷ್ಟಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ , ಡಾ.ಲವ ಜಿ ಆರ್ ಉಪಸ್ಥಿತರಿದ್ದರು.