ಮತ್ತೂರಿನ ಭಾನುಪ್ರಕಾಶರೂ ಆಝಾದ್ ನಗರದ ನಾನೂ…*

*ಮತ್ತೂರಿನ ಭಾನುಪ್ರಕಾಶರೂ ಆಝಾದ್ ನಗರದ ನಾನೂ…*

ಬಹಳ ಚೆಂದ ಬರೀತೀರಿ ಪಾಶಾಜೀ…
ಹಾಗಂತ ಸಾವಿರ ಸಾವಿರ ಸಲ ಸಿಕ್ಕಾಗಲೂ ಮೊದಲು ಹೇಳುತ್ತಿದ್ದ ಮಾತು. ಅವರು ಮತ್ತೂರಿನ ಅಪ್ಪಟ ಬ್ರಾಹ್ಮಣರು. ನಾನೋ ಅಪ್ಪಟ ಸಾಬರ ಬೀದಿಯ ಹುಡುಗ. ಮತ್ತೂರೆಂಬ ಸಂಸ್ಕೃತದ ಗ್ರಾಮವೆಲ್ಲಿ- ಕ್ಲರ್ಕ್ ಪೇಟೆ ಆಝಾದ್ ನಗರ ಎಂಬ ಮುಸ್ಲೀಮರ ಏರಿಯಾ ಎಲ್ಲಿ…ಕೋಗಿಲೆ ಮತ್ತು ಮಾಮರದ ಸಂಬಂಧ ಅವರದು ನನ್ನದು.

ನನ್ನ ಬರವಣಿಗೆಯ ಅಭಿಮಾನಿ ಅವರು- ಬಲಪಂಥೀಯರಾದರೂ ಅವರ ಸ್ವಚ್ಛ ರಾಜಕಾರಣದ ಅಭಿಮಾನಿ ನಾನು. ಒಮ್ಮೆ ಅವರ ಜೀವನದ ಮುಖ್ಯಾಂಶಗಳನ್ನು ಹೆಕ್ಕಿ ಬರೆಯಬೇಕೆಂಬ ಮುಂಬೈ ಡಾಕ್ಯುಮೆಂಟರಿ ಅಕಾಡೆಮಿಯಿಂದ ಕರೆ ಬಂತು. ನನಗೋ ಅಚ್ಚರಿ; ಆ ಅಕಾಡೆಮಿ ಬಲದ ಕಡೆಯದಿರಬಹುದೋ ಎಂಬ ಅನುಮಾನ ಬೇರೆ. ಕೆದಕಿದಾಗ ಗೊತ್ತಾಯ್ತು- ಅದು ರಾಜಕಾರಣದ ಸ್ವಚ್ಛ ಹಕ್ಕಿಗಳನ್ನು ಹುಡುಕಿ ಬೆಳಕಿಗೆ ತರುವ ಕೆಲಸ ಮಾಡುತ್ತಿದೆ ಎಂದು. ಆ ಕೆಲಸ ಒಪ್ಪಿ ಎಂ.ಬಿ.ಭಾನುಪ್ರಕಾಶ್ ರವರಿಗೊಂದು ಪತ್ರ ಬರೆದೆ. ಯಾಕೋ ಉತ್ತರ ಬರಲಿಲ್ಲ.ಸೀದಾ ಅವರಿಗೆ ಫೋನ್ ಮಾಡಿ ಮಾತಾಡಿದೆ; ಏ, ಅದೆಲ್ಲ ಬೇಡ ಪಾಶಾಜೀ…ನನಗಿಂತ ಬಹಳ ಸೇವೆ ಮಾಡಿದವರೆಲ್ಲ ಇದಾರೆ ಅಂತ ತಳ್ಳಿ ಹಾಕಿದರು. ಆ ಅಕಾಡೆಮಿಗೆ ಅವರದೇ ಮಾತುಗಳನ್ನು ಅರುಹಿ ನಾನೂ ಸುಮ್ಮನಾದೆ.

ಪತ್ರಕರ್ತನಾಗಿರುವುದರಿಂದ ಅವರ ಭೇಟಿ ಆಗಾಗ್ಗೆ. ಪಾಶಾಜೀ ಅಂತ ತುಂಬು ಹೃದಯದಿಂದ ಮಾತಾಡಲಾರಂಭಿಸುತ್ತಿದ್ದ ಭಾನುಪ್ರಕಾಶ್ ರವರ ಜೊತೆ ರಾಜಕಾರಣದ ಚರ್ಚೆ ಮಾಡುವುದೆಂದರೆ ಭಿನ್ನ ಅನುಭವ. ಸಂಘ, ಪಕ್ಷದ ಆಚೆ ನಿಂತು ಅವರು ರಾಜಕಾರಣವನ್ನು ವಿಶ್ಲೇಷಿಸುತ್ತಿದ್ದರು. ಅದರಾಚೆಯ ಭವಿಷ್ಯ ಹುಡುಕುತ್ತಿದ್ದರು. ಅವರ ಬಹಳಷ್ಟು ಮಾರ್ಮಿಕ ಎನಿಸುವ ಮಾತುಗಳು ಕಣ್ಣ ಮುಂದೆಯೇ ಸತ್ಯದ ಕನ್ನಡಿ ಹಿಡಿದು ಓಡಾಡಿವೆ…ಮೊನ್ನೆ ಮೊನ್ನೆಯವರೆಗೂ…

ಸ್ವಚ್ಛ ಬೆಳಕಿನ ಬಿಳಿ ಜುಬ್ಬಾ, ಪಂಚೆಯ ಈ ಮನುಷ್ಯ ನನ್ನಂಥವರಲ್ಲಿ ಬೆಳಕು ಸೂಸುವ ಮಿಂಚು ಹುಳದಂತಿದ್ದರು. ಫಳಕ್ ಅಂತ ಹೊಳೆಯುವ ಅವರ ಮಾತಿನ ಬೆಳಕು ಅಚ್ಚರಿ ಮೂಡಿಸುತ್ತಿತ್ತು.

ಮತ್ತೂರೆಂದರೆ ಬರೀ ಸಂಸ್ಕೃತವಲ್ಲ…ಅಲ್ಲಿ ಮತ್ತೇರಿಸುವ ವೈಚಾರಿಕ ರಾಜಕಾರಣವಿತ್ತು. ಅದು ಈಗ ಇಲ್ಲವಾಗಿದೆ…ಅವರ ಸಾವು ಕೂಡ ಮಿಂಚು ಹುಳದ ಬೆಳಕಂತೆ ಆಕಸ್ಮಿಕ…

ಬಿಜೆಪಿಯ ಬಾನಿನಲ್ಲಿ ಪ್ರಕಾಶಿಸುತ್ತಿದ್ದ ಎಂ.ಬಿ.ಭಾನು ಪ್ರಕಾಶ್ ಎಂಬ ಹಿರಿ ಜೀವ ಈಗ ಇನ್ನಿಲ್ಲವಾಗಿದೆ. ಅವರ ನಗು, ಮಾತು ಅಂತಿಮ ಕ್ಷಣಗಳವರೆಗೂ ನನ್ನೊಳಗಿರುತ್ವೆ…

ಬೇಸರವಾಗುತ್ತೆ…ನೀವಿಲ್ಲದ ಈ ಜಗತ್ತು…

ಹೋಗಿ ಬನ್ನಿ…

– *ಶಿ.ಜು.ಪಾಶ*
ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ
8050112067