ಎನ್.ಜೆ.ರಾಜಶೇಖರ್ @ ಸುಭಾಷಣ್ಣನ ನೆನೆದು…ಸರ್ವ ಜನಾಂಗದ ಶಾಂತಿಯ ತೋಟದಂತಿದ್ದರು…ಸ್ಥಾವರ ಬಿಟ್ಟು ಅನಂತ ಬಯಲಾದರು…
ಎನ್.ಜೆ.ರಾಜಶೇಖರ್ @ ಸುಭಾಷಣ್ಣನ ನೆನೆದು…
ಸರ್ವ ಜನಾಂಗದ ಶಾಂತಿಯ ತೋಟದಂತಿದ್ದರು…
ಸ್ಥಾವರ ಬಿಟ್ಟು ಅನಂತ ಬಯಲಾದರು…
ಅಕ್ಟೋಬರ್ 16…
ಅವರು ನಾನು ನಿತ್ಯ ಬರೆಯುವ ಕವಿಸಾಲು ನೋಡಿದ್ದೇ ಕೊನೆ. ಯಾಕೋ ಅವರ ಮೊಬೈಲಿಗೆ ತಾಕಿ ಸುಂದರವಾದ ಅಭಿಪ್ರಾಯವೊಂದನ್ನು ಮರಳಿ ಪಡೆಯುತ್ತಿದ್ದ ಅವರ ಪ್ರೀತಿಯ ಕವಿಸಾಲುಗಳು ಅವತ್ತಿಂದಲೇ ಸಪ್ಪೆ ಸಪ್ಪೆಯಾದವು ನನ್ನ ಪಾಲಿಗೆ.
ಪ್ರತಿನಿತ್ಯ ಶಿವಮೊಗ್ಗದ ಪ್ರವಾಸಿ ಮಂದಿರದ ವಾಕಿಂಗ್ ಜಾಗದಲ್ಲಿ ಗುಂಪಿನಲ್ಲಿ ಟಕ ಟಕಾ ವಾಕು ಮಾಡಿಕೊಂಡಿದ್ದನ್ನು ವರ್ಷಾನುಗಟ್ಟಲೆ ದಿನ ನಾನು ಕಂಡಿದ್ದೇನೆ. ಹೀಗೆ, ವಾಕ್ ಹೋಗುವಾಗ, ಬರುವಾಗ ಅಲ್ಲಲ್ಲಿ ಸಿಗುತ್ತಿದ್ದ ನನಗೆ ಪತ್ರಿಕೆ, ಬರಹಗಳ ಬಗ್ಗೆ ಚರ್ಚಿಸಿ, ಅದನ್ನ ಬರಿಯೋ ಇದನ್ನ ಬರಿಯೋ ಅಂತ ವಿಷಯ ಕೊಡುತ್ತಿದ್ದ ಸುಭಾಷಣ್ಣ @ ಎನ್.ಜೆ.ರಾಜಶೇಖರ್ ಎಂಬ ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರೂ ಕಾರ್ಪೊರೇಟರೂ ಆಗಿದ್ದವರು. ಶಾಸಕರಾಗುವ ಕನಸನ್ನು ಕಂಡು ರಾಜಕೀಯ ವಿಪ್ಲವಗಳಿಂದಾಗಿ ವಂಚಿತರೂ ಆದವರು.
ವೀರಶೈವ ಸಮಾಜದವರಾದರೂ ದಲಿತರು, ಮುಸ್ಲೀಮರು ಎನ್ನದೇ ಪ್ರೀತಿ ತೋರುತ್ತಿದ್ದವರು. ಅಷ್ಟೇ ಪ್ರೀತಿಯನ್ನು ಸರ್ವ ಜನಾಂಗದಿಂದಲೂ ಪಡೆದವರು. ಹಾಗಾಗಿ, ಅವರ ಕೊನೆಯ ಪಯಣದಲ್ಲಿ ಕುಂತವರೆಲ್ಲ ನಿಂತು ಕ್ಷಣ ಮೌನಾಚರಣೆ ಮಾಡಿದರು. ದಾರಿಯಲ್ಲೇ ತೊಟ್ಟು ಕಣ್ಣೀರೂ ಸುರಿಸಿದರು.
ಆರೋಗ್ಯ ಕೈಕೊಟ್ಟಿದ್ದರಿಂದ ಕೃಶರಾಗುತ್ತಾ ಹೋಗಿದ್ದ ಸುಭಾಷಣ್ಣ ವ್ಯಕ್ತಿತ್ವದ ವಿಚಾರದಲ್ಲಿ ಪಕ್ವತೆ ಕಾಪಾಡಿಕೊಂಡಿದ್ದರು.ಮುಚ್ಚಿದ ಕೈ ದಾನಿಗಳೂ ಆಗಿದ್ದ ಸುಭಾಷಣ್ಣ, ನಾನು ಮೆಸೇಜು ಹಾಕುತ್ತಿದ್ದ ಅಶಕ್ತರ ವಿವರಕ್ಕೆ ಕೂಡಲೇ ಸ್ಪಂದಿಸಿ ಅವರ ಸಹಾಯಕ್ಕೆ ನಿಲ್ಲುತ್ತಿದ್ದರು. ಅಂಥ ಅದೆಷ್ಟೋ ಸಹಾಯ ಮಾಡಿ ಪ್ರಚಾರದಿಂದ ದೂರವೇ ಉಳಿಯುತ್ತಿದ್ದರು.ಕೋವಿಡ್ ಸಂದರ್ಭದಲ್ಲಿಯೂ ಅವರು ಮಾಡಿದ ಸೇವೆ ನಮ್ಮ ಜನ ಮರೆಯಬಾರದು.
ಸುಭಾಷಣ್ಣ ಶಿವಮೊಗ್ಗದ ಸ್ಥಳೀಯ ಪತ್ರಕರ್ತರ ಪಾಲಿನ ಡಾರ್ಲಿಂಗ್ ಕೂಡ ಆಗಿದ್ದರು. ಅವರನ್ನು, ಅವರ ಆಡಳಿತದ ಸಂದರ್ಭದಲ್ಲೂ ಟೀಕಿಸಿ ಬಂದ ಒಂದೇ ಒಂದು ವರದಿ ಕಾಣಸಿಗುವುದಿಲ್ಲ. ಕಷ್ಟಕಾಲದ ಪತ್ರಿಕೆಗಳಿಗೆ, ಪತ್ರಕರ್ತರಿಗೆ ಸಣ್ಣ ಸಹಾಯ ಮಾಡಿಯಾದರೂ ಧೈರ್ಯ ತುಂಬುತ್ತಿದ್ದ ವ್ಯಕ್ತಿತ್ವ.
ಅವರು ಬಿಜೆಪಿಯಲ್ಲಿದ್ದರಷ್ಟೇ. ಅವರು ಪಕ್ಷಾತೀತ ವ್ಯಕ್ತಿಯಾಗಿಯೇ ಕಾಣಿಸಿಕೊಂಡವರು. ಯಾವ ಪಕ್ಷವಾದರೇನು? ಮಾನವೀಯತೆ ಮುಖ್ಯ ಎಂದೇ ಉಚ್ಛರಿಸುತ್ತಿದ್ದ ಶರಣೋತ್ತಮ.
ತಮ್ಮ ತೋಟಕ್ಕೆ ಜೀಪಿನಲ್ಲಿಯೇ ಹೆಚ್ಚು ಓಡಾಡುತ್ತಿದ್ದ ಅವರಿಗೆ ಅದೇ ಜೀಪು ಬಹಳ ಇಷ್ಟವೇನೋ…ಈಗ ಅದೇ ತೋಟಕ್ಕೆ ಮತ್ತೊಂದು ವಾಹನದಲ್ಲಿ ಕೊನೆ ಪಯಣ ಮಾಡಿದ್ದಾರೆ… ಆ ತೋಟದಲ್ಲಿಯೇ ಅವರು ಲೀನವಾಗಿದ್ದಾರೆ.
ನಮ್ಮ ಸುಭಾಷಣ್ಣ ಸ್ಥಾವರದಿಂದ ಅನಿಕೇತನದ ಕಡೆ ಸಾಗಿದ್ದಾರೆ…ಮಣ್ಣೊಳಗೆ ಒಂದಾಗಿ ಬಯಲಾಗಿದ್ದಾರೆ…
– *ಶಿ.ಜು.ಪಾಶ*
8050112067