ಭಾರತೀಯ ದಂತ ವೈದ್ಯರ ಕ್ರಿಕೆಟ್ ಪಂದ್ಯಾವಳಿ ಅವಾಂತರ**ಟೂರ್ನಮೆಂಟ್ ಹೆಸರಲ್ಲಿ ಆದ ಎತ್ತುವಳಿ ಎಷ್ಟು? ಯಾರ ಯಾರ ಹೆಸರಿಗೆ ಹೋಯ್ತು ದೇಣಿಗೆ ಹಣ?**ಕಾಸ್ಮೋ ಕ್ಲಬ್ಬಲ್ಲಿ ಭರ್ಜರಿ ಪಾರ್ಟಿ* *ಸವಿ ಬೇಕರಿ ಬಳಿ ಭೀಕರ ಅಪಘಾತ*
*ಭಾರತೀಯ ದಂತ ವೈದ್ಯರ ಕ್ರಿಕೆಟ್ ಪಂದ್ಯಾವಳಿ ಅವಾಂತರ*
*ಟೂರ್ನಮೆಂಟ್ ಹೆಸರಲ್ಲಿ ಆದ ಎತ್ತುವಳಿ ಎಷ್ಟು? ಯಾರ ಯಾರ ಹೆಸರಿಗೆ ಹೋಯ್ತು ದೇಣಿಗೆ ಹಣ?*
*ಕಾಸ್ಮೋ ಕ್ಲಬ್ಬಲ್ಲಿ ಭರ್ಜರಿ ಪಾರ್ಟಿ*
*ಸವಿ ಬೇಕರಿ ಬಳಿ ಭೀಕರ ಅಪಘಾತ*
ಭಾರತೀಯ ದಂತ ವೈದ್ಯಕೀಯ ಸಂಘ @ ಇಂಡಿಯನ್ ಡೆಂಟಲ್ ಅಸೋಸಿಯೇಷನ್ @ ಐ ಡಿ ಎ ಈಗ ಸಾಕಷ್ಟು ವಿವಾದದ ಕೇಂದ್ರ ಬಿಂದುವಾಗಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಐಡಿಎ ಇದೀಗ ಕ್ರಿಕೆಟ್ ಪಂದ್ಯಾವಳಿಯ ನೆಪದಲ್ಲಿ ಧಗ್ಗನೆ ಬೆಂಕಿಯ ರೂಪತಾಳಿ ಥಕಥೈ ಕುಣಿಸತೊಡಗಿದೆ!
ಶಿವಮೊಗ್ಗ ಜಿಲ್ಲೆಯಲ್ಲಿಯೇ 180ಕ್ಕೂ ಹೆಚ್ಚಿನ ಸದಸ್ಯರನ್ನೊಳಗೊಂಡ ಈ ದಂತ ವೈದ್ಯಕೀಯ ಸಂಘ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನೊಳಗೊಂಡಿದೆ. ಆದರೂ, ಇಂಥ ಸಂಘದ ವಿರುದ್ಧ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
ನವೆಂಬರ್ 9 ಮತ್ತು 10 ರಂದು ಈ ಕ್ರಿಕೇಟ್ ಪಂದ್ಯಾವಳಿಯನ್ನು ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್ ಹೆಸರಲ್ಲಿ ಶಿವಮೊಗ್ಗದ ಜೆಎನ್ ಎನ್ ಸಿ ಇ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯ ನೆಪದಲ್ಲಿ ಫಾರ್ಮಾಸ್ಯೂಟಿಕಲ್ ಕಂಪನಿಗಳಿಂದ ಲಕ್ಷಾಂತರ ರೂ.,ಗಳನ್ನು ಚಂದಾ ರೂಪದಲ್ಲಿ ಪಡೆಯಲಾಗಿದೆ. ಚಂದಾ ರೂಪದಲ್ಲಿ ಹಣ ಪಡೆಯುವುದು ಸಾಮಾನ್ಯ- ಆದರಿಲ್ಲಿ, ಕ್ರಿಕೇಟ್ ಆರ್ಗನೈಸಿಂಗ್ ಕಮಿಟಿ ಹೆಸರಲ್ಲಿ, ವಿವಿಧ ವೈದ್ಯರುಗಳ ಖಾಸಗಿ ಅಕೌಂಟುಗಳಲ್ಲಿ ಈ ಚಂದಾ ಹಣ ಹಾಕಿಸಿಕೊಳ್ಳಲಾಗಿದೆ ಎಂಬುದು ಪ್ರಮುಖ ದೂರು.
ದಂತವೈದ್ಯರ ಸಂಘ ಫಾರ್ಮಾಸ್ಯೂಟಿಕಲ್ ಕಂಪನಿಗಳಿಂದ ಆರೋಗ್ಯ, ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳಿಗೆ ಮಾತ್ರ ದೇಣಿಗೆ ಪಡೆದು ಉಪಯೋಗಿಸಬಹುದು. ಈ ಥರದ ಆಟಗಳಿಗೆಲ್ಲ ಕಂಪನಿಗಳಿಂದ ಹಣ ವಸೂಲು ಮಾಡಿದರೆ ವೈದ್ಯರನ್ನು ನಂಬುವ ಜನರಿಗೆ ಮೋಸ ಮಾಡಿದಂತೆ. ದೇಣಿಗೆ ನೀಡುವ ಕಂಪನಿಗಳ ಔಷಧಿಯನ್ನೇ ಜನರಿಗೆ ಈ ವೈದ್ಯರು ಬರೆದುಕೊಡುವ ಪ್ರಭಾವಕ್ಕೊಳಗಾಗುವ ಸಾಧ್ಯತೆಯಿರುತ್ತೆ ಎಂದು ಕೆಲ ಪ್ರಮುಖ ದಂತ ವೈದ್ಯರ ಕಾಳಜಿಯುತ ಮಾತು.
ಡಾ.ಮಂಜುನಾಥ್, ಡಾ.ವೀರಭದ್ರ, ಡಾ. ವಿಶ್ವಾಸ್, ಡಾ.ವಿಜಯಾನಂದರವರ ಖಾಸಗಿ ಅಕೌಂಟ್ ಗಳಿಗೂ ದೇಣಿಗೆ ಹಣ ಬಿದ್ದಿದೆ ಎಂಬ ಆರೋಪ ಕೆಲವರದು. ಇಂಥ ಆರೋಪಗಳಿದ್ದರೂ ಈ ವೈದ್ಯರು ಯಾರೂ ಸ್ಪಷ್ಟೀಕರಣ ನೀಡದೇ ಮೌನ ವಹಿಸಿರುವುದು ಅನುಮಾನಕ್ಕೆಡೆ ಮಾಡಿಕೊಡುತ್ತೆ. ಸುಮಾರು 18 ಲಕ್ಷಕ್ಕೂ ಹೆಚ್ಚಿನ ಹಣ ಪಂದ್ಯಾವಳಿಗೆ ದೇಣಿಗೆಯಾಗಿ ಪಡೆದಿದ್ದು, ಅದು ಅವ್ಯವಹಾರದ ಮೂಸೆಯಲ್ಲಿದೆ. ಹತ್ತು ಹಲವು ಅನುಮಾನಗಳನ್ನು ಸ್ವತಃ ದಂತವೈದ್ಯರೇ ಸಂಘದ ಮತ್ತು ಸಾಮಾಜಿಕ ವ್ಯಾಟ್ಸಪ್ ಗ್ರೂಪುಗಳಲ್ಲಿ ಅನುಮಾನಗಳನ್ನು ವ್ಯಕ್ತಪಡಿಸುತ್ತರುವುದನ್ನು ಕೇಳಿಸಿಕೊಂಡರೂ, ನೋಡಿದರೂ ಸಂಘದ ರಾಜ್ಯಾಧ್ಯಕ್ಷ ಡಾ. ಭರತ್ ರವರು ಕೂಡ ತುಟಿ ಪಿಟಿಕ್ ಅಂತಿಲ್ಲ!
ಹೀಗೆ, ಧ್ವನಿ ಎತ್ತುವವರ ವಿರುದ್ಧವೇ ಅಸೋಸಿಯೇಷನ್ ಮುಗಿಬೀಳುತ್ತಿದೆ ಎಂಬ ಆರೋಗಳೂ ಇವೆ.
*ಕಾಸ್ಮೋ ಕ್ಲಬ್ಬಲ್ಲಿ ಭರ್ಜರಿ ಪಾರ್ಟಿ*
*ಸವಿ ಬೇಕರಿ ಬಳಿ ಭೀಕರ ಅಪಘಾತ*
ಕ್ರಿಕೆಟ್ ಪಂದ್ಯಾವಳಿ ಪ್ರಯುಕ್ತ ಕೇವಲ ಫಾರ್ಮಾಸ್ಯೂಟಿಕಲ್ ಕಂಪನಿಗಳಿಂದ ಮಾತ್ರ ದೇಣಿಗೆ ಸ್ವೀಕರಿಸಲಾಗಿಲ್ಲ; ವೈದ್ಯರಿಂದಲೂ ಹಣ ಪಡೆಯಲಾಗಿದೆ. ಕಾಸ್ಮೋ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಎಣ್ಣೆ ಪಾರ್ಟಿಯಲ್ಲಿ ದೇಣಿಗೆ ಪಡೆದ ಫಾರ್ಮಾಸ್ಯೂಟಿಕಲ್ ಕಂಪನಿಗಳ ಪ್ರಚಾರಕ್ಕೂ ಅವಕಾಶ ಮಾಡಿಕೊಟ್ಟು ಬಹಳಷ್ಟು ಅನುಮಾನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎಣ್ಣೆ ಹೊಡೆದ ನಶೆಯಲ್ಲಿ ಈ ದಂತ ವೈದ್ಯರು ಔಷಧಿ ಕಂಪನಿಗಳ ಪ್ರಚಾರಕ್ಕೆ ಬಹಿರಂಗವಾಗಿಯೇ ಇಳಿದಿರುವುದು ದುರಂತದ ಪರಮಾವಧಿಯೇ ಸೈ.
ಈ ಎಣ್ಣೆ ಪಾರ್ಟಿ ಅಥವಾ ಸಂತೋಷ ಕೂಟವನ್ನು ಔಷಧ ಕಂಪನಿಗಳೇ ಆಯೋಜಿಸಿದ್ದವೋ ಅಥವಾ ಸಂಘದವರೇ ಹಮ್ಮಿಕೊಂಡಿದ್ದರೋ ಅಥವಾ ವೈದ್ಯರ ಹಣವನ್ನು ಸದಸ್ಯತ್ವದ ಹೊರತು ಪಡಿಸಿಯೂ ತಲಾ 5 ಸಾವಿರ ರೂ ವಸೂಲು ಮಾಡಿ ಹಮ್ಮಿಕೊಳ್ಳಲಾಗಿತ್ತೋ…ರಾಜ್ಯಾಧ್ಯಕ್ಷ ಡಾ.ಭರತ್ ಮತ್ತು ಶಿವಮೊಗ್ಗ ಜಿಲ್ಲಾಧ್ಯಕ್ಷ ಡಾ.ಸಾತ್ವಿಕ್ ಉತ್ತರಿಸಬೇಕಿದೆ.
ಸದಸ್ಯರಲ್ಲದವರಿಗೂ ಉಚಿತವಾಗಿ ಎಣ್ಣೆ- ತುಂಡು ಪಾರ್ಟಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸದಸ್ಯ ವೈದ್ಯರಿಗೆ 5000₹ ಪ್ರವೇಶ ಶುಲ್ಕ ಕೊಟ್ಟು ಬರಲು ಅಲಿಖಿತವಾಗಿ ಸೂಚಿಸಿ ಬಹಳಷ್ಟು ಜನ ಸದಸ್ಯರು ಬರದಂತೆ ತಡೆಹಿಡಿಯಲಾಗಿತ್ತು!
ನವೆಂಬರ್ 9 ರ ಶನಿವಾರದ ದಿನ ಈ ಎಣ್ಣೆ ಪಾರ್ಟಿ ನಡೆದಿದ್ದೇನೋ ನಿಜ…ಆದರೆ, ಸದಸ್ಯನಲ್ಲದ ಹೊಸ ವೈದ್ಯನೊಬ್ಬ ಕಂಠ ತುಂಬಾ ಕುಡಿದು ಮೈಮೇಲೆ ಎಚ್ಚರವಿಲ್ಲದಂತೆ ಓಡಿಸಿದ ಪರಿಣಾಮ ವಿನೋಬನಗರದ ಸವಿ ಬೇಕರಿ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅಮ್ಮ- ಮಗನಿಗೆ ಭೀಕರ ಅಪಘಾತವಾಗಿ ಹೋಯ್ತು.
ಈ ಅಪಘಾತ ಮಾಡಿದ ಹೊಸ ವೈದ್ಯನನ್ನು ಬಚಾಬ್ ಮಾಡಿಕೊಂಡು ಇದೇ ಡಾ.ಭರತ್ ಎಸ್ಕೇಪ್ ಆದರೆಂದೂ, ಇಡೀ ಪ್ರಕರಣ ಹಳ್ಳ ಹಿಡಿಯುವಂತೆ ಮಾಡಲಾಯಿತೆಂದೂ ವರದಿಗಳು ಬರುತ್ತಿವೆ.
ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡ ಉಮಾ ಮತ್ತು ಶ್ರೀನಿವಾಸ್ ಎಂಬ ಅಮ್ಮ- ಮಗನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಸಂಪೂರ್ಣ ವೆಚ್ಚ ಭರಿಸುವ, ಜೀವನಕ್ಕಾಧಾರವಾಗುವಂತೆ ನೋಡಿಕೊಳ್ಳುವ ಭರವಸೆಯನ್ನೂ ಕೊಟ್ಟು ಬಂದ ದಂತ ವೈದ್ಯರ ತಂಡ ಈಗ ಫುಲ್ ನಿಶ್ಯಬ್ಧ!
ಇಲ್ಲಿ ಬರೆಯಲಾಗಿರುವ ಬಹಳಷ್ಟು ಅಂಶಗಳ ವೀಡಿಯೋ, ಆಡಿಯೋ, ವೈರಲ್ ಮೆಸೇಜ್ ಗಳು ಪತ್ರಿಕೆಯ ಬಳಿ ಲಭ್ಯ ಇವೆ.
ಇದನ್ನೆಲ್ಲ ಮುಂದಿಟ್ಟುಕೊಂಡು ಸಾರ್ವಜನಿಕ ಅನುಕೂಲಕ್ಕಾಗಿ, ಅಸೋಸಿಯೇಷನ್ನಿನಲ್ಲಿರುವ ಸಮಾಜಮುಖಿ ದಂತ ವೈದ್ಯರ ಪರವಾಗಿ ಮಲೆನಾಡು ಎಕ್ಸ್ ಪ್ರೆಸ್ ಬಳಗ ನ್ಯಾಯಾಲಯದಲ್ಲಿ ದಾವೆ ಹೂಡಲಿದೆ…
ಅಂದಹಾಗೆ, ವೈದ್ಯ ವೇಷಧಾರಿಯ ವಿಪರೀತ ಕುಡಿತಕ್ಕೆ ಬಡತನದಲ್ಲಿರುವ ಉಮಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಮಗ ತೀವ್ರ ಸ್ವರೂಪದ ಗಾಯಗಳಿಂದ ನರಳುತ್ತಿದ್ದಾನೆ.
ಈ ಪಾಪಿ ದಂತ ವೈದ್ಯರಿಗೆ ಒಳ್ಳೇದಾಗುತ್ತಾ? ಆ ಬಡ ಜೀವಗಳ ಶಾಪ ತಟ್ಟದೇ ಇರುತ್ತಾ?
ಈ ಹೋರಾಟ ಅಪ್ರಯೋಜಕ ದಂತ ವೈದ್ಯರ ವಿರುದ್ಧ ನಿರಂತರವಾಗಿ ನಡೆಯಲಿದೆ…
– *ಶಿ.ಜು.ಪಾಶ*
8050112067