ಕವಿಸಾಲು
01
ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ- ಎನ್.ರಮೇಶ್
ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ- ಎನ್.ರಮೇಶ್
ಕಾಂಗ್ರೆಸ್ ನಾಯಕರ ವಿರುದ್ಧ ಕಂಡಲ್ಲಿ ಹೊಡೆಯುತ್ತಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸೋಣ. ಹೀಗೇ ಸುಮ್ಮನಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಆಗ್ರಹಿಸಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಜವಹರ್‌ಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕೆ.ಎಸ್.ಈಶ್ವರಪ್ಪನವರು ಪ್ರಚೋದನಕಾರಿ ಭಾಷಣ ಮಾಡುವುದನ್ನು ಇನ್ನು ಬಿಟ್ಟಂತೆ ಕಂಡುಬಂದಿಲ್ಲ. ಅವರ ರಾಜಕೀಯ ದ್ವೇಷದ ಮಾತುಗಳು ಈಗಾಗಲೇ ಜನಪ್ರಿಯವಾಗಿವೆ. ಹೊಡೆಯಿರಿ,ಕಡಿಯಿರಿ,ಬಡಿಯಿರಿ ಎಂಬುವುದೇ ಅವರ ಬಾಯಿಯಿಂದ ಬರುವ ಮಾತುಗಳಾಗಿವೆ. ಈಶ್ವರಪ್ಪ ಇನ್ನಾದರೂ ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು ಎಂದರು.
ಪ್ರತಿದಿನವು ಮುಸ್ಲಿಂ ಬಗ್ಗೆ ಮಾತನಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ, ಅದೇನೇ ಇರಲಿ ಇದುವರೆಗೂ ಮುಸ್ಲಿಂರ ಬಗ್ಗೆ ಮಾತನಾಡುತ್ತಿದ್ದ ಅವರು, ಈಗ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಹೊಡೆಯುತ್ತಾರೆ, ನಾವು ದಂಗೆ ಹೇಳುತ್ತೇವೆ ಎಂದು ಹೇಳುತ್ತಾರೆ, ಇವರ ವಿರುದ್ಧ ಪೋಲೀಸರು ಎಫ್.ಐ.ಆರ್. ದಾಖಲಿಸಿಕೊಳ್ಳಬೇಕು. ಇವರಿಗೆ ಬುದ್ಧಿ ಕಲಿಸದಿದ್ದರೆ ಮತ್ತಷ್ಟು ಮಾತನಾಡುತ್ತಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.