ಬಿ.ಎ.ರಮೇಶ್ ಹೆಗ್ಡೆ ಪತ್ರಿಕಾಗೋಷ್ಠಿ;**ಕೊಡಗಿನ ಬಾನೆ ಭೂಮಿ ಮಾದರಿಯಲ್ಲೇ ಮಲೆನಾಡಿನ ಸೊಪ್ಪಿನಬೆಟ್ಟ, ಕಾನೂ ಭೂಮಿ ಮಂಜೂರಾತಿಗೆ ಕರ್ನಾಟಕ ಸರ್ಕಾರದ ಕಂದಾಯ ಸಚಿವರಿಗೆ ಒತ್ತಾಯ*

*ಬಿ.ಎ.ರಮೇಶ್ ಹೆಗ್ಡೆ ಪತ್ರಿಕಾಗೋಷ್ಠಿ;*

*ಕೊಡಗಿನ ಬಾನೆ ಭೂಮಿ ಮಾದರಿಯಲ್ಲೇ ಮಲೆನಾಡಿನ ಸೊಪ್ಪಿನಬೆಟ್ಟ, ಕಾನೂ ಭೂಮಿ ಮಂಜೂರಾತಿಗೆ ಕರ್ನಾಟಕ ಸರ್ಕಾರದ ಕಂದಾಯ ಸಚಿವರಿಗೆ ಒತ್ತಾಯ*

ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ) ಕಾಯ್ದೆ 2011 ರ ರೀತ್ಯಾ ಕೊಡಗಿನ ಬಾನೆ ಭೂಮಿಗೆ ಕಂದಾಯ ನಿರ್ಧರಣೆ ಹಾಗೂ ಪೂರ್ಣ ಮಾಲೀಕತ್ವ ನೀಡುವ ಮಾದರಿಯಲ್ಲೇ ಮಲೆನಾಡಿನ ಸೊಪ್ಪಿನ ಬೆಟ್ಟ. ಕಾನೂ ಭೂಮಿಗಳ ಸಾಗುವಳಿದಾರರಿಗೆ ಮಾಲೀಕತ್ವ ನೀಡಲು ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರವರನ್ನು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಒತ್ತಾಯಪಡಿಸುತ್ತದೆ ಎಂದು ಬಿ.ಎ.ರಮೇಶ್ ಹೆಗ್ಡೆ ಹೇಳಿದರು.

ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
2011 ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಸೆಕ್ಷನ್ 2(20) ಹಾಗೂ ಸೆಕ್ಷನ್ 80 ಕ್ಕೆ ತಿದ್ದುಪಡಿಯನ್ನು ತಂದು ಕೊಡಗಿನ ಬಾನೆ ಭೂಮಿಗೆ ಕಂದಾಯ ನಿರ್ಧರಣೆಗೆ ಹಾಗೂ ಮಾಲೀಕತ್ವ ಮಂಜೂರು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ತಿದ್ದುಪಡಿಗೆ 2013 ರಲ್ಲಿ ರಾಷ್ಟ್ರಪತಿಗಳ ಅಂಕಿತ ದೊರಕಿದೆ ಎಂದರು.

ಕರ್ನಾಟಕ ಉಚ್ಚ ನ್ಯಾಯಾಲಯ ದಿನಾಂಕ:25.07.2024 ರಲ್ಲಿ ರಿಟ್ ಅರ್ಜಿ ಸಂಖ್ಯೆ: 55534/24 (ಬ್ರಿಗೇಡಿಯರ್ ಮಲ್ಲತ್ತೀರ ಎ. ದೇವಯ್ಯ ಹಾಗೂ ಇತರರ ವಿರುದ್ಧ ಕರ್ನಾಟಕ ಸರ್ಕಾರ) ಪ್ರಕರಣದಲ್ಲಿ ಮೇಲ್ಕಂಡ 2011 ರ ಬಾನೆ ಭೂಮಿ ತಿದ್ದುಪಡಿಯು ಸಂವಿಧಾನಾತ್ಮಕವಾಗಿದೆ ಎಂದು ಆದೇಶಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಸೆಕ್ಷನ್ 79(2) ರ ರೀತ್ಯಾ ಕೊಡಗಿನ ಬಾನೆ, ಸೊಪ್ಪಿನ ಬೆಟ್ಟ, ಕಾನೂ, ಬೆಟ್ಟ ಹಾಗೂ ಇನ್ನಿತರ ಭೂಮಿಗಳು ವಿಶೇಷ ಹಕ್ಕುಳ್ಳ ಭೂಮಿಗಳ ವರ್ಗಕ್ಕೆ ಸೇರಿದ್ದಾಗಿದ್ದು, ಬಾನೆ ಜಮೀನು ಮಾಲೀಕತ್ವಕ್ಕೆ ತಿದ್ದುಪಡಿ ಕಾನೂನು ಮಾದರೀಯಲ್ಲೇ ಅದೇ ವರ್ಗಕ್ಕೆ ಸೇರಿದ ಸೊಪ್ಪಿನ ಬೆಟ್ಟ ಹಾಗೂ ಕಾನೂ ಭೂಮಿಗಳ ಸಾಗುವಳಿ ಹಕ್ಕನ್ನು ನೀಡಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಸಂಘ ಒತ್ತಾಯಪಡಿಸುತ್ತದೆ ಎಂದು ವಿವರಿಸಿದರು.

ಈ ಹಿಂದೆ 01.11.1998 ರಲ್ಲಿ ಕರ್ನಾಟಕ ಭೂ ಕಾಯ್ದೆ 1964 ಕ್ಕೆ ತಿದ್ದುಪಡಿಯನ್ನು ತಂದು ಸೆಕ್ಷನ್ 94(ಬಿ) ಹಾಗೂ ನಿಯಮ 108(ಸಿ.ಸಿ) ರೀತ್ಯಾ ನಮೂನೆ-53 ಮೂಲಕ ಮೇಲ್ಕಂಡ ವಿಶೇಷ ಹಕ್ಕುಳ್ಳ ಭೂಮಿಗಳಲ್ಲಿ ಅಡಿಕೆ, ಕಾಫಿ, ಏಲಕ್ಕಿ, ಮೆಣಸು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದ ಪ್ರದೇಶಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಕಾನೂನಿನಿಂದ ಮಲೆನಾಡಿನ ಸಾವಿರಾರು ಜನ ಸೊಪ್ಪಿನ ಬೆಟ್ಟ ಹಾಗೂ ಕಾನೂ ಭೂಮಿ ಸಾಗುವಳಿದಾರರು ಮಾಲೀಕತ್ವವನ್ನು ಪಡೆದಿರುತ್ತಾರೆಂದರು.

ಆದರೆ, 07.02.2010 ಹಾಗೂ 03.05.2010 ರಲ್ಲಿ ಮೇಲ್ಕಂಡ ವಿಶೇಷ ಹಕ್ಕುಳ್ಳ ಭೂಮಿಗಳನ್ನು ‘ಅರಣ್ಯ ಭೂಮಿ’ ಗಳೆಂದು ಎರಡು ಸುತ್ತೋಲೆ ಹೊರಡಿಸಿದ ಕಾರಣ ಮಲೆನಾಡಿನ ಸೊಪ್ಪಿನಬೆಟ್ಟ. ಕಾನೂ ಭೂಮಿಗಳ ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳು ಹಾಗೂ ಮನೆಗಳ ಸಕ್ರಮ ಅರ್ಜಿಗಳು ತಿರಸ್ಕಾರಗೊಂಡು ಅರಣ್ಯ ಭೂಮಿ ಒತ್ತುವರಿದಾರರೆಂಬ ಹಣೆಪಟ್ಟಿ ಕಟ್ಟಿಕೊಂಡು ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 04(ಎ) ರೀತ್ಯಾ ಪ್ರಕರಣ ದಾಖಲಾಗಿ ಸಾಗುವಳಿ ಭೂಮಿ ಕಳೆದುಕೊಂಡು ನಿರ್ಗತಿಕರಾಗುವ ಆತಂಕ ಎದುರಾಗಿದೆ.

ಅಲ್ಲದೆ, ಆದ ಕಾರಣ 2010 ರ ವಿಶೇಷ ಹಕ್ಕುಳ್ಳ ಭೂಮಿಗಳನ್ನು ಅರಣ್ಯ ಭೂಮಿಗಳೆಂದು ಹೊರಡಿಸಿದ ಸುತ್ತೋಲೆಗಳನ್ನು ವಾಪಾಸ್ಸು ಪಡೆದು 2011 ರ ತೊಡಗಿನ ಬಾನೆ ಭೂಮಿಯ ಮಾಲೀಕತ್ವ ನೀಡಿದ ತಿದ್ದುಪಡಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಲೆನಾಡಿನ ಸೊಪ್ಪಿನಬೆಟ್ಟ ಕಾನೂ ಭೂಮಿಗಳ ಸಾಗುವಳಿ ಹತ್ತು ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಪಡಿಸುತ್ತೇವೆ.

ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀ ಮಧುಬಂಗಾರಪ್ಪರವರು ಸಹ ಸೊಪ್ಪಿನಬೆಟ್ಟ ಹಾಗೂ ಕಾನು ಭೂಮಿಗಳ ಸಾಗುವಳಿ ಹಾಗೂ ವಸತಿ ಹಕ್ಕು ಮಂಜೂರು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರಕ್ಕೆ ಒತ್ತಾಯಪಡಿಸುವುದಾಗಿ ತಿಳಿಸಿರುತ್ತಾರೆ.

ಈ ಮೂಲಕ ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 1998 ರ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ತಿದ್ದುಪಡಿ ಕಾಯ್ದೆ ರೀತ್ಯಾ ಸೊಪ್ಪಿನಬೆಟ್ಟ ಹಾಗೂ ಕಾನೂ ಭೂಮಿಗಳ ಸಾಗುವಳಿ ಹಾಗೂ ವಸತಿ ಹಕ್ಕಿನ ನಿರೀಕ್ಷೆಯಲ್ಲಿರುವ ಸಾವಿರಾರು ರೈತರಿಗೆ ಮೇಲ್ಕಂಡ ಭೂಮಿಯ ಹಕ್ಕನ್ನು ಮಂಜೂರು ಮಾಡಲು ಕಂದಾಯ ಸಚಿವರಿಗೆ ಒತ್ತಾಯಪಡಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಇಕ್ಕೇರಿ ರಮೇಶ್, ಡಿ.ಸಿ.ನಿರಂಜನ್, ನೇರಲೆಕೆರೆ ದಯಾನಂದ್, ದೇವಾನಂದ್ ಉಪಸ್ಥಿತರಿದ್ದರು.