ಕೆಳದಿ ಶಿವಪ್ಪ ನಾಯಕ ಕೃಷಿ- ತೋಟಗಾರಿಕಾ ವಿಜ್ಞಾನಗಳ ವಿವಿ ವಿದ್ಯಾರ್ಥಿಗಳಿಂದ ಕೈ ತೋಟದ ಮಹತ್ವ- ಗುಂಪು ಚರ್ಚೆ *ಕೈ ತೋಟದ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿಕೆ*
ಕೆಳದಿ ಶಿವಪ್ಪ ನಾಯಕ ಕೃಷಿ- ತೋಟಗಾರಿಕಾ ವಿಜ್ಞಾನಗಳ ವಿವಿ ವಿದ್ಯಾರ್ಥಿಗಳಿಂದ ಕೈ ತೋಟದ ಮಹತ್ವ- ಗುಂಪು ಚರ್ಚೆ
*ಕೈ ತೋಟದ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿಕೆ*
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ದಡಿಯಲ್ಲಿ ಕೈತೋಟದ ಮಹತ್ವ ದ ಬಗ್ಗೆ ಗುಂಪು ಚರ್ಚೆ ಹಾಗೂ ಕುಂಡಲಿ ಮಿಶ್ರಣ(ಪಾಟಿಂಗ್ ಮಿಕ್ಸ್ಚರ್)ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅರ್ಚನಾ ಭಜಂತ್ರಿ ಹಾಗೂ ಡಾ. ರೇಣುಕಾ ಸ್ವಾಮಿ ಯವರು ಆಗಮಿಸಿದ್ದರು.
*ಕೈತೋಟದ ಬಗ್ಗೆ ಮಹತ್ವ*
ಸಾಮಾನ್ಯವಾಗಿ ಹಳ್ಳಿಮನೆಗಳ ಹಿತ್ತಲಿನಲ್ಲಿ ಸ್ವಲ್ಪ ಜಾಗವನ್ನು ಬಿಟ್ಟಿಕೊಂಡಿರುತ್ತಾರೆ. ಅಲ್ಲಿ ಅವರು ತಮಗೆ ಬೇಕಾದ ಸಣ್ಣಪುಟ್ಟ ಗಿಡಗಳನ್ನು ಹಾಕಿಕೊಂಡಿರುತ್ತಾರೆ ಹಾಗೆಯೇ ಇನ್ನೂ ಕೆಲವರು ತಮಗೆ ಬೇಕಾದ ಸಾಮಾಗ್ರಿಗಳನ್ನು ಇಟ್ಟುಕೊಂಡಿರುತ್ತಾರೆ. ಇಂತಹ ಜಾಗಗಳಲ್ಲಿ ಮನೆಗೆ ಬೇಕಾಗಿರುವ ತರಕಾರಿಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಬದನೆಕಾಯಿ, ಕರಿಬೇವು, ಸೊಪ್ಪುಗಳಾದ ಕೊತ್ತಂಬರಿ, ಪಾಲಕ್, ಪುದಿನಾ, ಮೆಂತ್ಯ ,ದಂಟು ಸೊಪ್ಪು,ಹೂವಿನ ಗಿಡಗಳಾದ ಚೆಂಡು, ಸೇವಂತಿಗೆ,
ಕನಕಾಂಬರ, ಮಲ್ಲಿಗೆ,ಗುಲಾಬಿ ಹಾಗೂ ಹಣ್ಣುಗಳಾದ ಪೇರಲೆ,ಪಪಾಯ ಗಿಡಗಳನ್ನು ಹಾಕಿಕೊಳ್ಳಬಹುದು. ಹೀಗೆ ಕೈತೋಟ ಮಾಡಿಕೊಳ್ಳುವುದರಿಂದ ತರಕಾರಿಯ ಖರ್ಚು ಕಡಿಮೆ ಮಾಡಿಕೊಳ್ಳಬಹುದಲ್ಲದೆ ರಾಸಾಯನಿಕ ಮುಕ್ತ ತರಕಾರಿಗಳನ್ನು ಸೇವಿಸಬಹುದು.ಹಾಗಾಗಿ ಪ್ರತಿಯೊಂದು ಮನೆಯಲ್ಲಿ ಕೈತೋಟ ಮಾಡಿಕೊಳ್ಳುವುದು ಅವಶ್ಯಕವಾಗಿದೆ.
*ಕುಂಡಲಿ ಮಿಶ್ರಣ ತಯಾರಿಕೆ*-ಪದ್ಧತಿ ಪ್ರಾತ್ಯಕ್ಷಿಕೆ
ಪ್ರತಿಯೊಬ್ಬರು ತಮ್ಮ ಮನೆಯು ಚೆಂದವಾಗಿ ಕಾಣಬೇಕೆಂದು ಮನೆಯ ಮುಂದೆ ಗಿಡಗಳನ್ನು ಕುಂಡಲಿಗಳಲ್ಲಿ ಹಾಕಿಕೊಂಡಿರುತ್ತಾರೆ. ಕುಂಡಲಿಗೆ ಬರೀ ಮಣ್ಣನ್ನು ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುವುದಿಲ್ಲ. ಹಾಗಾಗಿ ಮಣ್ಣು,ಮರಳು, ಗೊಬ್ಬರ ಹಾಗೂ ತೆಂಗಿನ ನಾರಿನ (ಕೋ ಕೋ ಪೀಟ್) ಸಮಮಿಶ್ರಣ ತಯಾರಿಸಿಕೊಂಡು ಕುಂಡಲಿಗೆ ಹಾಕಬೇಕು, ನಂತರ ಗಿಡವನ್ನು ನೆಡಬೇಕು.
ಹೀಗೆ ಮಾಡಿದರೆ ಗಿಡದ ಬೇರಿಗೆ ಬೇಕಾದ ನೀರು ಗಾಳಿ ಹಾಗೂ ಪೋಷಕಾಂಶಗಳು ದೊರೆಯುತ್ತದೆ. ಹಾಗೆಯೇ, ಗಿಡವು ಚೆನ್ನಾಗಿ ಬೆಳೆಯುತ್ತದೆ ಎಂದು ವಿದ್ಯಾರ್ಥಿಗಳು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.