ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಮಾಹಿತಿ ಕೇಂದ್ರ ಮತ್ತು ಬೆಳೆ ಸಂಗ್ರಹಾಲಯ!

ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಮಾಹಿತಿ ಕೇಂದ್ರ ಮತ್ತು ಬೆಳೆ ಸಂಗ್ರಹಾಲಯ!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿರುವ ಮಾಹಿತಿ ಕೇಂದ್ರ ಮತ್ತು ಬೆಳೆ ಸಂಗ್ರಹಾಲಯದ ಉದ್ಘಾಟನೆ ಕಾರ್ಯಕ್ರಮವನ್ನು ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು.

ಮೊದಲನೆಯದಾಗಿ ಕೃಷಿ ವಿವಿಯ ಕುಲಪತಿಗಳು ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ತಾವು ತಯಾರಿಸಿದ್ದ ಹಸಿರು ಮನೆ, ಜಲಾನಯನ, ಸಮಗ್ರ ಕೃಷಿ ಪದ್ಧತಿ ಮತ್ತು ಇನ್ನಿತರ ಕೃಷಿ ಮಾದರಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಸಸ್ಯ ಆರೋಗ್ಯ ಕೇಂದ್ರದಲ್ಲಿ ಗ್ರಾಮದ ಮುಖ್ಯ ಬೆಳೆಗಳಾದ ಅಡಿಕೆ ಭತ್ತ ಜೋಳ ಮತ್ತು ಕಾಳು ಮೆಣಸಿಗೆ ಬರುವ ರೋಗ ಮತ್ತು ಕೀಟಗಳ ಬಗ್ಗೆ ಚಿತ್ರಗಳ ಮೂಲಕ ವಿವರಿಸಿದ್ದರು.

ನಂತರ ಮಾಹಿತಿ ಕೇಂದ್ರದಿಂದ ಬೆಳೆ ಸಂಗ್ರಹಾಲಯಕ್ಕೆ ಮೆರವಣಿಗೆ ಮಾಡಿದರು.

ಈ ಮೆರವಣಿಗೆಯಲ್ಲಿ ಕೇಂದ್ರ ಬಿಂದುವಾಗಿ ನೆರೆ ಹಳ್ಳಿಗಳ ಹೋರಿಗಳಾದ NTC ಸಾಹುಕಾರ, ಕಲ್ಮನೆ ಕೊಲೆಗಾರ ಮತ್ತಿತರ ಹೋರಿಗಳನ್ನು ಕರೆತರಲಾಗಿತ್ತು. ಹೋರಿಗಳ ಹಿಂದೆ ಡೊಳ್ಳು ಕುಣಿತದ ನೃತ್ಯಗಾರರು ,ಕಳಸ ಹೊತ್ತ ಮಹಿಳೆಯರು ಮತ್ತು ಛದ್ಮ ವೇಷ ಧರಿಸಿದ್ದ ಮಕ್ಕಳು ಸಾಗಿದರು.

ಕುಲಪತಿಗಳು ಬೆಳೆ ಸಂಗ್ರಹಾಲಯದಲ್ಲಿ ರಾಗಿ ತುಂಬಿಸುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು. 9 ಗುಂಟೆ ಇರುವ ಬೆಳೆ ಸಂಗ್ರಹಾಲಯದಲ್ಲಿ 70 ರೀತಿಯ ಬೆಳೆಗಳನ್ನು ಬೆಳೆಯಲಾಗಿತ್ತು. ರೈತರೆಲ್ಲರೂ ಬೆಳೆ ಸಂಗ್ರಹಾಲಯವನ್ನು ವೀಕ್ಷಿಸಿ ಮೇವು ಬೆಳೆಗಳು ವಿದೇಶಿ ಬೆಳೆಗಳು ಮತ್ತು ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಅರಿತುಕೊಂಡರು. ಕುಲಪತಿಗಳು ಕಾರ್ಯಕ್ರಮ ವನ್ನು ಉದ್ದೇಶಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ರಾಯಭಾರಿಗಳಾಗಿ ರೈತರೊಡನೆ ಬೆರೆತು ಅವರಿಗೆ ಅಗತ್ಯವಿರುವ ಕೃಷಿ ಮಾಹಿತಿಯನ್ನು ನೀಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ನುಡಿದರು.ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಅವರು ಹೇಳಿದರು.

ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಸಂಶೋಧನಾ ನಿರ್ದೇಶಕರಾದ ಡಾ. ದುಷ್ಯಂತ್ ಕುಮಾರ್, ವಿಶೇಷಾಧಿಕಾರಿಗಳಾದ ಡಾ. ಕೆ. ಸಿ. ಶಶಿಧರ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ವೀಕ್ಷಿಸಲು ನೆರೆಹಳ್ಳಿಯವರು ಸಹ ಬಂದಿದ್ದರು. ಒಟ್ಟಾರೆಯಾಗಿ ಸುಮಾರು 350 – 400 ಜನರು ಸೇರಿ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿಕೊಟ್ಟರು.