ಜ.19 ರಂದು ಪದವೀಧರರ ಸಹಕಾರ ಸಂಘದ ಚುನಾವಣೆ;ಎಸ್.ಪಿ.ದಿನೇಶ್ ತಂಡ ಪತ್ರಿಕಾಗೋಷ್ಠಿಯಲ್ಲಿ ಏನಂತು?

ಜ.19 ರಂದು ಪದವೀಧರರ ಸಹಕಾರ ಸಂಘದ ಚುನಾವಣೆ;

ಎಸ್.ಪಿ.ದಿನೇಶ್ ತಂಡ ಪತ್ರಿಕಾಗೋಷ್ಠಿಯಲ್ಲಿ ಏನಂತು?

ಶಿವಮೊಗ್ಗ: ಪದವೀಧರ ಸಹಕಾರ ಸಂಘದ ಚುನಾವಣೆ ಜನವರಿ ೧೯ರಂದು ಬಸವೇಶ್ವರನಗರದ ಮೂರನೇ ತಿರುವಿನ ಆಕ್ಸ್ಫರ್ಡ್ ಇಂಗ್ಲೀಷ್ ಸ್ಕೂಲ್‌ನಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆವರೆಗೆ ನಡೆಯಲಿದ್ದು, ಸಂಘದ ಮತದಾರರು ಈ ಅವಧಿಯಲ್ಲಿ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ನಮಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಸಂಘದ ಅಧ್ಯಕ್ಷ ಹಾಗೂ ಅಭ್ಯರ್ಥಿ ಎಸ್.ಪಿ. ದಿನೇಶ್ ಮನವಿ ಮಾಡಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಘದ ಆಡಳಿತ ಮಂಡಳಿಯ ನೇತೃತ್ವವನ್ನು ವಹಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಇದನ್ನ ಸಂಘದ ಮತದಾರರು ಗಮನಿಸಿದ್ದಾರೆ. ಅತ್ಯಂತ ಪಾರದರ್ಶಕವಾಗಿ ಹಾಗೂ ನಗರದಲ್ಲಿರುವ ಇತರೆ ಸಹಕಾರ ಸಂಘಗಳಿಗಿಂತ ಭಿನ್ನವಾಗಿ ನಮ್ಮ ಸಂಘದ ಚುನಾವಣೆ ನಡೆಯಲಿದ್ದು ಮತದಾರರು ನಮ್ಮ ತಂಡವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ನಮ್ಮ ಸಹಕಾರ ಸಂಘ ೫೦ ವರ್ಷಗಳನ್ನು ಪೂರೈಸಿದೆ. ಈ ವರ್ಷ ಮತ್ತು ಕಳೆದ ವರ್ಷ ೫೦ನೇ ವರ್ಷದ ಆಚರಣೆಯನ್ನು ನಿರಂತರವಾಗಿ ಮಾಡಿದೆ. ಇದರ ಅಂಗವಾಗಿ ಕೃಷಿ ನಗರದಲ್ಲಿ ಸ್ವಂತ ಕಟ್ಟಡವನ್ನ ಕಟ್ಟಲಾಗಿದ್ದು, ಇಲ್ಲಿ ಸಂಘದ ಶಾಖಾ ಕಚೇರಿಯನ್ನು ತೆರೆಯಲಾಗುತ್ತಿದೆ. ಈ ಕಟ್ಟಡದ ಎರಡನೇ ಮಹಡಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವೀಧರ ಯುವಕ ಯುವತಿಯರಿಗೆ ತರಬೇತಿಯನ್ನ ನೀಡಲಾಗುತ್ತದೆ. ಅಲ್ಲದೆ ಮೂರನೇ ಮಹಡಿಯಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಅತಿಥಿ ಗೃಹವನ್ನು ಕೂಡ ಮಾಡಲಾಗಿದೆ ಎಂದರು.
ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಮ್ಮ ಸಹಕಾರ ಸಂಘ ನಡೆಸಿದೆ ಎಂದ ಅವರು, ಪ್ರಸ್ತುತ ಸಂಘದಲ್ಲಿ ೭,೦೦೦ಕ್ಕೂ ಹೆಚ್ಚು ಸದಸ್ಯರಿದ್ದಾರೆ, ಇದರಲ್ಲಿ ೨೯೦೨ ಸದಸ್ಯರು ಮತದಾನದ ಹಕ್ಕನ್ನ ಪಡೆದಿದ್ದಾರೆ. ಈಗಾಗಲೇ ಗೋಪಾಲ್ ಕೃಷ್ಣ ಎಂಬುವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ಮುಂದಿನ ಅವಧಿಯಲ್ಲಿ ಸಂಘ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಸಂಘದ ಸದಸ್ಯರು ನಮ್ಮ ತಂಡಕ್ಕೆ ಹೆಚ್ಚಿನ ಬೆಂಬಲವನ್ನ ನೀಡಬೇಕು. ಆ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಮ್ಮ ತಂಡದಿಂದ ಸಾಮಾನ್ಯ ಕ್ಷೇತ್ರದಲ್ಲಿ ಎಸ್.ಪಿ. ದಿನೇಶ್ ಅದ ನಾನು ಎಸ್.ಕೆ.ಕೃಷ್ಣಮೂರ್ತಿ ಡಾ. ಚಂದ್ರಶೇಖರಪ್ಪ, ಯು, ಜೋಗದ ವೀರಪ್ಪ, ಡಾ.ಎಸ್.ಹೆಚ್.ಪ್ರಸನ್ನ ಹಾಗೂ ಸುರೇಶ್ ಹೆಚ್.ಸಿ. ಇವರುಗಳು ಸ್ಪರ್ಧಿಸಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಜಗದೀಶ್.ಟಿ, ಮಹಿಳಾ ಮೀಸಲು ವಿಭಾಗದಿಂದ ಡಿ.ಎಸ್.ಭುವನೇಶ್ವರಿ, ಎಸ್.ಮಮತಾ, ಪರಿಶಿಷ್ಟ ಪಂಗಡದ ವಿಭಾಗದಿಂದ ರಮ್ಯಾ ಯು. ಸ್ಪರ್ಧಿಸಿದ್ದು, ಮತದಾರರು ನಮ್ಮ ತಂಡದ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಂಡದ ಎಲ್ಲಾ ಅಭ್ಯರ್ಥಿಗಳು ಉಪಸ್ಥಿತರಿದ್ದರು.