ಕೈ ಪಾಳಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ…ಡಿಕೆಶಿಗೆ ಫುಲ್ಲು ವಿಶ್ವಾಸವಿದೆ…ಬಿಜೆಪಿ ಪಾಳಯದ ಲೆಕ್ಕಾಚಾರಗಳೇನು?…ಒಲ್ಲೆ ಅಂದ್ರು ಜಾರಕಿಹೊಳಿ?…
ಕೈ ಪಾಳಯದಲ್ಲಿ ಕಾಣಿಸುತ್ತಿದೆ
ತೃತೀಯ ಶಕ್ತಿ
ಕಳೆದ ವಾರ ತಮಗೆ ತಲುಪಿದ ಸಂದೇಶದಿಂದ ದಿಲ್ಲಿಯ ಬಿಜೆಪಿ ನಾಯಕರು ಖುಷಿಯಾಗಿದ್ದಾರೆ.ಈ ಸಂದೇಶದ ಪ್ರಕಾರ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ತೃತೀಯ ಶಕ್ತಿ ತಲೆ ಎತ್ತುತ್ತಿದೆ.
ಅಂದ ಹಾಗೆ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ಎರಡು ಶಕ್ತಿಗಳಿರುವುದು ರಹಸ್ಯದ ವಿಷಯವೇನಲ್ಲ.ಈ ಪೈಕಿ ಒಂದು ಶಕ್ತಿ ಸಿಎಂ ಸಿದ್ದರಾಮಯ್ಯ ಅವರ ಜತೆಗಿದ್ದರೆ,ಮತ್ತೊಂದು ಶಕ್ತಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆಗಿದೆ.
ಈ ಎರಡು ಶಕ್ತಿಗಳ ನಡುವೆ ಇರುವ ಭಿನ್ನಾಭಿಪ್ರಾಯವೆಂದರೆ ಅಧಿಕಾರ ಹಂಚಿಕೆಯದು.2023 ರಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಅಧಿಕಾರ ಹಿಡಿದಾಗ ಸಿಎಂ ಹುದ್ದೆಗಾಗಿ ಸಿದ್ದು-ಡಿಕೆಶಿ ಮಧ್ಯೆ ಸಂಘರ್ಷನಡೆಯಿತು.ಈ ಸಂದರ್ಭದಲ್ಲಿ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿತ್ತೆಂದರೆ ಕಾಂಗ್ರೆಸ್ ವರಿಷ್ಟರು ಹಲವು ದಿನಗಳ ಕಾಲ ಪಡಿಪಾಟಲು ಅನುಭವಿಸಿದ್ದರು.
ಆದರೆ ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಪಟ್ಟ ದಕ್ಕಿದಾಗ ದಿಲ್ಲಿಯಿಂದ ಒಂದು ವರ್ತಮಾನ ಹರಿದುಬಂತು.ಅದರ ಪ್ರಕಾರ,ಸಿಎಂ ಹುದ್ದೆಯ ಸಮಸ್ಯೆಯನ್ನು ಬಗೆಹರಿಸಲು ಕಾಂಗ್ರೆಸ್ ವರಿಷ್ಟರು ಸಂಧಾನ ಸೂತ್ರ ರೂಪಿಸಿದ್ದಾರೆ.ಅದರ ಪ್ರಕಾರ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ.ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಮಾತು ಹರಡಿಕೊಂಡಿತು.
ಆದರೆ ಸಿದ್ದರಾಮಯ್ಯ ಸಿಎಂ ಆದ ಕೆಲವೇ ದಿನಗಳಲ್ಲಿ ಸರ್ಕಾರದ ಹಲವು ಸಚಿವರು ಉಲ್ಟಾ ಹೊಡೆಯತೊಡಗಿದರು. ‘ಅಧಿಕಾರ ಹಂಚಿಕೆ ಸಂಬಂಧ ಯಾವ ಒಪ್ಪಂದವೂ ಆಗಿಲ್ಲ.ಹೀಗಾಗಿ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ’ಅಂತ ಇವರು ಹೇಳತೊಡಗಿದಾಗ ಡಿಕೆಶಿ ಮತ್ತವರ ಗ್ಯಾಂಗು ಉರಿಸಿಕೊಂಡಿದ್ದು ನಿಜ.ಮುಂದೆ ಇದೇ ಕಾರಣಕ್ಕಾಗಿ ಪಕ್ಷದ ವರಿಷ್ಟರ ಮೊರೆ ಹೋದ ಡಿಕೆಶಿ,ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ ಎನ್ನುತ್ತಿದ್ದ ಸಚಿವರ ಬಾಯಿಗೆ ಬೀಗ ಹಾಕಿಸುವ ಕೆಲಸ ಮಾಡತೊಡಗಿದರು.
ಆದರೆ ಅದೇನೇ ಮಾಡಿದರೂ ಅಧಿಕಾರ ಹಂಚಿಕೆ ಒಪ್ಪಂದವನ್ನು ಒಪ್ಪಲು ಬಹುತೇಕರು ಸಿದ್ಧರಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ತಲೆ ಎತ್ತಿದ್ದೇ ಸಿದ್ಧರಾಮಯ್ಯ ಗ್ಯಾಂಗು.ಈ ಗ್ಯಾಂಗಿನ ಮುಂದೆ ಸೆಟ್ಲ್ ಆದವರೇ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ,ಸಮಾಜಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ.
ಈ ಫೋರ್ ಮ್ಯಾನ್ ಆರ್ಮಿಯ ಪೈಕಿ ಕೆ.ಎನ್.ರಾಜಣ್ಣ ಅವರು ಬೀಡು ಬೀಸಾಗಿ ಮಾತನಾಡತೊಡಗಿದರೆ,ಸತೀಶ್ ಜಾರಕಿಹೊಳಿ ಮಾತ್ರ ಬಿಜೆಪಿ ನಾಯಕರಾದ ಗೋವಾದ ಪ್ರಮೋದ್ ಸಾವಂತ್,ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಜತೆ ಸಂಪರ್ಕ ಸಾಧಿಸಿ ಆಟ ಶುರುವಿಟ್ಟುಕೊಂಡರು.
ಅರ್ಥಾತ್,ಸಿದ್ಧರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದು ಡಿ.ಕೆ.ಶಿವಕುಮಾರ್ ಸಿಎಂ ಆಗುವ ಸನ್ನಿವೇಶ ಸೃಷ್ಟಿಯಾದರೆ ಕೈ ಶಾಸಕರ ದೊಡ್ಡ ಗುಂಪಿನೊಂದಿಗೆ ಬಿಜೆಪಿ ಕಡೆ ಬರುತ್ತೇವೆ ಎಂಬ ಮೆಸೇಜು ರವಾನಿಸತೊಡಗಿದರು.
ಮೊನ್ನೆ ಮೊನ್ನೆಯಷ್ಟೇ ದಿಲ್ಲಿಗೂ ಹೋಗಿದ್ದ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೇರ ಸಂದೇಶವನ್ನೂ ರವಾನಿಸಿ ಬಂದರು.
ಅದರ ಪ್ರಕಾರ ಯಾವ ಕಾರಣಕ್ಕೂ ಸಿದ್ದರಾಮಯ್ಯ ಕೆಳಗಿಳಿಯಬಾರದು.ಹಾಗೊಂದು ವೇಳೆ ಇಳಿಯುವುದೇ ಆದರೆ ಅವರ ಜಾಗಕ್ಕೆ ನೀವು ಬರಬೇಕೇ ವಿನ: ಡಿ.ಕೆ.ಶಿವಕುಮಾರ್ ಅಲ್ಲ.ಒಂದು ವೇಳೆ ಅವರೇ ಬರುವುದಾದರೆ ನಾವು ಅರವತ್ತರಷ್ಟು ಸಚಿವರು,ಶಾಸಕರು ಪಕ್ಷ ತೊರೆಯಲು ಸಿದ್ಧ ಎಂಬ ಮಾಹಿತಿ ಖರ್ಗೆಯವರಿಗೆ ತಲುಪಿತು.
ಕುತೂಹಲದ ಸಂಗತಿ ಎಂದರೆ ಖರ್ಗೆಯವರ ಕಿವಿಗೆ ಈ ಮೆಸೇಜು ತಲುಪಿದ ಕೆಲವೇ ದಿನಗಳ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡಾ ಖರ್ಗೆಯವರಿಗೆ ಒಂದು ಸಂದೇಶ ರವಾನಿಸಿದ್ದಾರೆ.ಈ ಸಂದೇಶದ ಪ್ರಕಾರ,’ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ ಮತ್ತು ಡಿಕೆಶಿ ಬಣಗಳು ಹೇಗೆ ತಲೆ ಎತ್ತಿ ನಿಂತಿವೆಯೋ?ಅದೇ ರೀತಿ ಮೂರನೇ ಬಣವೊಂದು ತಲೆ ಎತ್ತಿ ನಿಲ್ಲಲು ಸಿದ್ಧವಾಗಿದೆ.ಮತ್ತು ಇದರಲ್ಲಿ ಸಿದ್ಧು-ಡಿಕೆಶಿ ಬಣಗಳಿಗೆ ಸೇರದ ಮೂಲ ಕಾಂಗ್ರೆಸ್ಸಿಗರಿದ್ದಾರೆ.ಇವರು ಕೂಡಾ ಸಿದ್ಧರಾಮಯ್ಯ ಜಾಗಕ್ಕೆ ಡಿಕೆಶಿ ಬರುವುದನ್ನು ವಿರೋಧಿಸುತ್ತಾರೆ.ಮತ್ತು ಅನಿವಾರ್ಯ ಸಂದರ್ಭದಲ್ಲಿ ನಿಮ್ಮನ್ನು ಜೊರತುಪಡಿಸಿ ಬೇರೊಬ್ಬರನ್ನು ಸಿಎಂ ಜಾಗದಲ್ಲಿ ಅವರು ನೋಡಬಯಸುವುದಿಲ್ಲ.ಹಾಗೇನಾದರೂ ಡಿಕೆಶಿ ಮುಂಚೂಣಿಗೆ ಬರುವುದೇ ಆದರೆ ಮೂಲ ಕಾಂಗ್ರೆಸ್ಸಿಗರೇ ಹೆಚ್ಚಿರುವ ಈ ಮೂರನೇ ಶಕ್ತಿ ಕೈ ಪಾಳಯ ತೊರೆಯಲು ಸಿದ್ಧವಾಗಿದೆ’
ಹೀಗೆ ಯಾವಾಗ ಡಾ.ಜಿ.ಪರಮೇಶ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೆಸೇಜು ಮುಟ್ಟಿಸಿದರೋ?ಇದಾದ ನಂತರ ಕಾಂಗ್ರೆಸ್ ಹೈಕಮಾಂಡ್ ತಲ್ಲಣಗೊಂಡಿದೆ.
ಕಾರಣ?ಈ ಮುಂಚೆ ಡಿಕೆಶಿ ಸಿಎಂ ಆಗುವುದನ್ನು ಸಿದ್ದರಾಮಯ್ಯ ಹಿಂದಿರುವ ಶಕ್ತಿ ವಿರೋಧಿಸುತ್ತಿದೆ ಎಂಬ ಭಾವನೆ ಇತ್ತು.ಅದರೆ ಈಗ ಸಿದ್ದರಾಮಯ್ಯ-ಡಿಕೆಶಿ ಬಣದ ಜತೆ ಮೂರನೇ ಬಣ ತಲೆ ಎತ್ತುತ್ತಿದೆ ಎಂದರೆ ಇದು ಮುಂದಿನ ದಿನಗಳಲ್ಲಿ ಸರ್ಕಾರ ಅಲುಗಾಡುವ ಮುನ್ಸೂಚನೆ ಎಂಬುದು ಹೈಕಮಾಂಡ್ ವರಿಷ್ಟರ ಚಿಂತೆ.
ಅಂದ ಹಾಗೆ ಕರ್ನಾಟಕದಲ್ಲಿ ನೆಲೆಯಾಗಿರುವ ಸರ್ಕಾರವೇ ತಮಗಿರುವ ಮೂಲ ಶಕ್ತಿ ಎಂಬುದು ಹೈಕಮಾಂಡ್ ವರಿಷ್ಟರಿಗೆ ಗೊತ್ತು.
ಈ ಕಾರಣಕ್ಕಾಗಿಯೇ ದೇಶದ ವಿವಿಧ ರಾಜ್ಯಗಳಲ್ಲಿ ಎದುರಾಗುವ ವಿಧಾನಸಭೆ,ಲೋಕಸಭೆ ಚುನಾವಣೆಗಳನ್ನು ಎದುರಿಸುವ ಶಕ್ತಿ ಅದಕ್ಕೆ ಉಳಿದುಕೊಂಡಿದೆ.
ಹಾಗೊಂದು ವೇಳೆ ಇಂತಹ ಸರ್ಕಾರ ಉರುಳಿ ಬಿದ್ದರೆ ಮುಂದಿನ ದಿನಗಳು ಕಾಂಗ್ರೆಸ್ ಪಾಲಿಗೆ ಗಂಡಾಂತರದ ದಿನಗಳಾಗಲಿವೆ ಎಂಬುದು ದಿಲ್ಲಿಯ ಕಾಂಗ್ರೆಸ್ ನಾಯಕರ ಚಿಂತೆ.
ಹೀಗೆ ಕಾಂಗ್ರೆಸ್ ನಾಯಕರು ಚಿಂತೆಯಲ್ಲಿ ಬಿದ್ದಿದ್ದಾರಲ್ಲ?ಈ ಚಿಂತೆಯ ಮೆಸೇಜು ಬಿಜೆಪಿ ವರಿಷ್ಟರಿಗೆ ತಲುಪುತ್ತಿದೆಯಲ್ಲದೆ ಅವರ ಹರ್ಷಕ್ಕೂ ಕಾರಣವಾಗಿದೆ.
ಡಿಕೆಶಿಗೆ ಫುಲ್ಲು
ವಿಶ್ವಾಸವಿದೆ
——————-
ಈ ಮಧ್ಯೆ ಕಾಂಗ್ರೆಸ್ ಪಾಳಯದಲ್ಲಿ ತಮ್ಮ ವಿರುದ್ದ ನಡೆಯುತ್ತಿರುವ ಚಟುವಟಿಕೆಗಳೇನೇ ಇರಲಿ.ಆದರೆ ಡಿಸಿಎಂ ಡಿಕೆಶಿ ಮಾತ್ರ ಫುಲ್ಲು ವಿಶ್ವಾಸದಲ್ಲಿದ್ದಾರೆ.
ಅರ್ಥಾತ್,ನವೆಂಬರ್ ಹೊತ್ತಿಗೆ ತಾವು ಕರ್ನಾಟಕದ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ ಎಂಬುದು ಡಿಕೆಶಿ ವಿಶ್ವಾಸ.
ಇವತ್ತಿನ ಸ್ತಿತಿಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್,ಹೆಚ್.ಸಿ.ಮಹಾದೇವಪ್ಪ,ಕೆ.ಎನ್.ರಾಜಣ್ಣ ತಮ್ಮ ವಿರುದ್ಧ ಎಷ್ಟೇ ಭುಸುಗುಟ್ಟಲಿ,ಆದರೆ ಫೈನಲಿ ಅವರು ಕಾಂಗ್ರೆಸ್ ತೊರೆಯುವ ಲೆವೆಲ್ಲಿಗೆ ಹೋಗುವುದಿಲ್ಲ.
ಆದರೆ ಇದ್ದುದರಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ವೈಯಕ್ತಿಕ ನೆಲೆಯಲ್ಲಿ ತಮ್ಮ ವಿರುದ್ಧ ನಿಂತಿದ್ದು, ಪಕ್ಷದ ಮೂವತ್ತು ಶಾಸಕರು ಅವರ ಜತೆಗಿದ್ದಾರೆ.
ನಾಳೆ ತಾವು ಸಿಎಂ ಆಗುವುದೇ ಆದರೆ ಈ ಶಾಸಕರ ಜತೆ ಜಾರಕಿಹೊಳಿ ಹೊರಗೆ ಹೋಗಬಹುದು.ಆದರೆ ಅವರು ಹೊರಹೋಗುವ ಕಾಲಕ್ಕೆ ಜೆಡಿಎಸ್ ನ ಹದಿಮೂರು ಶಾಸಕರು ತಾವು ಸಿಎಂ ಆಗಲು ಬೆಂಬಲ ನೀಡುತ್ತಾರೆ.ಹಾಗಂತ ತಾವೇನೂ ಜೆಡಿಎಸ್ ಒಡೆಯುವುದಿಲ್ಲ.ಬದಲಿಗೆ ಜೆಡಿಎಸ್ ನ ಈ ಶಾಸಕರು ಪ್ರತ್ಯೇಕ ಗುಂಪಾಗಿ ಉಳಿದುಕೊಳ್ಳುತ್ತಾರೆ.
ಇವರಲ್ಲದೆ ಬಿಜೆಪಿಯ ಹಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬರುತ್ತಾರೆ.ಹೀಗಾಗಿ ತಾವು ಸಿಎಂ ಆಗಲು ಯಾವ ಅಡ್ಡಿಯೂ ಇಲ್ಲ.ಮತ್ತು ಹೈಕಮಾಂಡ್ ಹೇಳಿದರೆ ಅಧಿಕಾರ ಬಿಟ್ಟುಕೊಡಲು ಸಿದ್ಧರಾಮಯ್ಯ ಅವರೂ ಹಿಂದೆ ಮುಂದೆ ನೋಡುವುದಿಲ್ಲ ಎಂಬುದು ಡಿಕೆಶಿ ವಿಶ್ವಾಸ.
ಈ ಮಧ್ಯೆ ರೇಸ್ ಕೋರ್ಸ್ ರಸ್ತೆಯಲ್ಲಿ ಪಕ್ಷದ ಬೃಹತ್ ಕಛೇರಿ ಕಟ್ಟಲು ಸಜ್ಜಾಗಿರುವ ಡಿಕೆಶಿ,ಈ ಕಾರ್ಯ ಮುಗಿಸುವ ದೃಷ್ಟಿಯಿಂದ ತಾವೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕು ಅಂತ ವರಿಷ್ಟರೆದುರು ಇಂಡೆಂಟ್ ಇಟ್ಟಿದ್ದಾರಂತೆ.
ಬಿಜೆಪಿ ಪಾಳಯದ ಲೆಕ್ಕಾಚಾರಗಳೇನು?
—————
ಈ ಮಧ್ಯೆ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮುಂದುವರಿಯುವುದು ಬಹುತೇಕ ನಿಶ್ಚಿತವಾಗಿದೆಯಾದರೂ,ಅವರನ್ನು ವಿರೋಧಿಸುತ್ತಿರುವ ಯತ್ನಾಳ್ ಗ್ಯಾಂಗಿನ ನಂಬಿಕೆ ಮಾತ್ರ ಉಳಿದುಕೊಂಡೇ ಇದೆ.
ಅಂದರೆ?ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಬದಲು ಸಧ್ಯದಲ್ಲೇ ಕರ್ನಾಟಕಕ್ಕೆ ಬರಲಿರುವ ಶಿವರಾಜ್ ಸಿಂಗ್ ಚೌಹಾಣ್ ಹೊಸ ಅಧ್ಯಕ್ಷರ ನೇಮಕಾತಿಯನ್ನು ಘೋಷಿಸಿ ಹೋಗಲಿದ್ದಾರೆ ಎಂಬುದು ಯತ್ನಾಳ್ ಬಣದ ನಂಬಿಕೆ.
ಈ ಬಣದ ಪ್ರಕಾರ,ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಟರು ಯತ್ನಾಳ್ ಗೆ ಷೋಕಾಸ್ ನೋಟೀಸ್ ಜಾರಿ ಮಾಡಿರಬಹುದು.ಆದರೆ ನೋಟೀಸ್ ಜಾರಿ ಮಾಡಿ ಇಷ್ಟು ದಿನಗಳಾದರೂ ಕ್ರಮ ಕೈಗೊಂಡಿಲ್ಲ ಎಂದರೆ ಯತ್ನಾಳ್ ಜತೆ ದೊಡ್ಡ ಕೈಗಳಿವೆ ಅಂತಲೇ ಅರ್ಥ.
ಹೀಗಾಗಿ ಈಗ ಕರ್ನಾಟಕಕ್ಕೆ ಬರಲಿರುವ ಶಿವರಾಜ್ ಸಿಂಗ್ ಚೌಹಾಣ್ ವಿಜಯೇಂದ್ರ ಪದಚ್ಯುತಿಯ ಮೆಸೇಜು ತಂದೇ ತರುತ್ತಾರೆ ಎಂಬುದು ಯತ್ನಾಳ್ ಗ್ಯಾಂಗಿನ ನಂಬಿಕೆ.
ಆದರೆ ಯತ್ನಾಳ್ ಗ್ಯಾಂಗಿನ ಇಂತಹ ನಂಬಿಕೆಯ ಮಧ್ಯೆಯೇ ವಿಜಯೇಂದ್ರ ಬಣ ಹ್ಯಾಪ್ಪಿ,ಹ್ಯಾಪ್ಪಿಯಾಗಿದೆ.
ಅದರ ಪ್ರಕಾರ,ಹದಿಮೂರು ಜಿಲ್ಲೆಗಳ ಬಿಜೆಪಿ ಅಧ್ಯಕ್ಷರ ಚುನಾವಣೆ ಈ ವಾರ ಮುಗಿಯಲಿದ್ದು ಇದಾದ ನಂತರ ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕಕ್ಕೆ ಬರಲಿದ್ದಾರೆ.ಹೀಗೆ ಬಂದವರು ರಾಜ್ಯದ ಸಂಸದರು,ಶಾಸಕರ ಜತೆ ಚರ್ಚಿಸಿ ಅಭಿಪ್ರಾಯ ಪಡೆಯಲಿದ್ದಾರಲ್ಲದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೇಡ ಎಂಬ ತೀರ್ಮಾನಕ್ಕೆ ಬಂದು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸಿ ಹೋಗಲಿದ್ದಾರೆ.
ಒಲ್ಲೆ ಅಂದ್ರು ಜಾರಕಿಹೊಳಿ?
————–
ಇನ್ನು ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಬಸವನಗೌಡ ಪಾಟೀಲ್ ಯತ್ನಾಳ್ ಗ್ಯಾಂಗನ್ನು ಇಬ್ಭಾಗ ಮಾಡಲು ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆಯೇ?
ಹಾಗೆಂಬ ಮಾತು ಯತ್ನಾಳ್ ಗ್ಯಾಂಗಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ,ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಯತ್ನಾಳ್ ಅವರನ್ನು ಏಕಾಂಗಿಯನ್ನಾಗಿಸಲು ವಿಜಯೇಂದ್ರ ಹೊರಟಿದ್ದಾರೆ.ಮತ್ತು ಇದೇ ಕಾರಣಕ್ಕಾಗಿ ಈ ಬಣದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಿ ಮನ ಒಲಿಸಲು ಯತ್ನಿಸಿದ್ದಾರೆ.
‘ಎಷ್ಟೇ ಆದರೂ ಯತ್ನಾಳ್ ಅವರ ವಿಷಯದಲ್ಲಿ ಅಮಿತ್ ಷಾ ಮತ್ತು ನಡ್ಡಾ ಕೋಪಗೊಂಡಿದ್ದಾರೆ.ಇದಕ್ಕೆ ಅವರ ಬೀಡು ಬೀಸು ಹೇಳಿಕೆಗಳೇ ಕಾರಣ.ಈ ಹಿಂದೆ ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ಅವರನ್ನು ಯತ್ನಾಳ್ ಟೀಕಿಸಿರುವುದು ಅವರಿಗೆ ಇಷ್ಟವಾಗಿಲ್ಲ.
ಹೀಗಾಗಿ ಮುಂದಿನ ದಿನಗಳಲ್ಲಿ ಯತ್ನಾಳ್ ಅವರಿಗೆ ಭವಿಷ್ಯವಿಲ್ಲ.ಹೀಗಿರುವಾಗ ನೀವಾದರೂ ಅವರ ಜತೆ ಏಕೆ ಇರುತ್ತೀರಿ?ಇದರ ಬದಲುನಮ್ಮ ಜತೆ ಬಂದು ಬಿಡಿ ಅಂತ ಜಾರ್ಕಿಹೊಳಿ ಅವರಿಗೆ ವಿಜಯೇಂದ್ರ ಹೇಳಿದ್ದಾರಂತೆ.
ಹೀಗೆ ಹೇಳುವುದಲ್ಲದೆ ತಮ್ಮ ತಂದೆ ಯಡಿಯೂರಪ್ಪ ಅವರ ಬಳಿ ಮಾತನಾಡಿಸಿದ್ದಾರೆ.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು:’ರಮೇಶ್ ನೀವು ನಮ್ಮ ಜತೆಗಿರಿ.ನಾಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ನಿಮಗೆ ಟಾಪ್ ಪೋಸ್ಟು ಸಿಗುವಂತೆ ನೋಡಿಕೊಳ್ಳುತ್ತೇವೆ’ಎಂದಿದ್ದಾರೆ.
ಆದರೆ ಅವರ ಮಾತಿಗೆ ಬಗ್ಗದ ರಮೇಶ್ ಜಾರಕಿಹೊಳಿ:ನನಗ್ಯಾವ ಪೋಸ್ಟೂ ಬೇಡ.ನಾನು ಬಸವನಗೌಡ ಪಾಟೀಲ್ ಯತ್ನಾಳರ ಜತೆಗೇ ಇರುತ್ತೇನೆ ಎಂದರಂತೆ.
ಯಾವಾಗ ಈ ಬೆಳವಣಿಗೆ ನಡೆಯಿತೋ?ಇದಾದ ನಂತರ ಯತ್ನಾಳ್ ಗ್ಯಾಂಗಿನಲ್ಲಿ ಅದರದ್ದೇ ಚರ್ಚೆ ನಡೆಯುತ್ತಿದೆ.