ಏ.5 ಮತ್ತು 6ರಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ*
*ಏ.5 ಮತ್ತು 6ರಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ*
ಶಿವಮೊಗ್ಗ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಏಪ್ರಿಲ್05 ಮತ್ತು 06ರಂದು ನಗರದ ನೆಹರೂ ಕ್ರೀಡಾಂಗಣ ಮತ್ತು ನಗರದ ವಿವಿಧ ಸಮನಾಂತರ ವೇದಿಕೆಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಈ
ಕ್ರೀಡಾಕೂಟಕ್ಕೆ ಜಿಲ್ಲೆಯ ಸುಮಾರು 4500ಕ್ಕೂ ಹೆಚ್ಚಿನ ನೌಕರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸುವಂತೆ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುವ 2ದಿನಗಳ ಕಾಲ ಆಹ್ವಾನಿತ ನೌಕರ ಕ್ರೀಡಾಪಟುಗಳಿಗೆ ವ್ಯವಸ್ಥಿತವಾಗಿ ಊಟೋಪಹಾರದ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ ಅವರು ಕಾರ್ಯಕ್ರಮದ ಉದ್ಘಾಟನೆಗೆ ನಿಯಮಾನುಸಾರ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಹ್ವಾನಿಸಲಾಗುವುದ ಎಂದರು.
ಕ್ರೀಡಾಕೂಟದಲ್ಲಿ ಎಲ್ಲಾ ಸ್ಪರ್ಧಾಳುಗಳು ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಸ್ಪರ್ಧಿಸುವಂತೆ ಹಾಗೂ ವಿಜೇತರಾಗಿ ಸ್ಥಾನ ಪಡೆದ ಕ್ರೀಡಾಳುಗಳು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿನಿಧಿಗಳಾಗಿ ಭಾಗವಹಿಸಿ, ಜಯಶಾಲಿಗಳಾಗಿ ಆಗಮಿಸುವಂತೆಯೂ ಅವರು ಆಶಿಸಿದ ಅವರು, ಕ್ರೀಡಾಕೂಟವು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಸೂಕ್ತವಾದ ತೀರ್ಪುಗಾರರನ್ನು ನಿಯೋಜಿಸುವಂತೆಯೂ ಅವರು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ಕುಮಾರ್ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈಗಾಗಲೇ ನಡೆಸಲಾದ ಕ್ರೀಡೆಗಳಲ್ಲಿ ವಿಜೇತರಾದ ಅಭ್ಯರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಕ್ರೀಡಾಳುಗಳಿಗೆ ಉತ್ತಮ ಉಟೋಪಚಾರ ಹಾಗೂ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಉತ್ತಮವಾದ ಸ್ಮರಣಿಕೆ ಮತ್ತು ಪ್ರಶಸ್ತಿಪ್ತತ್ರಗಳನ್ನು ಪ್ರದಾನ ಮಾಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಭೆಯಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಕಾರ್ಯದರ್ಶಿ ಆರ್.ಪಾಪಣ್ಣ, ಸಿದ್ಧಬಸಪ್ಪ, ಡಾ|| ಸಿ.ಎ.ಹಿರೇಮಠ್, ದಿನೇಶ್, ಮತ್ತಿತರರು ಉಪಸ್ಥಿತರಿದ್ದರು.
————-
ಈ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಫುಟ್ಬಾಲ್, ವಾಲಿಬಾಲ್, ಹಾಕಿ, ಕಬ್ಬಡ್ಡಿ, ಟೇಬಲ್ಟೆನ್ನಿಸ್, ಟೆನ್ನಿಸ್, ಷಟಲ್ಬ್ಯಾಡ್ಮಿಂಟನ್, ಕೇರಂ, ಬಾಲ್ಬ್ಯಾಡ್ಮಿಂಟನ್, ಕ್ರಿಕೆಟ್, ಬ್ಯಾಸ್ಕೆಟ್ಬಾಲ್, ಚೆಸ್, ಟೆನ್ನಿಕಾಯ್ಟ್, ಥ್ರೋಬಾಲ್, ಯೋಗ, ಖೋ-ಖೋ,ಈಜು, ಅಥ್ಲೆಟಿಕ್ಸ್, ಈ ಕ್ರೀಡೆಗಳಷ್ಟೇ ಅಲ್ಲದೇ ಹಿಂದೂಸ್ಥಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆ, ಕಥಕ್, ಮಣಿಪುರಿ, ಕೂಚುಪುಡಿ, ಕಥಕ್ಕಳಿ, ಓಡಿಸಿ, ಭರತನಾಟ್ಯ, ಜಾನಪದ ನೃತ್ಯ, ಸ್ಪ್ರಿಂಗ್ವಾದ್ಯಗಳ ಸ್ಪರ್ಧೆಗಳು ಹಾಗೂ ಕಿರುನಾಟಕ ಸ್ಪರ್ಧೆ ನಡೆಯಲಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಿಗಧಿಪಡಿಸಿದ ಮಾನದಂಡಗಳನ್ನು ಅನುಸರಿಸಲಾಗುವುದು
– ರೇಖ್ಯಾನಾಯ್ಕ್, ಕ್ರೀಡಾ ಅಧಿಕಾರಿ, ಶಿವಮೊಗ್ಗ.