ಸಚಿವ ಮಧು ಬಂಗಾರಪ್ಪ ಜನ್ಮದಿನದ ಪ್ರಯುಕ್ತ 35 ಬಂಗಾರಪ್ಪ ಒಡನಾಡಿಗಳಿಗೆ ವಿಮಾನ ಯಾತ್ರೆ ಭಾಗ್ಯ ದಿನವಿಡೀ ಕಾರ್ಯಕ್ರಮಗಳೇನು?

ಸಚಿವ ಮಧು ಬಂಗಾರಪ್ಪ ಜನ್ಮದಿನದ ಪ್ರಯುಕ್ತ

35 ಬಂಗಾರಪ್ಪ ಒಡನಾಡಿಗಳಿಗೆ ವಿಮಾನ ಯಾತ್ರೆ ಭಾಗ್ಯ

ದಿನವಿಡೀ ಕಾರ್ಯಕ್ರಮಗಳೇನು?

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬವನ್ನು ಮಾ. ೨ರಂದು ಸಡಗರ ಸಂಭ್ರಮದಿಂದ ಶಿವಮೊಗ್ಗದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಹಾಲಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೮ ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ೧೧ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಭಿಮಾನಿಗಳು, ಕಾರ್ಯರ್ತರು ಭಾಗವಹಿಸಲಿದ್ದಾರೆ ಎಂದರು.
ಬಂಗಾರಪ್ಪ ಒಡನಾಡಿಗಳಿಗೆ ವಿಮಾನಯಾನ ಭಾಗ್ಯ
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್ ಮಾತನಾಡಿ, ಮಧು ಬಂಗಾರಪ್ಪ ಅವರು ಹುಟ್ಟುಹಬ್ಬದ ನೆನಪಿನಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದ್ದಾರೆ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಗ್ರಾಮದಲ್ಲಿರುವ ತಂದೆ ಬಂಗಾರಪ್ಪನವರ ಸಮಕಾಲೀನರು ಹಾಗೂ ಸ್ನೇಹಿತರಾದ ೩೫ ಜನರನ್ನು ಶಿವಮೊಗ್ಗದಿಂದ ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿಯ ಬಂಗಾರಪ್ಪನವರ ಒಡನಾಡಿಗಳೊಂದಿಗೆ ಸೇರಿ ಹುಟ್ಟುಹಬ್ಬ ಆಚರಿಸಲಿದ್ದಾರೆ ಎಂದರು.
ಇದೊಂದು ಕೃತಜ್ಞಾಪೂರ್ವಕವಾದ ವಿಶೇಷ ಕಾರ್ಯಕ್ರಮವಾಗಿದ್ದು, ಈ ೩೫ ಜನರಲ್ಲಿ ಇದೇ ಮೊದಲಬಾರಿಗೆ ಬೆಂಗಳೂರಿಗೆ ಹೋಗುವವರು ಇದ್ದಾರೆ. ಬಂಗಾರಪ್ಪನವರು ತಮ್ಮ ಹುಟ್ಟೂರಿನ ಜನರನ್ನು ಎಂದೂ ಮರೆತವರಲ್ಲ. ಸಾವಿರಾರು ಜನರಿದ್ದರೂ ಕೂಡ ತಮ್ಮ ಸ್ನೇಹಿತರನ್ನು ಹೆಸರಿಡಿದು ಕರೆದು ಗಮನಸೆಳೆಯುತ್ತಿದ್ದರು. ಅತ್ಯಂತ ಜನಾನುರಾಗಿಯಾಗಿದ್ದ ಅವರ ಒಡನಾಡಿಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಅರ್ಥಪೂರ್ಣವಾಗಿ ಮಧು ಬಂಗಾರಪ್ಪನವರು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಮಧ್ಯಾಹ್ನ ೨ ಗಂಟೆಗೆ ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಇವರೆಲ್ಲ ಪ್ರಯಾಣ ಬೆಳೆಸಲಿದ್ದಾರೆ ಎಂದರು.
ಅಂದು ಬೆಳಗ್ಗೆ ೭.೩೦ಕ್ಕೆ ಆನವಟ್ಟಿಯಲ್ಲಿ ಅಲ್ಲಿನ ಗೆಳೆಯರು ಮತ್ತು ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸುತ್ತಾರೆ. ನಂತರ ೯ ಗಂಟೆಗೆ ಸೊರಬದ ಬಂಗಾರಧಾಮದಲ್ಲಿ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಲಿದ್ದಾರೆ. ೧೦.೩೦ಕ್ಕೆ ಮಧು ಬಂಗಾರಪ್ಪ ಅವರು ಸಾಗರದ ಕಾಗೋಡು ತಿಮ್ಮಪ್ಪ ಅವರ ಮನೆಗೆ ಹೋಗಿ ಆಶೀರ್ವಾದ ಪಡೆಯಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲೀಂ ಪಾಷಾ, ಯು. ಶಿವಾನಂದ್, ಇಕ್ಕೇರಿ ರಮೇಶ್, ಶಿವಣ್ಣ, ಯಮುನಾ ರಂಗೇಗೌಡ, ಮಂಜುನಾಥಬಾಬು, ಸ್ಟೆಲಾ ಮಾರ್ಟಿನ್, ಚಂದ್ರಕಲಾ, ರಾಜಶೇಖರ್ ಉಪಸ್ಥಿತರಿದ್ದರು.