ಮಾ.3ರಿಂದ 7 ರ ತನಕ ಕುವೆಂಪು ವಿವಿ- ಅಜೀಂ ಪ್ರೇಮ್ ಜಿ ವಿವಿ ಗಳಿಂದ ಮೌಂಟೆನ್ಸ್ ಆಫ್ ಲೈಫ್

ಮಾ.3ರಿಂದ 7 ರ ತನಕ ಕುವೆಂಪು ವಿವಿ- ಅಜೀಂ ಪ್ರೇಮ್ ಜಿ ವಿವಿ ಗಳಿಂದ ಮೌಂಟೆನ್ಸ್ ಆಫ್ ಲೈಫ್

ಶಿವಮೊಗ್ಗ: ಅಜೀಂ ಪ್ರೇಮ್ ಜೀ ವಿವಿ, ಕುವೆಂಪು ವಿವಿ ಇವರ ಸಂಯುಕ್ತಾಶ್ರಯದಲ್ಲಿ ಮಾ. ೩ರಿಂದ ೭ರ ತನಕ ವಿವಿಯ ಬಸವ ಸಭಾ ಭವನದಲ್ಲಿ ಭಾರತದ ವೈವಿಧ್ಯಮಯ ಪರ್ವತಗಳ ಕಥನ(ಮೌಂಟನ್ಸ್ ಆಫ್ ಲೈಫ್) ಹವಾಮಾನ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಕೆಲಸವಾಗಿದ್ದು, ನಮ್ಮ ಕ್ಯಾಂಪಸ್ ನಲ್ಲಿ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹಬ್ಬ ವಿದ್ಯಾರ್ಥಿಗಳಲ್ಲಿ ಹಾಗೂ ನಮ್ಮ ಪ್ರದೇಶದ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ಸಂಸ್ಕೃತಿಯ ಬಗ್ಗೆ ತಿಳಿಸುತ್ತದೆ. ನಮ್ಮ ವಿವಿ ಕೂಡ ಪಶ್ಚಿಮಘಟ್ಟದ ತಪ್ಪಲಲ್ಲೇ ಇರುವುದರಿಂದ ಪರಿಸರದ ಚೌಕಟ್ಟಿನಲ್ಲಿಯೇ ಈ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಸುತ್ತಮುತ್ತಲ ಶಾಲೆಯ ಮಕ್ಕಳು ಪರಿಸರಾಸಕ್ತರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಜೀಂ ಪ್ರೇಮ್ ಜೀ ವಿವಿಯ ರಿಜಿಸ್ಟ್ರಾರ್ ಡಾ. ಶರದ್ ಮಾತನಾಡಿ ಅಜೀಂ ಪ್ರೇಮ್ ಜೀ ವಿವಿಯು ಸಮಾಜೋಪಕಾರಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಸಾಮಾಜಿಕ ಗುರಿ ಇಟ್ಟುಕೊಂಡಿದೆ. ಮಾನವೀಯ ಮೌಲ್ಯದ ಅಡಿಯಲ್ಲಿ ಕೆಲಸ ಮಾಡುವ ಲಾಭ ರಹಿತ ಸಂಸ್ಥೆಯಾಗಿದೆ. ಈಗಾಗಲೇ ಇಂತಹ ಪರಿಸರ ಪ್ರೇಮದ ಕಾರ್ಯಕ್ರಮಗಳನ್ನು ೨೦೨೨ರಿಂದಲೇ ಪ್ರಸ್ತುತಪಡಿಸುತ್ತಾ ಬಂದಿದ್ದು, ಅದರ ಮುಂದುವರೆದ ಭಾಗವಾಗಿ ಕುವೆಂಪು ವಿವಿ ಸಹಕಾರದೊಂದಿಗೆ ಅರಣ್ಯ ಕಥನದ ಪರಿಸರ ಜಾಗೃತಿಯ ಮೌಂಟನ್ಸ್ ಆಫ್ ಲೈಫ್ ಎಂಬ ಕಾರ್ಯಕ್ರಮದ ಹಬ್ಬವನ್ನು ನಡೆಸುತ್ತಿದ್ದೇವೆ ಎಂದರು.
ಈ ಉತ್ಸವಕ್ಕಾಗಿಯೇ ದೇಶದ ಬೇರೆ ಬೇರೆ ಭಾಗಗಳ ವಿವಿಗಳ ವಿದ್ಯಾರ್ಥಿಗಳನ್ನು ಇಂಟರ್ನ್‌ಶಿಪ್ ಕಾರ್ಯಕ್ರಮದ ಮೂಲಕ ಆಯ್ಕೆ ಮಾಡಿಕೊಂಡು ಆ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ಕಥನಗಳನ್ನು ಪ್ರಸ್ತುತಪಡಿಸುತ್ತಾರೆ. ಸಾವನದುರ್ಗ ಮತ್ತು ಚಾಮುಂಡಿಬೆಟ್ಟಗಳಲ್ಲಿ ಮಾನವ ಪ್ರಕೃತಿ ನಡುವಿನ ಸಹಜೀವನದ ಕಥನದಿಂದ ಹಿಡಿದು ಪರ್ವತಗಳ ಸಂಸ್ಕೃತಿ ಅದನ್ನು ಹೆಣಗಾಡಲು ಹೋರಾಟ ಮಾಡುತ್ತಿರುವ ಸಮುದಾಯದ ಪಯಣಗಳು ಕೂಡ ಈ ಉತ್ಸವದಲ್ಲಿ ಪ್ರಕಟವಾಗಲಿವೆ ಎಂದರು.
ಉತ್ಸವದ ಅಂಗವಾಗಿ ಕುವೆಂಪು ವಿವಿಯ ಬೇರೆ ಬೇರೆ ಸಭಾಂಗಣಗಳಲ್ಲಿ ಪ್ರತಿದಿನವೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವು ಸಂವಾದಾತ್ಮಕ ಕಾರ್ಯಾಗಾರಗಳು ತಜ್ಞರ ಜೊತೆ ಚರ್ಚೆ, ಚಲನಚಿತ್ರಗಳ ವೀಕ್ಷಣೆ, ಜಾನಪದ ಹಾಡುಗಳು, ಪ್ರಾಚೀನ ಶಿಲಾಯುಗದ ವರ್ಣಚಿತ್ರಗಳು, ಕಲ್ಲಿನ ಕೆತ್ತನೆಗಳು, ಡೊಳ್ಳು ಕುಣಿತ, ಲಂಬಾಣಿ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದ ಎಂದರು.
ಸಂಚಾಲಕ ಪ್ರೊ. ಯೋಗೇಂದ್ರ ಕೆ. ಮಾತನಾಡಿ, ಈಗಾಗಲೇ ಸುಮಾರು ೩ ಸಾವಿರ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮಾ. ೩ರಂದು ಬೆಳಗ್ಗೆ ೧೦ ಗಂಟೆಗೆ ದೆಹಲಿಯ ಪರಿಸರ ಅಧ್ಯಯನ ಕೇಂದ್ರದ ಚೇರ್ಮನ್ ಡಾ. ಅಶೋಕ್ ಖೋಸ್ಲಾ ಉತ್ಸವ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದೆಹಲಿ ಎನ್.ಸಿ.ಆರ್.ನ ರಿಶಾದ್ ವಿವಿಯ ಕುಲಪತಿ ಸುರೇಶ್ ಬಾಬು, ಶಿವಮೊಗ್ಗ ಜಿಪಂ ಸಿಇಒ ಹೇಮಂತ್, ಅಜೀಂ ಪ್ರೇಮ್ ಜೀ ವಿವಿಯ ಸಹ ನಿರ್ದೇಶಕ ಎಸ್.ವಿ. ಮಂಜುನಾಥ್, ಕುವೆಂಪು ವಿವಿ ಕುಲಸಚಿವರಾದ ಎ.ಎಲ್. ಮಂಜುನಾಥ್, ಎಸ್.ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಹೆಚ್.ಎನ್. ರಮೇಶ್ ಮುಂತಾದವರು ಉಪಸ್ಥಿತರಿರುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿದ್ಯಾ ರಮೇಶ್, ಎಸ್. ಚತುರ್ವೇದಿ, ಪ್ರೊ. ಜೆ.ನಾರಾಯಣ್, ಡಾ. ಸತ್ಯಪ್ರಕಾಶ್ ಇದ್ದರು.