ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಜೆಡಿಎಸ್ ಪ್ರತಿಭಟನೆ

ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಜೆಡಿಎಸ್ ಪ್ರತಿಭಟನೆ

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಪಕ್ಷ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಗ್ಯಾರೆಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರೆಂಟಿಗಳಿಗೆ ನೀಡಲು ಹಣವಿಲ್ಲದೆ ಪರದಾಡುತ್ತಿದೆ. ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಸ್ಥಗಿತವಾಗಿದೆ. ಅನ್ನ ಭಾಗ್ಯಕ್ಕೆ ನೀಡುವ ಅಕ್ಕಿಯೂ ಇಲ್ಲ. ಹಣವೂ ಇಲ್ಲವಾಗಿದೆ. ಗುತ್ತಿಗೆದಾರರಿಗೆ ನೀಡಬೇಕಾಗದ ೩೨ ಸಾವಿರ ಕೋಟಿ ಹಣ ಇನ್ನೂ ಬಾಕಿ ಇದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕಡಿತವಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸಿಲ್ಲ. ರೈತರ ಆತ್ಮಹತ್ಯೆ ಅವ್ಯಾಹತವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ಕೆ.ಬಿ.ಪ್ರಸನ್ನಕುಮಾರ್,  ಈ ಸರ್ಕಾರ ಜೀವಂತವಾಗಿಲ್ಲ. ಎಲ್ಲಾ ಭಾಗ್ಯಗಳು ಇಲ್ಲವಾಗಿವೆ. ಆತ್ಮಹತ್ಯೆ ಭಾಗ್ಯವೊಂದೇ ಉಳಿದಿರುವುದು. ಯಾವುದೇ ಅಭಿವೃದ್ಧಿ ಕಾರ್ಯವೂ ಇಲ್ಲ. ಸರ್ಕಾರದಲ್ಲಿ ಹಣವೂ ಇಲ್ಲ, ರೈತರ ಬದುಕಂತು ಹೇಳ ತೀರದಾಗಿದೆ. ಈ ಮಧ್ಯ ಬೆಲೆ ಏರಿಕೆ, ಕುಡಿಯಲು ನೀರಿಲ್ಲ, ಇಂತಹ ಸರ್ಕಾರ ನಮಗೆ ಬೇಕೆ ಸರ್ಕಾರ ಸತ್ತು ಹೋಗಿದೆ ಎಂದರು.
ನಿರಂತರ ಕುಡಿಯುವ ನೀರು ಸರಬರಾಜು ಕೂಡ ಸರಿಯಾಗಿ ಆಗುತ್ತಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಹಳೆಯ ಕುಡಿಯುವ ನೀರಿನ ಸರಬರಾಜು ಪದ್ಧತಿಯೇ ಸರಿಯಾಗಿತ್ತು. ಅದನ್ನೇ ಮುಂದುವರಿಸಬೇಕು. ಇ-ಸ್ವತ್ತು ಪಡೆಯಲು ಸಾರ್ವಜನಿಕರು ಪಾಲಿಕೆಗೆ ಅಲೆದಾಡುವಂತಾಗಿದೆ. ಹಳೆಯ ಡಾಟಾಬೇಸ್‌ನಲ್ಲಿ ಎಲ್ಲ ಮಾಹಿತಿಗಳಿವೆ. ಇದನ್ನು ಬಳಸಿಕೊಂಡು ಇ-ಸ್ವತ್ತನ್ನು ಸರಳೀಕರಣಗೊಳಿಸಬೇಕು.  ಗೋಪಿಶೆಟ್ಟಿಕೊಪ್ಪದ ಆಶ್ರಯ ಮನೆಗಳ ಮಾಹಿತಿಗಳೂ ಗ್ರಾಮ ಪಂಚಾಯತಿಯಲ್ಲಿರುವುದರಿಂದ ಅವುಗಳನ್ನೇ ಪಾಲಿಕೆಯಲ್ಲಿಟ್ಟುಕೊಂಡು ಮುಂದೆ ವಾರ್ಡ್‌ಗಳ ವಿಸ್ತರಣೆಗೆ ಅಳವಡಿಸಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ದೀಪಕ್‌ಸಿಂಗ್, ತ್ಯಾಗರಾಜ್, ಮಧುಕುಮಾರ್, ಗೀತಾ ಸತೀಶ್, ಸಂಗಯ್ಯ, ಗಂಧದಮನೆ ನರಸಿಂಹ, ದಾದಾಪೀರ್, ಅಬ್ದುಲ್ ವಾಜಿದ್, ಶ್ಯಾಮ್,  ಮಾಧವಮೂರ್ತಿ, ವಿನಯ್, ನಿಖಿಲ್, ಬಾಬು, ಸಿದ್ದೇಶ್, ಚಟ್ನಳ್ಳಿ ಸುರೇಶ್ ಮೊದಲಾದವರಿದ್ದರು.