ಸಾಗರ ನಗರಸಭೆ; ಸ್ಥಾಯಿ ಸಮಿತಿ ಗೊಂದಲ- ಜಿಲ್ಲಾಧಿಕಾರಿಗಳ ಅಂಗಳಕ್ಕೆ ತಲುಪಿದ ವಿವಾದ! ಮುಂದೇನಾಯ್ತು?*
*ಸಾಗರ ನಗರಸಭೆ; ಸ್ಥಾಯಿ ಸಮಿತಿ ಗೊಂದಲ- ಜಿಲ್ಲಾಧಿಕಾರಿಗಳ ಅಂಗಳಕ್ಕೆ ತಲುಪಿದ ವಿವಾದ! ಮುಂದೇನಾಯ್ತು?*
ಸಾಗರ : ಸ್ಥಾಯಿ ಸಮಿತಿ ಆಯ್ಕೆ ಸಂಬಂಧ ಗುರುವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಹೈಡ್ರಾಮ ನಡೆದಿದ್ದು, ಆಡಳಿತರೂಢ ಬಿಜೆಪಿ 11 ಸದಸ್ಯರನ್ನು ಘೋಷಣೆ ಮಾಡಿದ ಬೆನ್ನಲ್ಲೆ ವಿಪಕ್ಷ ಕಾಂಗ್ರೆಸ್ ತಮಗೆ ಬಹುಮತ ಇದ್ದು ತಾವು ಘೋಷಣೆ ಮಾಡುವ ಸ್ಥಾಯಿ ಸಮಿತಿಯನ್ನು ಅಂತಿಮಗೊಳಿಸಿ ಎಂದು ಪಟ್ಟುಹಿಡಿದ ಘಟನೆ ನಡೆಯಿತು.
ಮೈತ್ರಿ ಪಾಟೀಲ್ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಮೊದಲ ಸಾಮಾನ್ಯಸಭೆ ಆಯೋಜನೆಗೊಂಡಿತ್ತು. ಸಭೆಯಲ್ಲಿ ಮೊದಲ ವಿಷಯವಾಗಿ ಸ್ಥಾಯಿ ಸಮಿತಿ ಆಯ್ಕೆ ವಿಷಯ ಪ್ರಸ್ತಾಪಿಸಲಾಯಿತು. ಆಡಳಿತ ಪಕ್ಷದ ಪರವಾಗಿ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಕಾನೂನುಪ್ರಕಾರವಾಗಿ ನಿಯಮಾನುಸಾರ ಸ್ಥಾಯಿ ಸಮಿತಿ ಸದಸ್ಯರನ್ನು ನೇಮಕ ಮಾಡುವಂತೆ ಮನವಿ ಮಾಡಿದರು. ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಒಳಗೊಂಡ 11 ಸದಸ್ಯರ ಹೆಸರನ್ನು ಘೋಷಣೆ ಮಾಡಿದರು. ಇದಕ್ಕೆ ವಿಪಕ್ಷ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸೈಯದ್ ಜಾಕೀರ್, ತಸ್ರೀಫ್, ರವಿಕುಮಾರ್ ಇನ್ನಿತರರು ವಿರೋಧ ವ್ಯಕ್ತಪಡಿಸಿ. ಸಭೆಯಲ್ಲಿ ಬಹುಮತದ ಮೂಲಕ ಆಯ್ಕೆ ನಡೆಸಿ. ನಿಮ್ಮಲ್ಲಿ ಬಹುಮತ ಇಲ್ಲ ಎಂದು ಪಟ್ಟು ಹಿಡಿದರು.
ಅಧ್ಯಕ್ಷೆ ಮೈತ್ರಿ ಪಾಟೀಲ್ ಸಭೆಯಲ್ಲಿನ ಬಹುಮತದ ತೀರ್ಮಾನದಂತೆ ಸ್ಥಾಯಿ ಸಮಿತಿಗೆ 11 ಸದಸ್ಯರನ್ನು ಆಯ್ಕೆ ಮಾಡಿದ್ದಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಹೆಸರು ಘೋಷಣೆ ಮಾಡಲು ಅಡ್ಡಿಪಡಿಸಿದರು. ಆದರೂ ಮೈತ್ರಿ ಪಾಟೀಲ್ ಹೆಸರು ಘೋಷಣೆ ಮಾಡಿ ಸಭೆಯಿಂದ ಹೊರಗೆ ನಡೆದರು. ಅವರ ಹಿಂದೆಯೆ ಆಡಳಿತ ಪಕ್ಷದ ಎಲ್ಲ ಸದಸ್ಯರು ಹೊರಗೆ ಹೊರಟರು. ವಿಪಕ್ಷ ಸದಸ್ಯರು ನಗರಸಭೆ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ದ ದಿಕ್ಕಾರ ಕೂಗಿದ ಘಟನೆ ನಡೆಯಿತು.
ಏಕಾಏಕಿ ಸಭೆಯನ್ನು ಬರಕಾಸ್ತುಗೊಳಿಸಿ ಸದಸ್ಯರೆಲ್ಲರ ಒಮ್ಮತದ ಅಭಿಪ್ರಾಯ ಕೇಳದೆ ಸ್ಥಾಯಿ ಸಮಿತಿ ಹೆಸರು ಘೋಷಣೆ ಮಾಡಿ ಸಭೆಯಿಂದ ಹೊರಗೆ ನಡೆದ ಅಧ್ಯಕ್ಷರ ವಿರುದ್ದ ಶಾಸಕರಾದಿಯಾಗಿ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಹೆಸರು ಘೋಷಣೆ ಕಾನೂನುಬದ್ದವಾಗಿಲ್ಲ. ಸಭೆಯಲ್ಲಿ ಅವರಿಗೆ ಬಹುಮತ ಇಲ್ಲ. ಆದರೂ ಹೆಸರು ಘೋಷಣೆ ಮಾಡಿರುವ ಕ್ರಮ ಕಾನೂನುಬಾಹಿರವಾಗಿದ್ದು, ಸಭೆಯನ್ನು ಅಸಿಂಧುಗೊಳಿಸಿ, ಅವರು ಘೋಷಣೆ ಮಾಡಿರುವ ಹೆಸರನ್ನು ಮಾನ್ಯ ಮಾಡಬಾರದು ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ಸ್ಥಾಯಿ ಸಮಿತಿ ಸದಸ್ಯರ ಹೆಸರನ್ನು ಘೋಷಣೆ ಮಾಡುವುದು ಚುನಾವಣಾಧಿಕಾರಿಯೂ ಆಗಿರುವ ನಗರಸಭೆ ಅಧ್ಯಕ್ಷರ ಪರಮಾಧಿಕಾರ. ಇದಕ್ಕೆ ನಾನು ಆಕ್ಷೇಪಣೆ ವ್ಯಕ್ತಪಡಿಸಲು ಬರುವುದಿಲ್ಲ. ಅವರು ಘೋಷಣೆ ಮಾಡುವ ಮೊದಲು ಕಾನೂನಿನ ಬಗ್ಗೆ ಅವರಿಗೆ ತಿಳಿಸಿದ್ದೇನೆ. ನೀವು ಅಧ್ಯಕ್ಷರ ನಿರ್ಣಯಕ್ಕೆ ಆಕ್ಷೇಪಣೆ ಸಲ್ಲಿಸಿದರೆ ನಾನು ಅದನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿ ಕೊಡುತ್ತೇನೆ ಎಂದು ಸಭೆಗೆ ತಿಳಿಸಿದರು.
ಶಾಸಕ ಬೇಳೂರು ಆಕ್ರೋಶ :
ಬಿಜೆಪಿಯವರಿಗೆ ಕಾನೂನುಬದ್ದವಾಗಿ ಆಡಳಿತ ನಡೆಸಲು ಮನಸ್ಸಿದ್ದಂತೆ ಕಾಣುತ್ತಿಲ್ಲ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯದೆ ಸ್ಥಾಯಿ ಸಮಿತಿ ಹೆಸರು ಘೋಷಣೆ ಮಾಡಿ ಇನ್ನು ಚರ್ಚಿಸುವ ವಿಷಯ ಇದ್ದಾಗ್ಯೂ ಸಭೆಯಿಂದ ಪಲಾಯನಗೈದಿದ್ದಾರೆ.
ಟಿ.ಡಿ.ಮೇಘರಾಜ್ ಕಾನೂನು ಪಂಡಿತರಂತೆ ಮಾತನಾಡುತ್ತಾರೆ. ಹಿಂದೆ ಒಳಚರಂಡಿ ಕಾಮಗಾರಿಗೆ ನಗರಸಭೆ ಅನುದಾನ 20 ಕೋಟಿ ಬಳಸಿ ಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕನಾಗಿ ಊರಿನ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ಕೊಡಲು ನಾನು ಬದ್ದನಿದ್ದೇನೆ. ಆದರೆ ಪಲಾಯನ ರಾಜಕಾರಣ ಮಾಡುವ ಇವರಿಗೆ ಯಾವ ರೀತಿ ಬೆಂಬಲ ಕೊಡಬೇಕು. ಸಾಮಾನ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಆದರೂ ಸ್ಥಾಯಿ ಸಮಿತಿ ಘೋಷಣೆ ಮಾಡಿ ಅಧ್ಯಕ್ಷರು ಸಭೆಯಿಂದ ಓಡಿ ಹೋಗಿದ್ದಾರೆ. ನಮ್ಮ ಸದಸ್ಯರು ಡಿಸೆಂಟ್ ಬರೆದಿದ್ದು, ಜಿಲ್ಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಕಳಿಸಲಾಗುತ್ತದೆ. ಇದರ ವಿರುದ್ದ ಕಾನೂನು ಹೋರಾಟ ಸಹ ನಡೆಸಲಾಗುತ್ತದೆ ಎಂದರು.
ಕಾಂಗ್ರೆಸ್ಸಿಗರಿಂದ ಶೋಷಣೆ :
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷೆ ಮೈತ್ರಿ ಪಾಟೀಲ್, ರೂಲಿಂಗ್ ನೀಡಿ ನಾವು ಹೊರ ಬಂದ ನಂತರ ಸಭೆ ಮುಕ್ತಾಯವಾಗಿದೆ. ಸಭೆ ಮುಕ್ತಾಯವಾದರೂ ವಿಪಕ್ಷದವರು ಮತ್ತೆ ಸಭೆ ನಡೆಸಿರುವುದು ಎಷ್ಟು ಸರಿ. ನಗರಸಭೆ ನಿಯಮಾನುಸಾರ ಆಡಳಿತ ನಡೆಸಲು ಬಿಡುತ್ತಿಲ್ಲ. ಆಯುಕ್ತರು, ಅಧಿಕಾರಿಗಳನ್ನು ಬೆದರಿಸಿ ನಗರಸಭೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಅಧ್ಯಕ್ಷೆ, ಉಪಾಧ್ಯಕ್ಷರು ಅಧಿಕಾರ ನಡೆಸುತ್ತಿರುವ ಸಂದರ್ಭದಲ್ಲಿ ಇಂತಹ ದಬ್ಬಾಳಿಕೆ ನಡೆಸುತ್ತಿರುವುದು ಕಾಂಗ್ರೆಸ್ಸಿನ ಮಹಿಳಾ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ಇದನ್ನು ಖಂಡಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ;
ಈ ಕೂಡಲೇ ಸ್ಥಾಯಿ ಸಮಿತಿ ರಚನೆ ಸಂಬಂಧ ಅಧ್ಯಕ್ಷರ ಕಾನೂನು ಬಾಹಿರ ನಿರ್ಣಯವನ್ನು ವಜಾ ಮಾಡಬೇಕು. ಮತ್ತೆ ಸದಸ್ಯರ ಸಭೆ ಕರೆಯಬೇಕು. ಕಾಯಿದೆ 56 ಸೆಕ್ಷನ್ ಅಡಿ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಸದಸ್ಯರು ಮನವಿ ನೀಡಿದರು.