ನಿಮಗೆ ಈ ಹಲಾಲ್ ಬಜೆಟ್ ಅಸಲೀ ಕಥೆ ಗೊತ್ತಾ?* – ಮಾಚಯ್ಯ ಎಂ ಹಿಪ್ಪರಗಿ

*ನಿಮಗೆ ಈ ಹಲಾಲ್ ಬಜೆಟ್ ಅಸಲೀ ಕಥೆ ಗೊತ್ತಾ?*
– ಮಾಚಯ್ಯ ಎಂ ಹಿಪ್ಪರಗಿ

ಸಿದ್ದರಾಮಯ್ಯನವರು ಮಂಡಿಸಿದ ಹದಿನಾರನೇ ಬಜೆಟ್ಟನ್ನು ಬಿಜೆಪಿ ಟೀಕಿಸುತ್ತೆ ಅನ್ನೋದ್ರಲ್ಲಿ ಯಾವ ಸಂಶಯವೂ ಇರಲಿಲ್ಲ. ಆದರೆ ಅದನ್ನ ಹಲಾಲ್ ಬಜೆಟ್, ಸಾಬ್ರ ಬಜೆಟ್, ಪಾಕಿಸ್ತಾನಿ ಬಜೆಟ್‌ ಅಂತೆಲ್ಲ ಅಂಡರ್‍‌ರೇಟೆಡ್‌ ಕಮೆಂಟ್ ಮಾಡುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಯಾಕಂದ್ರೆ ಬಜೆಟ್‌ನ್ನು ಟೀಕೆ ಮಾಡೋದಕ್ಕೂ ಒಂದು ಡಿಗ್ನಿಫೈಡ್‌ ಲಾಂಗ್ವೇಜ್‌ ಇದೆ. ಸ್ವಲ್ಪ ಎಕನಾಮಿಕ್ಸು, ಚೂರು ಸೋಶಿಯಲ್‌ ಕನ್ಸರ್ನು, ರುಚಿಗೆ ತಕ್ಕಷ್ಟು ಪೊಲಿಟಿಕ್ಸ್‌ ಅನ್ನು ಮಿಕ್ಸ್‌ ಮಾಡಿ ಟೀಕೆ ಮಾಡುವುದು ಸಾಮಾನ್ಯ ವಾಡಿಕೆ. ಇದು ಬಜೆಟ್ಟನ್ನು ಟೀಕಿಸುವ ವೈಖರಿಯಲ್ಲ; ನಮಗೂ ವಸಿ ಎಕನಾಮಿಕ್ಸ್‌ನ ಗಂಧಗಾಳಿ ಗೊತ್ತಿದೆ ಎಂದು ಜನರ ಮುಂದೆ ಬಿಲ್ಡಪ್ ತೆಗೆದುಕೊಳ್ಳುವ ರೆಡಿಮೇಡ್‌ ದಾರಿ. ಇಷ್ಟು ದಿನ ವಿರೋಧ ಪಕ್ಷಗಳು ಇದನ್ನೇ ಮಾಡಿಕೊಂಡು ಬಂದಿದ್ದವು.. ಬಿಜೆಪಿ ಕೂಡಾ!

ಆದ್ರೆ ಈ ಬಾರಿ ಬಜೆಟ್ಟನ್ನು ಟೀಕಿಸಲು ಬಿಜೆಪಿ ಆಯ್ಕೆ ಮಾಡಿಕೊಂಡ ಅನ್‌-ಕನ್ವೆನಷನಲ್‌ ಅಡ್ಡದಾರಿಯಿದೆಯಲ್ಲ, ಅದಂತೂ ನಾಚಿಕೆಗೇಡಿನ ವಿಚಾರ. ತಲೆಯಲ್ಲಿ ಮಿದುಳು ಚೂರೇಚೂರು ಕೆಲಸ ಮಾಡುತ್ತಿರುವ ಎಂತವರೂ ಬಿಜೆಪಿಯ ಈ ಟೀಕಾ ಮಾನದಂಡವನ್ನು ಕ್ಯಾಕರಿಸಿ ಉಗಿಯದೆ ಇರಲಾರರು. ದುರಂತವೆಂದರೆ, ನಮ್ಮ ಮೀಡಿಯಾಗಳು ಕೂಡಾ ಬಿಜೆಪಿಯ ಈ ಸ್ಟ್ರಾಟಜಿಯನ್ನು ಜನರ ತಲೆಗೆ ತುಂಬಲು ಹೆಣಗಾಡಿ, ಅಳಿದುಳಿದ ತಮ್ಮ ಮರ್ಯಾದೆಯನ್ನೂ ಮೂರು ಕಾಸಿಗೆ ಹರಾಜು ಹಾಕಿಕೊಳ್ಳುತ್ತಿವೆ.

ಅದು ಸರಿ, ಆದ್ರೆ ಭರ್ಜರಿ ಬಫೂನ್‌ಗಳೇ ತುಂಬಿಕೊಂಡಿರುವ ಈ ಬಿಜೆಪಿ ಇಂಥಾ ತಲೆಕೆಟ್ಟ ಸ್ಟ್ರಾಟಜಿ ಹೊಳೆದಿದ್ದಾರು ಹೇಗೆ? ಅದೇ ರೋಚಕ ಕಥೆ….

ನಿಜ ಹೇಳ್ಬೇಕು ಅಂದ್ರೆ, ಬಿಜೆಪಿ ನಾಯಕರು ಟೀಕೆ ಮಾಡ್ತಾ ಇರೋದಾಗಲಿ, ಅದನ್ನೇ ಆಧರಿಸಿ ಮೀಡಿಯಾಗಳು ಸಾಬ್ರ ಬಜೆಟ್‌ ಅಂತ ಬೊಬ್ಬಿರೀತಾ ಇರೋದಾಗ್ಲಿ ಇದ್ಯಾವುದೂ ಸ್ವಂತ ಟೀಕೆಗಳಲ್ಲ; ಆರೆಸ್ಸೆಸ್‌ನ ಕೇಶವಕೃಪಾದಿಂದ ಎರಡು ದಿನ ಮೊದಲೇ ಫೀಡ್‌ ಆಗಿದ್ದ, ಪ್ರಿ-ಪ್ಲ್ಯಾನ್ಡ್‌ ದಾಳಿಗಳು!

ಸಾಮಾನ್ಯವಾಗಿ, ಬಜೆಟ್‌ ಮಂಡನೆಯಾದ ನಂತರ ಅದರಲ್ಲಿರುವ ಅಥವಾ ಇರಬೇಕಿದ್ದ ಸಂಗತಿಗಳನ್ನು ಆಧರಿಸಿ ಟೀಕೆ ಮಾಡೋದು ಸಹಜ. ಆದ್ರೆ ಬಿಜೆಪಿ ಮತ್ತು ಮೀಡಿಯಾ ನೆಕ್ಸಸ್‌ ಈಗೇನು ಬೊಬ್ಬಿರಿತಾ ಇದೆಯಲ್ವಾ, ಅದು ಬಜೆಟ್‌ ಮಂಡನೆಗು ಮೊದಲೇ ಹೀಗೇ ದಾಳಿ ಮಾಡಬೇಕೆಂದು ಫಿಕ್ಸ್‌ ಆಗಿತ್ತು.

ಆಗಿದ್ದಿಷ್ಟು….

ಕಾಂಗ್ರೆಸ್‌ನಲ್ಲಿ ಪರಮಪವಿತ್ರ ಜಾತ್ಯತೀತ ತತ್ವದವರೇ ತುಂಬಿಕೊಂಡಿದ್ದಾರೆ ಅನ್ನೋದು ನಮ್ಮ ಭ್ರಮೆ. ಆರೆಸ್ಸೆಸ್‌ ಜೊತೆಗೆ ನೇರಾನೇರ ನಂಟು ಉಳಿಸಿಕೊಂಡ ಅಸಂಖ್ಯ `ಅಂದರಿಕಿ ಮಂಚಿವಾಡು’ ರಾಜಕಾರಣಿಗಳು ಬೇಕಾದಷ್ಟು ಜನ ಇದ್ದಾರೆ. ಹಾಗಾಗಿ ಆರೆಸ್ಸೆಸ್‌ ಮನಸ್ಥಿತಿಯ ಆಫೀಸರ್‍‌ಗಳು ಕಾಂಗ್ರೆಸ್‌ ಸರ್ಕಾರದ ಕೆಲ ಆಯಕಟ್ಟಿನ ಜಾಗೆಯಲ್ಲಿ ಠಳಾಯಿಸಿಕೊಂಡಿದ್ದಾರೆ. ಅಂತವರಿಂದಲೇ ಆಗಿಂದಾಗ್ಗೆ ಸರ್ಕಾರಕ್ಕೆ ಸಂಬಂಧಪಟ್ಟ ಕೆಲ ಸಂಗತಿಗಳು ಲೀಕ್‌ ಆಗಿ ಕಾಂಗ್ರೆಸ್‌ಗೆ ಮುಜುಗರ ಉಂಟಾಗುತ್ತಿರೋದು. ಅಂತದ್ದೇ ಒಬ್ಬ ಅಧಿಕಾರಿ ಇತ್ತೀಚೆಗೆ ಕೇಶವಕೃಪಕ್ಕೆ ಒಂದು ಸುದ್ದಿ ಮುಟ್ಟಿಸಿದ್ದ. ಈ ಸಲ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯನವರು ಇಪ್ಪತ್ತೈದು ಸಾವಿರ ಕೋಟಿ ಭರ್ಜರಿ ಅನುದಾನ ಕೊಡ್ತಾ ಇದಾರೆ ಅನ್ನೋದು ಆ ಸುದ್ದಿ. ಆರೆಸ್ಸೆಸ್‌ ಪಾಲಿಗೆ ನಂಬಿಕಸ್ಥನಾದ ಆತನ ಮಾತನ್ನು ಕೇಶವಕೃಪ ಸೀರಿಯಸ್ಸಾಗಿ ನಂಬಿತು.

ಅದೇ ವೇಳೆಗೆ, ಮೂರ್‍ನಾಲ್ಕು ದಿನಗಳ ಹಿಂದೆ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ವಿಚಾರವೂ ಚರ್ಚೆಗೆ ಬಂದಿತ್ತು. ಅದನ್ನೇ ನೆಪ ಮಾಡಿಕೊಂಡ ಕೇಶವಕೃಪ, ಒಂದು ಯೋಜನೆ ಹೆಣೆಯಿತು. ಗುತ್ತಿಗೆ ಮೀಸಲಾತಿ ಕೊಡೋದಲ್ಲದೆ, ಅಲ್ಪಸಂಖ್ಯಾತರಿಗೆ ಇಪ್ಪತ್ತೈದು ಸಾವಿರ ಕೋಟಿ ಕೊಡ್ತಾ ಇರುವ ಸಿದ್ದರಾಮಯ್ಯನವರ ಬಜೆಟ್‌ ಮೇಲೆ ಧರ್ಮದ ಆಧಾರದಲ್ಲೇ ದಾಳಿ ಮಾಡಿದರೆ, ಜನರನ್ನು ಹಿಂದೂ-ಮುಸ್ಲಿಂ ವಿಭಜನೆಯ ಮೇಲೆ ಸರ್ಕಾರದ ವಿರುದ್ಧ ಎತ್ತಿಕಟ್ಟಬಹುದು ಅನ್ನೋದು ಆ ಯೋಜನೆ. ತಡ ಮಾಡಲಿಲ್ಲ, ಬಿಜೆಪಿ ನಾಯಕರನ್ನೆಲ್ಲ ಸಂಪರ್ಕಿಸಿ ಬಜೆಟ್‌ ನಂತರ ಯಾವ ಲೈನ್‌ನಲ್ಲಿ ಟೀಕೆ ಮಾಡಬೇಕು ಅನ್ನೋದನ್ನು ಉರುಹೊಡೆಸಲಾಯ್ತು. ಬಜೆಟ್‌ಗು ಒಂದು ದಿನ ಮೊದಲೇ ಬಿಜೆಪಿ ಐಟಿ ಸೆಲ್‌ ಸಿದ್ದರಾಮಯ್ಯನವ ನೆತ್ತಿಗೆ ಸಾಬರ ಟೋಪಿ ಹಾಕಿ, ಹಲಾಲ್‌ ಬಜೆಟ್‌ ಎಂದು ಲೇವಡಿ ಮಾಡಿದ್ದ ಪೋಸ್ಟರ್‍‌ ರೆಡಿಯಾಯ್ತು.

ಇಷ್ಟಾದರೆ ಸಾಕೇ? ತಾವು ಆರೋಪ ಮಾಡಿದ್ದನ್ನು ನ್ಯೂಸ್‌ ಚಾನೆಲ್ಲುಗಳು, ಪತ್ರಿಕೆಗಳು ತಮ್ಮ ಪೋಸ್ಟರ್‍‌ ಸಮೇತ ಪುನಾಃಪುನಃ ಜಗ್ಗಾಡಿದಾಗ ಮಾತ್ರವಲ್ಲವೇ, ಜನ ಇದನ್ನು ಸೀರಿಯಸ್ಸಾಗಿ ಪರಿಗಣಿಸೋದು? ಕೇಶವಕೃಪಕ್ಕೆ ಇದೇನು ಕಷ್ಟದ ಕೆಲಸವಲ್ಲ. ಯಾಕೆಂದರೆ ಇವತ್ತಿನ ಬಹುಪಾಲು ಮೀಡಿಯಾಗಳು, ಪತ್ರಿಕೆಗಳು ಚೆಡ್ಡಿ ಮೀಡಿಯಾಗಳೆಂಬ ಹಣೆಪಟ್ಟಿಗೆ ಗುರಿಯಾಗಿವೆ. ಬಿಜೆಪಿ ನಾಯಕರಿಗಿಂತ ಶಿರಸಾವಹಿಸಿ ಕೇಶವಕೃಪಾದ ಆಣತಿಯನ್ನು ಪಾಲಿಸುತ್ತವೆ. ಆದರೂ ಅಫಿಶಿಯಲ್ಲಾಗಿ ಒಂದು ಬ್ರೀಫಿಂಗ್‌ ಆಗಬೇಕಲ್ಲವಾ?

ಅದಕ್ಕೂ ವ್ಯವಸ್ಥೆಯಾಯ್ತು. ಸಾಮಾನ್ಯವಾಗಿ ಬಜೆಟ್‌ ಹಿಂದಿನ ದಿನ ಮುಖ್ಯಮಂತ್ರಿಗಳು ಮೀಡಿಯಾಗಳಿಗೆ ಔತಣ ಕೊಡುವುದು ವಾಡಿಕೆ. ಅದರಂತೆ ಎಲ್ಲಾ ಮೀಡಿಯಾದವರನ್ನು ತಮ್ಮ ಗೃಹಕಚೇರಿಗೆ ಕರೆದು ಔತಣ ಕೊಟ್ಟರು. ಅಲ್ಲಿ ಔತಣ ಮುಗಿಸಿಕೊಂಡ ಬಹುಪಾಲು ಮೀಡಿಯಾದವರು ಸೀದಾ ಹೋಗಿದ್ದು ಕೇಶವಕೃಪಾಗೆ. ಅಲ್ಲಿಗೆ ಬರುವಂತೆ ಅವರಿಗೆ ಮೊದಲೇ ಆಣತಿಯಿತ್ತು. ಸಿದ್ದರಾಮಯ್ಯನವರ ಕೂಟದಲ್ಲಿ ಚೆನ್ನಾಗಿ ತಿಂದುಂಡ ಮೀಡಿಯಾದವರು, ಕೇಶವಕೃಪಾದಲ್ಲಿ ಪ್ರಸಾದದ ಸಮೇತ ನಾಳೆ ಯಾವ ಲೈನ್‌ ನಲ್ಲಿ ಬಜೆಟ್‌ ಮೇಲೆ ಅಟ್ಯಾಕ್‌ ಮಾಡಬೇಕು ಅನ್ನೋ ಗೀತೋಪದೇಶ ಪಡೆದು ಬಂದರು.

ಆದರೆ, ಅವರ ಇಡೀ ಲೆಕ್ಕಾಚಾರವೇ ತಲೆಕೆಳಗಾಗಿ ಹೋಯ್ತು!!

ಯಾವ ನಂಬಿಕಸ್ತ, ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಇಪ್ಪತ್ತೈದು ಸಾವಿರ ಕೊಡ್ತಿದ್ದಾರೆ ಅಂತ ಮಾಹಿತಿ ಕೊಟ್ಟಿದ್ದನೋ, ಆ ನಂಬಿಕಸ್ತನ ಮಾಹಿತಿಯೇ ಸುಳ್ಳಾಯ್ತು. ಸಿದ್ದರಾಮಯ್ಯನವರು ತಮ್ಮ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದು ಅಜಮಾಸು 4500 ಕೋಟಿಯನ್ನಷ್ಟೆ. ಒಟ್ಟಾರೆ 4.09 ಲಕ್ಷ ಕೋಟಿ ಬಜೆಟ್‌ ಗಾತ್ರದ ಮುಂದೆ, ಅಲ್ಪಸಂಖ್ಯಾತರ ಸಂಖ್ಯೆಗೆ ಹೋಲಿಸಿದರೆ ಇದು ಈಗ ಬಿಜೆಪಿ ಮತ್ತು ಮೀಡಿಯಾಗಳು ಬೊಬ್ಬಿರಿಯುತ್ತಿರುವಂತೆ ಏನೇನೂ ಅಲ್ಲ! ಆದರೆ ಬಿಜೆಪಿ ಈ ಹಿಂದೆ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದ್ದಕ್ಕಿಂತ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ ಅಲ್ಪಸಂಖ್ಯಾತರಿಗೆ ಒಂದಷ್ಟು ನೆಮ್ಮದಿ ಸಿಕ್ಕಿದೆಯಷ್ಟೆ.

ಕೊನೇ ಘಳಿಗೆಯಲ್ಲಿ ಲೆಕ್ಕಾಚಾರ ಉಲ್ಟಾ ಆಯ್ತು ಅಂತ, ತಮ್ಮ ಪ್ರಿಪ್ಲ್ಯಾನ್ಡ್‌ ದಾಳಿಯಿಂದ ಹಿಂದೆ ಸರಿದರೆ ಬಜೆಟ್‌ ಟೀಕಿಸಲು ತಮ್ಮ ಬಳಿ ವಾದವೇ ಇಲ್ಲದಂತಾಗುತ್ತೆ. ಅದಾಗಲೇ, ಬಿಜೆಪಿ ನಾಯಕರು ಕೇಶವಕೃಪಾ ಹೇಳಿಕೊಟ್ಟ ಹೇಳಿಕೆಗಳನ್ನು ಉರುಹೊಡೆದಾಗಿತ್ತು; ಮೀಡಿಯಾಗಳು ಸ್ಟೋರಿ ಬೋರ್ಡ್‌ ಸಿದ್ದ ಮಾಡಿಟ್ಟುಕೊಂಡಿದ್ದರು; ಪೋಸ್ಟರ್‍‌, ಹ್ಯಾಶ್‌ಟ್ಯಾಗ್‌ಗಳು ಅಣಿಯಾಗಿದ್ದವು. ಈಗ ರಣತಂತ್ರ ಬದಲಿಸಿದರೆ, ಪರ್ಯಾಯ ಟೀಕೆಯೇ ಇಲ್ಲದೆ ಸಿದ್ದರಾಮಯ್ಯನವರ ಬಜೆಟ್‌ ಜನಪ್ರಿಯವಾಗಿಬಿಡುತ್ತೆ ಅಂತ ನಿರ್ಧರಿಸಿದ ಕೇಶವಕೃಪ-ಬಿಜೆಪಿ-ಮೀಡಿಯಾ ನೆಕ್ಸಸ್‌ ಆದದ್ದಾಗಲಿ ಅಂತ ತುಕ್ಕು ಹಿಡಿದ ತಮ್ಮ ಹಲಾಲ್‌ ಅಸ್ತ್ರವನ್ನೇ ಝಳಪಿಸಿ, ಈಗ ಅಕ್ಷರಶಃ ನಗೆಪಾಟಲಿಗೆ ಈಡಾಗುತ್ತಿವೆ.

ಅಂದಹಾಗೆ, ಬಜೆಟ್‌ನಲ್ಲಿ ಇಪ್ಪತ್ತೈದು ಸಾವಿರ ಕೋಟಿ ಕೊಡ್ತಾ ಇದಾರೆ ಅನ್ನೋ ಮಾಹಿತಿ ಕೊಟ್ಟ ಆ ಅಧಿಕಾರಿ ದಿಢೀರ್ ನಾಪತ್ತೆಯಾಗಿದ್ದಾನಂತೆ. ಅವನಿಗಾಗಿ ಬಿಜೆಪಿ-ಆರೆಸ್ಸೆಸ್‌ ನಾಯಕರು ತೀವ್ರ ಶೋಧ ನಡೆಸುತ್ತಿರುವ ವರ್ತಮಾನಗಳು ಕೇಳಿಬರುತ್ತಿವೆ. ಇವರ ಕೈಗೆ ಅವನು ಸಿಕ್ಕಿಹಾಕಿಕೊಂಡರೆ ಆತನ ಗತಿಯೇನಾಗಬೇಡ….!!!! ಆತನ ಹೆಂಡತಿ-ಮಕ್ಕಳ ಹಿತದೃಷ್ಟಿಯಿಂದ ಆತ ಇನ್ನೂ ಸ್ವಲ್ಪ ಕಾಲ ಇವರ ಕೈಗೆ ಸಿಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ…

– *ಮಾಚಯ್ಯ ಎಂ ಹಿಪ್ಪರಗಿ*(wattsup ನಿಂದ)