ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಶಸ್ತಿಗಳ ಘೋಷಣೆ!* *ಗೋಪಾಲ್ ಎಸ್.ಯಡಗೆರೆ, ಕೆ.ತಿಮ್ಮಪ್ಪ, ಎಸ್.ಚಂದ್ರಕಾಂತ್ ರಿಗೆ ಪಿ.ಲಂಕೇಶ್ ಪ್ರಶಸ್ತಿಗಳು…* *ಶಿವಾನಂದ ಕರ್ಕಿ ಮತ್ತು ಹೆಚ್.ಕೆ.ಎಸ್.ಸ್ವಾಮಿಯವರಿಗೆ ಕ್ರಿಯಾಶೀಲ ಪ್ರಸಸ್ತಿಗಳು* *ಯಾರು ಈ ಪ್ರಶಸ್ತಿ ವಿಜೇತರು? ಇವರಿಗೇ ಯಾಕೆ ಈ ಪ್ರಶಸ್ತಿ ಕೊಟ್ಟರು?!*
*ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಶಸ್ತಿಗಳ ಘೋಷಣೆ!*
*ಗೋಪಾಲ್ ಎಸ್.ಯಡಗೆರೆ, ಕೆ.ತಿಮ್ಮಪ್ಪ, ಎಸ್.ಚಂದ್ರಕಾಂತ್ ರಿಗೆ ಪಿ.ಲಂಕೇಶ್ ಪ್ರಶಸ್ತಿಗಳು…*
*ಶಿವಾನಂದ ಕರ್ಕಿ ಮತ್ತು ಹೆಚ್.ಕೆ.ಎಸ್.ಸ್ವಾಮಿಯವರಿಗೆ ಕ್ರಿಯಾಶೀಲ ಪ್ರಸಸ್ತಿಗಳು*
*ಯಾರು ಈ ಪ್ರಶಸ್ತಿ ವಿಜೇತರು? ಇವರಿಗೇ ಯಾಕೆ ಈ ಪ್ರಶಸ್ತಿ ಕೊಟ್ಟರು?!*

ಶಿವಮೊಗ್ಗ ಪ್ರೆಸ್ ಟ್ರಸ್ಟ್ 2024 ನೇ ಸಾಲಿನಿಂದ 2026ನೇ ಸಾಲಿನ ವರೆಗಿನ ಮೂರು ವರ್ಷಗಳ ಜೀವನ ಸಾಧನೆಗಾಗಿ ನೀಡುವ ಪಿ.ಲಂಕೇಶ್ ಪ್ರಶಸ್ತಿಗಳನ್ನು ಹಾಗೂ ಇಬ್ಬರಿಗೆ ಕ್ರಿಯಾಶೀಲ ಪ್ರಶಸ್ತಿಗಳನ್ನು ಘೋಷಿಸಿದೆ.
ಟ್ರಸ್ಟಿನ ಅಧ್ಯಕ್ಷರಾದ ಎನ್.ಮಂಜುನಾಥ್ ರವರು ಈ ಪ್ರಶಸ್ತಿಗಳನ್ನು ಘೋಷಿಸಿದ್ದು, ಗೋಪಾಲ್ ಎಸ್.ಯಡಗೆರೆ, ಕೆ.ತಿಮ್ಮಪ್ಪ, ಎಸ್.ಚಂದ್ರಕಾಂತ್ ರಿಗೆ ಪಿ.ಲಂಕೇಶ್ ಪ್ರಶಸ್ತಿಗಳನ್ನು ಹಾಗೂ ಶಿವಾನಂದ ಕರ್ಕಿ ಮತ್ತು ಹೆಚ್.ಕೆ.ಎಸ್.ಸ್ವಾಮಿಯವರಿಗೆ ಕ್ರಿಯಾಶೀಲ ಪ್ರಸಸ್ತಿಗಳನ್ನು ಏಪ್ರಿಲ್ 14 ರಂದು ಸಂಜೆ 5.30ಕ್ಕೆ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು ಎಂದರು.
ಲಂಕೇಶ್ ಪ್ರಶಸ್ತಿಯ ಮೊತ್ತ ತಲಾ 20,000₹ ಹಾಗೂ ಕ್ರಿಯಾಶೀಲ ಪ್ರಶಸ್ತಿಯ ಮೊತ್ತ 10,000₹ ಇದ್ದು, ಪತ್ರಕರ್ತರೆಲ್ಲ ಕುಟುಂಬ ಸಮೇತ ಆಗಮಿಸಬೇಕೆಂದು ವಿನಂತಿಸಿದರು.
*ಪ್ರಶಸ್ತಿ ವಿಜೇತರ ಪರಿಚಯ*
ಗೋಪಾಲ್ ಯಡಗೆರೆ
ಅಕ್ಷರಗಳನ್ನು, ನಿಮ್ಮ ಬೆರಳ ತುದಿಯಲ್ಲಿ, ನಿಮ್ಮ ಸಾಹಿತ್ಯದ ಅನುಭವದ ಮೂಸೆಯಲ್ಲಿ ಲಾಸ್ಯವಾಡಿಸುವ ಅಪಾರ ಸಾಮರ್ಥ್ಯ ಹೊಂದಿರುವ ಗೋಪಾಲ್ ಯಡಗೆರೆಯವರಾದ ತಾವು ಪತ್ರಿಕೋದಮದ ಮಾದರಿಯಾಗಿದ್ದೀರಿ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕೋದ್ಯಮದಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿರುವ 22 ನೇ ಸಾಲಿನ ಪಿ. ಲಂಕೇಶ್ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಲಾಗಿದ್ದು, ಇದು ನಮ್ಮ ಸಂಸ್ಥೆಗೆ ಸಿಕ್ಕ ಸುಯೋಗ ಎಂದೇ ಭಾವಿಸುತ್ತೇವೆ.
ನರಸಿಂಹರಾಜಪುರ ತಾಲೂಕಿನ ಯಡಗೆರೆಯಲ್ಲಿ ಸಿಂಗಪ್ಪಯ್ಯ ಮತ್ತು ಪದ್ಮಾವತಮ್ಮ ಅವರ ಪುತ್ರರಾಗಿ ಜನಿಸಿದ ತಾವು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು ಬಳಿಕ, ಎನ್. ಆರ್. ಪುರದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿ, ಆ ನಂತರ ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದೀರಿ. ಪತ್ರಿಕೋದ್ಯಮದಲ್ಲಿ ಅಪಾರ ಆಸಕ್ತಿಯ ಫಲವಾಗಿ 1988 ರಲ್ಲಿ ಶಿವಮೊಗ್ಗದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಕಾರ್ಯಾರಂಭ ಮಾಡಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿ, ಬಳಿಕ ಕನ್ನಡ ಪ್ರಭ ಪತ್ರಿಕೆಯಲ್ಲಿ ತಮ್ಮ ಸೇವೆ ಮುಂದುವರೆಸಿದ್ದೀರಿ. ಸಾವಿರಾರು ವಿಶೇಷ ವರದಿಗಳ ಮೂಲಕ ಸಮಾಜದ ಹುಳುಕುಗಳನ್ನು ಎತ್ತಿ ಹಿಡಿಯುವ, ವ್ಯವಸ್ಥೆಯ ಲೋಪವನ್ನು ತೋರಿಸುವ ಮೂಲಕ ತನಿಖಾ ಪತ್ರಿಕೋದ್ಯಮ ಹಾಗೂ ಪ್ರತಿಭಾವಂತರು, ಸಾಧಕರು, ಸಮಾಜಮುಖಿ ಸಂಸ್ಥೆ, ವ್ಯಕ್ತಿಗಳನ್ನು ಬೆಳಕಿಗೆ ತರುವ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದೀರಿ. ಕೇವಲ ಪತ್ರಿಕೋದ್ಯಮ ಮಾತ್ರವಲ್ಲದೆ ಸಾಹಿತ್ಯದತ್ತ ಹೊರಳಿ ’ನಾನಾಗದ ನಾನು’, ’ಸೋಲನ್ನು ಸೋಲಿಸಿ’, ’ಮಿಸ್ಡ್ ಕಾಲ’ ಎಂಬ ಕೃತಿಗಳನ್ನು ಹೊರ ತಂದಿದ್ದೀರಿ ಮಾತ್ರವಲ್ಲದೆ, ಇದಕ್ಕೆ ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆದು ಶ್ರೇಷ್ಠತೆಯತ್ತ ದಾಪುಗಾಲು ಹಾಕಿದ್ದೀರಿ.
ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಮಾನವೀಯ ವರದಿಗಾಗಿ ’ಭೂಪಾಳಂ ಚಂದ್ರಶೇಖರ ಪ್ರಶಸಿ’, ’ಸುವರ್ಣ ಲೇಡೀಸ್ ಕ್ಲಬ್ ಪ್ರಶಸಿ’, ’ಗುರು ಸಿದ್ಧಶ್ರೀ ಪ್ರಶಸ್ತಿ’ ಮತ್ತು ಸಾಹಿತ್ಯದ ಸಾಧನೆಗಾಗಿ ’ವಿಪ್ರಧ್ವನಿ ಸಾಹಿತ್ಯ ಕಲಾ ಪ್ರಶಸ್ತಿ’, ’ಸೋಲನ್ನು ಸೋಲಿಸಿ’ ಕೃತಿಗಾಗಿ ರಾಜ್ಯಮಟ್ಟದ ’ಅಜೂರ ಸಾಹಿತ್ಯ ಪ್ರಶಸ್ತಿ’ ಪಡೆದಿದ್ದೀರಿ. ತಮ್ಮ ’ಸೋಲನ್ನು ಸೋಲಿಸಿ’ ಕೃತಿಯ ಲೇಖನವನ್ನು ಕುವೆಂಪು ವಿಶ್ವ ವಿದ್ಯಾಲಯ ತನ್ನ ಪದವಿ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕಕ್ಕೆ ಸೇರಿಸಿರುವುದು ತಮ್ಮ ಸಾಧನೆಗೆ ಸಂದ ಹಿರಿಮೆಯಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದೀರಿ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಪ್ರೆಸ್ಟ್ ಟ್ರಸ್ಟ್ ಉಪಾಧ್ಯಕ್ಷರಾಗಿ, ಟ್ರಸ್ಟಿಯಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ, ಯಸ್ಕಾನ್ ಫೌಂಡೇಶನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದೀರಿ.
ಎಸ್.ಚಂದ್ರಕಾಂತ್
ಸಮಾಜಕ್ಕೆ ಕನ್ನಡಿ ಹಿಡಿಯುವ ಕಾಯಕದಲ್ಲಿ ನಿರಂತರವಾಗಿ 50 ವರ್ಷ ಸೇವೆ ಸಲ್ಲಿಸಿರುವ ಎಸ್.ಚಂದ್ರಕಾಂತ್ ಆದ ನೀವು ರಾಜ್ಯಮಟ್ಟದಲ್ಲಿ ಈ ಸಾಧನೆ ಮಾಡಿದ ಕೆಲವೇ ಮಂದಿಯಲ್ಲಿ ಒಬ್ಬರಾಗಿದ್ದೀರಿ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕೋದ್ಯಮದಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿರುವ 23ನೇ ಸಾಲಿನ ಪಿ. ಲಂಕೇಶ್ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಲಾಗಿದ್ದು, ಇದು ನಮ್ಮ ಸಂಸ್ಥೆಗೆ ಸಿಕ್ಕ ಸುಯೋಗ ಎಂದೇ ಭಾವಿಸುತ್ತೇವೆ.
ಶೀರೂರು ಹೊನ್ನಪ್ಪಾಚಾರ್ ಮತ್ತು ಸುಶೀಲಮ್ಮ ದಂಪತಿಗಳ ಪುತ್ರರಾಗಿ ಜನಿಸಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶಿವಮೊಗ್ಗದಲ್ಲಿ ಮಾಡಿದ್ದೀರಿ.1975 ರಿಂದ 1977 ರ ಮೇ ವರೆಗೆ ಎಚ್ಚರಿಕೆ ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡುವ ಮೂಲಕ ಪತ್ರಿಕೋದಮಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದೀರಿ.
1977 ಜೂನ್ 26 ರಂದು ಸ್ನೇಹಿತ ಎಸ್. ಹೆಚ್. ರಂಗಸ್ವಾಮಿ ಅವರೊಂದಿಗೆ ಸೇರಿ ’ನಾವಿಕ’ ಪತ್ರಿಕೆಯನ್ನು ಆರಂಭಿಸಿ, ಕೆಲವೇ ದಶಕದಲ್ಲಿ ಜಿಲ್ಲೆಯ ಮನೆಮಾತಾಗುವಲ್ಲಿ ತಮ್ಮ ಶ್ರಮ ಅಪಾರ. 2010 ರಲ್ಲಿ ’ನಾವಿಕ’ ಪತ್ರಿಕೆಯಿಂದ ಹೊರ ಬಂದು ’ಶಿವಮೊಗ್ಗ ಟೈಮ್ಸ್’ ಪತ್ರಿಕೆಯನ್ನು ಖರೀದಿಸಿ ಅದನ್ನು ನಿಮ್ಮ ಸಂಪಾದಕತ್ವದಲ್ಲಿ ಆರಂಭಿಸಿದ್ದು, ಈಗಲೂ ಅದರ ಸಂಪಾದಕರಾಗಿ ಮುಂದುವರೆದಿದ್ದೀರಿ.
ನಿಮ್ಮ ಪತ್ರಿಕೋದ್ಯಮದ ಸಾಧನೆಯನ್ನು ಗುರುತಿಸಿ 2008 ರಲ್ಲಿ ರಾಜ್ಯ ಸರ್ಕಾರವು ಪ್ರತಿಷ್ಠಿತ ’ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತು. 2012 ರಲ್ಲಿ ನಿಮ್ಮ ನೇತೃತ್ವದ ’ಶಿವಮೊಗ್ಗ ಟೈಮ್ಸ್ ಪತ್ರಿಕೆಗೆ’ ’ಕರ್ನಾಟಕ ಮಾಧ್ಯಮ ಅಕಾಡೆಮಿ’ ಯು ಜಿಲ್ಲಾ ಮಟ್ಟದ ಅತ್ಯುತ್ತಮ ಪತ್ರಿಕೆಗೆ ನೀಡುವ ’ಆಂದೋಲನ ಪ್ರಶಸ್ತಿ’ ಪಡೆದಿದ್ದೀರಿ. 2014 ರಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ’ಕಿಡಿ ಶೇಷಪ್ಪ ಪ್ರಶಸ್ತಿ’ ಪಡೆದಿದ್ದಲ್ಲದೆ, ಜಿಲ್ಲೆಯ ನೂರಾರು ಸಂಘ ಸಂಸ್ಥೆಗಳಿಂದ, ಬೆಜ್ಜವಳ್ಳಿಯ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ ಸಮಿತಿಯಿಂದ ’ವಿಶೇಷ ಪ್ರಶಸ್ತಿ’ ಪಡೆದಿದ್ದೀರಿ.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಬಹುತೇಕ ಎಲ್ಲ ಹುದ್ದೆಗಳನ್ನು ನಿರ್ವಹಿಸಿದ್ದೀರಿ. ಪರೋಪಕಾರಿ ಸಂಘ, ಮಲ್ನಾಡ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ರೈಲ್ವೆ ಸಲಹ ಸಮಿತಿ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜಿಲ್ಲಾ ಮಟ್ಟದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದೀರಿ. ಇದೆಲ್ಲದಕ್ಕೆ ಗರಿ ಎಂಬಂತೆ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹದಲ್ಲಿ ಸುಮಾರು 40 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದು, ಅಪರೂಪದ ಸಂಗ್ರಹ ನಿಮ್ಮದಾಗಿದೆ.
ಕೆ. ತಿಮ್ಮಪ್ಪ
ಅತ್ಯಂತ ಹಿರಿಯ ಪತ್ರಕರ್ತರಾಗಿ, ಶಿವಮೊಗ್ಗ ಪತ್ರಕರ್ತರ ಸಮೂಹಕ್ಕೆ ದೊಡ್ಡಣ್ಣನಾಗಿ, ಜೀವಮಾನವಿಡೀ ಒಂದೇ ಪತ್ರಿಕಾ ಸಂಸ್ಥೆಗೆ ದುಡಿದ ಹೆಗ್ಗಳಿಕೆಯನ್ನೂ ಕೆ. ತಿಮ್ಮಪ್ಪನವರಾದ ತಾವು ಹೊಂದಿದ್ದೀರಿ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕೋದ್ಯಮದಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿರುವ ೨೪ ನೇ ಸಾಲಿನ ಪಿ. ಲಂಕೇಶ್ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಲಾಗಿದ್ದು, ಇದು ನಮ್ಮ ಸಂಸ್ಥೆಗೆ ಸಿಕ್ಕ ಸುಯೋಗ ಎಂದೇ ಭಾವಿಸುತ್ತೇವೆ.
ಸಾಗರ ತಾಲೂಕಿನ ಹುಲಿಮನೆ ಕಾಳೆ ವೆಂಕಟರಾಮಪ್ಪ ಮತ್ತು ಪದ್ಮಾವತಮ್ಮ ದಂಪತಿಗಳ ಹಿರಿಯ ಪುತ್ರರಾಗಿ ಜನಿಸಿದ ತಾವು ಹುಲಿಮನೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಬಳಿಕ ಸಾಗರದಲ್ಲಿ ಪ್ರೌಢ ಶಿಕ್ಷಣ ಮತ್ತು ಶಿವಮೊಗ್ಗದಲ್ಲಿ ಬಿ. ಎ. ಪದವಿ ಪಡೆದ್ದೀರಿ. ಹಿರಿಯ ಪತ್ರಿಕೋದ್ಯಮಿ ನಂಜುಂಡಶಾಸ್ತ್ರೀ ಹಾಗೂ ರಾಜ್ಯ ಕಂಡ ಶ್ರೇಷ್ಠ ಹಾಗೂ ಧೀಮಂತ ಪತ್ರಕರ್ತರಾದ ಸಂಯುಕ್ತ ಕರ್ನಾಟಕದ ಸಂಪಾದಕರಾಗಿದ್ದ ಶ್ಯಾಮರಾವ್ ಅವರ ಗರಡಿಯಲ್ಲಿ ಪತ್ರಿಕೋದ್ಯಮದ ಎಲ್ಲ ಪಾಠಗಳನ್ನು ಕಲಿತುಕೊಂಡಿರಿ. ೧೯೮೪ ರಲ್ಲಿ ಅಧಿಕೃತವಾಗಿ ಪತ್ರಿಕೋದ್ಯಮ ಕ್ಷೇತ್ರವನ್ನು ಪ್ರವೇಶಿಸಿದ ತಾವು ಸಂಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಆರಂಭಿಸಿದಿರಿ. ’ಸಂಯುಕ್ತ ಕರ್ನಾಟಕ’, ’ಕರ್ಮವೀರ’ ಮಾಸ ಪತ್ರಿಕೆಯಲ್ಲಿ ನೂರಾರು ಲೇಖನಗಳನ್ನು ಬರೆಯುವ ಮೂಲಕ ಸಮಾಜದಲ್ಲಿ ಸಂಚಲನ ಮೂಡಿಸಿ ಬದಲಾವಣೆಯೊಂದಕ್ಕೆ ಕಾರಣರಾಗಿದ್ದೀರಿ.
ತಮ್ಮ ಪತ್ರಿಕೋದ್ಯಮದ ಸಾಧನೆಯನ್ನು ಗುರುತಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿಯು ೨೦೨೩ ನೇ ಸಾಲಿನಲ್ಲಿ ’ಮಾಧಮ ಅಕಾಡೆಮಿ ಪ್ರಶಸ್ತಿ’ ನೀಡಿ ಗೌರವಿಸಿದೆ. ಮಾತ್ರವಲ್ಲದೆ, ನಾಡಹಬ್ಬ ದಸರಾ ಸಂದರ್ಭದಲ್ಲಿ ನಗರಪಾಲಿಕೆಯು ಕೊಡಮಾಡುವ ಪ್ರಶಸ್ತಿ, ’ಕಲ್ಮನೆ ಸೇವಾ ಸಹಕಾರ ಸಂಘ ನೀಡುವ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನೆ ಮತ್ತು ಸನ್ಮಾನಗಳನ್ನು ಪಡೆದಿದ್ದೀರಿ.
ಪತ್ರಿಕೋದ್ಯಮಕ್ಕೆ ಬರುವ ಮೊದಲು ಶಿವಮೊಗ್ಗ ನಗರದಲ್ಲಿ ಶ್ರೀ ಶಾರದಾ ವಾಣಿಜ್ಯ ವಿದ್ಯಾಶಾಲೆಯನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶೀಘ್ರಲಿಪಿ ಶಿಕ್ಷಣ, ಬೆರಳಚ್ಚು ಶಿಕ್ಷಣ ನೀಡುವ ಮೂಲಕ ನಗರದಾದ್ಯಂತ ತಮ್ಮ ಶಿಷ್ಯರನ್ನು ಹೊಂದಿದ್ದೀರಿ. ಹಾಗೆಯೇ ಶಾಂತಲಾ ನೃತ್ಯ ಶಾಲೆಯನ್ನು ತೆರೆದು ಇಲ್ಲಿ ಕೂಡ ಸಾವಿರಾರು ವಿದ್ಯಾರ್ಥಿಗಳನ್ನು ದಡ ಮುಟ್ಟಿಸಿದ್ದೀರಿ.
ಪತ್ರಿಕೋದ್ಯಮದ ಜೊತೆ ಜೊತೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಶ್ರೀ ಶಾರದಾ ವಾಣಿಜ್ಯ ವಿದ್ಯಾಶಾಲೆಯ ಪ್ರಾಂಶುಪಾಲರಾಗಿ, ಕಾಮಧೇನು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೀರಿ.
ಹೆಚ್. ಕೆ. ಬಿ. ಸ್ವಾಮಿ
ಸೊರಬದ ಹೆಚ್. ಕೆ. ಬಿ. ಸ್ವಾಮಿಯವರಾದ ತಮ್ಮನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್, ಪತ್ರಿಕೋದ್ಯಮದಲ್ಲಿನ ಸಾಧನೆಯನ್ನು ಗುರುತಿಸಿ ನೀಡುವ ‘ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ’ಗೆ 2024 ನೇ ಸಾಲಿನಲ್ಲಿ ತಮ್ಮನ್ನು ಆಯ್ಕೆ ಮಾಡಿದೆ.
ಹಾಲಪ್ಪ ಮತ್ತು ಹನುಮಂತಪ್ಪ ಅವರ ಪುತ್ರರಾಗಿ ಜನಿಸಿದ ತಾವು ಸೊರಬದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪಿಯುಸಿ ಮತ್ತು ಪದವಿಯನ್ನು ಭದ್ರಾವತಿಯಲ್ಲಿ ಪೂರೈಸಿದ್ದೀರಿ. ಬಳಿಕ ಸ್ವಯಂ ಉದ್ಯೋಗಕ್ಕಾಗಿ ಮುದ್ರಣಾಲಯವನ್ನು ಸ್ಥಾಪಿಸಿದ ತಾವು ರಕ್ತಗತವಾಗಿ ಬಂದ ಬರವಣಿಗೆ ಮತ್ತು ವ್ಯಂಗ್ಯಚಿತ್ರ ಕಲೆಯನ್ನು ಮುಂದುವರೆಸುತ್ತಾ ಬಂದಿದ್ದು, ರಾಜ್ಯದ ಅನೇಕ ಪತ್ರಿಕೆಗಳಲ್ಲಿ ತಾವು ಬರೆದ ವಿಡಂಬನಾತ್ಮಕ ವ್ಯಂಗ್ಯಚಿತ್ರಗಳು ಪ್ರಕಟಗೊಂಡು ತಮ್ಮ ಹೆಸರು ನಾಡಿನಾದ್ಯಂತ ಪ್ರಚಾರ ಪಡೆಯಿತು.
2000 ರಲ್ಲಿ ಉದಯವಾಣಿ ಪತ್ರಿಕೆಗೆ ತಾಲೂಕು ವರದಿಗಾರರಾಗಿ ಸೇರಿದ ತಾವು ಅಕ್ಷರ ಸೇವೆಯನ್ನು ಆರಂಭಿಸಿದಿರಿ. ನಿಮ್ಮ ಸುತ್ತಲಿನ ಅನೇಕ ಸಮಸ್ಯೆಗಳನ್ನು ಲೇಖನಗಳ ಮೂಲಕ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಜನರ ಸಮಸ್ಯೆಯನ್ನು ಆಡಳಿತಕ್ಕೆ ತಲುಪಿಸಿ ಪರಿಹಾರಕ್ಕೆ ಯತ್ನಿಸಿದ್ದೀರಿ.
ಬಳಿಕ ಕನ್ನಡ ಪ್ರಭ ಪತ್ರಿಕೆಯನ್ನು ಸೇರಿದ ತಾವೂ ಅಲ್ಲಿಯೂ ತಮ್ಮ ಅಕ್ಷರ ಸೇವೆಗೆ ಇನ್ನಷ್ಟು ಹೊಳಹನ್ನು ನೀಡಿ ಎತ್ತರಕ್ಕೆ ಏರಿದ್ದೀರಿ. ಇಡೀ ತಾಲೂಕಿನಾದ್ಯಂತ ಮಾತ್ರವಲ್ಲದೆ, ಜಿಲ್ಲೆಯುದ್ಧಕ್ಕೂ ತಮ್ಮ ಹೆಸರನ್ನು ಶಾಶ್ವತವಾಗಿರಿಸಿದ್ದೀರಿ.
ತಮ್ಮ ಪತ್ರಿಕಾ ಸೇವೆಯನ್ನು ಪರಿಗಣಿಸಿ ದೆಹಲಿಯ ಜ್ಯೋತಿಬಾಫುಲೆ ಪ್ರಶಸ್ತಿ ತಮ್ಮನ್ನು ಹುಡುಕಿಕೊಂಡು ಬಂದಿದೆ. ಇದೇ ರೀತಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲೂಕು ಆಡಳಿತವು ತಮ್ಮನ್ನು ಸನ್ಮಾನಿಸಿದೆ.
ಶಿವಾನಂದ ಕರ್ಕಿ
ತೀರ್ಥಹಳ್ಳಿಯಲ್ಲಿ ಪತ್ರಿಕೋದ್ಯಮ ಕೃಷಿ ಮಾಡುತ್ತಿರುವ ಶಿವಾನಂದ ಕರ್ಕಿಯವರಾದ ತಮ್ಮನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್, ಪತ್ರಿಕೋದ್ಯಮದಲ್ಲಿನ ಸಾಧನೆಯನ್ನು ಗುರುತಿಸಿ ನೀಡುವ ‘ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ’ಗೆ 2023 ನೇ ಸಾಲಿನಲ್ಲಿ ಆಯ್ಕೆ ಮಾಡಿದೆ.
ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬಳಿಕ ಮೈಸೂರು ವಿವಿಯಲ್ಲಿ ಜಾನಪದ ವಿಷಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಪಡೆದು ಕುಟುಂಬಕ್ಕೆ ಹೆಗ್ಗಳಿಕೆ ತಂದಿದ್ದೀರಿ. ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದೀರಿ. ಹಂಪಿ ಕನ್ನಡ ವಿವಿಯಲ್ಲಿ ಸಂಶೋಧನೆ ಕೈಗೊಂಡರೂ ಕಾರಣಾಂತರದಿಂದ ಅದನ್ನು ಮೊಟಕುಗೊಳಿಸುವ ಅನಿವಾರ್ಯತೆಗೆ ಸಿಲುಕಿದ್ದೀರಿ. ಆ ನಂತರದಲ್ಲಿ ಮೈಸೂರಿನಲ್ಲಿಯೇ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ತಾವು ‘ಮಹಾನಂದಿ’ ದಿನಪತ್ರಿಕೆಯಲ್ಲಿ ವರದಿಗಾರರಾಗಿ, ‘ವಿನೂತನ ಮಾತುಕತೆ’ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ, ‘ನೆಲದ ಧ್ವನಿ’ ಸಂಜೆ ಪತ್ರಿಕೆಗೆ ಪ್ರಧಾನ ಸಂಪಾದಕರಾಗಿ, 2000 ನೇ ವರ್ಷದಿಂದ ಸತತವಾಗಿ 22 ವರ್ಷಗಳ ಕಾಲ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೀರಿ.
ವಿದ್ಯಾರ್ಥಿ ದಿನಗಳಿಂದಲೇ ರಾಜ್ಯದ ಅನೇಕ ಪತ್ರಿಕೆಗಳಲ್ಲಿ ಕತೆ, ಲೇಖನಗಳನ್ನು ಬರೆಯುತ್ತಿದ್ದ ತಾವು ಪ್ರಜಾವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ತಮ್ಮ ಕತೆ ಪ್ರಕಟಗೊಂಡಿತ್ತು. ಇದರ ಜೊತೆ ಜೊತೆಯಲ್ಲಿಯೇ ರೈತ ಹೋರಾಟ, ತುಂಗಾ ಮೂಲ ಉಳಿಸಿ ಮತ್ತಿತರ ಪರಿಸರ ಹೋರಾಟ ಸೇರಿದಂತೆ ಅನೇಕ ಸಮಾಜಮುಖಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೀರಿ. ಇದಲ್ಲದೆ ಮಲೆನಾಡು, ಜಾನಪದ, ಜೀವ ವೈವಿಧ್ಯ, ಪರಿಸರ ಸಂರಕ್ಷಣೆ ಮುಂತಾದ ವಿಷಯ ಕುರಿತ ಕಾರ್ಯಾಗಾರ, ವಿಚಾರ ಸಂಕಿರಣದಲ್ಲಿ ಆಹ್ವಾನಿತರಾಗಿ ಉಪನ್ಯಾಸ ನೀಡಿದ್ದೀರಿ.
ಇವುಗಳೆಲ್ಲದರ ಜೊತೆಗೆ ‘ಖಾನೇಜುಮಾರಿ’ ಎಂಬ ಪ್ರಬಂಧ ಸಂಕಲನ, ‘ಗರ್ಕು’ ಎಂಬ ಕಾದಂಬರಿಯನ್ನು ಪ್ರಕಟಿಸಿದ್ದರಲ್ಲದೆ, ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ಕೃಷಿಯೊಡಲು ಕೃತಿಯೂ ಮೂಡಿ ಬಂದಿದೆ. ತಮ್ಮ ಕೃತಿಯು ಕುವೆಂಪು ವಿವಿಗೆ ಪಠ್ಯವಾಗಿರುವುದು ಹೆಮ್ಮೆಯ ಸಂಗತಿ.