ಆಪರೇಷನ್ ಸಿಂಧೂರ್:* *ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ*
*ಆಪರೇಷನ್ ಸಿಂಧೂರ್:*
*ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ*
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರದಿಂದ ಉಗ್ರದ ಶಿಬಿರಗಳನ್ನು ಗುರಿಯಾಗಿಸಿಕೊಂಡು 9 ಉಗ್ರ ನೆಲೆಗಳ ಮೇಲೆ ಬಾಂಬ್ ಹಾಕಿ ಛಿದ್ರಗೊಳಿಸಿದೆ. ಇದರ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದಾರೆ. ಇದನ್ನು ನೋಡಿದ ಜನರು ಆಪರೇಷನ್ ಸಿಂಧೂರ ಸುದ್ದಿಗೋಷ್ಠಿಗೆ ನಮ್ಮ ಸಿಎಂ ಸಿಂಧೂರ-ರಾಮಯ್ಯ ಆಗಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಸುದ್ದಿಗೋಷ್ಠಿ ಆರಂಭದ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಧ್ಯಮಗಳಿಂದ ನೀವು ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿರುವ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ನಾನು ಪಟಾಲಮ್ಮ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ದೇವರ ದರ್ಶನ ಮಾಡಿದ ನಂತರ ಸಿಂಧೂರ ಇಟ್ಟುಕೊಂಡು ಬಂದಿದ್ದೇನೆ ಎಂದು ಹೇಳಿ ಈ ವಿಚಾರವನ್ನು ಅಲ್ಲಿಗೆ ಮೊಟಕುಗೊಳಿಸಿದರು. ಈ ಬಗ್ಗೆ ಇನ್ನೂ ಪ್ರಶ್ನೆ ಕೇಳುವುದಕ್ಕೆ ಅವಕಾಶ ಇಲ್ಲದಂತೆ ಸುದ್ದಿಗೋಷ್ಠಿಯ ವಿಚಾರಗಳನ್ನು ಮುಂದುವರೆಸಿದರು.
ಸಿದ್ದರಾಂಯ್ಯ ಅವರು ಸುದ್ದಿಗೋಷ್ಠಿ ಆರಂಭ ಆಗುತ್ತಿದ್ದಂತೆ ಕೆಲವರು ತಮ್ಮ ಸಾಮಾಜಿಕ ಜಾಲತಾಣಲದಲ್ಲಿ ಈ ಬಗ್ಗೆ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಇಂದು ಹಣೆಗೆ ಅತ್ಯಂತ ದೊಡ್ಡ ಸಿಂಧೂರವನ್ನು ಇಟ್ಟುಕೊಂಡಿದ್ದಾರೆ. ಹಿಂದುಗಳನ್ನು ಓಲೈಸಲು ಹಣೆಗೆ ಸಿಂಧೂರ ಇಟ್ಟು ಮುಂದಿನ ಎಲೆಕ್ಷನ್‌ನಿಗೆ ಸಿದ್ದರಾಮಯ್ಯ ರೆಡಿ ಆಗುತ್ತಿದ್ದಾರೆ ಎಂಬ ಮಾತುಗಳನ್ನು ಕೆಲವರು ಹೇಳಿದ್ದಾರೆ. ಈ ಸಿದ್ದರಾಮಯ್ಯ ಅವರ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಂಟ ನೆಟ್ಟಿಗರು, ‘ಸಿಂಧೂರ ರಾಮಯ್ಯ ಅತ್ಯುತ್ತಮ ದಿನವು ಇಟ್ಟುಕೊಳ್ಳಿ ಸಿಂಧೂರ ಬಂಡಾರ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಅತೀ ಭಾರವಾದ ಹೃದಯದಿಂದ ಯೋಧರ ಸಾಧನೆಯನ್ನು ಬಣ್ಣಿಸಿದಂತೆ ಆಗಿದೆ. ಇದೇನು ಶ್ಲಾಘನೆಯೋ ಅಥವಾ ಶೋಕ ಸಂದೇಶವೊ ಎಂದು ತಿಳಿಯುವದಿಲ್ಲ’ ಎಂದು ಹೇಳಿದ್ದಾರೆ. ಇನ್ನೊಬ್ಬರು ‘ನಿಮ್ಮ ಹಣೆಯಲ್ಲಿರುವ ಸಿಂಧೂರ ನೋಡಿ ನಗು ಬಂತು ಜೈ ಹಿಂದ್ ಜೈ ಭಾರತ’ ಎಂದಿದ್ದಾರೆ. ಇನ್ನೊಬ್ಬರು ಆಪರೇಷನ್ ಸಿಂಧೂರ್ (Operation Sindhoor .. okay) ಓಕೆ ಆದರೆ, ನಿಮ್ಮ ಹಣೆಯಲ್ಲಿ ಸಿಂಧೂರ ಯಾಕೇ???’ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ‘ಸಿದ್ದಣ್ಣ ಏನ್ ಕುಂಕುಮ ಇಟ್ಕೊಂಡಿದೀಯ ಒಂದ ಎರಡ-ನಿಮ್ ಅವತಾರಗಳು’ ಎಂದು ಟೀಕಿಸಿದ್ದಾರೆ.
ಸಿಂಧೂರ ಇಡಲು ವಿರೋಧಿಸಿದ್ದ ಸಿದ್ದರಾಮಯ್ಯ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಬಾರಿ ನಾನು ದೇವರನ್ನು ನಂಬುವುದಿಲ್ಲ, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಭಯವಾಗುತ್ತದೆ ಎನ್ನುವ ಹೇಳಿಕೆ ಹೇಳಿದ್ದರು. ಈ ಹಿಂದೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂದರ್ಭದಲ್ಲಿ ಅಲ್ಲಿನ ಕಾಮಗಾರಿ ಚಾಲನೆಗೆ ಹೋದ ವೇಳೆ ಪೂಜಾರಿಯೊಬ್ಬರು ಹಣೆಗೆ ಕುಂಕುಮ ಇಡಲು ಬಂದಾಗ, ‘ಬೇಡಪ್ಪ ಬೇಡ ನನಗೆ ಕುಂಕುಮ ಇಟ್ಟುಕೊಳ್ಳುವುದಕ್ಕೆ ಭಯ ಆಗುತ್ತದೆ’ ಎಂದು ಹೇಳಿದ್ದರು. ಆದರೆ, ಇದಾದ ನಂತರ ಸಿದ್ದರಾಮಯ್ಯ ಅವರು ಇದೀಗ ವರುಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಿಎಂ ಆಗಿದ್ದಾರೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದ ವೇಳೆ ತಾವೇ ಹಣೆಗೆ ಕುಂಕುಮ ಧರಿಸಿಕೊಂಡು ಬಂದಿದ್ದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸ್ತಿಕರೋ, ನಾಸ್ತಿಕರೋ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಸೇನೆ ಉಗ್ರಗಾಮಿ ನೆಲೆ ನಾಶ ಮಾಡಿದೆ. ಪರಾಕ್ರಮ ಮೆರೆದಿದ್ದಾರೆ. ಸೈನಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭಾರತದ ಸೇನೆ ಸಿಂಧೂರ ಆಪರೇಷನ್ ಮಾಡಿದೆ. 9 ಉಗ್ರಗಾಮಿ ನೆಲೆಗಳ ಮೇಲೆ ದಾಳಿಮಾಡಿದೆ. ಪಾಕಿಸ್ತಾನದವರಿಗೆ ಉಗ್ರಗಾಮಿ ಗಳು ಅಂತ ಗೊತ್ತಿದೆ. ಆದರೂ ಬೆಂಬಲಕೊಡ್ತಾ ಬಂದಿದ್ದಾರೆ. 26 ಅಮಾಯಕರನ್ನು ಉಗ್ರರು ಕೊಂದು ಹಾಕಿದ್ದರು. ಇವರನ್ನು ಸಾಕುವವರು ಪಾಕಿಸ್ತಾನದವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರರ ದಾಳಿ ಖಂಡಿಸುವ ಕೆಲಸ ಮಾಡಿಲ್ಲ. ಭಾರತದ ದಾಳಿಯನ್ನು ನಾನು ಬೆಂಬಲಿಸುವೆ. ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ ಇದು. ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆದಿದೆ. ಅಮಾಯಕರ ಸಾವು ಆಗದ ಹಾಗೆ ನೋಡಿಕೊಂಡಿದೆ. ಅದಕ್ಕಾಗಿ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಕೇಂದ್ರ ಸರ್ಕಾರದ ಪರವಾಗಿ ನಾನು ಬೆಂಬಲ ಘೋಷಣೆ ಮಾಡ್ತೇನೆ. ನಾವು ಎಲ್ಲರೂ ಎಚ್ಚರ ವಹಿಸುವ ಕೆಲಸ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ಮಾಡಿ, ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡುಸುವ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.