2025 ರ ಐಪಿಎಲ್ ಸಂಪೂರ್ಣವಾಗಿ ರದ್ದಾಗಿಲ್ಲ..* *ಶೀಘ್ರದಲ್ಲೇ ಮರು ನಿಗದಿ*
*2025 ರ ಐಪಿಎಲ್ ಸಂಪೂರ್ಣವಾಗಿ ರದ್ದಾಗಿಲ್ಲ..*
*ಶೀಘ್ರದಲ್ಲೇ ಮರು ನಿಗದಿ*
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ ಬಿಸಿಸಿಐ (BCCI), ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. 2025 ರ ಐಪಿಎಲ್ (IPL 2025) ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಉಗ್ರ ಪೋಷಕ ಪಾಕಿಸ್ತಾನ, ಭಾರತದ ಹಲವಾರು ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿತು. ಆದರೆ, ಭಾರತ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿ ಅದರ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿತು. ಆದರೆ ಈ ದಾಳಿಯ ಪರಿಣಾಮದಿಂದಾಗಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೀಗ ಇಡೀ ಆವೃತ್ತಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಉಳಿದ ಪಂದ್ಯಗಳನ್ನು ಶೀಘ್ರದಲ್ಲೇ ಮರು ನಿಗದಿಪಡಿಸಬಹುದು ಎಂದು ವರದಿಯಾಗಿದೆ.
ತಾತ್ಕಾಲಿಕವಾಗಿ ಐಪಿಎಲ್ ರದ್ದು
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತು. ಇದಾದ ನಂತರ ಪಾಕಿಸ್ತಾನ ಸಿಟ್ಟಿಗೆದ್ದಿದ್ದು, ಒಂದರ ನಂತರ ಒಂದರಂತೆ ಅನೇಕ ನೀಚ ಕೃತ್ಯಗಳನ್ನು ಎಸಗುತ್ತಿದೆ. ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿದೆ.
ಆದಾಗ್ಯೂ ಮುನ್ನೇಚ್ಚರಿಕೆಯ ಕ್ರಮವಾಗಿ ಐಪಿಎಲ್ ಪಂದ್ಯಾವಳಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕೇಂದ್ರ ಮತ್ತು ಎಲ್ಲಾ ಫ್ರಾಂಚೈಸಿಗಳು ಮತ್ತು ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ, ಐಪಿಎಲ್ ಪಂದ್ಯಾವಳಿನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರರ್ಥ ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಆದರೆ ಉಳಿದ ಪಂದ್ಯಗಳನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುವುದು ಎಂಬುದರ ಕುರಿತು ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.
ವಿದೇಶಿ ಆಟಗಾರರ ಬಗ್ಗೆ ಬಿಸಿಸಿಐ ಕಾಳಜಿ
ಪಂದ್ಯಾವಳಿಯಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಈಗ ವಿದೇಶಿ ಆಟಗಾರರನ್ನು ಆದಷ್ಟು ಬೇಗ ತಮ್ಮ ದೇಶಕ್ಕೆ ಕಳುಹಿಸಲಿದೆ. ವಿದೇಶಿ ಆಟಗಾರರ ಜೊತೆಗೆ ಅವರ ಕುಟುಂಬಗಳು ಸಹ ಪ್ರಸ್ತುತ ಭಾರತದಲ್ಲಿವೆ. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಲೀಗ್ ಅಮಾನತುಗೊಳಿಸುವಿಕೆಯನ್ನು ದೃಢಪಡಿಸಿದ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ, ‘ದೇಶವು ಯುದ್ಧದಲ್ಲಿರುವಾಗ ಕ್ರಿಕೆಟ್ ಮುಂದುವರಿದರೆ ಅದು ಒಳ್ಳೆಯದಲ್ಲ’ ಎಂದು ಹೇಳಿದ್ದಾರೆ.
16 ಪಂದ್ಯಗಳು ಬಾಕಿ ಉಳಿದಿವೆ
ಈ ಐಪಿಎಲ್ ಸೀಸನ್‌ನಲ್ಲಿ ಒಟ್ಟು 57 ಪಂದ್ಯಗಳು ನಡೆದಿವೆ. ಏತನ್ಮಧ್ಯೆ, 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಸೀಸನ್‌ನಲ್ಲಿ ಒಟ್ಟು 74 ಪಂದ್ಯಗಳನ್ನು ಆಡಬೇಕಾಗಿತ್ತು, ಇದು ಮೇ 25 ರಂದು ಕೋಲ್ಕತ್ತಾದಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿ, ಈಗ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ರೂಪಿಸಲಾಗುವುದು. ವಾಸ್ತವವಾಗಿ 2021 ರಲ್ಲಿಯೂ ಕೊರೊನಾದಿಂದಾಗಿ ಲೀಗ್ ಅನ್ನು ಸೀಸನ್ನ ಮಧ್ಯದಲ್ಲಿ ಅಮಾನತುಗೊಳಿಸಲಾಗಿತ್ತು. ನಂತರ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಯಿತು.