IPL 2025:* *ಐಪಿಎಲ್ ಪುನರಾರಂಭಕ್ಕೆ ಡೇಟ್ ಫಿಕ್ಸ್*
*IPL 2025:*
*ಐಪಿಎಲ್ ಪುನರಾರಂಭಕ್ಕೆ ಡೇಟ್ ಫಿಕ್ಸ್*
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಈ ವಾರದಲ್ಲೇ ಟೂರ್ನಿ ಮತ್ತೆ ನಡೆಯುವುದು ಬಹುತೇಕ ಖಚಿತವಾಗಿದೆ.
ಇನ್ನು ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ನಿರ್ಧರಿಸಲಾಗಿದ್ದು, ಆದರೆ ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯವನ್ನು ಮಾತ್ರ ಇತರೆಡೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಇದಕ್ಕೂ ಮುನ್ನ ಮೇ 9 ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಯುದ್ಧ ಭೀತಿ ಹಿನ್ನಲೆಯಲ್ಲಿ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು.
ಇದೀಗ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮರು ಆಯೋಜಿಸುವ ಮೂಲಕ ಐಪಿಎಲ್ಗೆ ಮತ್ತೆ ಚಾಲನೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಮುಂದಿನ ಗುರುವಾರ ಅಥವಾ ಶುಕ್ರವಾರದಿಂದ ಐಪಿಎಲ್ ಪುನರಾರಂಭವಾಗುವುದು ಬಹುತೇಕ ಖಚಿತವಾಗಿದೆ.
*17 ಪಂದ್ಯಗಳು ಬಾಕಿ:*
ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ನಿಗದಿ ಮಾಡುವುದರೊಂದಿಗೆ ಮೇ ತಿಂಗಳಲ್ಲೇ 17 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಇಲ್ಲಿ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ದಕ್ಷಿಣ ಭಾರತದಲ್ಲಿ ಆಯೋಜಿಸುವ ಸಾಧ್ಯತೆಯಿದೆ.
ಇನ್ನುಳಿದಂತೆ ಆಯಾ ತಂಡಗಳ ಹೋಮ್ ಗ್ರೌಂಡ್ನಲ್ಲೇ ಪಂದ್ಯಗಳು ನಡೆಯಲಿದೆ. ಅದರಂತೆ ಲೀಗ್ ಹಂತದಲ್ಲಿ 13 ಮ್ಯಾಚ್ಗಳು ಹಾಗೂ ಪ್ಲೇಆಫ್ ಸುತ್ತಿನಲ್ಲಿ 4 ಪಂದ್ಯಗಳು ನಡೆಯಬೇಕಿದೆ.
ಈ 17 ಪಂದ್ಯಗಳೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಅನ್ನು ಪೂರ್ಣಗೊಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದ್ದು, ಅದರಂತೆ ಮೇ 15 ಅಥವಾ 16 ರಿಂದ ಮತ್ತೆ ಐಪಿಎಲ್ಗೆ ಚಾಲನೆ ದೊರೆಯಲಿದೆ.
*ವಿದೇಶಿ ಆಟಗಾರರಿಗೆ ಸೂಚನೆ:*
ಭಾರತದಿಂದ ತವರಿಗೆ ಮರಳಿರುವ ವಿದೇಶಿ ಆಟಗಾರರಿಗೆ ಒಂದು ವಾರದೊಳಗೆ ಸಿದ್ಧರಾಗಿರುವಂತೆ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಸೂಚನೆ ನೀಡಿದೆ. ಹೀಗಾಗಿ ಈ ವಾರದಲ್ಲೇ ಬಹುತೇಕ ಫಾರಿನ್ ಪ್ಲೇಯರ್ಸ್ ಭಾರತಕ್ಕೆ ಮರಳಲಿದ್ದಾರೆ. ಅಲ್ಲದೆ ವಿದೇಶಿ ಆಟಗಾರರನ್ನು ಕಳುಹಿಸಿಕೊಡುವಂತೆ ಬಿಸಿಸಿಐ ಕೂಡ ಆಯಾ ಕ್ರಿಕೆಟ್ ಮಂಡಳಿ ಜೊತೆ ಚರ್ಚಿಸಲಿದೆ.
*ಕೇಂದ್ರ ಅನುಮತಿ:*
ಬಿಸಿಸಿಐ ಐಪಿಎಲ್ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಿದರೂ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ. ಸದ್ಯ ಭಾರತ ಮತ್ತು ಪಾಕಿಸ್ತಾನ್ ನಡುವೆ ಕದನ ವಿರಾಮ ಘೋಷಿಸಿದ್ದು, ಹೀಗಾಗಿ ಧರ್ಮಶಾಲಾವನ್ನು ಹೊರತುಪಡಿಸಿ ಉಳಿದ ಕಡೆ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಕೇಂದ್ರದ ಒಪ್ಪಿಗೆ ಪಡೆಯಲು ಮುಂದಾಗಿದೆ. ಅದರಂತೆ ಗುರುವಾರ ಅಥವಾ ಶುಕ್ರವಾರ ಐಪಿಎಲ್ ಪುನರಾರಂಭಗೊಳ್ಳುವುದು ಬಹುತೇಕ ಖಚಿತ ಎನ್ನಬಹುದು.