ಭತ್ತ ಬೆಳೆಯುವ ವಿಧಾನಗಳು- ಗುಂಪು ಚರ್ಚೆಯೂ…ಪ್ರಾತ್ಯಕ್ಷಿಕೆಯೂ

ಭತ್ತ ಬೆಳೆಯುವ ವಿಧಾನಗಳು- ಗುಂಪು ಚರ್ಚೆಯೂ…ಪ್ರಾತ್ಯಕ್ಷಿಕೆಯೂ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಭತ್ತ ಬೆಳೆಯುವ ವಿಧಾನಗಳು’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಡಿ. ಎಸ್. ಆರ್ (ಡೈರೆಕ್ಟ್ ಸೀಡೆಡ್ ರೈಸ್), ಎಸ್. ಆರ್. ಐ (ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಷನ್) ಮತ್ತು ಕೆಸರಿನಲ್ಲಿ ಭತ್ತ ನಾಟಿ ಮಾಡುವ ವಿಧಾನಗಳ ನಡುವಿನ ವ್ಯತ್ಯಾಸ, ಅನುಕೂಲ, ಅನಾನುಕೂಲಗಳ ಕುರಿತು ರೈತರೊಂದಿಗೆ ಗುಂಪು ಚರ್ಚೆ ನಡೆಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಬೆಳೆ ಸಂಗ್ರಹಾಲಯದಲ್ಲಿ ತಾವೇ ಈ ಮೂರು ವಿಧಾನಗಳಲ್ಲಿ ಬೆಳೆದಿದ್ದ ಭತ್ತವನ್ನು ರೈತರಿಗೆ ತೋರಿಸಿ, ಬೆಳೆಯುವ ವಿಧಾನವನ್ನು ವಿವರಿಸಿ ಪದ್ಧತಿ ಪ್ರಾತ್ಯಕ್ಷಿಕೆ ಮಾಡಿದರು.

1.ಡಿ.ಎಸ್.ಆರ್ ವಿಧಾನ:
ಇದರಲ್ಲಿ ಭತ್ತದ ಬೀಜಗಳನ್ನು ನೇರವಾಗಿ ಗದ್ದೆಗೆ ಹಾಕುತ್ತಾರೆ. ಈ ರೀತಿ ಬೆಳೆಯುವುದರಿಂದ ಕೂಲಿಯ ವೆಚ್ಚ ಕಡಿಮೆ ಮಾಡಬಹುದು ಹಾಗೂ ಭತ್ತವು ಬೇಗ ಕಟಾವಿಗೆ ಬರುತ್ತದೆ. ಆದರೆ ಇದರಲ್ಲಿ ಕಳೆಗಳ ನಿರ್ವಹಣೆ ಕಷ್ಟಕರವಾಗಿರುತ್ತದೆ.

2.ಎಸ್.ಆರ್.ಐ (ಸಿಸ್ಟಂ ಆಫ್ ರೈಸ್ ಇಂಟೆನ್ಸಿಫಿಕೇಶನ್) ವಿಧಾನ:
ಈ ಬಗೆಯಲ್ಲಿ 8-14 ದಿನಗಳ ಭತ್ತದ ಸಸಿಗಳನ್ನು (ಏರು ಮಡಿಯಲ್ಲಿ) 25*25 ಸಮ ಅಂತರದಲ್ಲಿ ಗದ್ದೆಗೆ ನಾಟಿ ಮಾಡುತ್ತಾರೆ.ಈ ವಿಧಾನದಲ್ಲಿ ಸಾಮಾನ್ಯವಾಗಿ ಭತ್ತ ಬೆಳೆಯಲು ಬೇಕಿರುವ ನೀರಿಗಿಂತ 15 ರಿಂದ 20% ನೀರನ್ನು ಉಳಿಸುವುದರ ಜೊತೆಗೆ ಅಕ್ಕಿಯ ಉತ್ಪಾದಕತೆಯನ್ನು ಸುಧಾರಿಸುತ್ತದೆ.

3.ಕೆಸರಿನಲ್ಲಿ ನಾಟಿ ಮಾಡುವ ವಿಧಾನ:
ಇದರಲ್ಲಿ ಭತ್ತವನ್ನು 21 ದಿನಗಳ ಕಾಲ ಏರು ಮಡಿ ಮಾಡಿ ಭತ್ತದ ಸಸಿಗಳನ್ನು ಬೆಳೆಸಿಕೊಳ್ಳುತ್ತಾರೆ. ನಂತರ ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತಾರೆ.

ಸಿಸ್ಟಂ ಆಫ್ ರೈಸ್ ಇಂಟೆನ್ಸಿಫಿಕೇಶನ್ (ಎಸ್.ಆರ್.ಐ) ಭತ್ತದ ಗಿಡಗಳು ಮಣ್ಣಿನ ನೀರು ಮತ್ತು ಪೋಷಕಾಂಶಗಳನ್ನು ಸಮಥ೯ಕವಾಗಿ ಬಳಸಿಕೊಳ್ಳುತ್ತವೆ ಮತ್ತು ವಿಶೇಷವಾಗಿ ಹೆಚ್ಚು ಬೇರುಗಳ ಬೆಳವಣಿಗೆ ಉಂಟುಮಾಡುವ ಮೂಲಕ ನೀರಾವರಿ ಅಕ್ಕಿಯ ಉತ್ಪಾದಕತೆಯನ್ನು ಹೆಚ್ಚಿಸುವ ಒಂದು ವಿಧಾನವಾಗಿದೆ. ಹಾಗಾಗಿ ರೈತರು ಈ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಉತ್ತೇಜಿಸಿದರು.