ತುಂಗಾ ರೈಸ್ ಮಿಲ್ ಜಾಗ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಸ್ತಿ ಎಂದು ನ್ಯಾಯಾಲಯದ ತೀರ್ಪು;* *ಕೂಡಲೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಸಚಿವ ಮಧು ಬಂಗಾರಪ್ಪರಿಗೆ ಒತ್ತಾಯಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ* *ತೀರ್ಪು ಬಂದು 6 ತಿಂಗಳಾದರೂ ಪಾಲಿಕೆ ಅಧಿಕಾರಿಗಳಿಂದ ಕ್ರಮವಿಲ್ಲದ್ದಕ್ಕೆ ಈಶ್ವರಪ್ಪ ಗರಂ*

*ತುಂಗಾ ರೈಸ್ ಮಿಲ್ ಜಾಗ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಸ್ತಿ ಎಂದು ನ್ಯಾಯಾಲಯದ ತೀರ್ಪು;*

*ಕೂಡಲೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಸಚಿವ ಮಧು ಬಂಗಾರಪ್ಪರಿಗೆ ಒತ್ತಾಯಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ*

*ತೀರ್ಪು ಬಂದು 6 ತಿಂಗಳಾದರೂ ಪಾಲಿಕೆ ಅಧಿಕಾರಿಗಳಿಂದ ಕ್ರಮವಿಲ್ಲದ್ದಕ್ಕೆ ಈಶ್ವರಪ್ಪ ಗರಂ*

ತುಂಗಾ ರೈಸ್ ಮಿಲ್ ಜಾಗವು ಹಿಂದೂ ಸ್ಮಶಾನ ವೆಂದು ದಾಖಲೆಗಳಲ್ಲಿ ಇದ್ದರೂ ಸಹ ಶಿವಮೊಗ್ಗ ನಗರದಲ್ಲಿ ಸಂಚರಿಸುವ ನಗರ ಸಾರಿಗೆ ಬಸ್ಸುಗಳಿಗೆ ಇದುವರೆಗೂ ಒಂದು ಸುಸಜ್ಜಿತವಾದ ಬಸ್ ನಿಲ್ದಾಣ ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಜಾಗದಲ್ಲಿ ನಗರ ಸಾರಿಗೆ ಬಸ್ಸುಗಳಿಗೆ ಬಸ್ ನಿಲ್ದಾಣವನ್ನು ನಿರ್ಮಿಸಿ ಕೊಡಬೇಕೆಂದು ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನನ್ನ ರಾಜಕೀಯ ಜೀವನದ ಮೊದಲ ಮಜಲು ಪ್ರಾರಂಭವಾದ 1989ರ ಸಮಯದಲ್ಲಿ ನಗರಸಭೆಯಾಗಿದ್ದ ಶಿವಮೊಗ್ಗ, ಭದ್ರಾವತಿ ನಗರವನ್ನೂ ಸೇರಿಸಿಕೊಂಡು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು.

ಆದರೆ ನಿಯಮಾನುಸಾರ ಹಾಲಿ ಇರುವ ನಗರಸಭಾ ಸದಸ್ಯರುಗಳನ್ನೇ ಪಾಲಿಕೆ ಸದಸ್ಯರನ್ನಾಗಿ ಪರಿಗಣಿಸಬೇಕಾಗಿತ್ತು. ಹಾಗೆ ಮಾಡದೆ ಹಾಲಿ ನಗರಸಭಾ ಸದಸ್ಯರ ಸದಸ್ಯತ್ವವನ್ನು ಮೊಟಕುಗೊಳಿಸಿ ಹೊಸದಾಗಿ ನಾಮನಿರ್ದೇಶಿತ ಸದಸ್ಯರುಗಳಿಂದ ಪಾಲಿಕೆ ಆಡಳಿತ ನಡೆಯುವಂತೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಹಾನಗರ ಪಾಲಿಕೆಯ ಬೆಲೆಬಾಳುವ ಕೆಲವು ಆಸ್ತಿಗಳನ್ನು ಕಬಳಿಸಲು ಪ್ರಯತ್ನಿಸಿದರು. ಇಂತಹ ಪ್ರಕರಣದಲ್ಲಿ ಪ್ರಮುಖವಾಗಿದ್ದು ಶಿವಮೊಗ್ಗ ನಗರದ ಹೃದಯ ಭಾಗದ ಮುಖ್ಯ ಬಸ್ ನಿಲ್ದಾಣದ ಎದುರಿನ ‘ಅಶೋಕ ವೃತ್ತಕ್ಕೆ ಹೊಂದಿಕೊಂಡಿರುವ ‘ತುಂಗಾ ರೈಸ್ ಮಿಲ್ ಕಾಂಪೌಂಡ್” ಎಂದೇ ಪ್ರಚಲಿತದಲ್ಲಿರುವ ಹಿಂದೂ ಸ್ಮಶಾನ ನಂತರ ಖಾಸಗಿ ಬಸ್ ನಿಲ್ದಾಣಕ್ಕೆ ಮೀಸಲಿಡಲಾದ ಜಾಗ.

ಖಾಸಗಿ ಬಸ್ ನಿಲ್ದಾಣಕ್ಕೆ ಮೀಸಲಿಡಲಾದ ಸುಮಾರು 2 ಎಕರೆ 16 ಗುಂಟೆ ಜಾಗದಲ್ಲಿ 2 ಎಕರೆ ಜಾಗವನ್ನು ಮೇಲೆ ತಿಳಿಸಿದ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಆಗಿನ ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಶಾಮೀಲಾಗಿ ನಕಲಿ ಖಾತೆಯನ್ನು ಸೃಷ್ಟಿಸಿ ಅಕ್ರಮವಾಗಿ ವಿಭಜಿಸಿ 24 ಜನರಿಗೆ ಮಾರಾಟ ಮಾಡಿದ್ದರು.

ದಿನಾಂಕ: 25-07-1992 ರಲ್ಲಿ ನಡೆದ ಈ ಅಕ್ರಮವನ್ನು ಅಂದಿನ ಪಾಲಿಕೆಯ ಕೆಲವು ಅಧಿಕಾರಿಗಳು ಸದರಿ ಭಾಗಕ್ಕೆ ಸಂಬಂಧಿಸಿದ ಯಾವುದೇ ಮೂಲ ದಾಖಲೆಗಳನ್ನು ಪರಿಶೀಲಿಸದೆ ಆ 24 ಜನರ ಹೆಸರಿಗೆ ಖಾತೆ ವರ್ಗಾವಣೆಯನ್ನು ಮಾಡಿಕೊಟ್ಟಿದ್ದರು.

ಈ ವಿಷಯವಾಗಿ ಶಿವಮೊಗ್ಗದ ನಾಗರೀಕರು ಮತ್ತು ಜನಪ್ರತಿನಿಧಿಗಳು ಆಕ್ರೋಶವನ್ನು ಹೊರಹಾಕಿದರು, ಆಗ ಹೋರಾಟಕ್ಕಿಳಿದವರೇ ಆಗಿನ ಶಿವಮೊಗ್ಗದ ಶಾಸಕರಾಗಿದ್ದ ನಾನು. ಇದರ ಪರಿಣಾಮವಾಗಿ ದಿನಾಂಕ: 31-10-1992ರಲ್ಲಿ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಮಿಳಘಟ್ಟ ಸರ್ವೆ ನಂ. 26ಕ್ಕೆ (ಖಾಸಗಿ ಬಸ್ ನಿಲ್ದಾಣಕ್ಕೆ ಮೀಸಲಿಟ್ಟ ಜಾಗ) ಸಂಬಂಧಿಸಿದಂತೆ ಅಕ್ರಮವಾಗಿ 24 ಜನರ ಹೆಸರಿಗೆ ಖಾತೆ ಮಾಡಿರುವುದನ್ನು ರದ್ದು ಪಡಿಸಿ ನಿರ್ಣಯ ಕೈಗೊಳ್ಳುವಂತಾಯಿತು.

ನಂತರ ಸದರಿ ಪ್ರಕರಣದಲ್ಲಿ ಪಾಲಿಕೆ ಅಧಿಕಾರಿಗಳು ಶಾಮೀಲಾಗಿರುವುದನ್ನು ಗಮನಿಸಿ ಪ್ರಕರಣದ ತನಿಖೆಯನ್ನು ಸಿ.ಓ.ಡಿ.ಗೆ ವಹಿಸಲಾಯಿತು, ತನಿಖೆಯ ನಂತರ ಅವ್ಯವಹಾರದಲ್ಲಿ ಶಾಮೀಲಾದ ನಗರಪಾಲಿಕೆಯ ಅಧಿಕಾರಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯದಲ್ಲಿ ಸಾಬೀತಾಗಿ ಕೆಲವು ಅಧಿಕಾರಿಗಳಿಗೆ ಶಿಕ್ಷೆಯೂ ಆಯಿತು.

ಈ ಮಧ್ಯೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದ 24 ಜನರು ಪಾಲಿಕೆಯ ನಿರ್ಣಯದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ (ಆಸಲು ದಾವೆ ಸಂಖ್ಯೆ 235/2000-29-09-2016). ಅಲ್ಲದೇ, ವಿವಾದಿತ 2.16 ಎಕರೆ ಜಾಗದಲ್ಲಿ ಅಕ್ರಮವಾಗಿ ಖಾತೆ ಆಗಿದ್ದ 2 ಎಕರೆ ಜಾಗ ತಮಗೆ ಸೇರಿದ್ದೆಂದು ತುಂಗಾ ರೈಸ್ & ಆಯಿಲ್ ಮಿ‌ಲ್‌ನವರು ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ವಿಚರಣಾ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿ ಪಾಲಿಕೆಯ ಪರವಾಗಿ ತೀರ್ಮ ನೀಡುತ್ತದೆ. ದಾವೆ ಸಂಖ್ಯೆ17/2017-50/2017-57/2017) ನಂತರ ಎರಡೂ ಪ್ರಕರಣಗಳು ಕರ್ನಾಟಕ ಉಚ್ಚ ನ್ಯಾಯಾಲಯದವರೆಗೂ ಹೋಗಿ ಘನ ನ್ಯಾಯಾಲಯವು ಪ್ರಕರಣವನ್ನು ವಿಚಾರಣಾ ನ್ಯಾಯಾಲಯದಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿ ವರ್ಗಾವಣೆ ಮಾಡಿ ಆದೇಶಿಸುತ್ತದೆ. ಪ್ರಕರಣವು ವಿಚಾರಣಾ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಸದರಿ ಜಾಗದ ಪೂರ್ಣ ಹಕ್ಕು ಶಿವಮೊಗ್ಗ ಮಹಾನಗರ ಪಾಲಿಕೆಗೆ ಸೇರಿದ್ದೆಂದು ನ್ಯಾಯಲಯ ದಿನಾಂಕ 28-11-2024ರಂದು ತೀರ್ಪು ನೀಡಿರುತ್ತದೆ ಎಂದು ವಿವರಿಸಿದರು.

ನೂರಾರು ಕೋಟಿ ಮೌಲ್ಯದ ಜಾಗವನ್ನು ಕೂಡಲೇ ರಕ್ಷಿಸಿಕೊಂಡು, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಖಾಸಗಿ ಬಸ್ ನಿಲ್ದಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಲಿ ಎಂದರು.