ಆರೋಗ್ಯಕರ ಜೀವನಶೈಲಿಗೆ ಪೌಷ್ಠಿಕಾಂಶಯುಕ್ತ ಹಣ್ಣುಗಳು ಪೂರಕ : ಸಚಿವ ಎಸ್.ಮಧು ಬಂಗಾರಪ್ಪ ಇಂದು ಮತ್ತು ನಾಳೆ ನಡೆಯಲಿರುವ ಮೇಳದಲ್ಲಿ ಮಿಯಾಝಾಕಿ ಮಾವು, ಕೆಂಪು ದಂತ ಮಾವು, ಬಾಳೆ ಮಾವು ಮತ್ತು ಬೀಜರಹಿತ ಹಲಸು ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣು, ಬಗೆಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ
ಆರೋಗ್ಯಕರ ಜೀವನಶೈಲಿಗೆ ಪೌಷ್ಠಿಕಾಂಶಯುಕ್ತ ಹಣ್ಣುಗಳು ಪೂರಕ : ಸಚಿವ ಎಸ್.ಮಧು ಬಂಗಾರಪ್ಪ
ಇಂದು ಮತ್ತು ನಾಳೆ ನಡೆಯಲಿರುವ ಮೇಳದಲ್ಲಿ ಮಿಯಾಝಾಕಿ ಮಾವು, ಕೆಂಪು ದಂತ ಮಾವು, ಬಾಳೆ ಮಾವು ಮತ್ತು ಬೀಜರಹಿತ ಹಲಸು ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣು, ಬಗೆಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ

ಶಿವಮೊಗ್ಗ :
ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳುವಲ್ಲಿ ದೈನಂದಿನ ಆಹಾರದ ಜೊತೆಗೆ ಹಣ್ಣುಗಳು ಪೂರಕವಾಗಿವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ಎ.ಪಿ.ಎಂ.ಸಿ.ಆವರಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಮಾವು-ಹಲಸಿನ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಆರೋಗ್ಯಕ್ಕೆ ಪೂರಕವಾದ ಹಣ್ಣುಗಳ ಸೇವನೆಯೂ ಮಿತವಾಗಿರಬೇಕು ಎಂದ ಅವರು, ಸ್ಥಳೀಯವಾಗಿ ದೊರೆಯದಿರುವ ಅಪರೂಪದ ಹಾಗೂ ಪೌಷ್ಠಿಕಾಂಶಯುಕ್ತ ಹಣ್ಣಿನ ಬೆಳೆಗಳನ್ನು ಇಲ್ಲಿನ ಹವಾಗುಣಕ್ಕೆ ಒಗ್ಗಿಕೊಳ್ಳುವಂತೆ ಸಸಿಗಳನ್ನು ತಂದು ಪೋಷಿಸಿ, ಜನಸಾಮಾನ್ಯರಿಗೆ ಸರಳವಾಗಿ ದೊರೆಯುವಂತೆ ಮಾರುಕಟ್ಟೆ ಸೌಲಭ್ಯ ದೊರೆಕಿಸುವಂತಾಗಬೇಕು ಎಂದವರು ನುಡಿದರು.
ಈ ರೀತಿಯ ಮಾವು ಮತ್ತು ಹಲಸಿನ ಪ್ರದರ್ಶನ ಮತ್ತು ಮಾರಾಟ ಮೇಳಗಳು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಆಯೋಜಿಸುವಂತಾಗಬೇಕು. ಈ ಮೇಳಗಳಿಂದಾಗಿ ಅಪರೂಪದ ಎಲ್ಲಾ ತಳಿಯ ಹಣ್ಣುಗಳ ಜನಸಾಮಾನ್ಯರಿಗೆ ದೊರೆಯಲಿವೆ. ಮಾತ್ರವಲ್ಲ ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೇ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಇದು ರೈತರಿಗೆ ಲಾಭದಾಯಕ ಉದ್ಯಮವಾಗಿಯೂ ಪರಿಣಮಿಸಲಿದೆ. ಕೆಲವು ಕೃಷಿಕರಿಗೆ ಪ್ರೇರಣೆಯಾಗಲಿದೆ ಎಂದರು.
ಹಾಪ್‌ಕಾಮ್ಸ್ ಆಯೋಜಿಸುವ ಇಂತಹ ಮೇಳಗಳಿಂದ ರೈತರಿಗೆ ಸಹಕಾರಿಯಾಗಲಿದೆ. ಹಾಪ್‌ಕಾಮ್ಸ್‌ನ ಅಭಿವೃದ್ಧಿಗೆ ಅಗತ್ಯವಿರುವ ನೆರವು ಸಹಕಾರವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದರು.
ಅರಣ್ಯದ ಮೇಲಿನ ಮನುಷ್ಯನ ಅವ್ಯಾಹತ ದಾಳಿಯಿಂದಾಗಿ ಕಾಡು ಪ್ರಾಣಿಗಳು ನಗರ ಪ್ರದೇಶಕ್ಕೆ ಲಗ್ಗೆ ಇಡುತ್ತಿವೆ. ಜಿಲ್ಲೆಯಲ್ಲಿ ಮಂಗನಹಾವಳಿ ನಿಯಂತ್ರಣಕ್ಕೆ ಮಂಕಿಪಾರ್ಕ್ ಹಾಗೂ ಆನೆಗಳ ನಿಯಂತ್ರಣಕ್ಕೆ ಆನೆ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಸಚಿವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಕೊರತೆ ಇರುವ ಶಿಕ್ಷಕರ ಕೊರತೆ ನೀಗಿಸಿ, ಸಕಾಲದಲ್ಲಿ ನಿರಂತರ ಪಠ್ಯಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಮಾರು 51000 ಅತಿಥಿ ಶಿಕ್ಷಕರ ನೇಮಕಾತಿ ಕಾರ್ಯ ಈಗಾಗಲೇ ಪೂರ್ಣಗೊಳಿಸಲಾಗಿದೆ. ಅಲ್ಲದೇ ಅವರಿಗೆ ನೀಡಲಾಗುತ್ತಿದ್ದ ಗೌರವಧನವನ್ನು ಮಾಹೆಯಾನ ರೂ.2,000/-ಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಅವರು ಮಾತನಾಢಿ, ಪ್ರತಿ ವ್ಯಕ್ತಿಯೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಹಣ್ಣು ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವಂತೆ ಅವರು ರಸಾಯನಿಕ ಮುಕ್ತ ಮಾವು, ಹಲಸನ್ನು ಸೇವಿಸುವಂತೆ ಅವರು ಸೂಚಿಸಿದರು.
ವಿಶೇಷವಾಗಿ ಇಂದು ಮತ್ತು ನಾಳೆ ನಡೆಯಲಿರುವ ಮೇಳದಲ್ಲಿ ಮಿಯಾಝಾಕಿ ಮಾವು, ಕೆಂಪು ದಂತ ಮಾವು, ಬಾಳೆ ಮಾವು ಮತ್ತು ಬೀಜರಹಿತ ಹಲಸು ಸೇರಿದಂತೆ ವಿವಿಧ ತಳಿಯ ಮಾವಿನಹಣ್ಣು, ಬಗೆಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ|| ಧನಂಜಯ ಸರ್ಜಿ, ಶ್ರೀಮತಿ ಬಲ್ಕೀಷ್ ಬಾನು , ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ, ಹಾಪ್‌ಕಾಮ್ಸ್ ರಾಜ್ಯಾಧ್ಯಕ್ಷ ಬಿ.ಡಿ.ಭೂಕಾಂತ್, ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್, ಪ್ರಸನ್ನಕುಮಾರ್, ನಾಗೇಶ್ ನಾಯ್ಕ, ಎನ್.ರಮೇಶ್ ಸೇರಿದಂತೆ ಉಪಸ್ಥಿತರಿದ್ದರು.