ಎಐಸಿಸಿ ಮಹಿಳಾ ಅಧ್ಯಕ್ಷರಿಂದ ರಾಜ್ಯ ಪದಾಧಿಕಾರಿಗಳ ಘೋಷಣೆ;* *ಶಿವಮೊಗ್ಗದಿಂದ ಪುಷ್ಪಾ ಶಿವಕುಮಾರ್ ಆಯ್ಕೆ…* *ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷೆ ಯಾರಾಗುವರು?*
*ಎಐಸಿಸಿ ಮಹಿಳಾ ಅಧ್ಯಕ್ಷರಿಂದ ರಾಜ್ಯ ಪದಾಧಿಕಾರಿಗಳ ಘೋಷಣೆ;*
*ಶಿವಮೊಗ್ಗದಿಂದ ಪುಷ್ಪಾ ಶಿವಕುಮಾರ್ ಆಯ್ಕೆ…*
*ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷೆ ಯಾರಾಗುವರು?*

ಅಖಿಲ ಭಾರತ ಮಟ್ಟದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಾಂಬಾರವರು ರಾಜ್ಯ ಮಟ್ಟದ ಪದಾಧಿಕಾರಿಗಳು ಹಾಗೂ ಕರ್ನಾಟಕದ ಕೆಲವು ಜಿಲ್ಲಾ ಮಹಿಳಾಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಪುಷ್ಪಾ ಶಿವಕುಮಾರ್ ರವರನ್ನು ಆಯ್ಕೆ ಮಾಡಲಾಗಿದೆ.
ಒಟ್ಟು 48 ಜನ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿರುವ ಅವರು, ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಶಿವಮೊಗ್ಗದ ಶ್ರೀಮತಿ ಪುಷ್ಪಾ ಶಿವಕುಮಾರ್ ಹೆಸರು ಮಾತ್ರ ಇದೆ.
ಇನ್ನು , ರಾಜ್ಯದ 5 ಜಿಲ್ಲೆಗಳ ಮಹಿಳಾ ಜಿಲ್ಲಾಧ್ಯಕ್ಷರನ್ನು ಶ್ರೀಮತಿ ಅಲ್ಕಾ ಲಾಂಬಾ ನೇಮಕ ಮಾಡಿದ್ದು, ಉಳಿದ ಜಿಲ್ಲೆಗಳ ಮಹಿಳಾ ಅಧ್ಯಕ್ಷರ ಆಯ್ಕೆ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲಾ ಮಹಿಳಾಧ್ಯಕ್ಷ ಸ್ಥಾನವೂ ಬಾಕಿ ಉಳಿದಿರುವುದು ಕುತೂಹಲ ಕೆರಳಿಸಿದೆ.
ಕಲಬುರ್ಗಿ, ಬೆಂಗಳೂರು ಪೂರ್ವ,ರಾಯಚೂರು, ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಉಳಿದ ಜಿಲ್ಲೆಗಳ ಮಹಿಳಾ ಅಧ್ಯಕ್ಷರ ಆಯ್ಕೆ ಇನ್ನೂ ಬಾಕಿ ಇದೆ.
ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸೌಮ್ಯಾ ರೆಡ್ಡಿ ಭಾನುವಾರದಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದು, ಶಿವಮೊಗ್ಗ ಮಹಿಳಾ ಅಧ್ಯಕ್ಷ ಗಾದಿ ಯಾರಿಗೆ ಒಲಿಯಲಿದೆ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.
ತಮಗೇ ಅಧ್ಯಕ್ಷ ಸ್ಥಾನ ಒಲಿಸಿಕೊಳ್ಳಲು ಅಧ್ಯಕ್ಷಾಕಾಂಕ್ಷಿಗಳು ಬೇರೆ ಬೇರೆ ರೀತಿಯಲ್ಲಿ ಲಾಬಿ ನಡೆಸುತ್ತಿರುವುದು ಕಂಡು ಬರುತ್ತಿದೆ. ಹಾಲಿ ಶಿವಮೊಗ್ಗ ಜಿಲ್ಲಾಧ್ಯಕ್ಷೆ ಶ್ರೀಮತಿ ಅನಿತಾ ಕುಮಾರಿಯವರು ಅದೇ ಸ್ಥಾನದಲ್ಲಿ ಮುಂದುವರೆಯುವ ಯಾವುದೇ ಆಸಕ್ತಿ ಉಳಿಸಿಕೊಂಡಿಲ್ಲ ಎಂದೇ ಹೇಳಲಾಗುತ್ತಿದೆ. ಅವರು ಚುನಾವಣೆ ನಡೆದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದೇ ಹೇಳಲಾಗುತ್ತಿದೆ.
ಶ್ರೀಮತಿ ಸೌಮ್ಯಾ ರೆಡ್ಡಿಯವರು ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷರ ಆಯ್ಕೆಯನ್ನು ಸೂಕ್ತ ರೀತಿಯಲ್ಲಿ, ಯೋಗ್ಯತೆ ಇರುವವರನ್ನೇ ಆಯ್ಕೆ ಮಾಡುವರೆಂಬ ನಂಬಿಕೆ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.