ವಿಶೇಷ ಸುದ್ದಿ; *ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಮೇಜರ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು!* *ಪ್ರಶ್ನೆ ಪತ್ರಿಕೆ ನೋಡಿ ವಿದ್ಯಾರ್ಥಿಗಳ ಜೊತೆ ಕುವೆಂಪು ವಿವಿಯೇ ದಂಗು!* *ಏನಿದು ಮಹಾ ಯಡವಟ್ಟು? ಯಾರು ಕಾರಣಕರ್ತರು?*

ವಿಶೇಷ ಸುದ್ದಿ

*ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಮೇಜರ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು!*

*ಪ್ರಶ್ನೆ ಪತ್ರಿಕೆ ನೋಡಿ ವಿದ್ಯಾರ್ಥಿಗಳ ಜೊತೆ ಕುವೆಂಪು ವಿವಿಯೇ ದಂಗು!*

*ಏನಿದು ಮಹಾ ಯಡವಟ್ಟು? ಯಾರು ಕಾರಣಕರ್ತರು?*

ಶಿವಮೊಗ್ಗದ ಶೈಕ್ಷಣಿಕ ಕಿರೀಟ ಎನ್ನಲಾಗುವ ಶಂಕರಘಟ್ಟದಲ್ಲಿರೋ ಕುವೆಂಪು ವಿಶ್ವವಿದ್ಯಾನಿಲಯ ದೊಡ್ಡ ಎಡವಟ್ಟಿಗೆ ಇವತ್ತು ಸಾಕ್ಷಿಯಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ನರಕ ತೋರಿಸುತ್ತಿದೆ. ಇವತ್ತು ಬೆಳಿಗ್ಗೆ ನಿಗದಿಯಾಗಿದ್ದ ಬಿ.ಎ. 6ನೇ ಸೆಮಿಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆಯನ್ನು ತನ್ನದೇ ಯಡವಟ್ಟಿನ ಕಾರಣದಿಂದ ಮೂಂದೂಡಿದೆ!

ಇವತ್ತು ಬೆಳಗಿನ ಜಾವದಿಂದಲೇ ಪರೀಕ್ಷೆ ಬರೆಯುವ ಉತ್ಸಾಹದೊಂದಿಗೆ ಕುವೆಂಪು ವಿವಿಯ ಬಿ.ಎ. 6ನೇ ಸೆಮಿಸ್ಟರ್ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು ಬಂದಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ.
ಯಾವ ವಿಷಯ ಬರೆಯಲು ಬಂದಿದ್ದರೋ ವಿದ್ಯಾರ್ಥಿಗಳಿಗೆ ಆ ವಿಷಯದ ಪ್ರಶ್ನೆ ಪತ್ರಿಕೆ ಸಿಗಲೇ ಇಲ್ಲ!

QP Code ಇವತ್ತಿನ ಪ್ರಶ್ನೆ ಪತ್ರಿಕೆಯದೇ ಇದೆ.
DSC -14 ಪತ್ರಿಕೆ
ಟೈಟಲ್ – ಇವತ್ತಿನ ಪತ್ರಿಕೆಯದ್ದೇ.
ಸಾಂಸ್ಕೃತಿಕ ಅಧ್ಯಯನಗಳು- ಪಠ್ಯಗಳ ಬಹುಶಿಸ್ತೀಯ ಅಧ್ಯಯನ(ಘಟಕ- 14) ಅಂತಿದೆ.

ಆದರೆ, ಈ ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳು ಮಾತ್ರ ಮೊನ್ನೆ ನೀಡಲಾದ DSC – 12 ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ ಪಠ್ಯದವುಗಳನ್ನು ನೀಡಲಾಗಿತ್ತು!

ಇಂಥ ಮಹಾ ಯಡವಟ್ಟಿನಿಂದ ಕುವೆಂಪು ವಿಶ್ವವಿದ್ಯಾನಿಲಯ ತಲೆ ತಗ್ಗಿಸುವಂತಾಗಿದೆ. ಯಡವಟ್ಟು ಗಮನಕ್ಕೆ ಬಂದ ಕೂಡಲೇ ಸಂಬಂಧಿಸಿದ ವಿಷಯದ ಬೇರೆ ಪ್ರಶ್ನೆಗಳನ್ನು ಸಿದ್ಧಪಡಿಸಿ ಜೆರಾಕ್ಸ್ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಬರೆಸುವ ಪ್ರಯತ್ನ ಕೂಡ ನಡೆಯಿತು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

*ಕುವೆಂಪು ವಿವಿ: ಕನ್ನಡ ಐಚ್ಚಿಕ ಪರೀಕ್ಷೆ ಮುಂದೂಡಿಕೆ*
*ವಿಶ್ವವಿದ್ಯಾಲಯದಿಂದ ತ್ವರಿತ ಕ್ರಮ* ಎಂಬ ಅಧಿಕೃತವೋ ಅನಧಿಕೃತವೋ ಆದ ಪತ್ರವೊಂದು ವಿದ್ಯಾರ್ಥಿಗಳು, ಅಧ್ಯಾಪಕರ ಸಾಮಾಜಿಕ ಜಾಲತಾಣಗಳಲ್ಲಿ ತೇಲಾಡುತ್ತಿದೆ. ಏನಿದೆ ಅದರಲ್ಲಿ?

👇👇👇👇
*ಪ್ರಶ್ನೆ ಪತ್ರಿಕೆ ಗೊಂದಲಕ್ಕೆ ಕಾರಣರಾದ ಕಾಲೇಜು ಅಧ್ಯಾಪಕರ ಮೇಲೆ ಕಠಿಣ ಕ್ರಮ: ಪ್ರೊ. ಗೋಪಿನಾಥ್*

ಇಂದು ನಿಗದಿಯಾಗಿದ್ದ ಬಿ. ಎ. ಆರನೇ ಸೆಮೆಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆ ಯನ್ನು ಪ್ರಶ್ನೆ ಪತ್ರಿಕೆಯ ಗೊಂದಲದಿಂದ ಮುಂದೂಡಲಾಗಿದ್ದು, ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಕನ್ನಡ ವಿಷಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರನ್ನು ಕರೆಸಿ ಪರೀಕ್ಷಾ ವಿಭಾಗದಲ್ಲಿ ವಿಚಾರಣೆ ನಡೆಸಿದ್ದು, ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ, ಪರಿಶೀಲನೆ ನಡೆಸಿದ ಅಧ್ಯಾಪಕರುಗಳು ಮತ್ತು ಅಧ್ಯಕ್ಷರು ಹೊಣೆಗಾರರಾಗಿರುತ್ತಾರೆ. ಈ ಕುರಿತು ಪರೀಕ್ಷಾ ಮಂಡಳಿಯ ಅಧ್ಯಕ್ಷರು ತಪ್ಪೊಪ್ಪಿಗೆಯ ಪತ್ರ ಸಲ್ಲಿಸಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

“ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಶ್ವವಿದ್ಯಾಲಯದ ಘನತೆಗೆ ಕುಂದು ತಂದಿರುವ ಮತ್ತು ವಿದ್ಯಾರ್ಥಿಗಳಿಗೆ ತೊಡಕು ಉಂಟು ಮಾಡಿರುವ ಈ ಪ್ರಕರಣಕ್ಕೆ ಸಂಬಂಧಪಟ್ಟವರ ಮೇಲೆ ಪರೀಕ್ಷಾ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು” .

ಇದು ಆ ಓಡಾಡುತ್ತಿರುವ ಪತ್ರ.

ಲಕ್ಷಾಂತರ ರೂ.,ಗಳ ಸಂಬಳ ತೆಗೆದುಕೊಳ್ಳುವ ನುರಿತ ಅಧ್ಯಾಪಕರನ್ನೇ ಒಳಗೊಂಡ ಪಠ್ಯಪುಸ್ತಕ ಸಮಿತಿ ಬಿ ವೈ ಎಸ್ ಇಂಥದ್ದೊಂದು ಎಡವಟ್ಟಿಗೆ ಕಾರಣವಾಗಿರುವುದು ಇಡೀ ವಿವಿಯ ಘನತೆಯ ಮೇಲೆ ಸಗಣಿ ಮೆತ್ತಿದಂತಿದೆ.

ಮೊದಲ ಸೆಮಿಸ್ಟರ್ ಮುಗಿಯುತ್ತಿದ್ದಂತೆಯೇ ನಾಲ್ಕು ತಿಂಗಳ ಸಮಯಾವಕಾಶ ಪರೀಕ್ಷೆಗಳಿಗಿರುತ್ತದೆ. ಜೊತೆಗೆ, ಸೆಮಿಸ್ಟರ್ ಆರಂಭವಾಗಿ ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ನೀಡುವಲ್ಲಿ ಪಠ್ಯಪುಸ್ತಕ ಸಮಿತಿ ಸೋಂಬೇರಿತನ ತೋರಿಸುತ್ತಿದೆ ಎಂಬ ಬಲವಾದ ಆರೋಪವೂ ಇದೆ.

ಪ್ರಶ್ನೆ ಪತ್ರಿಕೆ ವಿಚಾರದಲ್ಲಿ ಮಹಾ ಎಡವಟ್ಟು ಮಾಡಿಕೊಂಡು ಒಂದು ಕಡೆ ವಿದ್ಯಾರ್ಥಿಗಳಿಗೂ, ಅದಕ್ಕಾಗಿ ಸಿದ್ಧರಾಗಿ ಬಂದ ಅಧ್ಯಾಪಕರಿಗೂ, ಕುವೆಂಪು ವಿವಿಗೂ ಅನ್ಯಾಯ ಬಗೆದವರ ವಿರುದ್ಧ ಕುವೆಂಪು ವಿವಿ ಯಾವ ಶಿಸ್ತಿನ ಕ್ರಮ ಕೈಗೊಳ್ಳಲಿದೆ? ಏನು ಪಾಠ ಕಲಿಸಲಿದೆ?