ಅಪಾರ ಜನಸ್ತೋಮದ ಮಧ್ಯೆ ವಿದಾಯ ಪಡೆದ ಪರಿಮಳದ ಕವಿ ವಿಷ್ಣು ನಾಯ್ಕ ಅಂಬಾರಕೊಡ್ಲ…
-ಅಪಾರ ಜನಸ್ತೋಮದ ಮಧ್ಯೆ ವಿದಾಯ ಪಡೆದ ಪರಿಮಳದ ಕವಿ ವಿಷ್ಣು ನಾಯ್ಕ ಅಂಬಾರಕೊಡ್ಲ…
-ಹಿರಿಯ ಸಾಹಿತಿ, ಸಮಾಜವಾದಿ ಆಂದೋಲನದ ಕೊಂಡಿ, ಸಹಯಾನದ ಅಧ್ಯಕ್ಷರು, ಪ್ರಕಾಶಕ, ಪತ್ರಕರ್ತ, ಅತ್ಯುತ್ತಮ ಶಿಕ್ಷಕ, ಸಂಘಟಕ, ಸಾಕ್ಷರತಾ ಸಮನ್ವಯಕಾರ, ಮಾನವೀಯ ಕವಿ ಪರಿಮಳದಂಗಳದ ವಿಷ್ಣು ನಾಯ್ಕ, ಅಂಬಾರಕೊಡ್ಲ, ಅಂಕೋಲಾ ಇವರು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ೧೧.೩೦ ಕ್ಕೆ ಅಗಲಿದರು. ಇಂದು ದಿ. ೧೮-೨-೨೦೨೪ ರಂದು ಅಂಕೋಲೆಯ ಅಂಬಾರಕೊಡ್ಲಿನಲ್ಲಿ ಆಪ್ತರಿಂದ ಅಂತಿಮ ವಿದಾಯ.
-೧೯೪೪ ರ ಜುಲೈ ೧ ರಂದು ಜನಿಸಿದ ಅವರಿಗೆ ಎಂಬತ್ತು ವರ್ಷ. ಇಬ್ಬರು ಹೆಣ್ಣು ಮಕ್ಕಳಾದ ಭಾರತಿ, ಅಮಿತಾ ಅಳಿಯಂದಿರಾದ ಕವಿ ಉಮೇಶ್, ಪ್ರಕಾಶ ಹಾಗೂ ಕಸಾಪ ಕಾರವಾರದ ಅಧ್ಯಕ್ಷರಾದ ರಾಮ ನಾಯ್ಕ, ರಂಗಕರ್ಮಿ ಅನಂತ ನಾಯ್ಕರನ್ನು ಒಳಗೊಂಡು ಮೂವರು ತಮ್ಮಂದಿರು, ಕುಟುಂಬ ಬಳಗ, ಮೊಮ್ಮಕ್ಕಳು, ಆಪ್ತರ, ಸಾಹಿತ್ಯ ಪ್ರೇಮಿಗಳ ಅಗಲಿದ್ದಾರೆ.
-ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಮತ್ತು ಮನುಷ್ಯ ಜನ್ಮದ ಸಂಪೂರ್ಣ ಸದ್ಬಳಕೆ ಇವರ ನಿಲುವು ನಂಬಿಕೆ. ಇದಕ್ಕೆ ಚ್ಯುತಿಯಾಗದಂತೆ ಉಸಿರು ಕೊನೆಯ ತನಕ ನೋಡಿಕೊಂಡರು.
– ಬಡತನದ ಬೇಗೆಯಲ್ಲಿ ಬೆಂದು ಹಸಿವಿನ ಅರ್ಥ ಅರಿತು, ಸಮಾಜವಾದಿಯಾದ ಕವಿ ವಿಷ್ಣು ನಾಯ್ಕ ನಾಡಿನ ಮೂಲೆಯೊಂದರಲ್ಲಿ ಹುಟ್ಟಿ ಬೆಳೆದು ನಾಡಿನಾದ್ಯಂತ ಬೆಳೆದರು. ಹಾಗಾಗಿಯೇ ಅವರ ಬರಹಗಳಲ್ಲಿ ನೋವು ಮತ್ತು ಪ್ರೀತಿಯ ಪ್ರಶ್ನೆ ಎದುರಾಗುತ್ತವೆ. ಮತ್ತು ಶ್ರೀಮಂತರ ಶ್ರೀಮಂತಿಕೆ ಬಯಲಾಗುತ್ತದೆ. ಭೂಹೀನರ ಬವಣೆ ಪ್ರತಿಧ್ವನಿಸುತ್ತದೆ.
ತಮ್ಮ ಕಾವ್ಯದಲ್ಲಿ ಮರೆಯದೇ ಅವರು ದಾಖಲಿಸುತ್ತಾರೆ, “ನನ್ನ ನೆರೆಮನೆಯಲ್ಲಿ ಹಸಿದವರು ಇರುವಾಗ ಉಣಲಾರೆನೆಂಬುದೇ ಎದೆಯ ಬಯಕೆ”
– ವಿಷ್ಣು ನಾಯ್ಕರು ಸಮಾಜದ ಒಳಿತಿಗಾಗಿ ಶ್ರಮಿಸಿದ ಎಲ್ಲವೂ ಆಗಿದ್ದರು. ಪ್ರಮುಖ ಪ್ರಗತಿಪರ ಚಿಂತಕರಾದ ಹಿರಿಯ ಸಾಹಿತಿ, ಸಂಘಟಕ, ಪ್ರಕಾಶಕ, ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿ ಮಾಗಿದ ಕವಿ, ಅವರೇ ಹೇಳಿಕೊಂಡಂತೆ “ಎಡನೊಡನೆ ನಿಂತ ಕವಿ” ನಮ್ಮ ವಿಷ್ಣು ನಾಯ್ಕರು ಹಲವು ನೆನಪುಗಳ ಬಿಟ್ಟು ಹೋಗಿದ್ದಾರೆ.
– ಜೀವನವಿಡೀ ಅವರು ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿದಿದ್ದಾರೆ. ಆರಂಭದಲ್ಲಿ ಸಮಾಜವಾದಿ ಯುವಕ ಸಂಘ, ಸ್ಥಾಪಿಸಿ ಊರಿನ ಹಿತಕ್ಕೆ ಹೋರಾಟ ನಡೆಸಿದವರು. ರೈತ ಆಂದೋಲನಕ್ಕೆ ದಿನಕರ ದೇಸಾಯಿಯವರ ಜೊತೆಗೆ ತನ್ನ ವಿದ್ಯಾರ್ಥಿ ದೆಸೆಯಲ್ಲೇ ಧುಮುಕಿದವರು, ಅಂಕೋಲೆಯ ಕರ್ನಾಟಕ ಸಂಘ ಕಟ್ಟಿ ಬೆಳೆಸಿದವರು. ಸತ್ಯಾಗ್ರಹ ಸ್ಮಾರಕಕ್ಕೂ, ಕನ್ನಡ ಭವನಕ್ಕೂ, ಗಡಿನಾಡ ಅಭಿವೃದ್ಧಿಗೂ ದುಡಿದವರು. ಸಾಹಿತ್ಯ ಅಕಾಡೆಮಿ ಸದಸ್ಯರು, ಸಾರ್ವಜನಿಕ ಗ್ರಂಥಾಲಯ ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು, ಮಾಧ್ಯಮಿಕ ಶಾಲಾ ನೌಕರರ ಸಂಘದ ಮುಂದಾಳುವೂ ಆಗಿ ಹೀಗೆ ಅನೇಕ ತೆರನಾಗಿ ದಣಿವರಿಯದ ಕೆಲಸ ಮಾಡಿದ್ದಾರೆ.
-ಯುವ ಬರಹಗಾರರ ಉತ್ತೇಜಿಸಲು ಅವರು ತಮ್ಮ ರಾಘವೇಂದ್ರ ಪ್ರಕಾಶನದ ಮೂಲಕ ಅನನ್ಯವಾದ ಕೆಲಸ ಮಾಡಿದ್ದಾರೆ. ನಾಡಿನಾದ್ಯಂತ ಹೊಸಪೀಳಿಗೆಗೆ ತರಬೇತಿ ನಡೆಸಿದ್ದಾರೆ. ಉದಯೋನ್ಮುಖ ಬರಹಗಾರರ ಮೊದಲ ಪುಸ್ತಕ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ.
ತಮ್ಮದೇ ಸಕಾಲಿಕ ಪತ್ರಿಕೆ ನಡೆಸುವ ಸಾಹಸಕ್ಕೂ ಕೈಹಾಕಿ ವಿದ್ವಜ್ಜನರಿಂದ ಮೌಲಿಕವಾದ ಲೇಖನಗಳನ್ನು ಕೂಡ ಬರೆಯಿಸಿದರು.
-ಅವರು ಎಲ್ಲರಿಗೂ ಅನ್ನವನ್ನೂ ಅಕ್ಷರವನ್ನೂ ಪ್ರೀತಿಯನ್ನೂ ನೀಡಿದರು. ಅಂಗಳದಲ್ಲಿ ಅಕ್ಷರದ ಹಸಿವು ನೀಗಿಸಿದರೆ ಅಡುಗೆ ಕೋಣೆಯಲ್ಲಿ ಒಡಲ ಹಸಿವಿಗೆ ಅನ್ನ ಬಡಿಸಿದರು. ಮಡದಿ ಕವಿತಾ ಮೇಡಂ, ಸಾವಿತ್ರಕ್ಕ, ಅನಂತಣ್ಣ ರಾಮಣ್ಣ ಭಾರತಿ, ಅಮಿತಾ, ಉಮೇಶ್, ಪ್ರಕಾಶ್ ಸಾಥ್ ನೀಡಿದರು. ಬದುಕಿನಲ್ಲಿ ಕಂಡುಂಡ ಕಷ್ಟ ಕಾರ್ಪಣ್ಯ ಹೇಳಿಕೊಂಡವರ ಬದುಕು ಬವಣೆ ಕೇಳಿ ಸಾಂತ್ವನ ಹೇಳಿ ಪ್ರೀತಿ ಉಣಬಡಿಸಿದರು.
-ಧರ್ಮ, ಜಾತಿ, ಲಿಂಗ ಬೇಧವಿಲ್ಲದೇ ಎಲ್ಲರೂ ಅವರನ್ನು ಪ್ರೀತಿಸಿದರು. ಸುತ್ತಲಿನ ಬುಡಕಟ್ಟು ಹಾಲಕ್ಕಿಗಳ ಎದೆಗಪ್ಪಿಕೊಂಡವರು.
-ಉತ್ತರ ಕನ್ನಡದ ಜನ ಚಳುವಳಿಗೆ ಸಾಹಿತ್ಯ ಸಂಘಟನೆ ಮತ್ತು ಅಧ್ಯಯನದ ನಂಟು ಇದ್ದುದನ್ನು ಸಾಬೀತು ಮಾಡಿದವರು ಡಾ. ಆರ್ ವಿ ಭಂಡಾರಿ, ಪ್ರೊ. ಜಿ ಎಸ್ ಅವಧಾನಿ, ಮತ್ತು ವಿಷ್ಣು ನಾಯ್ಕರು ಮತ್ತು ದೂರದ ಮೈಸೂರಿನಲ್ಲಿದ್ದ ಪ್ರೊ. ಜಿ.ಎಚ್. ನಾಯಕ ಮತ್ತು ಡಾ. ವಿಠ್ಠಲ ಭಂಡಾರಿ. ಇವರೆಲ್ಲ ಸಂಘಟನೆ, ಹೋರಾಟ ಮತ್ತು ಬರಹಗಳ ಮೂಲಕ ನಾಡಿನಾದ್ಯಂತ ಪ್ರಸಿದ್ಧರಾಗಿದ್ದರು. ವಿಷ್ಣು ನಾಯ್ಕರ ಅಗಲಿಕೆಯೊಂದಿಗೆ ೨೦ ನೇ ಶತಮಾನದ ಉತ್ತರಾರ್ಧದ ದೊಡ್ಡ ಹೋರಾಟಗಳ ಪರಂಪರೆಯೊಂದು ಕಣ್ಮರೆಯಾದಂತಾಯಿತು.
-ಇವರು ಸ್ವತಃ ನೂರರಷ್ಟು ಕೃತಿ ಬರೆದಿದ್ದಾರೆ. ಕವನ, ಕತೆ, ಕಾದಂಬರಿ, ನಾಟಕ, ಮಾನವಿಕ, ಜೀವನ ಚರಿತ್ರೆ, ದುಡಿಯುವ ಕೈಗಳ ಹೋರಾಟದ ಕತೆ, ಅರೆ ಖಾಸಗಿ, ಮಕ್ಕಳ ಸಾಹಿತ್ಯ ಹೀಗೆ ಅವರ ಬರಹಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
– ಗೌರೀಶರನ್ನು, ದಿನಕರ ದೇಸಾಯಿಯವರನ್ನು ನಾಡಿಗೆ ಅತಿಹೆಚ್ಚು ದಾಖಲಿಸಿ ನೀಡಿದ ವಿಷ್ಣು ನಾಯ್ಕ ಈ ಬೇರುಬುಡದಿಂದಲೇ ಬೆಳೆದವರು ಕೂಡ.
-ಕವಿತೆ, ಕತೆ, ಕಾದಂಬರಿ, ನಾಟಕ ಎಲ್ಲದರಲ್ಲೂ ಬದುಕು ಮತ್ತು ಬವಣೆಗಳದ್ದೇ ಬಿಂಬ ಪ್ರತಿಬಿಂಬ. ಅತ್ಯಂತ ಪರಿಣಾಮಕಾರಿಯಾಗಿ ಹೇಳಲು ಅವರು ಬಳಸಿದ ಸಾಧನ ಮತ್ತು ವಿಷಯ ವಸ್ತು ಕೂಡ ಮಹತ್ವದ್ದು.
-ರಂಗಕರ್ಮಿಕಯಾಗಿ ನಾಟಕ ಬರೆದಿದ್ದಷ್ಟೇ ಅಲ್ಲ, ಸಮಾಜ ಬದಲಾವಣೆಗೆ ನಾಟಕಗಳನ್ನು ಬೀದಿ ನಾಟಕಗಳನ್ನು ಆಡಿದ್ದಾರೆ. ಯಕ್ಷಗಾನದಲ್ಲಿ ತಾಳಮದ್ದಲೆಯಲ್ಲಿ ಕಲಾವಿದರಾಗಿದ್ದರು. ಪತ್ರಕರ್ತರಾಗಿದ್ದರು.
-ವಿಷ್ಣು ನಾಯ್ಕರ ಸಮಗ್ರ ಸಾಹಿತ್ಯ ಸಮೀಕ್ಷೆ ಎಂಬುದು ಎಂದಿಗೂ ಪೂರ್ಣ ಆಗದ ಆಗರದಂತೆ. ಹದಿನಾರಕ್ಕೂ ಹೆಚ್ಚು ಕವನ ಸಂಕಲನಗಳನ್ನು, ನಾಲ್ಕು ಕತೆ ಕಾದಂಬರಿಗಳನ್ನು, ಮೂರು ಅಂಕಣ ಬರಹಗಳ ಸಂಕಲನವನ್ನು ಹದಿಮೂರು ನಾಟಕಗಳ ಸಂಕಲನಗಳನ್ನು, ಒಂಬತ್ತು ವಿಚಾರ ವಿಮರ್ಶೆಯ ಪುಸ್ತಕಗಳನ್ನು, ಮೂರು ಮಾನವಿಕ ಸಂಶೋಧನ ಕೃತಿಗಳನ್ನು, ಜೀವನ ಚರಿತ್ರೆಗೆ ಸಂಬಂಧಿಸಿ ಎಂಟು ಪುಸ್ತಕಗಳನ್ನು, ಪ್ರಕಟಿಸಿದ್ದಾರೆ, ಸಂಪಾದಿತ ಗ್ರಂಥಗಳು ೪೦, ಅಪ್ರಕಟಿತ ನಾಟಕಗಳು ಇನ್ನೂ ೪೦ ಇವೆ, ಅಪ್ರಕಟಿತ ಮಕ್ಕಳ ನಾಟಕ ಹಾಗೂ ವಿಚಾರ ವಿಮರ್ಶೆ ತಲಾ ಎರಡೆರಡು ಹೊರಬರಬೇಕಿದೆ. ನಾಡಿನ ಸಾಹಿತ್ಯ ವಲಯದ ಗಣ್ಯರು ಸಂಪಾದಿಸಿದ ಏಳು ಕೃತಿಗಳು ಪ್ರಕಟವಾಗಿವೆ.
ಕಾವ್ಯ ಕೃಷಿಯಲ್ಲಿ, ಕಾವ್ಯ ಸುಮನ, ಆರತಿ ಈ ರತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸ ಭತ್ತ, ಕಳಕೊಂಡ ಕವಿತೆ, ಆಲ ಮತ್ತು ಬಾಲ, ನೋವು ಪ್ರೀತಿಯ ಪ್ರಶ್ನೆ, ಮುಚ್ಚಿದ ಬಾಗಿಲು ಮತ್ತು ಮರಿ ಗುಬ್ಬಿ, ಬೆಳಕಿನ ಕರೆ, ಭಾವ, ನೂರೆಂಟು ಕಿಟಕಿಗಳು, ಸಂಜೆ ಸೂರ್ಯ, ಸಮಗ್ರ ಕಾವ್ಯ, ಮಕ್ಕಳ ಮೂವತ್ತು ಕವಿತೆಗಳು, ನರಳುವ ನೆರಳಿನ ಸ್ವಗತ ಹದಿನಾರ‍್ಕಕೂ ಹೆಚ್ಚು ಕವಿತೆಗಳ ಸಂಕಲನ ಬಂದಿವೆ.
– ಡಾ. ಆರ್ ವಿ. ಹೇಳಿದಂತೆ, ಇಂದು ಸುತ್ತಲಿನ ಪ್ರಪಂಚದಲ್ಲಿ ಹಲವು ಸಂಘರ್ಷಗಳಿವೆ. ಕಾವ್ಯಕ್ರಿಯೆ ಮತ್ತು ಕಾವ್ಯ ಗ್ರಹಣದ ಸಂಘರ್ಷದಲ್ಲಿ ವಿಷ್ಣು ನಾಯ್ಕ ಅವರದ್ದು ನೋವಿನ ಉಸಿರನ್ನು ಸಂವಹಿಸುವ ಜೊತೆಗೆ ವಿಶಿಷ್ಟ ಸರಳ ಕವಿತೆ ಕಟ್ಟುವ ಕ್ರಿಯೆ ಎಂದಿರುವುದು ನೆನಪಾಗುತ್ತದೆ.
ಹಾಗೆಯೇ ವಿಷ್ಣು ನಾಯ್ಕರ ಬರಹಗಳು ಜಾಗತಿಕರಣಕ್ಕೆ ಪ್ರಾದೇಶಿಕ ಪ್ರತಿರೋಧ ಎಂದು ಬಣ್ಣಿಸಿದ ಪ್ರೊ. ಪುರುಷೋತ್ತಮ ಬಿಳಿಮಲೆಯವರ ಮಾತು ನೆನಪಾಗುತ್ತದೆ.
-ನೋವು ಮತ್ತು ಪ್ರೀತಿಯ ಪ್ರಶ್ನೆ ಉಳಿಸಿ ಹೋಗುತ್ತಾರೆ. ದಲಿತ, ಅಲ್ಪಸಂಖ್ಯಾತ, ಮಹಿಳೆಯರ ಸುತ್ತಲಿನ ಬುಡಕಟ್ಟು ಜನಾಂಗದ ಕುರಿತು ಬರಹಗಳಲ್ಲಿ ನಮೂದಿಸುತ್ತಾರೆ.
-ಕಣ್ಣೀರ ಕತೆಗಳು, ಜಂಗುಂ ಜಕ್ಕುಂ, ದೇವರ ಮರ ಕತೆ ಕಾದಂಬರಿ ಇವರದ್ದು. ಮರ್ಯಾದೆ, ಪ್ರಮಾಣ, ವರ್ತಮಾನದ ಕಣ್ಣು, ಉತ್ತರ ಕನ್ನಡ, ಮೆಲುಕು ಮುನ್ನೋಟ, ಓದು ಮರು ಓದು,ಬತ್ತದ ತೆನೆ, ಮೊದಲ ಸೇಸೆವಿಚಾರ ವಿಮರ್ಶೆಯ ಪುಸ್ತಕಗಳು, ಹದ್ದುಪಾರಿನ ಹಿಂದೆಮುಂದೆ, ದುಡಿಯುವ ಕೈಗಳ ಹೋರಟದ ಕತೆ, ಹಾಲಕ್ಕಿ ಅಧ್ಯಯನ ಪುಸ್ತಕಗಳು, ಪರಿಮಳ, ಕರ್ಮಯೋಗಿ ದಿನಕರ, ನಾಟೋಜ ಸುಕ್ರಿ, ಎಸ್. ರಾಧಾಕೃಷ್ಣನ್ ಜೀವನ ಚರಿತ್ರೆಗಳು, ಒಂದು ಹನಿ ರಕ್ತ, ಸಾರಯಿ ಸೂರಪ್ಪ, ಬೋಳು ಗುಡ್ಡ, ಬಿನ್ನಹಕೆ ಬಾಯಿಲ್ಲ, ಅಯ್ನೋರ ಪೂಜೆ, ಸಾವಿನ ಹಾದಿ, ಪ್ರೀತಿ ಜಗತ್ತಿನ ದೊರೆ, ಯುದ್ಧ, ಒಂದು ನೇಣಿನ ಸುತ್ತ, ಮಹಿಳಾ ಪ್ರೆಸಿಡೆಂಟು, ಸತ್ತ ಮನಸ್ಸಿನ ಮಂದಿ, ಹುಡುಗ ನೋಡುತ್ತಾನೆ ಹುಡುಗಿ, ಕೋಳಿ ಅಂಕ, ಶ್ರೀಮಂತಿಯ ಸ್ವಯಂ ವರ, ನಾಟಕಗಳ ಕತೃ ವಿಷ್ಣು ನಾಯ್ಕರು. ಕಾಲೋಚಿತ, ಅರೆ ಖಾಸಗಿ, ಅಂಕಣ ಬರಹಗಳ ಸಂಕಲನಗಳು.
-ಇಷ್ಟೆಲ್ಲ ಬರೆದ ವಿಷ್ಣು ನಾಯ್ಕರ ಬಗ್ಗೆ ಅವರ ಜೀವನ- ಸಾಹಿತ್ಯ ಕುರಿತ ಕೃತಿಗಳನ್ನು ಹೊರತಂದವರು ಯಾರೆಂದರೆ, ಗೌರೀಶ ಕಾಯ್ಕಿಣಿ, ಸುನಂದಾ ಕಡಮೆ ಹಾಗೂ ಪ್ರಕಾಶ ಕಡಮೆ, ಡಾ. ಎಂ ಜಿ ಹೆಗಡೆ, ಜಿಪಿ ಬಸವರಾಜು, ಜೆ ಪ್ರೇಮಾನಂದ, ಮಧುರೈ ವಿಶ್ವವಿದ್ಯಾಲಯ ಅಧ್ಯಯನ ಯೋಜನೆ ಕೃತಿಗಳೂ ಬಂದಿವೆ. ಕೆಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಆದರ್ಶ ಶಿಕ್ಷಕ, ಅತ್ಯುತ್ತಮ ಕನ್ನಡ ಅಧ್ಯಾಪಕ ಪ್ರಶಸ್ತಿ, ಬೇಂದ್ರೆ ಕಾವ್ಯ ಪುರಸ್ಕಾರ, ಕೊಗ್ರೆ ಶಿಕ್ಷಣ ಪ್ರಶಸ್ತಿ, ಲಿಂಗರಾಜ ಸಾಹಿತ್ಯ ಪ್ರತಿಷ್ಟಾನ ಪ್ರಶ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಟಾನ ಪ್ರಶಸ್ತಿ, ಸ್ವಾತಂತ್ರ್ಯ ಸ್ವರ್ಣ ಜಯಂತಿ ಗೌರವ, ತಾಲೂಕಿನಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವರೆಗೆ ವಿವಿಧ ಗೋಷ್ಟಿಗಳ ಅಧ್ಯಕ್ಷತೆಯ ಗೌರವ, ಉಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ, ಗ್ರಾಮಾಂತರ ವರದಿಗಾರ ಪ್ರಶಸ್ತಿ, ಅನೇಕ ಪುರಸ್ಕಾರ ಲಭಿಸಿದೆ.
-ಕೋಮುವಾದ ಹೆಡೆಬಿಚ್ಚಿ ವಿಷ ಉಗುಳುತ್ತಿರುವ ಈ ಗಳಿಗೆಯಲ್ಲಿ ವಿಷ್ಣು ನಾಯ್ಕರ ಅಗಲಿಕೆ ಸಮಸಮಾಜ ನಿರ್ಮಾಣದ ಕನಸು ನನಸು ಮಾಡಲು ಹೊರಟವರಿಗೆ ಮಾತ್ರವಲ್ಲ ತುಳಿತಕ್ಕೊಳಗಾದ ಜನಸಮುದಾಯಕ್ಕೆ ನಷ್ಟ.
-ನಮ್ಮ ಜನ ಚಳುವಳಿಗಳ ಜೊತೆಗೆ, ಜಿಲ್ಲೆಯ ನಾಡಿನ ಸಮಗ್ರ ಅಭಿವೃದ್ಧಿ ಗೆ, ಸೌಹಾರ್ದ ಕರ್ನಾಟಕ ನಿರ್ಮಾಣದ ಸಂಘಟನಾ ಕೆಲಸಗಳಿಗೆ ಅವರು ಸದಾ ಬೆಂಬಲಿಸಿ ಪಾಲ್ಗೊಂಡಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಾಗೆಲ್ಲ ಅವರು ಸಾಂಸ್ಕೃತಿಕ ಪ್ರತಿಕ್ರಿಯೆ ನೀಡಲು ಹಿಂಜರಿಯಲಿಲ್ಲ. ಅವರ ಸಾಹಿತ್ಯ ಕೃತಿಗಳೆಲ್ಲವೂ ನೆಲಮೂಲ ಸಂಸ್ಕೃತಿಯ ದ್ಯೋತಕಗಳೇ ಆಗಿವೆ. ಈ ನಾಡಿನ ಸರ್ವಾಂಗೀಣ ಒಳಿತಿಗಾಗಿ ಅವರು ಉಳಿಸಿಟ್ಟು ಹೋದ ಕೆಲಸಗಳನ್ನು ಮುಂದುವರಿಸುವುದೇ ನಾವು ಅವರಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ.
-ಟಿಪ್ಪಣಿ: ಯಮುನಾ ಗಾಂವ್ಕರ್