ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!*
*ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ*
*ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!*
ಹೆಣ್ಣು ಕೊಟ್ಟ ಅಣ್ಣಂದಿರು, ತನ್ನ ತಂಗಿಯನ್ನು ಮದುವೆಯಾಗಿ ಒಂದೇ ವರ್ಷದಲ್ಲಿ ಸಂಸಾರ ಮಾಡದೆ ವಾಪಸ್ ಕಳಿಸಿದ್ದೀಯ ಎಂದು ಪ್ರಶ್ನೆ ಮಾಡಿದ್ದ ಇದರಿಂದ ಕೋಪಗೊಂಡ ತಂಗಿಯ ಗಂಡ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಹೆಂಡತಿಯ ಇಬ್ಬರೂ ಸಹೋದರರಿಗೆ ರಸ್ತೆ ಮಧ್ಯದಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆ ಶಿವಮೊಗ್ಗ ನಗರದ ಸೂಳೇ ಬೈಲು ಸರ್ಕಲ್ ಬಳಿ ನಡೆದಿದೆ. ಆರಂಭದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಮಾರಣಾಂತಿಕ ದಾಳಿಯಲ್ಲಿ ಇಬ್ಬರು ಸಹೋದರರಿಗೆ ಚಾಕು ಇರಿತವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಸ್ಥಳೀಯ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಬಂದು ಘಟನೆ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಇದಾದ ಬಳಿಕ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ಕುಟುಂಬದ ದ್ವೇಷದ ಹಿನ್ನೆಲೆಯಿಂದ ಈ ಘಟನೆ ನಡೆದಿದೆ ಎಂಬುದು ತಿಳಿದುಬಂದಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳು ದೊಡ್ಡಪೇಟೆ ಪೊಲೀಸರಿಗೆ ಶರಣಾಗಿದ್ದಾರೆ.
ಚಾಕು ಇರಿತಕ್ಕೆ ಒಳಗಾದವರನ್ನು ‘ಶಬ್ಬೀರ್ ಮತ್ತು ಶಹಬಾಜ್ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶಬ್ಬೀರ್ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಶಬ್ಬೀರ್‌ಗೆ ಹೆಚ್ಚಿನ ಗಾಯವಾಗಿದ್ದುಮ ತೀವ್ರ ರಕ್ತಸ್ರಾವದಿಂದಾಗಿ ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಕೌಟುಂಬಿಕ ದ್ವೇಷವೇ ದಾಳಿಗೆ ಕಾರಣ:
ಈ ದಾಳಿಯನ್ನು ಫರ್ದಿನ್ ಮತ್ತು ಇತರ ಇಬ್ಬರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೌಟುಂಬಿಕ ದ್ವೇಷವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 2022ರಲ್ಲಿ ಶಬ್ಬೀರ್ ಮತ್ತು ಶಹಬಾಜ್ ಅವರ ಸಹೋದರಿಯನ್ನು ಆರೋಪಿ ಫರ್ದಿನ್ ಪ್ರೀತಿಸಿ ಮದುವೆಯಾಗಿದ್ದನು. ಆದರೆ, ಮದುವೆಯಾದ ಕೇವಲ ಒಂದು ವರ್ಷದಲ್ಲೇ ಫರ್ದಿನ್ ತನ್ನ ಪತ್ನಿಯನ್ನು ತೊರೆದಿದ್ದನು.
ಪತ್ನಿ ತೊರೆದ ಕಾರಣದಿಂದ ಶಬ್ಬೀರ್ ಮತ್ತು ಶಹಬಾಜ್ ಸಹೋದರರು ಆಗಾಗ್ಗೆ ಫರ್ದಿನ್‌ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಈ ಬೆದರಿಕೆಗಳಿಂದ ಬೇಸತ್ತಿದ್ದ ಮತ್ತು ರೋಸಿ ಹೋಗಿದ್ದ ಫರ್ದೀನ್, ತನ್ನ ಇಬ್ಬರು ಸಹಚರರಾದ ಇದ್ರಿಶ್ ಮತ್ತು ಉಸ್ಮಾನ್ ಜೊತೆಗೂಡಿ ಶಬ್ಬೀರ್ ಮತ್ತು ಶಹಬಾಜ್ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಘಟನೆ ನಡೆದ ತಕ್ಷಣವೇ ಮೂವರು ಆರೋಪಿಗಳು – ಫರ್ದೀನ್, ಇದ್ರಿಶ್ ಮತ್ತು ಉಸ್ಮಾನ್ – ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಶಬ್ಬೀರ್ ಮತ್ತು ಶಹಬಾಜ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ:
ಗಂಭೀರವಾಗಿ ಗಾಯಗೊಂಡಿರುವ ಶಬ್ಬೀರ್ ಮತ್ತು ಶಹಬಾಜ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ದಾಳಿಯು ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಪ್ರಕರಣವು ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಪೊಲೀಸರು ಹಲ್ಲೆಯ ನಿಖರ ಕಾರಣಗಳು ಮತ್ತು ಇತರ ವಿವರಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.