ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದಲೇ ಸೂಪರ್ ಮಾರ್ಕೆಟ್!* *ಏನೆಲ್ಲಾ ಸೇವೆ ದಕ್ಕಲಿದೆ? ಯಾವಾಗಿಂದ ಆರಂಭವಾಗಲಿದೆ?*

*ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದಲೇ ಸೂಪರ್ ಮಾರ್ಕೆಟ್!*

*ಏನೆಲ್ಲಾ ಸೇವೆ ದಕ್ಕಲಿದೆ? ಯಾವಾಗಿಂದ ಆರಂಭವಾಗಲಿದೆ?*

ರಾಜ್ಯ ಸರ್ಕಾರಿ ನೌಕರರಿಗೆ ಗುಡ್​ ನ್ಯೂಸ್​ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸೇನೆ, ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ಸೂಪರ್ ಮಾರ್ಕೆಟ್ (Supermarket) ಆರಂಭಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದು, ಈ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ತಿಂಗಳಲ್ಲಿ ವರದಿ ನೀಡುವಂತೆ MSILಗೆ ಸಚಿವರು ಸೂಚಿಸಿದ್ದಾರೆ.

ದವಸ ಧಾನ್ಯ ಸೇರಿ, ಎಫ್‌ಎಂಸಿಜಿ ವಲಯದಲ್ಲಿ ಬರುವ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ MSIL​ನಿಂದ ಸೂಪರ್ ಮಾರ್ಕೆಟ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4ರಿಂದ 5 ಮಳಿಗೆ ತೆರೆಯುವ ಆಲೋಚನೆ ಸಕರ್ಕರಕ್ಕಿದ್ದು, ಅನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಇಂತಹ ಸೌಲಭ್ಯ ವಿಸ್ತರಣೆ ಸಾಧ್ಯತೆ ಇದೆ. ಒಂದು ವೇಳೆ ಕ್ಯಾಂಟೀನ್ ಆರಂಭಿಸಿದರೆ 6 ಲಕ್ಷ ಸರ್ಕಾರಿ ನೌಕರರಿಗೆ ಇದರಿಂದ ಅನುಕೂಲವಾಗಲಿದೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, MSIL ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಜೊತೆ ಖನಿಜ ಭವನದಲ್ಲಿ ಇದೇ ವಿಚಾರವಾಗಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಾಥಮಿಕ ಸುತ್ತಿನ ಸಭೆ ನಡೆಸಿದ್ದಾರೆ. ಸರ್ಕಾರಿ ನೌಕರರಿಗಾಗಿ ಆರಂಭಿಸಲು ಉದ್ದೇಶಿಸಿರುವ ಈ ಸೂಪರ್ ಮಾರ್ಕೆಟ್ ಗಳಲ್ಲಿ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಹೇಗೆ ನೀಡಬಹುದು ಎಂಬ ಬಗ್ಗೆ ಆರ್ಥಿಕ ಇಲಾಖೆ ಜೊತೆ ಚರ್ಚಿಸಲು ಸೂಚಿಸಿದ್ದಾರೆ. ಅಲ್ಲದೆ ಸೂಪರ್ ಮಾರ್ಕೆಟ್ ಮಳಿಗೆ ಆರಂಭಿಸುವ ಸಾಧಕ ಬಾಧಕ ಬಗ್ಗೆ 1 ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸಲು MSILಗೆ ಸಚಿವ ಎಂ.ಬಿ.ಪಾಟೀಲ್ ಸೂಚನೆ ನೀಡಿದ್ದಾರೆ. ಈ ಅಧ್ಯಯನ ವರದಿ ಬಂದ ನಂತರ ಕ್ಯಾಂಟೀನ್​ ಆರಂಭದ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.