ಶಿವಮೊಗ್ಗದ ಟ್ರಾವೆಲ್ ಝೋನ್ ನಿಂದ ಅನ್ಯಾಯ ವಿನೋಬನಗರ ಪೊಲೀಸರಿಗೆ ದೂರು ನೀಡಿದ ಪ್ರವಾಸಿಗರು ಏನಿದು ಕಥೆ? ಏನಿದು ವ್ಯಥೆ?
ಶಿವಮೊಗ್ಗದ ಟ್ರಾವೆಲ್ ಝೋನ್ ನಿಂದ ಅನ್ಯಾಯ
ವಿನೋಬನಗರ ಪೊಲೀಸರಿಗೆ ದೂರು ನೀಡಿದ ಪ್ರವಾಸಿಗರು
ಏನಿದು ಕಥೆ? ಏನಿದು ವ್ಯಥೆ?
ವಿದೇಶ ಪ್ರವಾಸದಲ್ಲಿ ನಿಬಂಧನೆಯಂತೆ ನಡೆದುಕೊಳ್ಳದೆ ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡಿದ ಹಾಗೂ ತೊಂದರೆ ನೀಡಿದ ಶಿವಮೊಗ್ಗ ವಿನೋಬನಗರ ಸವಿ ಬೇಕರಿ ಬಳಿಯ ಟ್ರಾವೆಲ್ ಜೋನ್ ವಿರುದ್ಧ ಪ್ರವಾಸಿಗರು ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ನಾವು ಕಟ್ಟಿರುವ ಅರ್ಧದಷ್ಟು ಹಣವನ್ನು ವಾಪಸ್ ಕೊಡಿಸಬೇಕೆಂದು ವಿನಂತಿಸಿ ವಿನೋಬನಗರ ಪೊಲೀಸ್ ಪಿಐ ಸಂತೋಷ್ ಕುಮಾರ್ ಅವರಿಗೆ ಕಾಶಿಪುರದ ಎಸ್. ಮಂಜುನಾಥ್ ಹಾಗೂ ಪ್ರವಾಸ ಹೋಗಿದ್ದ 43 ಸ್ನೇಹಿತರು ಇಂದು ಮಧ್ಯಾಹ್ನ ದೂರು ನೀಡಿದರು.
ನಾವು 43 ಜನ ಸ್ನೇಹಿತರು ಥೈಲ್ಯಾಂಡ್ ದೇಶದ ಟ್ರಾಬಿ, ಪಟ್ಟಾಯ ಹಾಗೂ ಪುಕೇಟ್ ಗೆ ಕಳೆದ ಅಕ್ಟೋಬರ್ ಮೂರರಂದು ಶಿವಮೊಗ್ಗದಿಂದ ಪ್ರವಾಸ ಹೋಗಿದ್ದು, ನಮ್ಮ ಪ್ರವಾಸ ವ್ಯವಸ್ಥೆಯನ್ನು ಈ ಟ್ರಾವೆಲ್ ಜೋನ್ ಗೆ ನೀಡಿದ್ದೆವು. 70000 ರೂ.,ಹಣ ನಿರ್ಧಾರವಾಗಿದ್ದು, ಅದನ್ನು ನೀಡಿದ್ದೆವು. ಅದಕ್ಕೆ ಪೂರಕವಾಗುವಂತೆ ಪ್ರವಾಸ, ವಸತಿ, ತಿಂಡಿ, ಊಟ, ಕ್ರೂಸ್ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಒಪ್ಪಿಕೊಂಡಿದ್ದರು. ಆದರೆ, ನಾವು ಪ್ರವಾಸಕ್ಕೆ ಹೋಗಿದ್ದಾಗ ಯಾವುದೇ ವ್ಯವಸ್ಥೆಯನ್ನು ಮಾಡದೆ ನಮಗೆ ವಸತಿಯನ್ನು ಸಹ ಸಿಗದಂತೆ ಮಾಡಿ ಊಟ ಹಾಗೂ ತಿಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿದರು.
ನಾವು ಕೇಳಿದರೆ ಶಿವಮೊಗ್ಗದಿಂದಲೇ ಹಾರಿಕೆ ಉತ್ತರ ನೀಡುತ್ತಾ ನಮ್ಮ ಇಡೀ ಪ್ರವಾಸವನ್ನು ನಿಜಕ್ಕೂ ಅತ್ಯಂತ ಕೆಟ್ಟದೆನಿಸುವಂತೆ ಮಾಡಿದರು. ಬಸ್ ನಲ್ಲಿಯೇ ಉಪವಾಸ ಕೂರಬೇಕಾದಂತ ಪರಿಸ್ಥಿತಿ ನಮಗೆ ನಿರ್ಮಾಣವಾಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಸಂಬಂಧ ನಾವು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಕ್ಷಣ ನಮ್ಮಿಂದ ವಂಚನೆಯಾಗಿದೆ ಎಂದು ಅನಗತ್ಯ ದೂರು ನೀಡುವ ಪ್ರಯತ್ನ ಅವರಿಂದ ನಡೆಯಿತು. ಕೂಡಲೇ ತಾವುಗಳು ಈ ಟ್ರಾವೆಲ್ ಜೋನ್ ಅವರನ್ನು ಕರೆಸಿ ಪ್ರವಾಸಕ್ಕೆ ಹೋಗಿರುವ ಪ್ರಯಾಣದ ವೆಚ್ಚ ಹೊರತುಪಡಿಸಿ ಉಳಿದ ಅರ್ಧದಷ್ಟು ಹಣವನ್ನು ನಮಗೆ ವಾಪಸ್ ಕೊಡಿಸಬೇಕು ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್, ನರಸಿಂಹ, ಆರ್ಮುಗಂ, ಸಂದೀಪ್, ಕೆ., ನಾಗರಾಜ್, ಅರುಣ್, ಲೋಹಿತ್, ರಮೇಶ್, ಲೋಕೇಶ್, ಶಂಕರ್, ರಾಜು, ಆದರ್ಶ್, ರಾಜು, ಶರತ್, ಮೋಹನ್ ರಾಜ್, ಬಂಡೆ ಶೀನಣ್ಣ ಹಾಗೂ ಇತರರಿದ್ದರು.