ಸ್ಪೀಕ್ ಫಾರ್ ಇಂಡಿಯಾ ಅಂತಿಮ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಹುಮಾನ ಪಡೆದ ಕು.ಸ್ಫೂರ್ತಿ.ವೈ.ಹೆಚ್*

*ಸ್ಪೀಕ್ ಫಾರ್ ಇಂಡಿಯಾ ಅಂತಿಮ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಹುಮಾನ ಪಡೆದ ಕು.ಸ್ಫೂರ್ತಿ.ವೈ.ಹೆಚ್*

ಶಿವಮೊಗ್ಗ : ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಎಸ್ ಡಬ್ಲ್ಯೂ (ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸ್ಪೂರ್ತಿ ವೈ.ಹೆಚ್ ರವರು ‘ಫೆಡರಲ್ ಬ್ಯಾಂಕ್’, ‘ದಿ ಟೈಮ್ಸ್ ಆಫ್ ಇಂಡಿಯಾ’ ಮತ್ತು ‘ವಿಜಯ ಕರ್ನಾಟಕ’ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ಪೀಕ್ ಫಾರ್ ಇಂಡಿಯಾ’ ಕರ್ನಾಟಕ ಆವೃತ್ತಿ 2023-24 ರಲ್ಲಿ ಕರ್ನಾಟಕದ 850 ಕ್ಕೂ ಹೆಚ್ಚಿನ ಕಾಲೇಜುಗಳ 6300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ನಡುವಲ್ಲಿ ಸ್ಪರ್ಧಿಸಿ ಫೈನಲಿಸ್ಟ್ ಆಗಿ ಸರ್ಟಿಫಿಕೇಟ್ ನೊಂದಿಗೆ 35000 ರೂ.ಗಳ ನಗದು ಬಹುಮಾನವನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು, ಆನಂದಪುರಂ ವಾಸಿಯಾದ ಶ್ರೀಮತಿ ಗೌರಮ್ಮ ಮತ್ತು ಯೋಗೀಶ್ ದಂಪತಿಗಳ ಪುತ್ರಿಯಾದ ಇವರು ಬಾಲ್ಯದಿಂದಲೇ ವಿದ್ಯಾಭ್ಯಾಸದ ಜೊತೆಜೊತೆಗೆ ಸಾಹಿತ್ಯ, ರಂಗಭೂಮಿ, ಭಾಷಣ, ಚಿತ್ರಕಲೆ, ಪ್ರಬಂಧ, ಕಾರ್ಯಕ್ರಮಗಳ ನಿರೂಪಣೆ, ಜನಪರ ಹೋರಾಟಗಳು ಹಾಗೂ ಪ್ರತಿಭಟನೆಗಳು ಹೀಗೆ ಹಲವು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಕಾಲೇಜು ಹಂತ, ಅಂತರ ಕಾಲೇಜು ಹಂತ, ಜಿಲ್ಲಾಹಂತ, ವಿಭಾಗೀಯ ಹಂತಗಳಲ್ಲಿ ತಮ್ಮ ವಾದವನ್ನು ಮಂಡಿಸಿ ಗೆದ್ದು ಸೆಮಿ ಫೈನಲ್ಸ್ ಗೆ ಆಯ್ಕೆಯಾಗಿ, ಅಲ್ಲಿಂದ ಅಂತಿಮ ಹಂತವನ್ನು (ಗ್ರಾಂಡ್ ಫಿನಾಲೆ) ತಲುಪಿದ ಕರ್ನಾಟಕ ರಾಜ್ಯದ 8 ಅಭ್ಯರ್ಥಿಗಳಲ್ಲಿ ಇವರೂ ಒಬ್ಬರು.

ಮೊದಲ ಪ್ರಯತ್ನದಲ್ಲೇ ಅಂತಿಮ ಹಂತವನ್ನು ತಲುಪಿದ ಸಂಗತಿ ಖುಷಿ ತಂದಿದೆ. ಚರ್ಚಾಸ್ಪರ್ಧೆಯಲ್ಲಿ ಹೇಗೆ ವಿಚಾರಗಳನ್ನು ಮಂಡಿಸಬೇಕೆಂದು ಹಲವು ಸಲಹೆ ಸೂಚನೆಗಳು ಸಿಕ್ಕವು. ಅಂತಿಮ ಹಂತವನ್ನು ತಲುಪಲು ಪೋಷಕರು, ಕಾಲೇಜಿನ ಪ್ರಾಂಶುಪಾಲರು ಮತ್ತು ಎಲ್ಲ ಪ್ರಾಧ್ಯಾಪಕರ ಮಾರ್ಗದರ್ಶನ ಹಾಗೂ ಸಹಪಾಠಿಗಳ ಸಹಾಯ – ಸಹಕಾರವೇ ಕಾರಣ. ಎಲ್ಲರ ಪ್ರೋತ್ಸಾಹ ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚು ಉತ್ಸಾಹ ನೀಡಿದೆ. ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಸ್ಪೂರ್ತಿ.ವೈ.ಹೆಚ್ ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರಲೋಕ ಸೇವಾ ಆಯೋಗದ (ಯು ಪಿ ಎಸ್ ಸಿ) ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಭಾರತೀಯ ಆಡಳಿತಾತ್ಮಕ ಸೇವೆಯ (ಐಎಎಸ್) ಮೂಲಕ ಪ್ರಗತಿಪರ ಸಮಾಜಕ್ಕೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದುವ ಜೊತೆಗೆ, ಹವ್ಯಾಸಿ ರಂಗಭೂಮಿಯಲ್ಲಿ ಮುಂದುವರೆಯುವ ಆಸಕ್ತಿ ಹೊಂದಿದ್ದಾರೆ.
ಇವರ ಈ ಸಾಧನೆಗೆ ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ. ರಜನಿ ಪೈ, ಎಂ ಸಿ ಸಿ ಎಸ್ ನ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಅಧ್ಯಾಪಕ ವೃಂದ, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.