*IPL ಹಾಲಿ ಚಾಂಪಿಯನ್ RCB ಮಾರಾಟಕ್ಕಿದೆ!* *ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?*

*IPL ಹಾಲಿ ಚಾಂಪಿಯನ್ RCB ಮಾರಾಟಕ್ಕಿದೆ!*

*ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?*

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕರು ಬದಲಾಗುವುದು ಖಚಿತವಾಗಿದೆ. ಅದು ಕೂಡ ಮುಂದಿನ ಐಪಿಎಲ್ ಸೀಸನ್​ ಮುಂಚಿತವಾಗಿ..! ಹೌದು, ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟಕ್ಕಿಡಲಾಗುತ್ತಿರುವ ಬಗ್ಗೆ ಖುದ್ದು ಡಿಯಾಜಿಯೊ ಮಾಹಿತಿ ನೀಡಿದೆ. ಅಲ್ಲದೆ “ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿನ ಹೂಡಿಕೆಯ ಮೌಲ್ಯಮಾಪನಕ್ಕೆ ಮುಂದಾಗುತ್ತಿರುವುದಾಗಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಗೆ ನೀಡಿದ ಸಂವಹನದಲ್ಲಿ ತಿಳಿಸಿದೆ. ಇದು ಡಿಯಾಜಿಯೊದ ಭಾರತೀಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಕಂಪನಿ ಎಂಬುದು ಇಲ್ಲಿ ಉಲ್ಲೇಖಾರ್ಹ.

USL ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ RCSPL ನಲ್ಲಿನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆಯನ್ನು ಪ್ರಾರಂಭಿಸುತ್ತಿದೆ” ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. RCSPL ನ ವ್ಯವಹಾರವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕವಾಗಿ ಆಯೋಜಿಸುವ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸ್ ತಂಡಗಳ ಮಾಲೀಕತ್ವವನ್ನು ಒಳಗೊಂಡಿದೆ.

ಷೇರು ವಿನಿಮಯ ಕೇಂದ್ರಕ್ಕೆ ಬರೆದಿರುವ ಕವರಿಂಗ್ ಲೆಟರ್‌ನಲ್ಲಿ, ಡಿಯಾಜಿಯೊ ಮತ್ತು ಯುಎಸ್‌ಎಲ್, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಿಯಮ 30 ರ ಅಡಿಯಲ್ಲಿ ಫ್ರಾಂಚೈಸಿಯ ಮಾರಾಟವನ್ನು ಬಹಿರಂಗಪಡಿಸುತ್ತಿದ್ದೇವೆ ಎಂದು ತಿಳಿಸಲಾಗಿದೆ. ಅಲ್ಲದೆ ಈ ಪ್ರಕ್ರಿಯೆಯು ಮಾರ್ಚ್ 31, 2026 ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿಕೊಂಡಿದೆ. ಅಂದರೆ ಮುಂದಿನ ಸೀಸನ್​ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಾಗುವುದು ಖಚಿತ.

ಇದಕ್ಕೂ ಮುನ್ನ ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಡಿಯಾಜಿಯೊ ಕಂಪೆನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು.

ಅಲ್ಲದೆ ಐಪಿಎಲ್ 2026 ಕ್ಕೂ ಮುನ್ನ ಒಟ್ಟಾರೆಯಾಗಿ ಲಭ್ಯವಿರುವ ಏಕೈಕ ತಂಡವಾಗಿ ಆರ್​ಸಿಬಿ ಮಾರಾಟವಾಗಬಹುದು. ಬಿಗ್ ಗ್ಲೋಬಲ್ ಫಂಡ್‌ಗಳಲ್ಲಿ ಒಂದು ಅಥವಾ ಬೃಹತ್ ಹೂಡಿಕೆದಾರರು ಆರ್​ಸಿಬಿ ತಂಡವನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಲಲಿತ್ ಮೋದಿ ತಿಳಿಸಿದ್ದರು. ಅದರಂತೆ ಇದೀಗ ಡಿಯಾಜಿಯೋ ಕಂಪೆನಿ ಆರ್​ಸಿಬಿ ಫ್ರಾಂಚೈಸಿಯ ಮಾರಾಟಕ್ಕೆ ಮುಂದಾಗಿದ್ದು, ಬೆಂಗಳೂರು ಫ್ರಾಂಚೈಸಿಯನ್ನು ಯಾರು ಖರೀದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

*ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?*

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದ ಮೌಲ್ಯ ಸುಮಾರು 17 ಸಾವಿರ ಕೋಟಿ ರೂ. ಹಾಗೆಯೇ ಮಹಿಳಾ ತಂಡದ ಮೌಲ್ಯ 3 ರಿಂದ 5 ಸಾವಿರ ಕೋಟಿ ಇರಬಹುದು. ಹೀಗಾಗಿ ಆರ್​ಸಿಬಿ ಫ್ರಾಂಚೈಸಿಯನ್ನು ಅಂದಾಜು 25 ಸಾವಿರ ಕೋಟಿ ರೂ.ಗೆ ಡಿಯಾಜಿಯೋ ಕಂಪೆನಿ ಮಾರಾಟ ಮಾಡುವ ಸಾಧ್ಯತೆಯಿದೆ.