*ಕುವೆಂಪು ವಿಶ್ವವಿದ್ಯಾಲಯ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘ಪರಸ್ಪರ’ ಸ್ವಾಗತ ಕಾರ್ಯಕ್ರಮ* *ದೇಶದ ಯುವಪೀಳಿಗೆ ಆಕರ್ಷಣೆಗಳನ್ನು ಮೀರಿದ ಜವಾಬ್ದಾರಿಯುತ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ಡಾ. ವಿದ್ಯಾಕುಮಾರಿ ಅಭಿಮತ*

*ಕುವೆಂಪು ವಿಶ್ವವಿದ್ಯಾಲಯ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘ಪರಸ್ಪರ’ ಸ್ವಾಗತ ಕಾರ್ಯಕ್ರಮ*

*ದೇಶದ ಯುವಪೀಳಿಗೆ ಆಕರ್ಷಣೆಗಳನ್ನು ಮೀರಿದ ಜವಾಬ್ದಾರಿಯುತ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ಡಾ. ವಿದ್ಯಾಕುಮಾರಿ ಅಭಿಮತ*

ಶಂಕರಘಟ್ಟ

ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕೇವಲ ಶೇ. 28ರಷ್ಟು ಮಾತ್ರ. ಇಂಥಹಾ ಶೈಕ್ಷಣಿಕ ವಾತಾವರಣದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಿಸಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಹು ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕಿ ಡಾ. ವಿದ್ಯಾಕುಮಾರಿ. ಕೆ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸೋಮವಾರ ಆಯೋಜಿಸಲಾಗಿದ್ದ ‘ಪರಸ್ಪರ-2025’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಿಸಿರುವವರ ಸಂಖ್ಯೆ ತೀರ ಕಡಿಮೆ. ಯುವ ಪೀಳಿಗೆಗೆ ಬಾಹ್ಯ ಪ್ರಪಂಚದಲ್ಲಿ ಹಲವಾರು ಆಕರ್ಷಣೆಗಳಿವೆ. ಅವೆಲ್ಲವುಗಳನ್ನು ಮೀರಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತಮ್ಮ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದರು.

ದೇಶದ ಯುವಪೀಳಿಗೆ ಇಂದು ಸಾಮಾಜಿಕ ಮಾಧ್ಯಮದ ಜಾಲತಾಣಗಳು, ಮತ್ತು ಯೋಜಿತ ಪ್ರಚಾರದ ಮಾಹಿತಿಯ ಮಹಾಪೂರದ ಪ್ರಭಾವಕ್ಕೆ ಒಳಗಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದೆ. ಮಾದಕ ವ್ಯಸನದಂತಹಾ ದುಷ್ಚಟಗಳಿಗೆ ಒಳಗಾಗಿ ಒಟ್ಟಾರೆ ಸಮಾಜ ದಾರಿ ತಪ್ಪುತ್ತಿದೆ. ಇಂಥಹಾ ಸಂಕೀರ್ಣತೆಯನ್ನು ಮೀರಿದ ಜಾತ್ಯತೀತ, ಮತ್ತು ಸಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂರಕವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ ಎಂದರು.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಪಡೆದುಕೊಳ್ಳುವ ಪದವಿಗಳಿಗೆ ಅರ್ಥ ಬರಬೇಕಾದರೆ ವಿಮರ್ಶಾತ್ಮಕ ಚಿಂತನೆ, ವೈಚಾರಿಕತೆ, ಮತ್ತು ವೈಜ್ಞಾನಿಕ ದೃಷ್ಟಿಕೋನ ಅತ್ಯವಶ್ಯಕ. ಅಂಥಹಾ ವೈಚಾರಿಕ ವಾತಾವರಣವನ್ನು ನಿರ್ಮಿಸುವುದರತ್ತ ವಿಶ್ವವಿದ್ಯಾಲಯ ಗಮನ ಹರಿಸಲಿದೆ ಎಂದರು.

ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾ. ತಳವಾರ ವೆಂಕಟೇಶ್, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

———————————-

ಭರತ್ ಐಪಿಎಸ್ ಗೆ ಸನ್ಮಾನ: ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಚಂದ್ರಶೇಖರ್ ಅವರ ಪುತ್ರ, ಪ್ರಸ್ತುತ ಸಿಕ್ಕಿಂ ಕೇಡರ್ ನಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಭರತ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಲಾಯಿತು.