ಸಂಗೀತ ರವಿರಾಜ್ ಅಂಕಣ- ಪಯಸ್ವಿನಿಯ ತೀರದಲ್ಲಿ!

             ಪಯಸ್ವಿನಿಯ ತೀರದಲ್ಲಿ……

ಸರಾಗವಾಗಿ, ಸರಳವಾಗಿ, ನಿಧಾನಗತಿಯಲ್ಲಿ , ಹದವಾಗಿ ಬಳುಕುತ್ತಾ, ಏರಿಳಿತವ ಬಯಸುತ್ತಾ,  ಶುಭ್ರವಾಗಿ ಸಾಗುವ ನನ್ನೂರ ಚೆಲುವೆ ಪಯಸ್ವಿನಿಯ ಸೌಂದರ್ಯದ ಎದುರು ಲೋಕದಲ್ಲಿ ಬೇರೇನಿರಲು ಸಾಧ್ಯವೇ ಇಲ್ಲ ಎಂಬ ಭಾವನೆ ಪ್ರತಿದಿನ ಮೂಡುತ್ತದೆ. ಸುತ್ತಮುತ್ತ ಅಂದನೆಯ ಹಸಿರು, ದಡದಲ್ಲಿ ಹಳದಿ ಹೂವುಗಳು, ಉರುಟುರುಟಾದ
ಕಲ್ಲುಗಳು, ಲಲ್ಲೆ ಹೊಡೆಯುತ್ತ ಈಜಾಡುವ ಮೀನುಗಳು ಈ ಸುಂದರಿಗೆ ಇನ್ನು ಹೆಚ್ಚಿನ ಸಾಥ್ ನೀಡುತ್ತವೆ. ಯಾವ ಅಡೆತಡೆಯು ಇಲ್ಲದೆ,  ನಿರ್ವಿಕಾರವಾಗಿ  ಮನೆಯ ಆಜುಬಾಜಿನಲ್ಲಿಯೆ ಹರಿಯುವ ಈ ಪಯಸ್ವಿನಿಗೆ ಅಣೆಕಟ್ಟು ಕಟ್ಟುವಾಗ ಉಪಯೋಗಕ್ಕಿಂತ ಹೆಚ್ಚಾಗಿ ಎಲ್ಲಿ ಇದರ ಸೌಂದರ್ಯ ಹಾಳಾಗಿಬಿಡುತ್ತದೆಯೋ ಎಂಬುದಾಗಿ ತುಂಬಾ ಮರುಕ ಪಟ್ಟಿದ್ದೆವು. ಕಾಮಗಾರಿಯ ಸಂಧರ್ಭದಲ್ಲಿ ನೆಲ ಅಗೆದು , ನೀರು ಬಗೆದಾಗ, ಕಲ್ಲು, ಕಬ್ಬಿಣ, ಸಿಮೆಂಟ್ ಎಂದೆಲ್ಲ ತಂದಿಟ್ಟಾಗ ಒಡಲಾಳದ ಸಂಕಟ ಹೇಳತೀರದು. ಕಾಲ ಯಾರ ಸೊತ್ತು ಅಲ್ಲ ತಾನೇ? ವರ್ಷ ಕಳೆದಾಗ ಚಂದನೆಯ ಸೇತುವೆಯೊಂದಿಗೆ ಕಿಂಡಿ ಅಣೆಕಟ್ಟು ತಲೆ ಎತ್ತಿ ಗಂಭೀರವದನದಿಂದ ನಿಂತಿತು. ಪಯಸ್ವಿನಿಯು ಇನ್ನು ವೈಯಾರದಿಂದಲೇ‌ ಹರಿದು ಸಾಗತೊಡಗಿದಳು . ಈ ಗಂಭೀರವದನನಿಗೆ ಪಯಸ್ವಿನಿಯಂತಹ ಲಲಿತಾಮಣಿ ಸಿಕ್ಕಿ ಪ್ರಕೃತಿ ಚೆಲುವು  ಇನ್ನೂ ಇಮ್ಮಡಿಯಾಯ್ತು. ಸೌಂದರ್ಯ  ಆಸ್ವಾದಿಸಲು ನಮಗೂ ಚಂದನೆಯ ತಾವು  ಸಿಕ್ಕಿದಂತಾಯ್ತು. ಆದರೆ ಈ ಭಾಂದವ್ಯದ ಸುಖ ಹೆಚ್ಚು ದಿನ ಇರಲಿಲ್ಲವೆನ್ನಿ. ಕೊಡಗಿನಲ್ಲಿ ಜಲಸ್ಫೋಟ , ಮೇಘಸ್ಫೋಟ, ಎಂದೆಲ್ಲ ಕರೆಯಿಸಿಕೊಂಡು , ಭೂಮಿ ನಡುಗಿ ಧರೆಗುರುಳಿದ ಮರಗಳಿಂದಾಗಿ ಹೊಚ್ಚ ಹೊಸ ಗಂಭೀರವದನ ಸೇತುವೆ ನುಚ್ಚುನೂರಾಗಿ ಅರ್ಧ ಭಾಗ  ಸೀಳಿ , ರಾಡಿ ತುಂಬಿ ನೋಡಲಾಗದಂತೆ ಆಯಿತು. ನೋಡನೋಡುತ್ತಿದ್ದಂತೆ ಬೆಳ್ಳಂಬೆಳಗ್ಗೆ  ಸೇತುವೆಗೆ ಸಂಬಂಧಿಸಿದ ಕಟ್ಟಡ ಅಲ್ಲೇ ಧರೆಗುರುಳಿ  ನೀರುಪಾಲಾಯ್ತು.  ಇದರಿಂದ ಇನ್ನೂ ಸಂಕಟ ಅನುಭವಿಸುವ ವ್ಯಥೆ ನಮ್ಮದಾಗಿತ್ತು.  ಆದರೆ ನಮ್ಮ ಪಯಸ್ವಿನಿ ಜೀವಸೆಲೆಯ ಚಿಲುಮೆ.  ನಾಶವಾದ ತಿಂಗಳುಗಳ ನಂತರ , ನಾವೇ ಅಚ್ಚರಿ ಪಡುವಂತೆ ಮತ್ತೆ ಅಚ್ಚುಕಟ್ಟಾಗಿ ತಲೆಎತ್ತಿ ನಿಂತು ಸೌಂದರ್ಯ ಮತ್ತು ಉಪಕಾರ ಉಣಬಡಿಸುತ್ತಿದ್ದಾಳೆ. ಇದರ ಜೀವ ಸರಿಪಡಿಸಲು ಜನರು ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಜನರ ಕಷ್ಟಕ್ಕೆ ಬೆಲೆ ಕೊಟ್ಟ ಪಯಸ್ವಿನಿ ತನ್ನೊಡಲ ಮರಗಳನ್ನೆಲ್ಲ ನಿವಾಳಿಸಿ , ಕೆಸರನ್ನೆಲ್ಲ ತೊಳೆದು ಮತ್ತೆ ಮೊದಲಿನಂತಾದಳು. ಆದರೆ ಈ ವರ್ಷದ ಮಳೆಗಾಲಗ್ಯಾಕೋ ಮತ್ತೆ ತೀರಾ ಸೊರಗಿದಂತೆ ಕಾಣುತ್ತಿದ್ದಾಳೆ. ರಾಜ್ಯದಾದ್ಯಂತ ಬರಗಾಲ ಘೋಷಣೆ ಅಂತ ಅಲ್ಲಿ ಇಲ್ಲಿ ಕೇಳುವಾಗ ಪಯಸ್ವಿನಿಯ ನೆನೆದು ಸಂಕಟ ಭುಗಿಲೇಳುತ್ತದೆ. ಈ ಪಯಸ್ವಿನಿ ಮತ್ತೆ ಮುಂದಿನಂತೆ ಭೋರ್ಗರೆಯುತ್ತಾ ಧುಮ್ಮಿಕ್ಕಿ ನಿರಂತರ ಹರಿಯುವಂತಾದರೆ ಸಾಕಪ್ಪ ಎಂಬುದೇ ಮನದಾಳದ ಪ್ರಾರ್ಥನೆ.
              ಹದಿನೈದು ವರ್ಷದ ಹಿಂದೆ ಹೊಚ್ಚ ಹೊಸದಾಗಿ , ಮೊಟ್ಟಮೊದಲಾಗಿ ಕನಸುಗಳೊಂದಿಗೆ ಊರಿಗೆ ಕಾಲಿಟ್ಟಾಗ ನನ್ನನ್ನು ಸ್ವಾಗತ ಮಾಡಿದವಳೇ ಈ ಪಯಸ್ವಿನಿ. ಅದು ಅಂತಿಂಥ ಸ್ವಾಗತವಲ್ಲ. ಕಾಲಿಗೆ ನೀರೆರೆದು , ತಲೆಗೆ ಮುಖಕ್ಕೆಲ್ಲ ಪ್ರೋಕ್ಷಣೆ ಮಾಡಿ , ಸಂಜೆಯಾಗುತ್ತಿರುವ ಹೊತ್ತಿನ ಮಿನುಗುವ ಬಿಸಿಲಿಗೆ ಮುದ ನೀಡಿ  ಎಂದೂ ಮರೆಯಲಾಗದಂತಹ , ಯಾರಿಗೂ ಸಿಗಲಾರದಂತಹ ಅಧ್ಬುತ ಸ್ವಾಗತ . ಹೊಸ ಮನೆಗೆ ಕಾಲಿಡಲು ಇನ್ನೂ ಸಮಯವಿದ್ದದರಿಂದ ಪಯಸ್ವಿನಿಯ ತಂಪಲ್ಲಿ ಒಂದೆರಡು ತಾಸು ಕಳೆದದ್ದು ,ಇವಳೊಂದಿಗಿನ ಜೀವನದ ಅತ್ಯಮೂಲ್ಯ ನೆನಪುಗಳಲ್ಲಿ ಒಂದು. ಅಲ್ಲಿ ಒಂದೆರಡು ಘಳಿಗೆ ಕಳೆದು , ನೆನಪಿನ ಚಿತ್ರ ತೆಗೆಸಿಕೊಂಡು , ಪಯಸ್ವಿನಿಯ ಬೇಕಾದಷ್ಟು ಕಣ್ತುಂಬಿಕೊಂಡು, ಮನಪಟದಲ್ಲು ಬೇಕಾದಷ್ಟು ಭಾವಚಿತ್ರ ಹೊಡೆಸಿಕೊಂಡು ಭಾವ ಸಂಪನ್ನವಾಗಿತ್ತು. ಹಸಿರಿನ ನಡುವೆ ಹರಿಯುವ ಪಯಸ್ವಿನಿ ತೀರದಲ್ಲಿ ನನ್ನ ಮನೆ ,  ಇನ್ನು ನನಗೊಂದು ಹೊಸ ಗೆಳತಿ ಸಿಕ್ಕಿದಳು ಎಂಬುದನ್ನು ನೆನೆದಾಗ ಸಂತಸ ಇಮ್ಮಡಿಗೊಳ್ಳುತಿತ್ತು. ನಮ್ಮ ಕೃಷಿಗೆ  ಮೊಗೆಮೊಗೆದು ಬೇಕಾದಷ್ಟು  ಜೀವಜಲ ಕೊಡುವ ಈ ಜೀವನದಿ , ಬರವಣಿಗೆಯ ಹಾದಿಗು ತಂಪನ್ನೆರೆಯುತ್ತಾಳೆ ಎಂಬುದನ್ನು ನೆನೆದಾಗ ಮನಸ್ಸು ತುಂಬಿ ಬರುತ್ತದೆ. ಇಂಥ ಸಮೃದ್ಧಿಯ ನೆಲದಲ್ಲಿ ವಾಸ ಮಾಡುವ ನಾವೆಲ್ಲರೂ ಧನ್ಯರು.
          ಅತಿಥಿಗಳು ಬಂದಾಗ ಅವರೊಡನೆ ಹೊತ್ತು ಕಳೆಯುವ ಖುಷಿಯಲ್ಲಿ  ಪಯಸ್ವಿನಿಗೊಂದು ಸುತ್ತು ಹಾಕಿ  ಆ ದಿನದ ಸಂಜೆಯನ್ನು ಸುಂದರವಾಗಿಸಿಕೊಳ್ಳುತ್ತೇವೆ. ಉಳಿಯ ಎಂದೇ ಕರೆಯಲ್ಪಡುವ ಗೇರು, ತೆಂಗು ಇರುವ ತೋಟವೊಂದು ಈ ನದಿಯ ನಡುವೆ ಅಂದದ ದ್ವೀಪದಂತೆ ಇದೆ. ಅಲ್ಲಿಗೆ ಆಗಾಗ್ಗೆ ಹೋಗುವುದೆಂದರೆ ತುಂಬಾ ಸಂತೋಷದ ವಿಚಾರ. ಯಾಕೆಂದರೆ ಪಯಸ್ವಿನಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿತ್ತು. ಮಕ್ಕಳೊಡನೆ ಹೋಗಿ ಈಜಾಡಿ ಬರುವುದು , ಸುಖಾ ಸುಮ್ಮನೆ ನದಿಗುಂಟ ಸಾಗುವುದು ಅಭ್ಯಾಸವಾಗಿತ್ತು. ಹಳ್ಳಿಯಾಗಿರುವ ನಮ್ಮೂರಿಂದ ಕಲ್ಲುಗುಂಡಿಗೆ ಹೋಗಬೇಕೆಂದರು ಎರಡು ದೊಡ್ಡ ಸೇತುವೆಗಳನ್ನು ಬಳಸಿಯೇ ಹೋಗಿ ಬರಬೇಕು. ಮನೆಗೆ ಅತಿಥಿಗಳು ಬರುವಾಗ ದಾರಿ ಹೇಳಬೇಕೆಂದರೆ ಪಯಸ್ವಿನಿಯನ್ನು ಬಳಸಿಯೇ ಬನ್ನಿ ಎಂಬುದಾಗಿ ಸಲೀಸಾಗಿ ಹೇಳಿ ಬಿಡುತ್ತೇವೆ. ಎರಡು ಕಡೆಯ ಸೇತುವೆಗಳಲ್ಲಿ ಒಂದು ಸೇತುವೆ ಆಗಿ ಮೂವತೈದು ವರ್ಷ ಕಳೆದವು. ಇನ್ನೊಂದು ಕಡೆಯ ಸೇತುವೆ ಈಗ್ಗೆ ಒಂದು ವರ್ಷದ ಹಿಂದಷ್ಟೇ ಆಗಿದೆ. ಅಲ್ಲಿವರೆಗೆ ಈ ಪಯಸ್ವಿನಿಯ ಹರಿವಲ್ಲೇ  ಜೀಪು ದಾಟಿಸಿ ಬರುತ್ತಿದ್ದೆವು. ಊರಲೆಲ್ಲ  ಹೆಚ್ಚಿನವರು ಹಳ್ಳದಲ್ಲಿ ವಾಹನಗಳನ್ನು ಸಲೀಸಾಗಿ ಯಾವ ಅಡೆತಡೆ ಇಲ್ಲದೆ ದಾಟಿಸಿ ಬಿಡುತ್ತಾರೆ. ಆದರೆ ಮಳೆಗಾಲ ಮಾತ್ರ ನಮ್ಮ ಪಾಡು ದೇವರಿಗೆ ಪ್ರೀತಿ. ಕೃಷಿಕರಾದ ಇಲ್ಲಿನವರೆಲ್ಲ ಕೊಕ್ಕೋ,  ಬಾಳೆ , ಅಡಿಕೆ ಹೀಗೆ ಮಳೆಗಾಲದಲ್ಲಿ ಅಗತ್ಯವಾಗಿ ಮಾರಬೇಕಾದ್ದನ್ನೆಲ್ಲ ಹೆಗಲ ಮೇಲೆ ಹೊತ್ತು ಮಳೆಗಾಲಕ್ಕೆಂದೆ ಮಾಡಿದ ಕಾಲು ಸಂಕ
ದಾಟಿ ರಸ್ತೆಗೆ ತೆಗೆದುಕೊಂಡು ಹೋಗಬೇಕು. ಕಾಲ ಸರಿದಂತೆ ಕಾಡು ಕಡಿದು ರಸ್ತೆ ಮಾಡಿಕೊಂಡೆವು . ಇನ್ನೂ ಸಮಯ ಸರಿದಾಗ ಸರಕಾರ ಕರುಣೆ ತೋರಿ ಅಣೆಕಟ್ಟನ್ನು ಕಟ್ಟಿ ಕೊಟ್ಟಿತು. ಹಾಗಾಗಿ ಮಳೆಗಾಲ ಬಿದಿರಿನ ಪಾಲ ಕಟ್ಟುವ ಕೆಲಸ ತಪ್ಪಿತು. ಇದನ್ನು ತಯಾರಿಸಲು ಜನರು ಪಡುವ ಕಷ್ಟ ಅಷ್ಟಿಷ್ಟಲ್ಲ. ಏಪ್ರಿಲ್ , ಮೇ ತಿಂಗಳಿಂದಲೆ ಕೆಲಸ ಪ್ರಾರಂಭವಾಗಬೇಕು. ದಟ್ಟ ಕಾಡಿನಿಂದ ಗಟ್ಟಿಯಾದ ಬಿದಿರುಗಳನ್ನು ಹೊತ್ತು ತರಬೇಕು . ನೀರಲ್ಲಿಯೆ ಗುಂಡಿ ತೋಡಿ ಬಿದಿರನ್ನು ಊರಬೇಕು. ಅಡ್ಡ ನೀಟಕ್ಕೆ ಕಟ್ಟಲು ಬಿದಿರ ತಟ್ಟಿ ಮಾಡಬೇಕು . ಹಲವಾರು ಕೆಲಸಗಾರರು ಭರಿಸಲಾಗದ ಭಾರ ಹೊತ್ತು ತಿಂಗಳಾನುಗಟ್ಟಲೆ ಇದಕ್ಕೆ ಕೆಲಸ ಮಾಡುವುದು ಕಂಡಾಗ ಮರುಕವಾಗುತ್ತದೆ. ಹಾಗೂ ಹೀಗೂ ಜೂನ್ ಬಂದಾಗ ಪಾಲ ಸಿದ್ಧವಾಗುತ್ತದೆ. ಎಷ್ಟೇ ಕಷ್ಟವಾದರೂ ನಾವಿದನ್ನು ಮಾಡಲೇಬೇಕಿತ್ತು . ಯಾಕೆಂದರೆ ಮಳೆಗಾಲದಲ್ಲಿ ಇದೊಂದೇ ತಂತು ನಮ್ಮನ್ನು ಹೊರಗಡೆ ಹೋಗಲು ಬೆಸೆಯುತ್ತಿತ್ತು. ಈ ಪಾಲದಲ್ಲಿ ನಡೆದಾಡುವುದು ಭಯದ ಕೆಲಸವೂ ಹೌದು ಜೊತೆಗೆ ಮಕ್ಕಳು, ಹಿರಿಯರು ತುಂಬಾ ಜಾಗ್ರತೆಯಿಂದ ದಾಟಬೇಕಾಗುತ್ತದೆ. ನಮಗೆ ಈ ಬಿದಿರಿನ ಕೈ ಪಾಲದಿಂದ ಮುಕ್ತಿ ಸಿಕ್ಕಿದರೂ ನಮ್ಮೂರಿನ ಹಲವಾರು ಮನೆಯವರು ಈಗಲೂ ಹೀಗೆ ಮಳೆಗಾಲದಲ್ಲಿ ಬಿದಿರಿನ ಸೇತುವೆ ಮಾಡುತ್ತಾರೆ. ಸುತ್ತ ನದಿಯ ನಡುವೆ ಮಳೆಗಾಲದಲ್ಲಿ ನಮಗೆಲ್ಲ ದ್ವೀಪದಲ್ಲಿ ಇದ್ದಂತೆ ಭಾಸವಾಗುತ್ತದೆ. ನಡು ಮಳೆಗಾಲದ ಮಧ್ಯ ರಾತ್ರಿಗಳಲ್ಲಿ ನದಿಯ ಹರಿವಿನ ರಭಸದ ಶಬ್ದವನ್ನು ಮನೆಯಲ್ಲಿಯೇ ಕುಳಿತು ಆಲಿಸುತ್ತೇವೆ.
                   ಐವತ್ತು ವರುಷದ ಹಿಂದಿನ ಮಳೆಗಾಲದ ಕಥೆಯನ್ನು ಕೇಳುವಾಗ ಅದು ನಮ್ಮ ಜಮಾನಕ್ಕಿಂತ ಅದೆಷ್ಟೋ ಕಷ್ಟ ಮತ್ತು ಭಿನ್ನವಾಗಿತ್ತು . ಆಗ ನದಿ ದಾಟಲು ಪಿಂಡಿ ಎಂಬ ನೀರಿನಲ್ಲಿ ತೇಲುವಂತಹ ಬಿದಿರಿನಿಂದ ಮಾಡಿದ ವಸ್ತುವನ್ನು ಬಳಸುತ್ತಿದ್ದರು . ಅದಕ್ಕೆ ದೋಣಿಯಲ್ಲಿ ಹುಟ್ಟು ಹಾಕಿದಂತೆ , ಹುಟ್ಟು ಹಾಕುತ್ತಾ ಸಾಗುತ್ತಿದ್ದ ರಂತೆ .  ಒಮ್ಮೆ ಪಿಂಡಿಗೆ ಭಾರ ಜಾಸ್ತಿ ಆಗಿ ಅದು ಮುಳುಗಿ ಅತ್ಯಮೂಲ್ಯವಾದ ಚಿನ್ನ , ಹಣ , ಬಟ್ಟೆ ಇತ್ಯಾದಿ ಎಲ್ಲ ನೀರು ಪಾಲಾಗಿ ಹೋಗಿ, ಪಿಂಡಿಯಲ್ಲಿದ್ದವರು ಬದುಕಿ ಉಳಿದದ್ದೆ ಹೆಚ್ಚು ಎಂಬ ಕಥೆಯನ್ನು ಮಾವ ಈಗಲೂ ಹೇಳುತ್ತಿರುತ್ತಾರೆ. ಈಗಲೂ ಆ ಕಥೆಯನ್ನು ಹೇಳುವಾಗ ವ್ಯಥೆ ಆವರಿಸುತ್ತದೆ. ಇಂತಹ ಕಷ್ಟಕರವಾದ ಜೀವನದ ಲೆಕ್ಕವಿಲ್ಲದಷ್ಟು ಕಥೆಗಳು ಪಯಸ್ವಿನಿಯ ಒಡಲಲ್ಲಿ ಅಡಗಿದೆ. ನಮ್ಮೂರನ್ನು ಸುತ್ತು ಬಳಸಿರುವ ಪಯಸ್ವಿನಿಯನ್ನು ದಾಟಿ ನಮ್ಮೂರಿನ ಪ್ರಾಥಮಿಕ ಶಾಲೆಯಿದೆ. ಅದಕ್ಕೆ ಸುಮಾರು ಮೂವತೈ ದು ವರುಷದ ಹಿಂದೆ ಅಣೆಕಟ್ಟು ಕಟ್ಟುವ ಮೊದಲು,  ಶಾಲೆಗೆ ಬರುವ ಮಕ್ಕಳು ಮತ್ತು ಶಿಕ್ಷಕರು ಮಳೆಗಾಲದಲ್ಲಿ   ತುಂಬಿ ಹರಿಯುವ ಹಳ್ಳ  ದಾಟಲು ಅನೇಕ ಕಷ್ಟ ಬಂದಿದ್ದಾರೆ. ಶಾಲೆ ಎಂದ ಮೇಲೆ ಪ್ರತಿದಿನ ಬರಲೇಬೇಕು ತಾನೇ?  ಅಡ್ಡ ಬಿದ್ದ ಮರದ ದಿಮ್ಮಿ ಮೇಲೆ ಜಾರುತ್ತ , ಏಳುತ್ತಾ , ಬೀಳುತ್ತಾ ಬಂದ ಕಥೆಗಳು ನಮ್ಮನ್ನು ಈಗ ಕರಗಿಸುತ್ತದೆ. ಒಟ್ಟಿನಲ್ಲಿ ಪಯಸ್ವಿನಿ ಕಷ್ಟ – ಸುಖ ಎರಡನ್ನೂ ನೀಡಿ ಊರನ್ನು,  ಬಾಳನ್ನು ಇಂದಿನವರೆಗೂ ಜೋಪಾನವಾಗಿ ಪೊರೆಯತ್ತಾ ಬಂದಿದ್ದಾಳೆ.
      ಈ ನಮ್ಮ ಪಯಸ್ವಿನಿಗೆ ಯಾವ ದೇವರೋ, ಋಷಿ ಮುನಿಗಳೋ , ರಾಜರೋ ಯಾರಿಟ್ಟರೋ ಇಷ್ಟು ಚಂದನೆಯ ಅಭೂತಪೂರ್ವ ಹೆಸರು ಯಾರು ಬಲ್ಲರು ? ಇಲ್ಲೇ ಸಮೀಪದ ಕಾಟಿಗೇರಿಯ  ಶಿವನ ದೇವಸ್ಥಾನವಾದ ಅಪ್ಪೇಂದ್ರಪ್ಪ  ದೇವಾಲಯ,  ಎಂಬಲ್ಲಿಗೆ ಹತ್ತಿರವಾದ ದೇವರಕಾಡು ಎಂಬಲ್ಲಿ ತುಂಬಾ ಸಣ್ಣ  ತೊರೆಯಲ್ಲಿ ಮಗುವಾಗಿ ಹುಟ್ಟಿ,  ನಂತರ ಅಲ್ಲಿನ ಬೆಟ್ಟಕ್ಕಾಗಿ ಹರಿದು ಸಂಪಾಜೆಗೆ ಬರುವಾಗ ಷೋಡಶಿಯಾಗುತ್ತಾಳೆ. ಹಾಗೆ ಬರುವ ಪಯಸ್ವಿನಿ ಊರುಬೈಲು ದಾಟಿ ಬಾಲಂಬಿಗಾಗಿ  ಹರಿದು ಪೆರಾಜೆ ಸೇರಿ ಕೇರಳಕ್ಕೆ ದಾಟಿದ ಮೇಲೆ ಚಂದ್ರಗಿರಿ ನದಿ ಎಂಬ ಹೆಸರಿನಿಂದ  ಹರಿದು ಅರಬ್ಬೀ ಸಮುದ್ರ ಸೇರುತ್ತಾಳೆ . ಈ ಪಯಸ್ವಿನಿಯ ಕೈ ಹಳ್ಳಗಳಾಗಿ ಹರಿಯುವಂತಹ ನಮ್ಮೂರಿನ ನದಿಗಳು ಇನ್ನೂ ಇವೆ. ಕೋಪಟ್ಟಿಯಲ್ಲಿ ಹುಟ್ಟಿ ದಬ್ಬಡ್ಕಕ್ಕಾಗಿ ಹರಿದು ದಬ್ಬಡ್ಕ ಹೊಳೆ ಎಂದೇ ಕರೆಯುವ ಪಯಸ್ವಿನಿಯ  ಕೈ ಹೊಳೆ ಒಂದು ಕಡೆಯಾದರೆ, ಕುದುರೆಪಾಯ ಗುಡ್ಡೆಯಲ್ಲಿ ಹುಟ್ಟಿ ಹರಿದು ಸಾಗುವ ನದಿ ಇನ್ನೊಂದಿದೆ.  ಹೀಗೆ ಸಾಗುವ ಪಯಸ್ವಿನಿಯಲ್ಲಿ,  ಒಮ್ಮೆ ಹರಿದು  ಸರಿದ ನೀರು ಮತ್ತೆ ತಿರುಗಿ ಬರುವುದಿಲ್ಲ ಅಲ್ಲವೇ? ಕಾಲದಂತೆ ಈ ನದಿ  ನಮಗೊಂದು ಜೀವನ ಪಾಠ ಹೇಳಿ ತನ್ನ ಪಾಡಿಗೆ ತಾನು ಸಾಗುತ್ತಾ ಇರುತ್ತದೆ.  ಯಾರಿಗೂ ಉಪದೇಶ ಕೊಡದೆ ತನ್ನ ನಿರಂತರತೆಯೆ ಒಂದು ಉಪದೇಶ ಎಂಬುದಾಗಿ ಸಾರುತ್ತಾಳೆ. ತೀರದಲ್ಲಿ ಕುಳಿತು ಆಕೆಯ ಪಾಠವನ್ನು ಕೇಳುವ ನಮ್ಮೆಲ್ಲರ ಜೀವನ ಧನ್ಯತಾ ಭಾವದಿಂದ ಅರಳುತ್ತಿದೆ.
                                ಸಂಗೀತ ರವಿರಾಜ್
                                         ಚೆಂಬು

.