ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ
ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ
ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ
ದೂರುದಾರರ ಉಳಿತಾಯ ಖಾತೆಯಿಂದ ಕಡಿತವಾದ ಹಣವನ್ನು ಪರಿಶೀಲಿಸಿ ಜಮೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ.
ದೂರುದಾರ ಆದೇಶ ಕೆ.ಎನ್. ಪಿಡ್ಬ್ಯೂಡಿ ವಸತಿಗೃಹ, ಬಾಲರಾಜ್ ರಸ್ತೆ, ಶಿವಮೊಗ್ಗ, ಇವರು ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ದುರ್ಗಿಗುಡಿ ಶಾಖೆ, ಶಿವಮೊಗ್ಗ ಮತ್ತು ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಬೆಂಗಳೂರು ಇವರ ವಿರುದ್ಧ ದೂರನ್ನು ಸಲ್ಲಿಸಿ, ಎದುರಾರರ ಬ್ಯಾಂಕಿನಲ್ಲಿ ತಾವು ಉಳಿತಾಯ ಖಾತೆಯನ್ನು ಹೊಂದಿದ್ದು, ಪೇಟಿಎಂ ಮತ್ತು ಗೂಗಲ್ ಪೇ ಯನ್ನು ಅಳವಡಿಸಿಕೊಂಡು ಉಪಯೋಗಿಸುತ್ತಿರಲಾಗುತ್ತದೆ.
ದಿ:04/05/2024ರಂದು ಬೆಳಿಗ್ಗೆ 8-00 ಗಂಟೆಗೆ ಕೆನರಾ ಬ್ಯಾಂಕ್‌ನಿಂದ 2 ಎಸ್‌ಎಂಎಸ್ ಬಂದಿದ್ದು 1ನೇ ಎಸ್‌ಎಂಎಸ್ ನಲ್ಲಿ ರೂ.5,00,000/-(ಐದು ಲಕ್ಷ) ಮತ್ತು 2ನೇ ಎಸ್‌ಎಂಎಸ್ ನಲ್ಲಿ ರೂ.50,000/-(ಐವತ್ತು ಸಾವಿರ)ಗಳು ಕಡಿತವಾಗಿದ್ದು, ಈ ವಿಷಯವನ್ನು 1ನೇ ಎದುರುದಾರರ ಬಳಿ ತಿಳಿಸಿದ್ದು, ಎದುರುದಾರರು ದೂರುದಾರರ ಖಾತೆಯಿಂದ ಹಣ ಕಡಿತವಾಗಿರುವುದನ್ನು ಖಾತರಿಪಡಿಸಿರುತ್ತಾರೆ.
ತದನಂತರ, ದೂರುದಾರರು ಸಿಇಎನ್ ಪೋಲೀಸ್ ಠಾಣೆ ಶಿವಮೊಗ್ಗ ಇಲ್ಲಿ ದೂರನ್ನು ದಾಖಲಿಸಿರುತ್ತಾರೆ. ದೂರುದಾರರು 1ನೇ ಎದುರುದಾರರ ಬಳಿ ಹಲವು ಬಾರಿ ಕೇಳಿಕೊಂಡರೂ ಕಡಿತವಾದ ಹಣವನ್ನು ಪರಿಶೀಲಿಸಿ ದೂರುದಾರರ ಖಾತೆಗೆ ಹಣ ಜಮೆ ಮಾಡದಿರುವ ಕಾರಣ ನೋಟೀಸ್ ನೀಡಿದ್ದು, ಯಾವುದೇ ಪ್ರತ್ಯುತ್ತರ ನೀಡದೇ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ಆರೋಪಿಸಿರುತ್ತಾರೆ.
ದೂರುದಾರರು ಮತ್ತು 1ನೇ ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಆರ್.ಬಿ.ಐ. ಸುತ್ತೋಲೆಯಂತೆ, ಎದುರುದಾರರು ತನಿಖೆಯನ್ನು ಮಾಡಿ ಕಡಿತವಾದ ಮೊತ್ತವನ್ನು ದೂರುದಾರರ ಖಾತೆಗೆ ಜಮಾ ಮಾಡದೇ ಇರುವುದರಿಂದ, ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, 1 ಮತ್ತು 2ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ರೂ.5,50,000/-ಗಳನ್ನು ಉಳಿತಾಯ ಖಾತೆಗೆ ಅನ್ವಯಿತ ಬಡ್ಡಿಯನ್ನು ಸೇರಿಸಿ, ಆದೇಶವಾದ ದಿನದಿಂದ 45 ದಿನಗಳ ಒಳಗೆ ದೂರುದಾರರ ಖಾತೆಗೆ ಜಮಾ ಮಾಡುವುದು, ತಪ್ಪಿದ್ದಲ್ಲಿ ವಾರ್ಷಿಕ ಶೇ.10ರ ಬಡ್ಡಿಯನ್ನು ಸೇರಿಸಿ, ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕು ಮತ್ತು ಎದುರುದಾರರು ದೂರುದಾರರಿಗೆ ರೂ.30,000/-ಗಳನ್ನು ಮಾನಸಿಕ ವೇದನೆ ಹಾಗೂ ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ ದಿನದಿಂದ 45 ದಿನಗಳ ಒಳಗೆ ಪಾವತಿಸಬೇಕು.ತಪ್ಪಿದ್ದಲ್ಲಿ ವಾರ್ಷಿಕ ಶೇ.10 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ದಿನಾಂಕ:31/12/2025 ರಂದು ಆದೇಶಿಸಿದೆ.


