ತುಷ್ಟೀಕರಣ ರಾಜಕಾರಣ ಬಿಟ್ಟು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ; *ರಾಜ್ಯ ಸರ್ಕಾರಕ್ಕೆ ಡಿ.ಎಸ್. ಅರುಣ್ ಆಗ್ರಹ*
ತುಷ್ಟೀಕರಣ ರಾಜಕಾರಣ ಬಿಟ್ಟು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ;
*ರಾಜ್ಯ ಸರ್ಕಾರಕ್ಕೆ ಡಿ.ಎಸ್. ಅರುಣ್ ಆಗ್ರಹ*
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಬಾರಿ ಬಜೆಟ್ ಮಂಡಿಸಿರುವುದು ಒಂದು ದಾಖಲೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ದುರದೃಷ್ಟವಶಾತ್, ಆ ದಾಖಲೆಗಳು ರಾಜ್ಯದ ಸಮಗ್ರ ಅಭಿವೃದ್ಧಿಯ ಪ್ರತಿಬಿಂಬವಾಗದೆ ಕರ್ನಾಟಕ ನಿಧಾನವಾಗಿ ಹಿನ್ನಡೆಯತ್ತ ಸಾಗುತ್ತಿರುವ ವಾಸ್ತವಿಕತೆಯನ್ನು ತೋರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಹೇಳಿದ್ದಾರೆ.
ಈ ಬಾರಿ ಮಂಡಿಸಿರುವ 17ನೇ ಬಜೆಟ್ ರಾಜ್ಯದ ಭವಿಷ್ಯದ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ತೋರಿಸುವ ಬಜೆಟ್ ಆಗದೇ, ಸಾಲ ಹಾಗೂ ಘೋಷಣೆಗಳ ಮೇಲೆ ಅವಲಂಬಿತವಾಗಿರುವ ಬಜೆಟ್ ಎಂಬುದು ಸ್ಪಷ್ಟವಾಗಿದೆ. ರಾಜ್ಯದ ಒಟ್ಟು ಸಾಲವು ಈಗಾಗಲೇ ಸುಮಾರು 8.24 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಈ ವರ್ಷವೂ ಸುಮಾರು 97,449 ಕೋಟಿ ರೂಪಾಯಿ ಹೊಸ ಸಾಲ ಪಡೆಯಲು ಸರ್ಕಾರ ಮುಂದಾಗಿರುವುದು ಆರ್ಥಿಕ ಶಿಸ್ತು ಕೊರತೆಯನ್ನು ತೋರಿಸುತ್ತದೆ. ಇದಲ್ಲದೆ ಸುಮಾರು 27,957 ಕೋಟಿ ರೂಪಾಯಿ ಕೊರತೆ ಬಜೆಟ್ ಮಂಡನೆಯಾಗಿರುವುದು ರಾಜ್ಯದ ಹಣಕಾಸು ಸ್ಥಿತಿ ಗಂಭೀರವಾಗುತ್ತಿರುವುದಕ್ಕೆ ಸೂಚನೆ ನೀಡುತ್ತದೆ. ಜಿಎಸ್‌ಟಿ ಸಂಗ್ರಹದಲ್ಲಿಯೇ ಸುಮಾರು 10 ಸಾವಿರ ಕೋಟಿ ರೂಪಾಯಿ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಆರ್ಥಿಕ ನಿರ್ವಹಣೆಯ ಮೇಲೆ ಪ್ರಶ್ನೆ ಎಬ್ಬಿಸುತ್ತದೆ ಎಂದಿದ್ದಾರೆ.
ಮತ್ತೊಂದೆಡೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಹಾಗೂ ತಮಿಳುನಾಡು ಮುಂತಾದ ರಾಜ್ಯಗಳು ಭಾರೀ ಪ್ರಮಾಣದಲ್ಲಿ ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸಿ ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ಸಾಗುತ್ತಿರುವಾಗ, ಕರ್ನಾಟಕದಲ್ಲಿ ಆಡಳಿತಾತ್ಮಕ ವಿಳಂಬ, ಹೆಚ್ಚುತ್ತಿರುವ ತೆರಿಗೆಗಳು ಹಾಗೂ ಅನಿಶ್ಚಿತ ನೀತಿಗಳ ಪರಿಣಾಮವಾಗಿ ಹೂಡಿಕೆದಾರರು ಹಿಂಜರಿಯುತ್ತಿರುವುದು ಸ್ಪಷ್ಟವಾಗಿದೆ. ವಿದ್ಯುತ್ ದರ ಹಾಗೂ ಭೂಮಿಯ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಕೈಗಾರಿಕೆಗಳು ಇತರ ರಾಜ್ಯಗಳತ್ತ ಮುಖ ಮಾಡುತ್ತಿರುವುದು ರಾಜ್ಯದ ಆರ್ಥಿಕತೆಗೆ ಹಿನ್ನಡೆಯಾಗಿದೆ ಎಂದಿದ್ದಾರೆ.
ಅತ್ಯಂತ ಮುಖ್ಯವಾಗಿ, *ರಾಜ್ಯದ ಯುವಕರು ಇಂದು ಉದ್ಯೋಗಕ್ಕಾಗಿ ಆತಂಕದಲ್ಲಿದ್ದಾರೆ. ಬಜೆಟ್‌ನಲ್ಲಿ ಉದ್ಯೋಗದ ಬಗ್ಗೆ ಹಲವಾರು ಘೋಷಣೆಗಳನ್ನು ಮಾಡುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಘೋಷಣೆಗಳ ರಾಜಕಾರಣ ಬಿಟ್ಟು ನಿಜವಾಗಿಯೂ ಹೊಸ ಕೈಗಾರಿಕೆಗಳನ್ನು ತರಲು, ಹೂಡಿಕೆಗಳನ್ನು ಮತ್ತು ವಿವಿಧ ಇಲಾಖೆಗಳಲ್ಲಿನ ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು ಯುವಕರಿಗೆ ನೈಜ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘೋಷಣೆಗಳು ಬಹಳ ಇದ್ದರೂ ಅವುಗಳಿಗೆ ಸಮರ್ಪಕ ಹಣಕಾಸಿನ ವ್ಯವಸ್ಥೆ, ಆಡಳಿತಾತ್ಮಕ ವ್ಯವಸ್ಥೆ ಹಾಗೂ ಅನುಷ್ಠಾನ ರೂಪುರೇಷೆಗಳು ಸ್ಪಷ್ಟವಾಗಿಲ್ಲ. ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಸರ್ಕಾರ ಮತಬ್ಯಾಂಕ್ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿರುವುದು ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ರಾಜ್ಯ ಸರ್ಕಾರವು ತುಷ್ಟೀಕರಣ ಹಾಗೂ ಮತಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಕೈಗಾರಿಕೆ, ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ ಮತ್ತು ಯುವಕರಿಗೆ ನೈಜ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಹಾಗೂ ದೃಢವಾದ ನೀತಿಗಳನ್ನು ಜಾರಿಗೆ ತಂದು ಕರ್ನಾಟಕವನ್ನು ನಿಜವಾದ ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಸಬೇಕೆಂದು ಅರುಣ್ ಆಗ್ರಹಿಸಿದ್ದಾರೆ.


