ಕರ್ನಾಟಕದಲ್ಲಿ 2025 ರಲ್ಲಿ 2,544 ಪೋಕ್ಸೋ ಪ್ರಕರಣಗಳು* *ದಿನೇ ದಿನೇ ಹೆಚ್ಚುತ್ತಿದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ*

*ಕರ್ನಾಟಕದಲ್ಲಿ 2025 ರಲ್ಲಿ 2,544 ಪೋಕ್ಸೋ ಪ್ರಕರಣಗಳು*

*ದಿನೇ ದಿನೇ ಹೆಚ್ಚುತ್ತಿದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ*

ಕೇವಲ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಪೋಕ್ಸೊ (Pocso) (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣಗಳ ಸಂಖ್ಯೆ ಶೇ 26 ರಷ್ಟು ಹೆಚ್ಚಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ವಿಧಾನ ಪರಿಷತ್ತಿಗೆ (Assembly Session) ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, 2022 ರಲ್ಲಿ ಸುಮಾರು 3,209 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಅದು 2024 ರ ವೇಳೆಗೆ 4,064 ಕ್ಕೆ ಏರಿಕೆಯಾಗಿದೆ. 2025 ರಲ್ಲಿ ಈವರೆಗೆ 2,544 ಪ್ರಕರಣಗಳು ದಾಖಲಾಗಿವೆ.

ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿದ್ದರೂ, ಅವುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳು ಖುಲಾಸೆಗೊಳ್ಳುತ್ತವೆ ಮತ್ತು ಶಿಕ್ಷೆಯ ಪ್ರಮಾಣ ಕಡಿಮೆ ಇರುತ್ತದೆ.

2022 ರಲ್ಲಿ ದಾಖಲಾದ 3,209 ಪ್ರಕರಣಗಳಲ್ಲಿ, 1,562 ಪ್ರಕರಣಗಳು ಖುಲಾಸೆಗೊಂಡಿದ್ದವು. ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿತ್ತು. ಇನ್ನೂ 1,224 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.

ಪೋಕ್ಸೊ ಪ್ರಕರಣಗಳ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಮಕ್ಕಳಲ್ಲಿಯೂ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಜನ ಜಾಗೃತಿ ಹೆಚ್ಚುತ್ತಿರುವುದರಿಂದ ಪ್ರಕರಣಗಳನ್ನು ದಾಖಲಿಸುವ ಸಂಖ್ಯೆಯೂ ಹೆಚ್ಚಾಗಿರಬಹುದು ಎಂದು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣಗಳನ್ನು ಮುಂದುವರಿಸಿಕೊಂಡು ಪೋಷಕರು ಹಿಂಜರಿಯುವುದರಿಂದ ಶಿಕ್ಷೆ ಕಡಿಮೆಯಾಗುತ್ತಿರಬಹುದು. ಅನೇಕ ಪೋಷಕರು ಪ್ರಕರಣವನ್ನು ಹೆಚ್ಚು ಕಾಲ ಮುಂದುವರಿಸಲು ಅಥವಾ ಗುರುತು ಬಹಿರಂಗಪಡಿಸಲು ಬಯಸುವುದಿಲ್ಲ. ಅನೇಕರು ನ್ಯಾಯಾಲಯದ ಹೊರಗೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಮತ್ತು ರಾಜಿ ಮಾಡಿಕೊಳ್ಳಲು ಆಯ್ಕೆ ಮಾಡುತ್ತಾರೆ. ಆದ್ದರಿಂದ, ಶಿಕ್ಷೆಯ ಪ್ರಮಾಣ ಕಡಿಮೆಯಾಗಿರಬಹುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ನಾವು ಜಿಲ್ಲಾ ಮಟ್ಟದಲ್ಲಿ ಸಲಹೆಗಾರರನ್ನು ಒಳಗೊಂಡ ತಂಡಗಳನ್ನು ರಚಿಸಿದ್ದೇವೆ. ಅವರು ಸಂತ್ರಸ್ತರು ಮತ್ತು ಅವರ ಪೋಷಕರೊಂದಿಗೆ ಕೆಲಸ ಮಾಡುತ್ತಾರೆ. ಅವರಿಗೆ ಕಾನೂನು ನೆರವು ಮತ್ತು ನ್ಯಾಯಕ್ಕಾಗಿ ಹೋರಾಡಲು ಸಹಾಯ ಮಾಡಲು ಸಮಾಲೋಚನೆ ನಡೆಸುತ್ತಾರೆ ಎಂದು ಅವರು ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಕುಟುಂಬದ ಸದಸ್ಯರೇ ಆಗಿರುತ್ತಾರೆ ಮತ್ತು ಕುಟುಂಬದ ಒತ್ತಡದಿಂದಾಗಿ ಪೋಷಕರು ಹಿಂದೆ ಸರಿಯುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಏತನ್ಮಧ್ಯೆ, ಪೋಕ್ಸೊ ಪ್ರಕರಣಗಳ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ವಿಧಾನ ಪರಿಷತ್​ನಲ್ಲಿ ಲಿಖಿತ ಉತ್ತರ ನೀಡಿದ್ದು, ಇಂತಹ ಪ್ರಕರಣಗಳನ್ನು ತಡೆಗಟ್ಟಲು, ಮಕ್ಕಳು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.