*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ; ಪ್ರಧಾನಿ ಮೋದಿ ಬಳಿ ನಿಯೋಗ ಕರೆದೊಯ್ಯಲು ಸಂಸದ ರಾಘವೇಂದ್ರರಿಗೆ ಕೆ ಎಸ್ ಈ ಮನವಿ*
*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ; ಪ್ರಧಾನಿ ಮೋದಿ ಬಳಿ ನಿಯೋಗ ಕರೆದೊಯ್ಯಲು ಸಂಸದ ರಾಘವೇಂದ್ರರಿಗೆ ಕೆ ಎಸ್ ಈ ಮನವಿ*
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಹೊರಟಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಹಲವು ಹೋರಾಟಗಳು ನಡೆದಿದ್ದು, ಇವುಗಳು ಕೇಂದ್ರ ಸರ್ಕಾರದ ಗಮನಸೆಳೆಯಲು ಯಶಸ್ವಿಯಾಗಿವೆ. ಶಿವಮೊಗ್ಗ ಜಿಲ್ಲೆಯ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸರ್ಕಾರ ಈ ಯೋಜನೆಗೆ ಇದುವರೆಗೆ ಅನುಮತಿ ಕೊಟ್ಟಿರುದಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿರುವುದು ಸಂತಸದ ವಿಷಯವಾಗಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ನಾಯಕರಾದ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ನಾನು ಎಲ್ಲಾ ಪರಿಸರ ಪ್ರೇಮಿಗಳ ಪರವಾಗಿ ಸಂಸದರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕೇಂದ್ರ ಸರ್ಕಾರದ ತಜ್ಞರ ಸಮಿತಿ ಈ ಯೋಜನೆಯು ಆರ್ಥಿಕವಾಗಿ ಕಾರ್ಯಸಾಮವಲ್ಲವೆಂದು ವರದಿ ನೀಡಿದೆ ಅಲ್ಲದೆ ಕೇಂದ್ರ ವನ್ಯಜೀವಿ ಮಂಡಳಿಯ ಐಎಫ್‌ಎಸ್ ಅಧಿಕಾರಿ ಶ್ರೀಮತಿ ಪ್ರಣೀತಾ ಕೌರ್ ಅಧ್ಯಯನ ನಡೆಸಿ ಈ ಯೋಜನೆಯಿಂದ ಅಪಾರ ಪರಿಸರ ನಾಶವಾಗುವುದರಿಂದ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ವರದಿ ನೀಡಿದೆ. ಈ ಯೋಜನೆಯ ವಿರುದ್ಧವಾಗಿ ಶ್ರೀ ಮಾರುತಿ ಗುರೂಜಿ ಬಂಗಾರಮಕ್ಕಿ, ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮೂಲೆಗದ್ದೆ, ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಬೆಕ್ಕಿನಕಲ್ಮಶ ಹಾಗೂ ಇತರ ಮಠಾಧೀಶರು ಮತ್ತು ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆ, ಗೋಪಾಲಗೌಡ, ಪರುಶುರಾಮೇಗೌಡ, ಮಾಜಿ ಶಾಸಕರಾದ ನಿವೃತ್ತ ಎ.ಟಿ.ರಾಮಸ್ವಾಮಿ, ಸಂಜಯ್ ಗುಬಿ, ಕೃಪಾಕರ-ಸೇನಾನಿ ಸೇರಿಂದತೆ ಅನೇಕ ಪರಿಸರ ಪರ ಹೋರಾಟಗಾರರು ಧ್ವನಿ ಎತ್ತಿ ಹಲವು ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳನ್ನು ಮಾಡಿದ್ದಾರೆ.
ಅಲ್ಲದೇ, ಈ ಸಂಬಂಧವಾಗಿ ದಾಖಲಿಸಲಾದ ಪಿಐಎಲ್ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಕೆ.ಪಿ.ಸಿ. ಗೆ ಛೀಮಾರಿ ಹಾಕಿ ಜೂನ್ 10 ರ ಒಳಗಾಗಿ ಈ ವಿಷಯವಾಗಿ ಸೂಕ್ತ ವಿವರಣೆಯನ್ನು ಕೇಳಿ ಅಲ್ಲಿಯವರೆಗೆ ಯಾವುದೇ ಚಟುವಟಿಕೆಗಳನ್ನು ಮಾಡದಂತೆ ನಿರ್ಭಂದಿಸಿದೆ ಎಂದರು.
ಈ ಯೋಜನೆಯಿಂದ ಪಶ್ಚಿಮ ಘಟ್ಟ ಪ್ರದೇಶದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಪರಿಸರ ಪರ ಹೋರಾಟಗಾರರ ನಿಯೋಗ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಲು ಸಂಸದರಾದ ಬಿ.ವೈ.ರಾಘವೇಂದ್ರ ಅವರು ಸಮಯ ನಿಗದಿಪಡಿಸಿ ಕೊಡಬೇಕಾಗಿ ಈ ಮೂಲಕ ಕೇಳುತ್ತೇನೆ. ಇದರಿಂದ ಪಶ್ಚಿಮ ಘಟ್ಟಿ ಪರಿಸರಕ್ಕಾಗುವ ಹಾನಿ ಮತ್ತು ತದನಂತರದ ದುಷ್ಪರಿಣಾಮಗಳ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡಿ ಕೊಡಲು ಸಹಯಾವಾಗುತ್ತದೆ ಎಂದರು.
ಕೆ.ಇ.ಕಾಂತೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


