ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು : ಡಿಎಸ್ ಅರುಣ್
*ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು : ಡಿಎಸ್ ಅರುಣ್
ಶಿವಮೊಗ್ಗ; ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಆಗಬಾರದು ಎಂದು ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಫೆ.6 ಮತ್ತು 07 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ 2023-24 ನೇ ಸಾಲಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಶ್ರೇಷ್ಠ ಹಾಗೂ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದ್ದು ನಾವು ಅವರನ್ನು ಗೌರವದಿಂದ ಕಾಣುತ್ತೇವೆ. ಪ್ರತಿವರ್ಷವೂ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದು ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು.
ಪ್ರಸ್ತುತ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ರಾಜಕೀಯ ಶಿಫಾರಸ್ಸಿನ ಬದಲಾಗಿ ಪಾರದರ್ಶಕತೆ ನೀತಿ ಅನ್ವಯ ಆಗುತ್ತಿದ್ದು ಅರ್ಹತೆ ಇದ್ದವರಿಗೆ ಮಾತ್ರ ಅವಕಾಶವನ್ನು ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಕ್ರೀಡಾಪಟುಗಳಿಗೆ ಹೊಸ ಚೈತನ್ಯವನ್ನು ತುಂಬುತ್ತಿದ್ದಾರೆ. ಇದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪದಕಗಳ ಪಟ್ಟಿಯಲ್ಲಿ ಭಾರತ ಉತ್ತಮವಾದ ಸಾಧನೆ ಮಾಡಿದೆ.
ಕೇಂದ್ರ ಸರ್ಕಾರ ಮಹಿಳೆಯರಿಗೆ ಸಂಸದೀಯ ಕ್ಷೇತ್ರದಲ್ಲಿ ಶೇ.33 % ಮೀಸಲಾತಿ ನೀಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು ಪ್ರಧಾನಿಯವರು ಅಭಿವೃದ್ಧಿಯ ಜೊತೆ ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯವನ್ನು ಒದಗಿಸಿದ್ದಾರೆ. ದ್ರೌಪದಿ ಮುರ್ಮು ಅವರನ್ನು ದೇಶದ ರಾಷ್ಟ್ರಪತಿ ಮಾಡುವ ಮೂಲಕ ಮಹಿಳೆಯರ ಮೇಲಿನ ಗೌರವನ್ನು ಹೆಚ್ಚಿಸಿದ್ದಾರೆ ಎಂದರು.
ಶಿವಮೊಗ್ಗದ ಕ್ರೀಡಾ ಕ್ಷೇತ್ರದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಮೂಲಕ ಯುವ ಜನತೆಗೆ ಪ್ರೇರಣೆ ನೀಡಲಾಗಿದೆ. ನಿಜವಾಗಿ ಸಾಧಿಸುವ ಛಲ ಇದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಎಲ್ಲಾ ಕ್ರೀಡಾ ವಿದ್ಯಾರ್ಥಿಗಳು ನಿಮ್ಮ ಕ್ರೀಡಾ ತರಬೇತಿ ಕಡೆ ಹೆಚ್ಚಿನ ಗಮನ ನೀಡಿ. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಯಿಂದ ಬದುಕುತ್ತಿದ್ದಾರೆ ಎಂದ ಅವರು ನಾವು ನಮ್ಮ ಸಂಸ್ಕೃತಿ, ಸಂಪ್ರದಾಯ, ಗುರು ಹಿರಿಯರಿಗೆ ಗೌರವ ನೀಡುವ ಮೂಲ ಸಂಪ್ರದಾಯಗಳನ್ನು ಎಂದಿಗೂ ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾದ ಜಿಲ್ಲಾ ಖಜಾನೆ ಉಪನಿರ್ದೇಶಕರಾದ ಸಾವಿತ್ರಿ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥಸ್ವಾಮಿ ಎಂ.ಟಿ ಮತ್ತು ರವಿಕುಮಾರ್ , ಕ್ರೀಡಾ ತರಬೇತುದಾರರಾದ ನಾಗರಾಜ್ ಮಹಿಳಾ ಕ್ರೀಡಾಪಟುಗಳು, ಕ್ರೀಡಾ ವಿದ್ಯಾರ್ಥಿಗಳು ಇದ್ದರು.