*ಇತಿಹಾಸದಲ್ಲೇ ಅತ್ಯಂತ ದೊಡ್ಡ ಲೋಕಾಯುಕ್ತ ದಾಳಿ…* *ಶಿವಮೊಗ್ಗ ಜಿಲ್ಲೆಯ 25ಕ್ಕೂ ಹೆಚ್ಚು ಕಡೆ ಅಕ್ರಮ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದಾಳಿ* *ಸುಮೋಟೋ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿಗಳು* *ಕಳ್ಳ ಅಧಿಕಾರಿಗಳು, ಹೊಟ್ಟೆತುಂಬ ಉಂಡವರಿಗೂ ಲೋಕಾಯುಕ್ತ ನೋಟಿಸ್* *ಮರಳು ಮಾಫಿಯಾ ವಿರುದ್ಧ ವಾಟರ್ ಆ್ಯಕ್ಟ್- 1974 ಪ್ರಬಲ ಕೇಸ್ ಹಾಕುವ ಸಾಧ್ಯತೆ*
*ಇತಿಹಾಸದಲ್ಲೇ ಅತ್ಯಂತ ದೊಡ್ಡ ಲೋಕಾಯುಕ್ತ ದಾಳಿ…*
*ಶಿವಮೊಗ್ಗ ಜಿಲ್ಲೆಯ 25ಕ್ಕೂ ಹೆಚ್ಚು ಕಡೆ ಅಕ್ರಮ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದಾಳಿ*
*ಸುಮೋಟೋ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿಗಳು*
*ಕಳ್ಳ ಅಧಿಕಾರಿಗಳು, ಹೊಟ್ಟೆತುಂಬ ಉಂಡವರಿಗೂ ಲೋಕಾಯುಕ್ತ ನೋಟಿಸ್*
*ಮರಳು ಮಾಫಿಯಾ ವಿರುದ್ಧ ವಾಟರ್ ಆ್ಯಕ್ಟ್- 1974 ಪ್ರಬಲ ಕೇಸ್ ಹಾಕುವ ಸಾಧ್ಯತೆ*

ಶಿವಮೊಗ್ಗದ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದೊಡ್ಡ ಸಮರವನ್ನೇ ಸಾರಿದ್ದು, ಮರಳು ಮಾಫಿಯಾ ಜೊತೆಗೆ ಕೈ ಜೋಡಿಸಿರುವ ಅಧಿಕಾರಿಗಳ ತೊಡೆ ನಡುಗತೊಡಗಿವೆ.
ಪದೇ ಪದೇ ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಗಳು ಕೇಳಿ ಬಂದರೂ ಪೊಲೀಸರಾಗಲೀ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲೀ ಕ್ರಮ ಕೈಗೊಳ್ಳುವುದಿರಲಿ, ಫೋನ್ ಕೂಡ ಎತ್ತದ ಸ್ಥಿತಿಯಲ್ಲಿದ್ದರು. ಈ ನಡುವೆ ಅಕ್ರಮ ಮರಳಿನ ವಿರುದ್ಧ ಕಾರ್ಯಾಚರಣೆ ಅಂತ ನಡೆಸುತ್ತಿದ್ದುದು ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಮತ್ತು ಅವರ ತಂಡ…
ಇದೀಗ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿದೆ. ಸುಮಾರು 25 ಕಡೆ ಲೋಕಾಯುಕ್ತ ದಾಳಿ ನಡೆದಿದ್ದು ಪರಿಶೀಲನೆ ನಡೆಯುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ 15 ಜನ ಲೋಕಾಯುಕ್ತ ಅಧಿಕಾರಿಗಳು ಈ ದಾಳಿಗಳ ನೇತೃತ್ವ ವಹಿಸಿಕೊಂಡಿರುವುದು ವಿಶೇಷ.
ಲೋಕಾಯುಕ್ತ ನ್ಯಾಯಮೂರ್ತಿಗಳು ಕಳೆದ ಮೇ 22 ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆಗಳ ಸ್ಥಳಗಳಲ್ಲಿ ಅನಿರೀಕ್ಷಿತ ದಾಳಿ ಮಾಡಲಾಗಿದೆ.
ಮಂಗೋಟೆ ಗ್ರಾಮದ ನದಿ ಪಾತ್ರದಿಂದ ಆರಂಭವಾಗಿ ಎಲ್ಲಾ ನದಿಗಳ ಪಾತ್ರದಲ್ಲೂ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮೇಲೆ ಲೋಕಾಯುಕ್ತ ಬಿಸಿಮುಟ್ಟಿಸಿದೆ.
*ರಾತ್ರಿವೇಳೆ ನಿಷೇಧವಿದ್ದರೂ ಅಕ್ರಮ ಗಣಿಗಾರಿಕೆ ಅವ್ಯಾಹತ;*
ರಾತ್ರಿವೇಳೆ ಅಂದರೆ ಸೂರ್ಯಾಸ್ತದ ನಂತರ ಮರಳು ಗಣಿಗಾರಿಕೆ ಮತ್ತು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಅವ್ಯಾಹತವಾಗಿ ಈ ಗಣಿಗಾರಿಕೆ ನಡೆಯುತ್ತಿರುವುದು ರಾತ್ರಿಯ ಹೊತ್ತಿನಲ್ಲಿಯೇ ಎಂಬುದನ್ನೂ ಲೋಕಾಯುಕ್ತ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ಸಂದರ್ಭದಲ್ಲಿ ನದಿಗಳ ಹರಿವಿಗೆ ಅಡ್ಡಿಪಡಿಸುವಂತೆ ಅಥವಾ ನದಿ ದಂಡೆಗಳು ಕುಸಿಯುವಂತೆ ಮರಳು ತೆಗೆಯುವಂತಿಲ್ಲ…ಆದರೆ, ಬಹುತೇಕ ಕಡೆ ನದಿ ದಂಡೆಗಳನ್ನೇ ಕೊರೆಯಲಾಗಿರುವ ಸತ್ಯ ಲೋಕಾಯುಕ್ತ ಪೊಲೀಸರ ಗಮನಕ್ಕೆ ಬಂದಿದೆ.
ಪರವಾನಿಗೆ ಇಲ್ಲದೆ ಖನಿಜ ತೆಗೆಯುವುದು ನಿಷೇಧವಿದ್ದರೂ ಬಹಳ ಕಡೆ ಕಾನೂನು ಉಲ್ಲಂಘಿಸಲಾಗಿದೆ. ಆದರೂ ಸಂಬಂಧಿಸಿದ ಇಲಾಖೆಗಳು ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಂಡಿಲ್ಲದ್ದರ ಬಗ್ಗೆಯೂ ಲೋಕಾಯುಕ್ತ ಆಶ್ಚರ್ಯ ಪಟ್ಟಿದೆ ಎಂದು ತಿಳಿದು ಬಂದಿದೆ.
EIA ಅಧಿಸೂಚನೆ ಪ್ರಕಾರ ಯಾವುದೇ ನದಿ ಅಥವಾ ಭೂಮಿಯಲ್ಲಿ ಮರಳು ಗಣಿಗಾರಿಕೆ ಮಾಡಲು ಪರಿಸರ ಅನುಮತಿ ಪಡೆಯುವುದು ಕಡ್ಡಾಯ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಮರಳು ಗಣಿಗಾರಿಕೆ ಮಾಡುವ ಜಾಗ ಎಷ್ಟು ಚಿಕ್ಕದಾಗಿದ್ದರೂ ಪರಿಸರ ಇಲಾಖೆಯ ಪೂರ್ವಾನುಮತಿ ಇಲ್ಲದೇ ಮರಳು ತೆಗೆಯುವಂತಿಲ್ಲ. ಮರಳು ಗಣಿಗಾರಿಕೆ ಮಾಡಲು ಇರುವ ನಿಯಮಗಳನ್ನು ಪಾಲಿಸಬೇಕು.
ಆದರೆ, ಇದೆಲ್ಲವನ್ನೂ ಉಲ್ಲಂಘಿಸಿರುವುದೇ ಹೆಚ್ಚೆಂಬ ಅಂಶ ಲೋಕಾಯುಕ್ತ ಪೊಲೀಸರ ಗಮನಕ್ಕೆ ಬಂದಿರಬಹುದು. ವಾಟರ್ ಆ್ಯಕ್ಟ್-1974 ಅಂತೂ ಸಂಪೂರ್ಣ ಉಲ್ಲಂಘಿಸಿದ ಬಹುತೇಕ ಉದಾಹರಣೆಗಳು ಶಿವಮೊಗ್ಗ ಜಿಲ್ಲೆಯ ನದಿಪಾತ್ರದ ಅಕ್ರಮ ಮರಳು ಗಣಿಗಾರಿಕೆ ಸ್ಥಳಗಳಲ್ಲಿ ಸಿಗದೇ ಇರಲಾರವು.
ಲೋಕಾಯುಕ್ತ ಪೊಲೀಸರ ಈ ವಿಶೇಷ ದಾಳಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ತಡೆಯುವುದಷ್ಟೇ ಅಲ್ಲ…ಇಂಥವರ ಮೇಲೆ ಗಣಿಗಾರಿಕೆ ಕಾಯ್ದೆಗಳನ್ನಷ್ಟೇ ಅಲ್ಲ , ನದಿಗಳ ಜೀವವನ್ನು ಉಳಿಸಲು ವಾಟರ್ ಆ್ಯಕ್ಟ್-1974 ನ್ನು ಮರಳು ಮಾಫಿಯಾಗಳ ವಿರುದ್ಧದ ಹೋರಾಟದಲ್ಲಿ ಪ್ರಬಲ ಕಾನೂನು ಅಸ್ತ್ರ ಬಳಸುವ ಸಾಧ್ಯತೆಗಳೂ ಇವೆ…
ಈ ಹಿನ್ನೆಯಲ್ಲಿ ಲೋಕಾಯುಕ್ತದಿಂದ ತಹಶೀಲ್ದಾರ್ ಗಳು, ಪೊಲೀಸ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ ಬಹಳಷ್ಟು ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ವಿವರಣೆ ಬಯಸಿದ್ದಾರೆ. ಕೆಲ ಕಳ್ಳ ಅಧಿಕಾರಿಗಳು, ಹೊಟ್ಟೆತುಂಬ ಉಂಡವರು ಏನುತ್ತರ ಕೊಡುತ್ತಾರೋ?


