ಸಿದ್ದರಾಮಯ್ಯ ಕೇರಳಂಗೆ‌ ವಿಶ್ರಾಂತಿಗೆ ಹೋಗಿದ್ದೇಕೆ? —————————————- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ರಾಂತಿಗಾಗಿ ಕೇರಳಂಗೆ ಹೋಗುತ್ತಿದ್ದಾರೆ ಎಂದರೆ 2019 ರಲ್ಲಿ ಧರ್ಮಸ್ಥಳಕ್ಕೆ ವಿಶ್ರಾಂತಿಗೆ ತೆರಳಿದಾಗ ನಡೆದ ಆಗಿನ ಸರ್ಕಾರ ಪತನದಂತೇ ಪುನರಾವರ್ತನೆ ಆಗುತ್ತದೆ ಎಂದರ್ಥವಲ್ಲ…

ಸಿದ್ದರಾಮಯ್ಯ ಕೇರಳಂಗೆ‌ ವಿಶ್ರಾಂತಿಗೆ ಹೋಗಿದ್ದೇಕೆ?
—————————————-
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ರಾಂತಿಗಾಗಿ ಕೇರಳಂಗೆ ಹೋಗುತ್ತಿದ್ದಾರೆ ಎಂದರೆ 2019 ರಲ್ಲಿ ಧರ್ಮಸ್ಥಳಕ್ಕೆ ವಿಶ್ರಾಂತಿಗೆ ತೆರಳಿದಾಗ ನಡೆದ ಆಗಿನ ಸರ್ಕಾರ ಪತನದಂತೇ ಪುನರಾವರ್ತನೆ ಆಗುತ್ತದೆ ಎಂದರ್ಥವಲ್ಲ.

ಆಗ 14 ಮಂದಿ ಸಿದ್ದರಾಮಯ್ಯ ಬೆಂಬಲಿಗ‌ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ‌‌ ನೀಡಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ‌ ಎಲ್ಲರೂ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಆಗಿನ‌ ಪರಿಸ್ಥಿತಿಯೇ ಬೇರೆ. ಈಗ‌ ಮೈತ್ರಿ ಸರ್ಕಾರವೂ ಇಲ್ಲ. ಸಂಪೂರ್ಣ ಬಹುಮತ ಪಡೆದ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಸರ್ಕಾರ ರಚಿಸಿದೆ. ಗೂಳಿಯಂತೆ ಮುನ್ನುಗ್ಗುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ,ಕೆಪಿಸಿಸಿಗೆ ಬಿ.ಕೆ.ಹರಿಪ್ರಸಾದ್ ತರಹದ ದಿಟ್ಟ ನಾಯಕತ್ವ‌ಇದೆ. ಹೈಕಮಾಂಡ್‌ ಸೂಚನೆ ಮೇರೆಗೆ‌ ಮುಖ್ಯಮಂತ್ರಿ‌ ಸ್ಥಾನ‌ವನ್ನು ಅನಿವಾರ್ಯವಾಗಿ ಬಿಟ್ಟುಕೊಟ್ಟಿರುವ ಸಿದ್ದರಾಮಯ್ಯಗೆ ತಾವು ಬಯಸಿದಂತೆ ಪರಿಸ್ಥಿತಿ ನಿರ್ಮಿಸಲು ಅನುಕೂಲಕರ‌ ವಾತಾವರಣವೂ ಇಲ್ಲ. 2023 ರಲ್ಲಿ ತಮ್ಮ ಮತ್ತು ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆ ಒಪ್ಪಂದವಾಗಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದ‌ ನಂತರ ಮುಜುಗರದಿಂದ ತಪ್ಪಿಸಿಕೊಳ್ಳಲು ಅವರು ಕೇರಳಂಗೆ‌ ತೆರಳಿರಬಹುದು.

2006 ರಲ್ಲಿ ಬಿಜೆಪಿ ಬೆಂಬಲದಿಂದ ಮೊದಲ‌ ಸಲ‌ ಮಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಒಪ್ಪಂದದಂತೆ 2007 ರಲ್ಲಿ ಬಿಜೆಪಿ ನಾಯಕ ಬೂ.ಸಿ.ಯಡಿಯೂರಪ್ಪ‌ ಅವರಿಗೆ ಅಧಿಕಾರ ಬಿಟ್ಟುಕೊಡದೇ ವಚನ‌ಭ್ರಷ್ಟರಾಗಿದ್ದರು. ಈ ಒಪ್ಪಂದ ಮೊದಲೇ ಅಧಿಕೃತವಾಗಿ ಪ್ರಕಟಗೊಂಡಿದ್ದರಿಂದ ಕುಮಾರಸ್ವಾಮಿಯ ನಿರ್ಧಾರ ಭಾರೀ ಟೀಕೆಗೆ ಒಳಗಾಗಿತ್ತು. ಆದರೆ ಡಿ.ಕೆ.ಶಿ. ಮತ್ತು ಸಿದ್ದರಾಮಯ್ಯ‌ ನಡುವಣ ಒಪ್ಪಂದ ವರಿಷ್ಠರಿಬ್ಬರ ಸಮ್ಮುಖದಲ್ಲಿ ಗುಟ್ಟಾಗಿ ನಡೆದಿದ್ದರಿಂದ ಈ ಒಪ್ಪಂದ ಬಯಲಾಗದು, ಹಾಗೂ‌ ತಮ್ಮನ್ನು ಬದಲಿಸುವುದು ಅಷ್ಟು ಸುಲಭವಲ್ಲ ಎಂದು ಸಿದ್ದರಾಮಯ್ಯ‌ ಭಾವಿಸಿದ್ದಿರಬಹುದು. ಸಿದ್ದರಾಮಯ್ಯ ಅವರಿಗೆ‌ ಈಗ‌ 78 ವರ್ಷ. 2013-18 ರ ಅವಧಿಯಲ್ಲಿ ಮೊದಲ ಸಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮೊದಲ‌ ದಿನದಿಂದಲೇ ಜನಪರ‌ ಆಡಳಿತದ‌ ಮುನ್ಸೂಚನೆ‌‌ ನೀಡಿದ್ದರು. ಆದರೆ ಎರಡನೇ‌ ಅವಧಿಯಲ್ಲಿ ಇತರ ಹಿಂದುಳಿದ ಜಾತಿಗಳಿಗಿಂತ ತಮ್ಮ ಕುರುಬ‌ ಸಮುದಾಯದ ಪರವಾಗಿಯೇ ಹೆಚ್ಚಿನ‌ ತೀರ್ಮಾನಗಳನ್ನು ಕೈಗೊಂಡಿದ್ದರು. ತಮ್ಮ‌ ಸಮುದಾಯದ ಕೆಲವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದ್ದರು. ಮುಖ್ಯಮಂತ್ರಿ‌ ಸ್ಥಾನಕ್ಕೆ ರಾಜೀನಾಮೆ ಕೊಡುವ‌ ಮುನ್ನವೂ ವಿಧಾನಪರಿಷತ್ ಸದಸ್ಯತ್ವಕ್ಕೆ ನಡೆಯಲಿದ್ದ‌ ಚುನಾವಣೆಗೆ ತಮ್ಮ ಸಮುದಾಯದ ಓರ್ವ ವ್ಯಕ್ತಿ (ಶಿವಣ್ಣ)ಇರುವಂತೆ ನೋಡಿಕೊಂಡರು. ಡಿ.ಕೆ.ಶಿ.‌ ಮೊದಲ‌ ಸಂಪುಟದಲ್ಲಿ ಇತರ ಹಿಂದುಳಿದ‌ ಜಾತಿಗೆ ಸೇರಿದ ಯಾರನ್ನೂ‌ ಮಂತ್ರಿಗಳನ್ನಾಗಿಸದೇ ತಮ್ಮ ಮಗ ಯತೀಂದ್ರ ಮತ್ತು ತಮ್ಮ‌ ಜಾತಿಯ ಪರಮಾಪ್ತ ಭೈರತಿ‌ ಸುರೇಶ್ ಇರುವಂತೆ‌ ನೋಡಿಕೊಂಡರು.

ಸಚಿವ ಸಂಪುಟ‌ಸೇರಿದ ಇತರರಲ್ಲಿ ಒಕ್ಕಲಿಗರು,‌ಲಿಂಗಾಯತರು, ದಲಿತರು, ಕ್ರೈಸ್ತರು, ಮುಸ್ಲಿಮರು ಪ್ರಾತಿನಿಧ್ಯ ಪಡೆದರೂ ಇತರ ಹಿಂದುಳಿದ ಜಾತಿ ಕೋಟಾದಲ್ಲಿ ಬೇರೆ ಯಾವುದೇ ಜಾತಿಗೆ ಪ್ರಾತಿನಿಧ್ಯ ನೀಡದೇ ತಮ್ಮ ಸಮುದಾಯದ ಇಬ್ಬರು ಸಂಪುಟ ಸೇರುವಂತೆ‌ ಮಾಡಿದರು. ಮುಂದಿನ‌ ಚುನಾವಣೆ ಹೊತ್ತಿಗೆ ಸಿದ್ದರಾಮಯ್ಯ ಅವರಿಗೆ‌ 80 ವರ್ಷ ಆಗಿರುತ್ತದೆ. 2018 ರಲ್ಲೇ ಅವರ ವರ್ಚಸ್ಸು‌ ಮೊದಲಿನಂತಿರಲಿಲ್ಲ. ಈಗಲೂ ಅವರನ್ನೇ ಮುಂದುವರಿಸಿದರೆ ಮುಂದಿನ ಚುನಾವಣೆ ಎದುರಿಸುವುದು ಕಷ್ಟ ಎಂಬ ಭಾವನೆ ಹೈಕಮಾಂಡ್ ಗೆ ಬಲವಾಗಿ ಅನ್ನಿಸಿರಬಹುದು. ಜತೆಗೆ ಡಿ.ಕೆ.ಶಿ. ಜತೆಗಿನ ಅಧಿಕಾರ ಹಂಚಿಕೆ ಒಪ್ಪಂದ ಕಾರ್ಯರೂಪಕ್ಕೆ ತರುವಂತೆ ಡಿ.ಕೆ.ಶಿ.ಒತ್ತಡವೂ ಪ್ರಭಾವ ಬೀರಿರಬಹುದು. ಯಾವುದೇ ಗೊಂದಲಕ್ಕೆ‌ಅವಕಾಶ ನೀಡದಂತೆ ಗೌರವಯುತವಾಗಿ ಸಿದ್ದರಾಮಯ್ಯ ಅವರೇ ರಾಜೀನಾಮೆ ನೀಡುವಂಥ ವಾತಾವರಣ ಸೃಷ್ಟಿಸಲಾಯಿತು. 2006 ರಲ್ಲಿ ಜೆಡಿಎಸ್ ಗೆ ರಾಜೀನಾಮೆ‌ ನೀಡಿ ಅಹಿಂದ ಹೋರಾಟದ ಮೂಲಕ ಇನ್ನಷ್ಟು ಶಕ್ತಿಶಾಲಿಯಾಗಿ ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ 2013 ರಲ್ಲಿ ಮುಖ್ಯಮಂತ್ರಿಯಾಗಿ ಗಳಿಸಿದ್ದ ವರ್ಚಸ್ಸು ಈಗ ಸ್ವಲ್ಪ ಮಸುಕಾಗಿದೆ. ತಮ್ಮನ್ನು ಯಾರೂ ಅಲುಗಾಡಿಸಲಾರರು ಎಂಬ ಅವರ‌ ನಂಬಿಕೆ ತಲೆ‌ಕೆಳಗಾಗಿ ಡಿ.ಕೆ.ಶಿ.‌ ಮುಖ್ಯಮಂತ್ರಿಯಾಗಿದ್ದಾರೆ. ಅವರಾಗಲೀ ಅವರ‌ ಬೆಂಬಲಿಗರಾಗಲೀ ಈಗ ಯಾವ ಪಕ್ಷಕ್ಕೆ ಹೋಗುವುದು ತಾನೇ ಸಾಧ್ಯ? 2006 ರಲ್ಲೇ ಸ್ವಂತ ಪಕ್ಷ‌ ಸ್ಥಾಪಿಸುವ ಧೈರ್ಯ ತೋರದ ಸಿದ್ದರಾಮಯ್ಯ ಈ ವಯಸ್ಸಿನಲ್ಲಿ ಇನ್ನೊಂದು‌ ಪಕ್ಷ ಕಟ್ಟುವುದಾಗಲೀ ಸಮಾಜವಾದಿ, ಆರ್.ಜೆ.ಡಿ. ಅಥವಾ ಟಿ.ಎಂ.ಸಿ.ಯನ್ನು ರಾಜ್ಯದಲ್ಲಿ ಕಟ್ಟುವ ಅನುಕೂಲಕರ ವಾತಾವರಣವೂ ಇಲ್ಲ.ಅಷ್ಟೇ ಅಲ್ಲ. ತಮ್ಮ ಮಗ ಯತೀಂದ್ರನನ್ನು ನಗರಾಭಿವೃದ್ಧಿ (ನಗರಪಾಲಿಕೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳು)ಅರೆ ಸಚಿವರಾಗಿಸಿದ್ದು ‘ಮೂಡಾ’ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದ್ದು ಅದರಿಂದ ರಕ್ಷಣೆ ಪಡೆಯುವುದಕ್ಕಾಗಿಯೇ ಎನ್ನಲಾಗುತ್ತಿದೆ. ‘ಮೂಡಾ’ ದಲ್ಲಿ ಭೂಸ್ವಾಧೀನ ಅಧಿಕಾರಿಯಾಗಿದ್ದ ವ್ಯಕ್ತಿಯನ್ನೇ ಯತೀಂದ್ರ ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿರುವುದೂ ಇದೇ ಕಾರಣದಿಂದ. ತಮ್ಮ ಮಗ‌ ಸಚಿವನಾಗಿರುವುದರಿಂದಲೂ ಈ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರಯತ್ನಿಸಲಾರರು. ಅಧಿಕಾರ ಹಂಚಿಕೆ ಕುರಿತು ಡಿ.ಕೆ.ಶಿ. ನೀಡಿದ ಹೇಳಿಕೆಯಿಂದ ಮುಜುಗರಗೊಂಡಿರುವ ಸಿದ್ದರಾಮಯ್ಯ ಮಾಧ್ಯಮಗಳಿಂದ‌ ತಪ್ಪಿಸಿಕೊಳ್ಳುವ ಸಲುವಾಗಿಯಷ್ಟೇ ಕೇರಳಂಗೆ ವಿಶ್ರಾಂತಿಗೆ ತೆರಳಿರುವ ಸಾಧ್ಯತೆ ಹೆಚ್ಚು.
-ಟಿ.ಕೆ.ತ್ಯಾಗರಾಜ್